ಶನಿವಾರ, 9 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಥೈರಾಯ್ಡ್‌: ಜೀವನಶೈಲಿ ಸರಿಪಡಿಸಿಕೊಳ್ಳಿ, ಸೂಕ್ತ ಚಿಕಿತ್ಸೆ ಪಡೆಯಿರಿ

Last Updated 29 ಜುಲೈ 2022, 19:30 IST
ಅಕ್ಷರ ಗಾತ್ರ

1. ನನಗೆ 26 ವರ್ಷ.2020ರ ಡಿಸೆಂಬರ್‌ನಲ್ಲಿ ಗರ್ಭದಲ್ಲಿದ್ದ ಮಗುವಿಗೆ ಹೃದಯಬಡಿತವಿಲ್ಲ ಎಂಬ ಕಾರಣಕ್ಕೆ ಗರ್ಭಪಾತ ಮಾಡಲಾಯಿತು. 2021ರಲ್ಲಿ ಮತ್ತೆ ಗರ್ಭಿಣಿಯಾದೆ. ಆದರೆ, ಐದು ತಿಂಗಳ ಸ್ಕ್ಯಾನಿಂಗ್‌ನಲ್ಲಿ ಮಗುವಿಗೆ ಬೆನ್ನುಮೂಳೆ (ಸ್ಪೈನಲ್‌ ಕಾರ್ಡ್‌) ಬೆಳವಣಿಗೆಯಾಗಿಲ್ಲ ಎಂದು ಗರ್ಭಪಾತ ಮಾಡಲಾಯಿತು. ಮತ್ತೆ ಗರ್ಭ ಧರಿಸುವ ಮುನ್ನ ಏನಾದ್ರೂ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕಾ? ದಯವಿಟ್ಟು ತಿಳಿಸಿ.
ಹೆಸರು, ಊರು ತಿಳಿಸಿಲ್ಲ.

ಎರಡನೇ ಬಾರಿ ಗರ್ಭಪಾತವಾದಾಗ ಮಗುವಿಗೆ ಸ್ಪೈನಲ್ ಕಾರ್ಡ್‌ ಸರಿಯಾಗಿ ಬೆಳವಣಿಗೆ ಆಗಿಲ್ಲ ಎಂದು ಹೇಳಿದ್ದೀರಿ. ಹೆಚ್ಚಿನ ಸಂದರ್ಭಗಳಲ್ಲಿ ರಕ್ತದಲ್ಲಿ ಫೋಲಿಕ್‌ ಆ್ಯಸಿಡ್‌ನ ಕೊರತೆಯಿಂದಾಗಿ ಇಂಥ ನ್ಯೂರಲ್‌ಟ್ಯೂಬ್‌ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಹಾಗಾಗಿ ಮತ್ತೆ ಗರ್ಭಧಾರಣೆಯಾಗುವ ಮುನ್ನ ಪ್ರತಿ ದಿನ 4 ಎಂ.ಜಿ ಫೋಲಿಕ್‌ ಆ್ಯಸಿಡ್‌ ಮಾತ್ರೆಗಳನ್ನು ತೆಗೆದುಕೊಳ್ಳಬೇಕು. ಈಗ ಎಲ್ಲ ಕಡೆಗಳಲ್ಲಿಯೂ ಫೋಲಿಕ್‌ ಆ್ಯಸಿಡ್‌ ಮಾತ್ರೆ ಲಭ್ಯವಿದೆ. ಗರ್ಭಧಾರಣೆಗೂ ಮುನ್ನ ಪ್ರತಿ ಮಹಿಳೆಯು 4 ರಿಂದ 6 ವಾರ ಮೊದಲೇ 4 ಎಂ.ಜಿ. ಫೋಲಿಕ್‌ ಆ್ಯಸಿಡ್‌ ಮಾತ್ರೆ ನಿತ್ಯ ತೆಗೆದುಕೊಳ್ಳಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಶಿಫಾರಸು ಮಾಡಿದೆ. ಇದರಿಂದ ನ್ಯೂರಲ್‌ ಟ್ಯೂಬ್‌ ದೋಷಗಳು, ಅಕಾಲಿಕ ಹೆರಿಗೆ, ಗರ್ಭಪಾತ ಸಂಭವವನ್ನು ಕಡಿಮೆ ಮಾಡುತ್ತದೆ. ಹಸಿರುಸೊಪ್ಪು ತರಕಾರಿ, ಹಣ್ಣು ಹೆಚ್ಚು ಸೇವಿಸಿ. ಅದರಲ್ಲೂ ಪಾಲಕ್‌, ಬಸಳೆ ಸೊಪ್ಪುಗಳಲ್ಲಿ ಫೋಲಿಕ್‌ ಆ್ಯಸಿಡ್‌ ಅಧಿಕ ಪ್ರಮಾಣದಲ್ಲಿರುತ್ತದೆ. ಇವುಗಳ ಬಳಕೆ ಹೆಚ್ಚಿರಲಿ. ಹಿಮೋಗ್ಲೋಬಿನ್ ಮಟ್ಟ ಸರಿಯಾಗಿದೆಯೇ ನೋಡಿಕೊಳ್ಳುತ್ತಿರಿ. ಕಬ್ಬಿಣಾಂಶದ ಕೊರತೆಯಿದ್ದರೆ ಆ ಮಾತ್ರೆಗಳನ್ನು ತೆಗೆದುಕೊಳ್ಳಿ. ಆರೋಗ್ಯ ಸುಧಾರಿಸಿದ ಮೇಲೆ ಗರ್ಭಧಾರಣೆಯಾದರೆ ಆರೋಗ್ಯವಂತ ಮಗು ಪಡೆಯಬಹುದು.

2. ನನಗೆ 24 ವರ್ಷ. ನಾಲ್ಕು ವರ್ಷಗಳಿಂದ ಹೈಪೋಥೈರಾಯ್ಡ್‌ ಸಮಸ್ಯೆ ಇದೆ. 75 ಎಂ.ಜಿ ಮಾತ್ರೆ ತಗೋತಿದೀನಿ. ನನ್ನ ಎತ್ತರ ಐದೂಕಾಲು ಅಡಿ. ತೂಕ 86 ಕೆ.ಜಿ. 4 ಅಥವಾ 5 ತಿಂಗಳಿಗೊಮ್ಮೆ ಮುಟ್ಟಾಗುತ್ತದೆ. ಸ್ಕ್ಯಾನಿಂಗ್‌ನಲ್ಲಿ ಪಿಸಿಓಡಿ ತೊಂದರೆ ಇದೆ ಎಂದು ಗೊತ್ತಾಯಿತು. ನನ್ನ ಋತುಚಕ್ರ ನಿಯಮಿತವಾಗಲು ಏನು ಮಾಡಬೇಕು ತಿಳಿಸಿ.
ಹೆಸರು, ಊರು ತಿಳಿಸಿಲ್ಲ

ನಿಮಗಿರುವ ಹೈಪೋಥೈರಾಯ್ಡ್‌ ಸಮಸ್ಯೆ, ನೀವು ತೆಗೆದುಕೊಳ್ಳುವ ಮಾತ್ರೆಯಿಂದ ನಿಯಂತ್ರಣದಲ್ಲಿದೆಯೇ ಇಲ್ಲವೇ ಎಂದು 6 ತಿಂಗಳಿಗೊಮ್ಮೆಯಾದರೂ ತಿಳಿದುಕೊಳ್ಳಬೇಕು. ಇದನ್ನು ಟಿಎಸ್ಎಚ್ ಹಾರ್ಮೋನು ಪರೀಕ್ಷೆಯ ಮೂಲಕ ತಿಳಿದು ಕೊಳ್ಳಿ. ಪಿಸಿಓಡಿ ತೊಂದರೆಗೆ ಮುಖ್ಯವಾದ ಚಿಕಿತ್ಸೆಯೆಂದರೆ ಜೀವನಶೈಲಿಯಲ್ಲಿ ಬದಲಾವಣೆ. ಜತೆಗೆ ಸೂಕ್ತ ಚಿಕಿತ್ಸೆ ಪಡೆಯುವುದು.ತೂಕವನ್ನು ಕಡಿಮೆ ಮಾಡಿಕೊಳ್ಳಲು ಆಹಾರ ಸೇವನೆಯಲ್ಲಿ ನಿಯಂತ್ರಣವಿರಲಿ. ಪಿಸಿಓಡಿ ನಿವಾರಣೆಗೆ ನಿರ್ದಿಷ್ಟ ಆಹಾರವಿಲ್ಲ. ಸ್ಥಳೀಯವಾಗಿ ಸಿಗುವ ಸೊಪ್ಪು, ತರಕಾರಿ ಸೇವಿಸಿ. ಜಂಕ್‌ಫುಡ್‌ ತಿನ್ನುವ ಅಭ್ಯಾಸವಿದ್ದರೆ ಸಂಪೂರ್ಣ ಬಿಟ್ಟುಬಿಡಿ. ನಿತ್ಯ ಒಂದು ಗಂಟೆಯಾದರೂ ಸೈಕ್ಲಿಂಗ್‌, ವಾಕಿಂಗ್‌, ಸ್ವಿಮಿಂಗ್‌, ಡ್ಯಾನ್ಸಿಂಗ್‌, ಯೋಗ ಯಾವುದಾದರೊಂದು ಅಭ್ಯಾಸ ಮಾಡಿ. ಆರರಿಂದ ಎಂಟು ತಾಸು ನಿದ್ರೆ ಬೇಕು. ತಿಂಗಳಿಗೆ ಸರಿಯಾಗಿ ಮುಟ್ಟಾಗಲು ಅಂಡಾಶಯದಿಂದ ಅಂಡೋತ್ಪತ್ತಿಯಾಗುವ ಮಾತ್ರೆಗಳನ್ನು ಇಲ್ಲವೇ ಹಾರ್ಮೋನು ಮಾತ್ರೆಗಳನ್ನು ತಜ್ಞರು ನೀಡುತ್ತಾರೆ.

3. ನನಗೆ 13 ವರ್ಷ. ತೂಕ 42 ಕೆ.ಜಿ. ಎರಡು ವರ್ಷಗಳ ಹಿಂದೆ ಋತುಚಕ್ರ ಆರಂಭವಾಯಿತು. ಆರಂಭದಲ್ಲಿ ಮೂರು ತಿಂಗಳಿಗೊಮ್ಮೆ ಮುಟ್ಟಾಗುತ್ತಿದ್ದೆ. ಆದರೆ ಏಳು ತಿಂಗಳಿಂದ 2 ತಿಂಗಳಿಗೊಮ್ಮೆ ಮುಟ್ಟಾಗುತ್ತಿದ್ದೇನೆ. ಐದು ದಿನಗಳ ಕಾಲವೂ ಸ್ರಾವ ಇರುತ್ತದೆ. ಇದಕ್ಕೆ ಪರಿಹಾರವೇನು? ಮುಂದೆ ಏನಾದರೂ ತೊಂದರೆಯಾಗುವುದೇ?
–ಹೆಸರು, ಊರು ತಿಳಿಸಿಲ್ಲ

ಋತುಚಕ್ರ ಆರಂಭವಾಗಿ ಎರಡು ವರ್ಷವಾಗಿದೆ. ಇನ್ನು ಒಂದು ವರ್ಷದಲ್ಲಿ ಋತುಚಕ್ರ ನಿಯಮಿತವಾಗಿ ಆಗದೇ ಇದ್ದಲ್ಲಿ ತಜ್ಞ ವೈದ್ಯರ ಸಲಹೆ ಪಡೆದುಕೊಳ್ಳಿ. ಮೂರು ವರ್ಷದ ನಂತರವೂ ಋತುಚಕ್ರ ಏರುಪೇರಿನ ಸಮಸ್ಯೆ ಇದ್ದರೆ ಪಿಸಿಓಎಸ್‌ ಸಮಸ್ಯೆಯ ಮುನ್ಸೂಚನೆಯಾಗಿರಬಹುದು. ನಿರ್ಲಕ್ಷ್ಯ ಬೇಡ. ಹಾಗೆಂದೂ ಆತಂಕ ಪಡುವುದೂ ಬೇಡ. ಒಂದು ವರ್ಷದ ನಂತರ ನಿಮ್ಮ ಋತುಚಕ್ರವನ್ನು ಅರ್ಥ ಮಾಡಿಕೊಂಡು ತಜ್ಞರು ಚಿಕಿತ್ಸೆ ನೀಡುತ್ತಾರೆ.

4. ನಾನು ಎಂ.ಎ, ಬಿ.ಇಡಿ ಪೂರ್ಣಗೊಳಿಸಿದ್ದೇನೆ.ಅಲ್ಲಿ ಒಬ್ಬ ವ್ಯಕ್ತಿ ನನ್ನ ಇಷ್ಟಪಟ್ಟು ಮದುವೆ ಆಗ್ತೀನಿ ಅಂತ ಹೇಳಿ 18 ಬಾರಿ ಲೈಂಗಿಕ ಸಂಪರ್ಕ ಮಾಡಿದ್ದ. ತಿಂಗಳು ಮುಟ್ಟು ಆಗ್ತಿಲ್ಲ ಅಂತ ಹೇಳಿದ್ದಕ್ಕೆ ಮುಟ್ಟಾಗುವ ಮಾತ್ರೆ ಕೊಡ್ತೀನಿ ಅಂತ ಹೇಳಿ ಗರ್ಭಪಾತ ಆಗುವ ಮಾತ್ರೆ ಕೊಟ್ಟಿದ್ದ. ಮುಟ್ಟಿನ ಮಾತ್ರೆ ಎಂದು ತೆಗೆದುಕೊಂಡೆ. ಗರ್ಭಪಾತವೂ ಆಯಿತು. ಈಗ ಅವನೂ ದೂರವಾಗಿದ್ದಾನೆ. ಅವನನ್ನು ಮರೆಯಲು ಆಗುತ್ತಿಲ್ಲ. ದಯವಿಟ್ಟು ಪರಿಹಾರ ಹೇಳಿ.
ಹೆಸರು, ಊರು ತಿಳಿಸಿಲ್ಲ

ನೀವು ಉನ್ನತ ಶಿಕ್ಷಣ ಪಡೆದು ತಿಳಿವಳಿಕೆಯುಳ್ಳವರಾಗಿದ್ದೀರಿ ಎಂಬುದು ನನ್ನ ಅಭಿಪ್ರಾಯ. ಮದುವೆಯಾಗಿ ಸತಿಪತಿಗಳಾಗುತ್ತಿರೋ ಇಲ್ಲವೋ ಸರಿಯಾಗಿ ಖಾತ್ರಿಪಡಿಸಿಕೊಳ್ಳದೇ ಲೈಂಗಿಕ ಸಂಪರ್ಕ ಮಾಡಲು ಆತುರಪಟ್ಟಿದ್ದಕ್ಕೆ ಈಗ ಪಶ್ಚಾತ್ತಾಪ ಪಡುತ್ತಿದ್ದೀರೆಂದು ಎನ್ನಿಸುತ್ತದೆ. ಮೋಸ ಮಾಡಿದ ಮೇಲೂ ಅವನನ್ನು ಮರೆಯಲು ಆಗುತ್ತಿಲ್ಲವೆಂದರೆ ಅದು ನಿಮ್ಮ ಮಾನಸಿಕ ದೌರ್ಬಲ್ಯ. ಯಾವುದೇ ವ್ಯಕ್ತಿಯ ಕೌಟುಂಬಿಕ, ಶೈಕ್ಷಣಿಕ ಹಾಗೂ ಆರ್ಥಿಕ ಹಿನ್ನೆಲೆ ತಿಳಿದುಕೊಂಡು ಒಡನಾಟ ಬೆಳೆಸಬೇಕೇ ಹೊರತು ಅಪರಿಚಿತರು ಹೆಣೆಯುವ ಬಲೆಗೆ ಬೀಳಬಾರದು. ಆತ ಅಯೋಗ್ಯನಾಗಿದ್ದರೆ ಮರೆಯಲು ಪ್ರಯತ್ನಿಸಿ. ಒಳ್ಳೆಯ ಉದ್ಯೋಗ ಪಡೆದು ಆರ್ಥಿಕವಾಗಿ ಸಬಲರಾಗಿ. ಹಳೆಯದೆಲ್ಲ ಮರೆತು ಹೊಸ ಬದುಕು ಕಟ್ಟಿಕೊಳ್ಳಿ.

ಡಾ. ವೀಣಾ ಎಸ್‌. ಭಟ್‌
ಡಾ. ವೀಣಾ ಎಸ್‌. ಭಟ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT