ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಗ್ಯ | ಮಧ್ಯವಯಸ್ಸು ಮಧ್ಯಂತರಕ್ಕೇ ಮುಗಿಯದಿರಲಿ

Last Updated 20 ಸೆಪ್ಟೆಂಬರ್ 2022, 6:10 IST
ಅಕ್ಷರ ಗಾತ್ರ

ಜೀವನ ವೇಗವಾಗಿ ಸಾಗುತ್ತಿರುವಾಗ ನಾವು ನಮ್ಮ ಜೀವಮಾನದ ಹಲವು ಮಜಲುಗಳನ್ನು ನೋಡನೋಡುತ್ತಲೇ ದಾಟಿಬಿಟ್ಟಿರುತ್ತೇವೆ. ದಿನನಿತ್ಯದ ಧಾವಂತದಲ್ಲಿ ಕೆಲವೊಂದು ಕಾಲಘಟ್ಟಗಳನ್ನು ಮರೆತೇಬಿಟ್ಟಿರುತ್ತೇವೆ. ಏಕೆಂದರೆ ಜೀವನ ನಮಗೆ ನೀಡುವ ಸವಾಲಿನ ಸ್ಪರ್ಧೆಯೇ ಅಂತಹುದು. ವೇಗ, ಗಡಿಬಿಡಿಗೇ ಇಲ್ಲಿ ಮಹತ್ವ. ಮುನ್ನುಗ್ಗಬೇಕೆನ್ನುವ ಛಲ, ಇನ್ನೂ ಹೆಚ್ಚಿನದನ್ನು ಸಾಧಿಸೋಣ ಎನ್ನುವ ಉತ್ಸಾಹ ಅನೇಕ ಬಾರಿ ನಮ್ಮನ್ನು ಸ್ಪರ್ಧೆಯ ಕಣಕ್ಕೆ ಇಳಿಸಿಬಿಟ್ಟಿರುತ್ತದೆ. ಹಾಗೆ ನೋಡಿದರೆ ಸ್ಪರ್ಧೆ ಉತ್ತಮವೇ. ನಮ್ಮಲ್ಲಿನ ಜಡತ್ವವನ್ನು ಒದ್ದೋಡಿಸಿ ಚುರುಕುತನವನ್ನು ಹೆಚ್ಚಿಸುವುದು, ಗುರಿ ಮುಟ್ಟುವಂತೆ ಪ್ರೇರೇಪಿಸುವುದು ಸ್ಪರ್ಧೆಯ ಒಂದು ಉದ್ದೇಶ.

ಚಿಕ್ಕವರಿದ್ದಾಗ ಪಾಲಕರ ಮತ್ತು ಶಿಕ್ಷಕರ ಮಾರ್ಗದರ್ಶನದಲ್ಲಿ ಕನಸು ಕಾಣುವ ನಾವು ಇಪ್ಪತ್ತರ ಮತ್ತು ಮೂವತ್ತರ ದಶಕಗಳಲ್ಲಿ ನಮ್ಮ ಕಾಲಮೇಲೆ ನಿಂತು ಆ ಕನಸುಗಳನ್ನು ಸಾಕಾರಮಾಡಬಯಸುತ್ತೇವೆ. ನಮ್ಮ ನಮ್ಮ ಕನಸಿನ ವೃತ್ತಿಗಳಲ್ಲಿ ಪುಟ್ಟ ಪುಟ್ಟ ಹೆಜ್ಜೆಯಿಕ್ಕುತ್ತ, ಒಮ್ಮೊಮ್ಮೆ ಬಿದ್ದರೂ ಮೇಲೇಳುತ್ತ ಕೊನೆಗೆ ದೃಢವಾಗಿ ನಿಲ್ಲುತ್ತೇವೆ. ನಂತರ ಬರುವುದೇ ಮಧ್ಯವಯಸ್ಸು. ಎಲ್ಲರ ಜೀವನದಲ್ಲಿ ಇದೊಂದು ಪ್ರಮುಖ ಕಾಲಘಟ್ಟ. ಸುಮಾರು 40ರಿಂದ 60 ವಯಸ್ಸಿನ ವಯೋಮಾನದವರೆಲ್ಲರನ್ನು ನಾವು ಮಧ್ಯವಯಸ್ಕರೆಂದು ಪರಿಗಣಿಸಬಹುದು.

ಒಂದು ಸರ್ವೆಯ ಪ್ರಕಾರ ಜಗತ್ತಿನಲ್ಲಿ ಸುಮಾರು ಶೇ25 ಜನಸಂಖ್ಯೆಯಷ್ಟು ಈ ಮಧ್ಯವಯಸ್ಕರರಿದ್ದಾರೆ. ಆದರೆ ಜಗತ್ತಿನ ಆದಾಯದ ಶೇ 50ಕ್ಕೂ ಹೆಚ್ಚಿನ ಆದಾಯ ಈ ಮಧ್ಯವಯಸ್ಕರ ಬಳಿ ಇದೆ. ಏಕೆಂದರೆ ಈ ವಯೋಮಾನದ ಬಹುತೇಕ ಜನ ತಮ್ಮ ತಮ್ಮ ಉದ್ಯೋಗದ ಅತ್ಯುತ್ತಮ ಹಂತದಲ್ಲಿರುತ್ತಾರೆ. ಬ್ಯಾಂಕಿಂಗ್ ವಲಯದಲ್ಲಿ ಹಿರಿಯ ಅಥವಾ ಪ್ರಾಂತೀಯ ಮ್ಯಾನೇಜರ್ ಆಗಿಯೋ, ಕಾಲೇಜುಗಳಲ್ಲಿ ಪ್ರೊಫೆಸರ್ ಆಗಿಯೋ, ಔದ್ಯಮಿಕ ಕ್ಷೇತ್ರಗಳಲ್ಲಿ ‘ಸಿಇಒ’ ಅಥವಾ ಪ್ರಾದೇಶಿಕ ಮುಖ್ಯಸ್ಥರಾಗಿಯೋ ಸೇವೆ ಸಲ್ಲಿಸುತ್ತಿರುತ್ತಾರೆ. ಹಿರಿಯ ವೈದ್ಯರು, ಉದ್ಯಮಿಗಳು ಮತ್ತು ಸರ್ಕಾರಿ ಸೇವೆಯಲ್ಲಿರುವ ಅನೇಕ ಗೆಜೆಟೆಡ್ ಅಧಿಕಾರಿಗಳು ಕೂಡ ಈ ವರ್ಗಕ್ಕೇ ಸೇರುತ್ತಾರೆ. ಒಟ್ಟಿನಲ್ಲಿ ಈ ವರ್ಗ ಒಂದು ದೇಶದ ಆರ್ಥಿಕತೆಯ ಚುಕ್ಕಾಣಿಯನ್ನೇ ಹಿಡಿದಿರುತ್ತೆ ಎಂದರೆ ತಪ್ಪಾಗಲಿಕ್ಕಿಲ್ಲ!

ಹೆಚ್ಚಿನ ಜವಾಬ್ದಾರಿ ಜೊತೆಗೆ ಮಹತ್ವಾಕಾಂಕ್ಷೆಯನ್ನೂ ಹೊಂದಿರುವ ಸುಮಾರು 40ರಿಂದ 60 ವಯಸ್ಸಿನ ಈ ಜನ ಕೆಲವೊಮ್ಮೆ ಹತಾಶೆ, ಖಿನ್ನತೆಯಿಂದ ಬಳಲತೊಡಗುತ್ತಾರೆ. ಜೀವನೋತ್ಸಾಹ ಕುಗ್ಗಿದಂತೆ ಅನಿಸುವುದು, ಭವಿಷ್ಯದ ಬಗ್ಗೆ ಕಳವಳ/ ಅನಾದರ ತೋರುವುದು, ಲೈಂಗಿಕ ನಿರಾಸಕ್ತಿ ಇಂತಹ ಅನೇಕ ಲಕ್ಷಣಗಳನ್ನು ಇವರಲ್ಲಿ ಕಾಣಬಹುದು. ಈ ಸ್ಥಿತಿಯನ್ನು ಮನೋವೈದ್ಯಕೀಯ ಪರಿಭಾಷೆಯಲ್ಲಿ ‘ಮಿಡ್ಲ್‌ ಲೈಫ್‌ ಕ್ರೈಸಿಸ್‌’ಎಂದೂ ಕರೆಯುತ್ತಾರೆ.

ಈ ಸಮಸ್ನೆಗಳಿಗೆ ಕಾರಣಗಳಿವೆ. ವಯಸ್ಸಾಗುತ್ತಿದ್ದಂತೆ ನಮ್ಮ ಶರೀರ ದೈಹಿಕವಾಗಿ ಮತ್ತು ಮಾನಸಿಕವಾಗಿ ಕೊಂಚ ಕೊಂಚವೇ ಕುಗ್ಗುತ್ತಾ ಹೋಗುತ್ತದೆ. ಜೊತೆಗೆ ಬಿ.ಪಿ, ಮಧುಮೇಹದಂತಹ ಕಾಯಿಲೆಗಳು ಈ ಸಂದರ್ಭದಲ್ಲೇ ಒಕ್ಕರಿಸುತ್ತವೆ. (ಮಹಿಳೆಯರಲ್ಲಿ ಮುಟ್ಟು ನಿಲ್ಲುವಿಕೆಯ ಪರಿಣಾಮಗಳು ಕಂಡುಬರುವುದು ಕೂಡ ಈ ವಯಸ್ಸಿನಲ್ಲಿಯೇ.) ಅಲ್ಲದೆ ಕೆಲಸ ಏಕತಾನತೆಯಿಂದ ಕೂಡಿದೆ ಅನಿಸತೊಡಗಿ ಮುಂದೇನು ಎಂಬ ಚಿಂತೆ ಕೂಡ ಕಾಡತೊಡಗುತ್ತದೆ.

ಹಾಗಾದರೆ ಇದಕ್ಕೆ ಪರಿಹಾರವೇನು?
ಮಧ್ಯವಯಸ್ಕರಲ್ಲಿ ಆ ಚೇತನವನ್ನು ಮರಳಿ ತರುವುದು ಹೇಗೆ? ಸಂತೋಷ ‘U’ ಆಕಾರದಲ್ಲಿ ನಮ್ಮ ಜೀವನದಲ್ಲಿ ಬರುವುದಂತೆ. ಅಂದರೆ ಪ್ರಾರಂಭಿಕ ವರ್ಷಗಳು ಹೆಚ್ಚು ಸಂತೋಷಮಯವಾಗಿರುತ್ತದೆ; ಮಧ್ಯದ ವರ್ಷಗಳಲ್ಲಿ ಸಂತಸ ಕೆಳಮಟ್ಟದಲ್ಲಿರುತ್ತದೆ. ನಂತರದ ದಿನಗಳು ಮತ್ತೆ ಸಂತೋಷಮಯವಾಗಿರುತ್ತವೆ. ಅದು ನಾವು ಮಾಗಿ, ಪರಿಪಕ್ವಗೊಂಡ ಸಮಯ. ಸಂತಸ ಕೆಳಮಟ್ಟದಲ್ಲಿರುವ ಈ ಮಧ್ಯವಯಸ್ಸನ್ನು ಚೇತೋಹಾರಿಯಾಗಿಸಲು, ಮಾನಸಿಕ ತುಮುಲಗಳನ್ನು ಜಯಿಸಲು ಕೆಲವು ಸೂತ್ರಗಳಿವೆ.
ಮೊದಲನೆಯದಾಗಿ, ವಯಸ್ಸಾಗುವಿಕೆ ಒಂದು ನಿರಂತರ, ಒಮ್ಮುಖ ಪ್ರಕ್ರಿಯೆ ಎಂದು ನಾವೆಲ್ಲರೂ ಒಪ್ಪಿಕೊಳ್ಳಬೇಕು. ವಯಸ್ಸಾಗುವಿಕೆಯ ಲಕ್ಷಣಗಳು ಕೂಡ ಸ್ವಾಭಾವಿಕವೇ ಎಂದು ತಿಳಿಯಬೇಕು. ಈ ವಯಸ್ಸಿನಲ್ಲಿ ಬರುವ ಬಿ.ಪಿ, ಮಧುಮೇಹ, ಬೊಜ್ಜು, ಕಣ್ಣಿನ ತೊಂದರೆ ಮುಂತಾದುವುಗಳನ್ನು ಆರಂಭಿಕ ಹಂತದಲ್ಲೇ ಪತ್ತೆಮಾಡಿ ಸೂಕ್ತ ಚಿಕಿತ್ಸೆಯನ್ನು ಪಡೆಯಬೇಕು. ನಂತರ ನಾವು ಕೆಲಸದ ಒತ್ತಡ ಕಡಿಮೆಮಾಡಿಕೊಳ್ಳಲು ನಮ್ಮ ವೈಯುಕ್ತಿಕ ಸಮಯದ ಸದುಪಯೋಗವನ್ನು ಪಡೆಯಬೇಕು. ಇದನ್ನು ಪಡೆಯಲು ಅನೇಕ ವಿಧಗಳಿವೆ:

1. ಸುಂದರ, ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡುವುದು. ಎಷ್ಟೋ ವರ್ಷಗಳಿಂದ ನೋಡಲು ಆಗದೇ ಇದ್ದ ಈ ಸ್ಥಳಗಳನ್ನು ನೋಡಲು ಇದೊಂದು ಸದವಕಾಶ.

2. ನಿಮಗಿಷ್ಟವಾದ ಪುಸ್ತಕವೊಂದನ್ನು ಓದಿಯೋ ಇಲ್ಲವೇ ಆಸಕ್ತಿಯಿರುವ ವಾದ್ಯವನ್ನು ನುಡಿಸಿಯೋ ಸ್ವಲ್ಪ ಸಮಯವನ್ನು ಕಳೆಯಲು ಪ್ರಯತ್ನಿಸಿ.

3. ಹಲವು ವರ್ಷಗಳ ಹಿಂದೆ ಕೆಲಸದ ಜಂಜಾಟದಲ್ಲಿ ನಿಲ್ಲಿಸಿದ ಹವ್ಯಾಸಗಳನ್ನು ಈಗ ಮತ್ತೆ ಪ್ರಾರಂಭಿಸಿ ನೋಡಿ. ನಿಮಗೇ ಅಚ್ಚರಿಯಾಗುವಷ್ಟು ಆನಂದಿಸುತ್ತೀರಿ.

4. ಸ್ನೇಹಿತರ, ಸಂಬಂಧಿಕರ ಸಮಾರಂಭಗಳಿಗೆ ಭೇಟಿ ಕೊಟ್ಟು ಆತ್ಮೀಯತೆಯಿಂದ ಮಾತನಾಡಿ. ನಿಮ್ಮ ಸಾಂಗತ್ಯ ಅವರಿಗೂ ಎಷ್ಟೊಂದು ಖುಷಿ ಕೊಡುತ್ತದೆ ಎನ್ನುವುದು ಗೊತ್ತಾಗುವುದು ಆಗಲೇ.

5. ಸಾಧ್ಯವಾದಷ್ಟು ಇನ್ನೊಬ್ಬರಿಗೆ ಸಹಾಯ ಮಾಡುವುದನ್ನು ರೂಢಿಸಿಕೊಳ್ಳಿ. (ಅದು ಸಂಘ-ಸಂಸ್ಥೆಯಾಗಿರಬಹುದು, ಮನೆಕೆಲಸದವರಿರಬಹುದು ಅಥವಾ ಆಫೀಸಿನ ಹುಡುಗನಾಗಿರಬಹುದು.) ಕೊಂಚಮಟ್ಟಿನ ಹಣದ ಸಹಾಯ ಅಥವಾ ಆತ್ಮೀಯತೆಯ ಮಾತುಗಳು ಅವರಲ್ಲಿ ಕೃತಜ್ಞತೆಯ ಭಾವವನ್ನು ಮೂಡಿಸಿದರೆ ನಮ್ಮಲ್ಲಿ ಸಂತೃಪ್ತಿಯ ಸೆಲೆಯನ್ನು ಉಕ್ಕಿಸುತ್ತದೆ.

ಈ ಮೇಲಿನ ಸೂತ್ರಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ನಮ್ಮಲ್ಲಿ ಸಾಕಷ್ಟು ಮಟ್ಟಿಗೆ ಧನಾತ್ಮಕ ಬದಲಾವಣೆಗಳು ಕಂಡುಬರುತ್ತವೆ. ಜೊತೆಗೆ ಮುಂಬರುವ ವೃದ್ಧ್ಯಾಪ್ಯದಲ್ಲಿ ನಾವು ಮತ್ತೊಮ್ಮೆ ಸಂತೋಷದ ಅಲೆಯಲ್ಲಿ ತೇಲಾಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT