ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಗ್ಯ: ಬೇರೆಯವರ ಭಯ ನಿಮಗೆ ಬೇಡ

Last Updated 8 ನವೆಂಬರ್ 2021, 19:30 IST
ಅಕ್ಷರ ಗಾತ್ರ

ನಮ್ಮ ನಡೆ–ನುಡಿಗಳು, ಮೌಲ್ಯ–ಆಕಾಂಕ್ಷೆಗಳು ಸುತ್ತಲ ಪ್ರಪಂಚದ ಪ್ರಭಾವದಿಂದಲೇ ಭಾಗಶಃ ರೂಪುಗೊಳ್ಳುತ್ತಿರುತ್ತದೆ. ನಮ್ಮ ಪರಿಸರದಲ್ಲಿ ಕೆಲವೊಮ್ಮೆ ನಡೆಯುವ ಅತಿರೇಕದ ವಿದ್ಯಮಾನಗಳಿಂದ ನಮ್ಮ ಭಾವನಾತ್ಮಕ ಪ್ರಪಂಚ ಅಲ್ಲೋಲಕಲ್ಲೋಲಗೊಳ್ಳುವುದೂ ಸಹಜವೇ. ಸುಖ, ದುಃಖ, ಭಯ, ಆತಂಕ, ಪ್ರೀತಿ ಎಲ್ಲಕ್ಕೂ ಸ್ಪಂದಿಸುವುದನ್ನು ಮತ್ತು ಸಂದರ್ಭಕ್ಕೆ ತಕ್ಕಂತೆ ವರ್ತಿಸುವುದನ್ನೂ ನಾವು ಸಮಾಜದಿಂದಲೇ ನೋಡಿ ಕಲಿಯುವುದು. ನೋಡಿ ಕಲಿಯುವ ಗುಣವಿರುವುದರಿಂದಲೇ ಹಲವು ವಿಷಯಗಳನ್ನು ನಾವು ಸ್ವತಃ ಅನುಭವಿಸದೆಯೂ ಅರ್ಥಮಾಡಿಕೊಳ್ಳುವುದು ಸಾಧ್ಯವಾಗುತ್ತದೆ. ನಮ್ಮ ಜೊತೆಗಿರುವವರ ಭಾವನೆಗಳು ನಮ್ಮನ್ನು ತಟ್ಟದೆ ಇರಲು ಸಾಧ್ಯವೇ ಇಲ್ಲ. ಹಾಗಾಗಿಬಿಟ್ಟರೆ ನಮಗೂ ಜಡ ವಸ್ತುಗಳಿಗೂ ಯಾವ ಬೇಧವೂ ಇರುವುದಿಲ್ಲ. ಬೇರೆಯವರ ಭಾವನೆಗಳನ್ನು, ನೋವು, ನಲಿವುಗಳನ್ನು ಸ್ವತಃ ಅನುಭವಿಸದೆಯೂ ಗ್ರಹಿಸಿ ಸ್ಪಂದಿಸಬಲ್ಲ ಗುಣವಾದ ಸಹಾನುಭೂತಿಯೇ ಮಾನವ ಸಂಬಂಧಗಳ ಅಡಿಪಾಯ. ಆದರೆ ಅನ್ಯರ ಭಾವನೆಗಳನ್ನು ನಮ್ಮವೇ ಎನ್ನುವಷ್ಟು ತೀವ್ರವಾಗಿ ಬೇರೆಯವರ ಲೋಕದಲ್ಲೇ ನಾವು ಲೀನವಾಗಿಬಿಟ್ಟರೆ ಅಲ್ಲಿಂದಲೇ ನಮ್ಮ ಸಂಕಟದ ಪ್ರಾರಂಭವೂ ಹೌದು.

ಸಹಾನುಭೂತಿಯೂ ನಮ್ಮ ಮತ್ತು ನೋವನ್ನು ಅನುಭವಿಸುತ್ತಿರುವ ಅನ್ಯವ್ಯಕ್ತಿಯ ನಡುವಿನ ಸ್ಪಷ್ಟವಾದ ಗೆರೆಯಿಲ್ಲದೆ ಸಾಧ್ಯವಾಗುವುದಿಲ್ಲ. ಅನ್ಯರ ಸಂಕಟವನ್ನು ನನ್ನದೇ ಎಂದು ಭ್ರಮಿಸಿಕೊಂಡು ನಾನು ಸಂಕಟಪಡುವುದಕ್ಕೂ, ನಾನು ಸ್ವತಃ ನೋವಿನಲ್ಲಿಲ್ಲದಿದ್ದರೂ ಅನ್ಯರ ನೋವನ್ನು ಗ್ರಹಿಸಿ ಸ್ಪಂದಿಸುವುದಕ್ಕೂ ಬಹಳ ವ್ಯತ್ಯಾಸವಿದೆ. ಈ ವ್ಯತ್ಯಾಸವನ್ನು ಸೂಕ್ಷ್ಮವಾಗಿ ಅರಿಯದೇ ಹೋದರೆ ಪ್ರಪಂಚದಲ್ಲಿ ನಡೆಯುವ ಎಲ್ಲದಕ್ಕೂ ಆತಂಕ ಪಡುತ್ತಾ, ‘ನನಗೂ ಹೀಗೆ ಆಗಿಬಿಟ್ಟರೆ’ ಎಂಬ ಭಯದಲ್ಲೇ ಇಡೀ ಜೀವನ ಕಳೆಯಬೇಕಾಗುತ್ತದೆ. ಭಯಕ್ಕೆ ಸೋಂಕಿನಂತೆ ಅತಿ ಶೀಘ್ರವಾಗಿ ಹಬ್ಬುವ ಗುಣವಿದೆ. ಆತಂಕ, ಉದ್ವಿಗ್ನತೆ ಒಬ್ಬರಿಂದೊಬ್ಬರಿಗೆ ಹರಡುತ್ತಾ, ನಮ್ಮ ಗಮನವನ್ನು ನಮ್ಮ ಬದುಕಿನಿಂದ ಬೇರೆಡೆಗೆ ಸೆಳೆಯುತ್ತದೆ. ಭಯಕ್ಕೆ ಹೇಗೆ ಹರಡುವ ಗುಣವಿದೆಯೋ, ನಿರ್ಭೀತಿಗೂ ಶಾಂತಿಗೂ ಧೈರ್ಯಕ್ಕೂ ಹಾಗೇ ಹರಡುವ ಗುಣವಿದೆ. ಸಾಧಾರಣ ವಿಷಯಕ್ಕೂ ಅತಿ ಭಯಪಡುವ, ಮಹತ್ತರ ಭಯಗಳಿಗೂ ಎದೆಗುಂದದ ಜನರ ನಡುವಿರುವ ವ್ಯತ್ಯಾಸ ಅವರು ಬೆಳೆದು ಬಂದ ಪರಿಸರವೇ ಆಗಿದೆ.

ಬದುಕು ಅನಿಶ್ಚಿತವಾದದ್ದು ಎನ್ನುವುದು ಎಲ್ಲರಿಗೂ ತಿಳಿದಿದ್ದರೂ, ದೈನಿಕದ ಓಟದಲ್ಲಿ, ಯಾವುದೋ ಸುಳ್ಳು ಭದ್ರತೆಯ ನೆರಳಿನಲ್ಲಿ ಅಡಗಿ, ಕಣ್ಣು ತೆರೆದು ಈ ಅನಿಶ್ಚಿತತೆಯನ್ನು ಕಾಣುವುದಕ್ಕೆ ಹೆದರಿ, ಹೇಗೋ ಬದುಕಿನ ಈ ಮೂಲಭೂತ ಸತ್ಯವನ್ನು ನಮ್ಮ ಅರಿವಿನಿಂದ ಮರೆಮಾಚಿರುತ್ತೇವೆ. ಎಂದೋ ಒಂದು ದಿನ ಯಾರದೋ ದುರಂತಕಥೆಯನ್ನು ಕೇಳಿ ಎಲ್ಲರೂ ಭಯ ಪಡುವ ಹೊತ್ತಿನಲ್ಲಿ ನಾವೂ ಭಯಭೀತರಾಗುವುದಕ್ಕೆ ಕಾರಣ ಇಷ್ಟು ದಿನ ಕಣ್ತಪ್ಪಿಸುತ್ತಿದ್ದ ಅನಿಶ್ಚಿತತೆ, ಅಭದ್ರತೆ, ಅಶಾಶ್ವತತೆ ಇಂದು ಮುಖಾಮುಖಿಯಾದದ್ದೇ ಆಗಿರುತ್ತದೆ. ಹೀಗೆ ಎಂದೋ ಒಂದು ದಿನ ಜನ ಮರುಳೋ ಜಾತ್ರೆ ಮರುಳೋ ಎಂಬ ಹೊತ್ತಿನಲ್ಲಿ ಮಾನವಜೀವನದ ಸುಂದರ ಸತ್ಯವಾದ ಅನಿಶ್ಚಿತತೆಗೆ ಮುಖಾಮುಖಿಯಾಗಿ ಭಯಬೀಳುವ ಬದಲು ದಿನವೂ ಶಾಂತವಾಗಿದ್ದುಕೊಂಡೇ ಈ ತತ್ವವನ್ನು ಚಿಂತಿಸಿದರೆ ಹೇಗೆ?

ಅನಿಶ್ಚಿತತೆಯನ್ನು ನಮ್ಮ ಬುದ್ಧಿ ಗ್ರಹಿಸುವುದಕ್ಕೆ ಮುಂಚೆಯೇ ಅದನ್ನು ಅನುಭವದಲ್ಲಿ ಕಂಡುಕೊಂಡಾಗ ಆಗುವ ದಿಗ್ಭ್ರಮೆಯೇ ಆತಂಕ. ದಿನನಿತ್ಯದ ಜೀವನದಲ್ಲಿ ಹೇಗೋ ಮರೆಯಾಗಿದ್ದು, ಕಾಣಲು ಇಷ್ಟವಿಲ್ಲದ್ದು ಒಂದು ದಿನ ಧುತ್ತೆಂದು ಬಂದು ಎದುರಿಗೆ ನಿಂತರೆ ಹೇಗಾಗುತ್ತದೆ? ನಮ್ಮನ್ನು ನಾವು ಕಂಡುಕೊಂಡಾಗಲಷ್ಟೇ ಬೇರೆಡೆಯಿಂದ ಬಂದ ಪ್ರಭಾವವನ್ನು ನಾವು ಗುರುತಿಸಬಹುದು. ಇಲ್ಲದಿದ್ದರೆ ಎಲ್ಲೆಡೆಯಿಂದ ಬಂದ ಬೇರೆಯವರ ಭಯದ ಕಥೆಗಳೇ ನಮ್ಮ ತಲೆಯಲ್ಲಿ ಬೆಳೆದು ಹೆಮ್ಮರವಾಗುತ್ತವೆ.

ಎಲ್ಲರೂ ಭಯಪಡುತ್ತಿರುವ ಹೊತ್ತಿನಲ್ಲಿ ನಾವೂ ಭಯ ಮತ್ತು ಆತಂಕಕ್ಕೆ ಒಳಗಾದಾಗ ನಮ್ಮ ಮೆದುಳು ಹೇಳಿದ್ದನ್ನು ನಾವು ಗಂಭೀರವಾಗಿ ಪರಿಗಣಿಸಬೇಕಾಗಿಲ್ಲ. ಆತಂಕ ಸುಳ್ಳು ಸುಳ್ಳೇ ಎಚ್ಚರಿಕೆ ಗಂಟೆಯನ್ನು ಮೊಳಗಿಸುತ್ತದೆ. ಆತಂಕಕ್ಕೆ ಒಳಗಾದಾಗ ಯಾವ ತಾರ್ಕಿಕ ಪರಿಹಾರವೂ ಉಪಯೋಗಕ್ಕೆ ಬರುವುದಿಲ್ಲ. ಭಯಗ್ರಸ್ತ ಮನಸ್ಸಿನ ಜೊತೆ ವಾದ ಮಾಡುವುದಕ್ಕೂ ಒಂದು ವರ್ಷದ ಮಗುವಿನ ಜೊತೆ ವಾದ ಮಾಡುವುದಕ್ಕೂ ಯಾವ ವ್ಯತ್ಯಾಸವೂ ಇಲ್ಲ. ಉದಾಹರಣೆಗೆ ಆರೋಗ್ಯದ ಕುರಿತಾದ ಆತಂಕಕ್ಕೆ ಒಳಗಾದಾಗ ಎಷ್ಟೇ ಆರೋಗ್ಯ ತಪಾಸಣೆ ಮಾಡಿಸಿದರೂ, ಅಂಕಿ ಅಂಶಗಳನ್ನು ತಿಳಿದರೂ, ಯಾವ ವೈಜ್ಞಾನಿಕ ಮಾಹಿತಿ ಅರಿತರೂ ಆತಂಕ ಶಮನವಾಗುವುದಿಲ್ಲ. ಪದೇ ಪದೇ ಮನಸ್ಸಿನಲ್ಲಿ ಭಯಗ್ರಸ್ತ ಸಂದೇಹಗಳು ಹುಟ್ಟುತ್ತಿರುವಾಗ ಅದಕ್ಕೆ ಉತ್ತರ ಕೊಡುವಂತಹ ಯಾವ ಕೆಲಸವನ್ನೂ ಮಾಡದೆ ಅದನ್ನು ನಿರ್ಲಕ್ಷಿಸುವುದೊಳಿತು. ಮನಸ್ಸು ಶಾಂತವಾಗಿದ್ದಾಗಲಷ್ಟೇ ಅದು ವಿಜ್ಞಾನದ ಮಾತನ್ನು ಕೇಳುವುದು!

ನಾವು ಜೀವನಪೂರ್ತಿ ಭಯಗಳಲ್ಲೇ ಕಳೆದುಹೋಗುವಷ್ಟು ವಿವಿಧ ರೀತಿಯ ಭಯಗಳಿವೆ ಪ್ರಪಂಚದಲ್ಲಿ, ಜೀವನವೆಲ್ಲ ಕಲ್ಪಿತ ಅಪಾಯಗಳಿಂದ ತಪ್ಪಿಸಿಕೊಂಡು ಓಡುವುದರಲ್ಲೇ ಕಳೆದರೆ, ನಮಗೆ ಬೇಕಾದ್ದನ್ನು, ನಾವು ಪ್ರೀತಿಸಿದ್ದನ್ನು ಬೆನ್ನಟ್ಟಿಕೊಂಡು ಹೋಗುವ ಮಾನಸಿಕ ಶಕ್ತಿ ಇರುತ್ತದೆಯೇ? ಎಲ್ಲೆಡೆಯಿಂದಲೂ ಭಯ ನಮ್ಮ ಕಡೆಗೇ ಹರಿದುಬರುತ್ತಿರುವಾಗ, ಭಯದ ಕೈಗೇ ಸಿಗದ, ಎಂದಿಗೂ ಕಳೆದುಹೋಗದಂತಹ ಏನಿದೆ ನನ್ನ ಬಳಿ ಎಂದು ಅನೇಕ ಚಿಂತಕರು ಕೇಳಿಕೊಂಡಿದ್ದಾರೆ. ನಮ್ಮ ಅಸ್ತಿತ್ವದ ಬುನಾದಿ ಎನಿಸಿಕೊಂಡಿರುವ ಪ್ರಜ್ಞೆಯ ಬೆಳಕೊಂದು ನಮ್ಮೊಳಗಿದೆ. ಆ ಬೆಳಕಿನ ಪ್ರವಾಹದಲ್ಲಿ ಅನೇಕರು ಶಾಂತಿಯನ್ನು ಹುಡುಕಿಕೊಂಡಿದ್ದಾರೆ.

ಒಂದಾದ ಮೇಲೊಂದು ಭಯಗಳು ಬಂದಪ್ಪಳಿಸುತ್ತಿರುವಾಗ ಕಿರಿದಾದ, ಕತ್ತಲ, ತಳವಿಲ್ಲದ ಬಾವಿಯಲ್ಲಿ ಕುಸಿಯುತ್ತಿರುವ ಅನುಭವವಾಗುತ್ತದೆ. ಎಷ್ಟೇ ಕೆಳಗೆ ಹೋದರೂ, ಅದಕ್ಕೂ ಕೆಳಗಿನ ಪಾತಾಳದಲ್ಲಿ ಬೀಳಬಹುದೇನೋ ಎಂಬ ಭಯ ತೊಲಗುವುದೇ ಇಲ್ಲ. ಇದಕ್ಕೆ ಮದ್ದು ಅಂತಹ ಬಾವಿಯಲ್ಲಿಳಿಯದೆ, ವಿಶಾಲವಾದ ಹಚ್ಚ ಹಸುರಿನ ಬಯಲಿನಲ್ಲಿ ಎಳೆ ಬಿಸಿಲನ್ನು, ತಂಗಾಳಿಯನ್ನು ಸವಿಯುತ್ತಾ, ಇಂಪಾದ ಗಾನವನ್ನು ಆಲಿಸುತ್ತ ನಾವೂ ವಿಸ್ತಾರಗೊಳ್ಳುತ್ತ ಬದುಕಿನ ಸೌಂದರ್ಯದ ಕಡೆಗೆ ಮುಖಮಾಡುವುದಷ್ಟೇ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT