ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಸುತ್ತ ಇರಲಿ ಸುರಕ್ಷತೆಯ ಬೇಲಿ

Last Updated 25 ಜೂನ್ 2021, 19:45 IST
ಅಕ್ಷರ ಗಾತ್ರ

ಕೋ ವಿಡ್‌ನಿಂದಾಗಿ ಕಳೆದ ಒಂದೂವರೆ ವರ್ಷದಿಂದ ಬಹುತೇಕ ಮಂದಿಗೆ ಮನೆಯ ಪರಿಧಿಯೊಳಗೇ ಜೀವನ ಎಂಬಂತಾಗಿದೆ. ಅವಕಾಶ ಸಿಕ್ಕಾಗ ಅಗತ್ಯ ಕೆಲಸಗಳಿಗೆ ಹೊರಗಡೆ ಹೋಗಿ ಬರುವ ದೊಡ್ಡವರಿಗೇ ತಲೆಚಿಟ್ಟು ಹಿಡಿದಿರುವಾಗ ಇನ್ನು ಇಡೀ ದಿನ ಮನೆಯಲ್ಲೇ ಕೂತಿರುವ ಚಿಕ್ಕ ಮಕ್ಕಳಿಗೆ ಹೇಗಾಗಿರಬೇಡ! ಮೊಬೈಲ್‌, ಟಿವಿ, ಪುಸ್ತಕ, ಆನ್‌ಲೈನ್‌ ತರಗತಿ ಎಂದಷ್ಟೇ ಸೀಮಿತಗೊಂಡಿರುವ ಮಕ್ಕಳಿಗೆ ಯಾವಾಗ ಹೊರಗೆ ಕಾಲಿಟ್ಟು ಪಾರ್ಕ್‌ನಲ್ಲಿ ಆಟವಾಡುವುದು, ಓರಗೆಯವರ ಜೊತೆ ಬೆರೆಯುವುದು, ಅಪ್ಪ– ಅಮ್ಮನ ಜೊತೆ ನೆಂಟರ ಮನೆ, ಪಿಕ್ನಿಕ್‌, ಪ್ರವಾಸ.. ಎಂದೆಲ್ಲ ಓಡಾಡುವುದು ಎಂಬ ಆಸೆ ಸಹಜವೇ. ಈಗಂತೂ ಬಹುತೇಕ ಕಡೆ ಲಾಕ್‌ಡೌನ್‌ ನಿಯಮಗಳನ್ನು ಸಡಿಲಿಸಿರುವುದರಿಂದ ಲಸಿಕೆ ಹಾಕಿಸಿಕೊಂಡ ದೊಡ್ಡವರು ಓಡಾಡುವ ಧೈರ್ಯ ಮಾಡುತ್ತಿದ್ದಾರೆ. ಸಮೀಪದ ಸ್ಥಳಗಳಿಗೆ ಪಿಕ್ನಿಕ್‌ ಯೋಜನೆ ಹಾಕಿಕೊಂಡವರೂ ಬಹಳಷ್ಟು ಮಂದಿ ಇರಬಹುದು. ಆದರೆ ಮಕ್ಕಳನ್ನು ಬಿಟ್ಟು ಹೇಗೆ ಹೋಗುವುದು?

‘ಕೋವಿಡ್‌ ಇನ್ನೂ ಕಡಿಮೆಯಾಗಿಲ್ಲ, ಹೌದು. ಆದರೆ ನಮ್ಮದೇ ಕಾರ್‌ನಲ್ಲಿ ತವರುಮನೆ ಶಿವಮೊಗ್ಗಕ್ಕೆ ಹೋಗಿ, ಅಲ್ಲಿಂದ ಜೋಗ ಜಲಪಾತವನ್ನು ಈ ಮಳೆಗಾಲದಲ್ಲಿ ಮಕ್ಕಳಿಗೆ ತೋರಿಸೋಣ ಎಂದುಕೊಂಡಿದ್ದೇವೆ. ಆದರೆ ನಾವು ಲಸಿಕೆ ತೆಗೆದುಕೊಂಡಿದ್ದರೂ, ಮಕ್ಕಳಿಗೆ ಇನ್ನೂ ಬಂದಿಲ್ಲವಲ್ಲ. ಹೀಗಾಗಿ ಮನಸ್ಸಿನಲ್ಲಿ ಭಯ ಇದ್ದೇ ಇದೆ’ ಎನ್ನುವ ಬೆಂಗಳೂರಿನ ಗೃಹಿಣಿ ಕವಿತಾ ಸೋಮಶೇಖರ್‌, ‘ಮಕ್ಕಳಿಗೂ ಕಳೆದ ಒಂದು ವರ್ಷದಿಂದ ಎಲ್ಲಿಯೂ ಹೋಗದೇ ಬೋರ್‌ ಆಗಿದೆ’ ಎನ್ನುತ್ತಾರೆ.

ನಮ್ಮ ದೇಶದಲ್ಲಿ ಮಕ್ಕಳ ಮೇಲೆ ಲಸಿಕೆ ಪ್ರಯೋಗ ಈಗಿನ್ನೂ ನಡೆಯುತ್ತಿದೆ ಅಷ್ಟೆ. ಇದರ ಮಧ್ಯೆ ಕೋವಿಡ್‌ನ ಸಂಭವನೀಯ ಮೂರನೇ ಅಲೆಯಲ್ಲಿ ಮಕ್ಕಳಿಗೆ ವೈರಸ್‌ ಸೋಂಕು ತಗಲುವ ಸಾಧ್ಯತೆ ಹೆಚ್ಚು ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಹೀಗಿರುವಾಗ ಪುಟ್ಟ ಮಕ್ಕಳನ್ನು ಹೊರಗಡೆ ಕರೆದುಕೊಂಡು ಓಡಾಡುವುದು ಎಷ್ಟು ಸರಿ? ಒಂದೊಮ್ಮೆ ಕುಟುಂಬದವರೆಲ್ಲ ಹೊರಗೆ ಹೋಗುವ ಪ್ರಮೇಯ ಬಂದರೆ ಯಾವೆಲ್ಲ ಮುನ್ನೆಚ್ಚರಿಕೆಗಳನ್ನು, ಸುರಕ್ಷಿತ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬ ಪ್ರಶ್ನೆಗಳು ಏಳುತ್ತವೆ.

ಅಪಾಯಕಾರಿ ಅಂಶಗಳು

‘ಪ್ರತಿಯೊಬ್ಬ ಪೋಷಕರೂ ತಮ್ಮ ಮಕ್ಕಳ ಜೊತೆ ಹೊರಗೆ ಓಡಾಡುವಾಗ, ಪ್ರವಾಸಕ್ಕೆಂದು ಹೋಗುವ ಯೋಜನೆ ರೂಪಿಸುವಾಗ ಅಪಾಯಕಾರಿ ಅಂಶಗಳ ಬಗ್ಗೆ ಹೆಚ್ಚು ಲಕ್ಷ್ಯ ನೀಡಬೇಕಾಗುತ್ತದೆ’ ಎನ್ನುವ ಮಕ್ಕಳ ತಜ್ಞ ಡಾ. ಎಂ.ಡಿ. ಸೂರ್ಯಕಾಂತ‌, ‘ಮಕ್ಕಳಿಗೆ ಮಧುಮೇಹ, ಉಬ್ಬಸ, ಆಸ್ತಮಾದಂತಹ ಆರೋಗ್ಯ ಸಮಸ್ಯೆ ಇದ್ದರಂತೂ ಹೊರಗಡೆ ಕರೆದುಕೊಂಡು ಹೋಗುವುದು ಬೇಡವೇ ಬೇಡ’ ಎಂದು ಎಚ್ಚರಿಕೆ ನೀಡುತ್ತಾರೆ.

ಮೊದಲ ಮತ್ತು ಎರಡನೆಯ ಅಲೆಯ ಅಂಕಿ– ಅಂಶಗಳ ಪ್ರಕಾರ, ವಯಸ್ಕರಿಗೆ ಹೋಲಿಸಿದರೆ, ಮಕ್ಕಳಲ್ಲಿ ಕೋವಿಡ್‌–19ನಿಂದ ಉಂಟಾದ ಗಂಭೀರ ಸಮಸ್ಯೆಗಳು ಕಡಿಮೆ. ಆದರೂ ಬೇರೆ ಆರೋಗ್ಯ ಸಮಸ್ಯೆ ಇರುವಂಥ ಮಕ್ಕಳಿಗೆ ಆತಂಕವಿದ್ದೇ ಇತ್ತು.

‘ಮಕ್ಕಳಿಗೆ ಸ್ಟಿರಾಯ್ಡ್‌ ಇರುವ ಔಷಧ ಕೊಡುತ್ತಿದ್ದರಂತೂ ತುಂಬಾ ಮುನ್ನೆಚ್ಚರಿಕೆ ವಹಿಸಬೇಕಾಗುತ್ತದೆ. ಇದು ರೋಗ ನಿರೋಧಕ ಶಕ್ತಿಯನ್ನು ಕುಂದಿಸುವುದರಿಂದ ಮಕ್ಕಳಿಗೆ ಕೋವಿಡ್‌ ಸೋಂಕು ಉಂಟಾಗುವ ಸಾಧ್ಯತೆ ಜಾಸ್ತಿ’ ಎನ್ನುತ್ತಾರೆ ಡಾ. ಸೂರ್ಯಕಾಂತ.

ಕೆಲವು ಜಿಲ್ಲೆಗಳಲ್ಲಿ, ಸೋಂಕಿನ ಪ್ರಮಾಣ ಜಾಸ್ತಿ ಇದೆ. ಹಾಗೆಯೇ ಹೊರ ರಾಜ್ಯಗಳಲ್ಲಿ ಕೂಡ ಎಲ್ಲೆಲ್ಲಿ ಯಾವ ಪರಿಸ್ಥಿತಿ ಇದೆ ಎಂಬುದರ ಬಗ್ಗೆ ಮಾಹಿತಿ ಇಟ್ಟುಕೊಂಡು ಓಡಾಟ ನಡೆಸಬೇಕಾಗುತ್ತದೆ. ಪ್ರವಾಸಕ್ಕೆ ಹೋದಾಗಲೇ ನಿಮ್ಮ ಮಗುವಿಗೆ ಆರೋಗ್ಯ ಕೆಟ್ಟರೆ ಅಲ್ಲಿ ಮೂಲಭೂತ ಆರೋಗ್ಯ ಸೇವಾ ವ್ಯವಸ್ಥೆ ಇಲ್ಲದಿದ್ದರೆ ಅದು ಅಪಾಯವನ್ನು ಮೈಮೇಲೆ ಎಳೆದುಕೊಂಡಂತೆ.

ಕೊರೊನಾ ಸೋಂಕಿತರ ಪ್ರಮಾಣ ಕಡಿಮೆ ಇದೆ ಎಂದುಕೊಂಡು ಹೊರಗೆ ಅಡಿ ಇಡುವ ಹಾಗೂ ಇಲ್ಲ. ಏಕೆಂದರೆ ಸೋಂಕಿತರು ಹಾಗೂ ಒಟ್ಟು ಜನಸಂಖ್ಯೆ ತೆಗೆದುಕೊಂಡು ಈ ಅಂಕಿ– ಅಂಶ ನೀಡಲಾಗುತ್ತಿದೆಯೇ ಹೊರತು ಸೋಂಕಿತರು ಮತ್ತು ಲಸಿಕೆ ತೆಗೆದುಕೊಂಡವರ ಸಂಖ್ಯೆ ಆಧರಿಸಿ ಅಲ್ಲ ಎನ್ನುತ್ತಾರೆ ತಜ್ಞರು.

ಸ್ವಂತ ವಾಹನದಲ್ಲಿ ತೆರಳಿ

ಹಾಗೆಯೇ ಮಕ್ಕಳನ್ನು ಕರೆದುಕೊಂಡು ಹೋಗುವುದಿದ್ದರೆ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಬಳಸಬೇಡಿ. ಸ್ವಂತ ಕಾರಿನಲ್ಲಿ ಹೋಗುವುದು ಒಳಿತು. ‘ಐದು ವರ್ಷಕ್ಕಿಂತ ಅಧಿಕ ವಯಸ್ಸಿನ ಮಕ್ಕಳಿಗೆ ಮಾಸ್ಕ್‌ ಹಾಕಿಸಬಹುದು. ಆದರೆ ಅದಕ್ಕಿಂತ ಚಿಕ್ಕ ಮಕ್ಕಳಿಗೆ ಮಾಸ್ಕ್‌ ಹಾಕಿದರೆ ಅವು ಇಟ್ಟುಕೊಳ್ಳುವುದಿಲ್ಲ. ಹಾಗೆಯೇ ಉಸಿರು ಕಟ್ಟುವ ಸಾಧ್ಯತೆ ಹೆಚ್ಚು. ಹೀಗಾಗಿ ಅಂತರ ಕಾಪಾಡಲು ಸ್ವಂತ ವಾಹನದಲ್ಲಿ ಹೋಗುವುದು ಸೂಕ್ತ’ ಎನ್ನುತ್ತಾರೆ ಡಾ. ಸೂರ್ಯಕಾಂತ.

ಪ್ರಯಾಣ ಮಾಡುವಾಗ ಮಾರ್ಗದ ಮಧ್ಯೆ ಹೊಟೇಲ್‌ನಲ್ಲಿ ತಿನ್ನದಿರುವುದು ಒಳ್ಳೆಯದು. ತೀರಾ ಅನಿವಾರ್ಯವಾದರೆ ಸೀಟ್‌ಗಳನ್ನು ಸ್ಯಾನಿಟೈಸ್‌ ಮಾಡುವುದು, ಮಕ್ಕಳಿಗೆ ಶೌಚಾಲಯ ಬಳಕೆ ಬಗ್ಗೆ ತಿಳಿವಳಿಕೆ ನೀಡುವುದು ಸೂಕ್ತ. ಹೊಟೇಲ್‌ನಲ್ಲಿ ಉಳಿಯುವ ಬದಲು ಹೋಂಸ್ಟೇ ಸುರಕ್ಷಿತ.

ಬಯಲು ಪ್ರದೇಶಕ್ಕೆ, ಕಡಿಮೆ ಜನರಿರುವ ಕಡೆ ಮಕ್ಕಳನ್ನು ಕರೆದುಕೊಂಡು ಹೋಗಬಹುದು. ಆದರೆ ಸಿನಿಮಾ ವೀಕ್ಷಣೆಗೆಂದು ಥಿಯೇಟರ್‌ಗೆ, ಹೆಚ್ಚು ಜನ ಸೇರುವ ಕಾರ್ಯಕ್ರಮಕ್ಕೆ, ಪಾರ್ಕ್‌ಗೆ ಕರೆದುಕೊಂಡು ಹೋಗಬೇಡಿ ಎಂದು ಎಚ್ಚರಿಸುತ್ತಾರೆ ತಜ್ಞರು.

‘ಎಷ್ಟೋ ತಿಂಗಳುಗಳ ನಂತರ ನನ್ನ ಎಂಟು ವರ್ಷದ ಮಗಳನ್ನು ಸಮೀಪದ ಪಾರ್ಕ್‌ಗೆ ಕರೆದುಕೊಂಡು ಹೋಗಿದ್ದೆ. ಹೋಗುವ ಮುನ್ನ ಅಂತರ ಕಾಪಾಡಿಕೊಳ್ಳುವ ಬಗ್ಗೆ, ಮಾಸ್ಕ್‌ ಮೂಗಿನಿಂದ ಜಾರದಂತೆ ನೋಡಿಕೊಳ್ಳುವ ಬಗ್ಗೆ, ಆಗಾಗ ಕೈಗೆ ಸ್ಯಾನಿಟೈಸರ್‌ ಹಾಕಿಕೊಳ್ಳುವ ಕುರಿತು ತಿಳಿ ಹೇಳಿದ್ದೆ’ ಎನ್ನುವ ಗೃಹಿಣಿ ಶುಭಾ ಸಾಲಿಯಾನ್‌, ‘ಮಕ್ಕಳಿಗೆ ಲಸಿಕೆ ಬಂದರೆ ಸಾಕಪ್ಪ’ ಎಂದು ಆತಂಕ ತೋಡಿಕೊಳ್ಳುತ್ತಾರೆ.

ಈ ಕೋವಿಡ್‌ ಮಧ್ಯೆ ಒಂದೂವರೆ ವರ್ಷದಿಂದ ಬದುಕು ಸಾಗಿಸುತ್ತಿದ್ದೇವೆ. ಹೀಗಾಗಿ ಜೀವನಶೈಲಿಯಲ್ಲಿ ಅಗಾಧ ಪ್ರಮಾಣದಲ್ಲಿ ಬದಲಾವಣೆ ಕಾಣಿಸಿಕೊಂಡಿದೆ. ಮನರಂಜನೆಗಿಂತ ಸುರಕ್ಷತೆ, ಜೀವ ಮುಖ್ಯ ಎಂದು ಬಹುತೇಕ ಮಂದಿಗೆ ಅರಿವಾಗಿದೆ. ಆದರೂ ಮಕ್ಕಳಿಗೋಸ್ಕರ, ಅವರ ಮಾನಸಿಕ ಆರೋಗ್ಯಕ್ಕೋಸ್ಕರ ಸಣ್ಣಪುಟ್ಟ ಮನರಂಜನೆಗೆಂದು ಹೊರಗೆ ಅಡಿಯಿಟ್ಟರೂ ಮುನ್ನೆಚ್ಚರಿಕೆ ಮುಖ್ಯವಾಗಿರಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT