ಮಂಗಳವಾರ, ಜುಲೈ 5, 2022
27 °C

ಕ್ಷೇಮ ಕುಶಲ | ವ್ಯಾಯಾಮಕ್ಕೂ ಬೇಕು ಶಿಸ್ತು

ಡಾ. ಸತ್ಯನಾರಾಯಣ ಭಟ್ ಪಿ. Updated:

ಅಕ್ಷರ ಗಾತ್ರ : | |

ವ್ಯಾಯಾಮ ಎಂದರೇನು?

ದೇಹಕ್ಕೆ ಆಯಾಸ ಉಂಟುಮಾಡುವ ಪ್ರಕ್ರಿಯೆಯೇ ವ್ಯಾಯಾಮ. ನಡಿಗೆ, ಸೂರ್ಯನಮಸ್ಕಾರ, ಈಜು, ಸೈಕ್ಲಿಂಗ್‌, ಹೊರಾಂಗಣ ಕ್ರೀಡೆಗಳು, ಆಟೋಟಗಳಂಥ ದೇಹದಂಡನೆ ಅಥವಾ ಕಸರತ್ತುಗಳೆಲ್ಲವೂ ವ್ಯಾಯಾಮದ ಬಗೆಬಗೆಯ ಪ್ರಕಾರಗಳು. ದೇಹದಲ್ಲಿ ಬೆವರು ತರಿಸಲು ವ್ಯಾಯಾಮ ಅತ್ಯಗತ್ಯ.

ಪ್ರಯೋಜನಗಳು

ದೇಹದ ಪುಷ್ಟಿ, ಮಾಂಸಖಂಡಗಳ ದೃಢತೆ, ದೇಹದಲ್ಲಿ ಕಾಂತಿ, ಜಠರಾಗ್ನಿ (ಹಸಿವು) ಸುಸ್ಥಿತಿಯಲ್ಲಿಡುವುದು, ಆಲಸ್ಯದಿಂದ ಮುಕ್ತಿ, ಸುಸ್ಥಿರದೇಹ, ಹಗುರವೆನಿಸುವ ದೇಹ – ಇವು ವ್ಯಾಯಾಮದಿಂದ ಸಿದ್ಧವಾಗುತ್ತವೆ. ಕಶ್ಮಲಗಳು ದೇಹದಿಂದ ಸದಾಕಾಲ ಹೊರಬೀಳುವುದು ಅಗತ್ಯ; ವ್ಯಾಯಾಮ ಇದಕ್ಕೂ ನೆರವಾಗುತ್ತದೆ. ಕಷ್ಟದ ಕೆಲಸಗಳನ್ನು ನಿಭಾಯಿಸುವ ಸಾಮರ್ಥ್ಯ, ಆಯಾಸವನ್ನು ತಡೆದುಕೊಳ್ಳುವ ಕಸುವು, ಅತಿ ನೀರಡಿಕೆ, ವಿಪರೀತ ಸೆಕೆ, ವಿಪರೀತ ಚಳಿಯನ್ನು ತಡೆಯವ ಸಾಮರ್ಥ್ಯಗಳೆಲ್ಲವೂ ವ್ಯಾಯಾಮ ಮಾಡುವುದರಿಂದ ಮೈಗೂಡುತ್ತವೆ. ಬೊಜ್ಜು ಕರಗಿಸಲು ವ್ಯಾಯಾಮಕ್ಕಿಂತಲೂ ಮಿಗಿಲಾದ ಸಾಧನ ಯಾವುದೂ ಇಲ್ಲ. ವ್ಯಾಯಾಮಿಗೆ ಶತ್ರುಭಯವೂ ಇರುವುದಿಲ್ಲ!

ನಿತ್ಯ ವ್ಯಾಯಾಮವನ್ನು ನೀವು ಮಾಡುವಿರಾ? ನಿಮ್ಮನ್ನು ಬೇಗನೆ ಆಯಾಸ ಕಾಡುವುದೇ ಇಲ್ಲ. ಮಾಂಸಖಂಡಗಳು ಸ್ಥಿರವಾಗಿಯೇ ಇರುತ್ತವೆ. ಮೈ ದಂಡಿಸುವ ಕಸರತ್ತು ಮಾಡಿದಿರಾ? ಅನಂತರ ಸೀಗೆಪುಡಿಯಿಂದ ಉಜ್ಜುವ ‘ವಿದ್ವರ್ತನ’ ಮಾಡುವಿರಾದರೆ ಕಾಯಿಲೆಗಳು ನಿಮ್ಮ ಹತ್ತಿರ ಸುಳಿಯವು. ಸಂಹಿತೆಗಳ ಒಟ್ಟು ಅಭಿಪ್ರಾಯ ಹೀಗಿದೆ: ವಯಸ್ಸು, ರೂಪಗಳಿಲ್ಲದವರಿಗೂ ವ್ಯಾಯಾಮದಿಂದ ಕಟ್ಟುಮಸ್ತುತನ ಕಟ್ಟಿಟ್ಟ ಬುತ್ತಿ. ವಾತ–ಪಿತ್ತ–ಕಫ ಈ ತ್ರಿದೋಷಗಳು ಸಹ ವ್ಯಾಯಾಮಶೀಲರಲ್ಲಿ ತಕರಾರಿಲ್ಲದೆ ಮಾಯವಾಗುವುದು ಖಂಡಿತ. ವ್ಯಾಯಾಮಕ್ಕೆ ಮೊದಲು ಜಿಡ್ಡಿನ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸಬೇಕು. ಆದರೆ ಹೊಟ್ಟೆ ತುಂಬ ಉಂಡ ಕೂಡಲೇ ವ್ಯಾಯಾಮಕ್ಕೆ ತೊಡಗುವುದು ಸಲ್ಲದು. ಹೀಗಾಗಿ ಬೆಳಗು–ಬೈಗು ಸಮಯಗಳು ವ್ಯಾಯಾಮಕ್ಕೆ ಸೂಕ್ತ.

ಕಡುಬೇಸಿಗೆ ಮತ್ತು ಜಡಿಮಳೆಯ ದಿನಗಳಲ್ಲಿ ಕಠಿಣವಾದ ವ್ಯಾಯಾಮ ಸಲ್ಲದು; ಲಘುತರ ವ್ಯಾಯಾಮವಷ್ಟೆ ಸಾಕು. ಕಂಕುಳು ಮತ್ತು ಹಣೆಗಳಲ್ಲಿ ಬೆವರು ಜಿನುಗಿತೆ? ಆಗ ವ್ಯಾಯಾಮ ನಿಲ್ಲಿಸಲು ಸೂಚನೆ ಎಂಬ ಆಯುರ್ವೇದ ಸಂಹಿತಾಸೂತ್ರವನ್ನು ನೆನಪಿಡಿ.

ವ್ಯಾಯಾಮಕ್ಕೆ ಅನರ್ಹರು ಯಾರು?

ದೇಹ ಕ್ಷಯವಾಗುವ ಕ್ಷಯರೋಗ, ವಿಪರೀತ ಸುಸ್ತು, ಆಗಾಗ ತಲೆದೋರುವ ವಾಂತಿ, ದೇಹದ ವಿವಿಧೆಡೆ ರಕ್ತಸ್ರಾವವಾಗುವ ರಕ್ತಪಿತ್ತ ಕಾಯಿಲೆ, ತಲೆತಿರುಗು, ಇಂದ್ರಿಯಗಳ ಕ್ಷೀಣ ಪಟುತ್ವ (ಸೋಲುವಿಕೆ), ಕೆಮ್ಮು, ಉಬ್ಬಸ, ಆಗಾಗ ಕಾಣಿಸುವ ಎದೆನೋವು ಇದೆಯೇ? ಹಾಗಾದರೆ ಇಂತಹವರಿಗೆ ವ್ಯಾಯಾಮ ನಿಷೇಧ. ಏದುಬ್ಬಸ ಬರುವವರಿಗೆ, ಹೃದಯಗತಿ ಏರಿಳಿತ ಇರುವವರು ವ್ಯಾಯಾಮ ಮಾಡಬೇಡಿರೆಂದು ಚರಕಸಂಹಿತೆಯ ಸೊಲ್ಲಿದೆ.

ಹೆಚ್ಚು ವ್ಯಾಯಾಮದಿಂದ ಹಾನಿಯೇ?

ವಿತಿಯರಿತ ವ್ಯಾಯಾಮದಿಂದ ಲಾಭವಿರುವಂತೆಯೇ, ಹದ್ದುಮೀರಿದ ವ್ಯಾಯಾಮದಿಂದ ಹಾನಿಯೇ ಹೆಚ್ಚು. ‘ಅರ್ಧ ಶಕ್ತ್ಯಾ ವ್ಯಾಯಾಮಂ ಕುರ್ವೀತ’ ಎನ್ನುತ್ತದೆ ಆರ್ಯುವೇದದ ಮೂಲಸೂತ್ರ. ಎಂದರೆ, ನಿಮಗೆ ಮೂರು ಕಿಲೋಮೀಟರ್‌ನಷ್ಟು ಓಡುವ ಚೈತನ್ಯವಿದೆಯೇ? ಒಂದೂವರೆ ಕಿಲೋಮೀಟರ್‌ನಷ್ಟು ಮಾತ್ರವೇ ಓಡಿ. ಇದಕ್ಕೆ ಚರಕಮಹರ್ಷಿ ನೀಡುವ ದೃಷ್ಟಾಂತ – ಸಿಂಹ–ಆನೆಯ ನಡುವೆ ನಡೆಯುವ ಕದನ. ಬಲಿಷ್ಠ ಆನೆಯನ್ನು ಸಿಂಹವೇ ಕೊಂದುಬಿಡುತ್ತದೆ. ಹೀಗೆಯೇ ವ್ಯಾಯಾಮದಿಂದ ಆನೇಕಾನೇಕ ಶುಭಫಲಗಳಿವೆ. ಆದರೆ ಕ್ರಮವರಿತು ಮಾಡದ ವ್ಯಾಯಾಮದಿಂದ ಕ್ರಮೇಣ ರೋಗನಿರೋಧಕ ಶಕ್ತಿ ಕುಸಿಯುತ್ತದೆ. ಮಾತ್ರವಲ್ಲ, ರೋಗಗಳು ಎದುರಾಗುತ್ತ, ಮರಣವೂ ಸನ್ನಿಹಿತವಾಗುತ್ತದೆ. ಅದನ್ನೇ ಮತ್ತೆ ಮತ್ತೆ ಪುನರುಚ್ಚರಿಸುವ ಚರಕಮಹರ್ಷಿ ಹೇಳುವ ಮಾತು ಸಾರ್ವಕಾಲಿಕ ಸತ್ಯ. ‘ಅರ್ಧ ಶಕ್ತ್ಯಾ ವ್ಯಾಯಾಮಂ ಕುರ್ವೀತ’; ಎಂದರೆ ದೇಹದ ಆರೋಗ್ಯ ಕಾಪಾಡಿಕೊಳ್ಳಬೇಕೆ? ನಿಮ್ಮ ಧಾರಣಾಶಕ್ತಿಯ ಅರ್ಧದಷ್ಟು ಮಾತ್ರ ವಿನಿಯೋಗಿಸಿರಿ ವ್ಯಾಯಾಮ ಮಾಡಿರಿ. ಉಳಿದ ಅರ್ಧ ಶಕ್ತಿಯನ್ನು ಕಾಪಾಡಿಕೊಂಡು ನಿರೋಗಿಗಳಾಗಿರಿ, ನೂರ್ಕಾಲ ಬಾಳಿರಿ.

ಶ್ರೀಕೃಷ್ಣದೇವರಾಯರ ದಿನಚರಿ

ವ್ಯಾಯಾಮದ ಮಹತ್ವ ತಿಳಿದಿದ್ದ ಶ್ರೀಕೃಷ್ಣದೇವರಾಯನು ಮುಂಜಾವಿನ ವ್ಯಾಯಾಮಪೂರ್ವದಲ್ಲಿ ತಾಜಾ ಎಳ್ಳೆಣ್ಣೆ ಕುಡಿಯುತ್ತಿದ್ದ. ಕುಸ್ತಿ, ಕುದುರೆ ಸವಾರಿ, ಕತ್ತಿವರಸೆಗಳು ಪ್ರಮುಖ ವ್ಯಾಯಾಮವಾಗಿದ್ದವು ಎಂಬ ಸಂಗತಿಯನ್ನು ಹದಿನಾರನೆಯ ಶತಮಾನದ ಪೋರ್ಚುಗೀಸ್‌ ಇತಿಹಾಸಜ್ಞ ಡೊಮಿಂಗೊ ಪಾಯಸ್‌ ವರದಿ ಮಾಡಿದ್ದಾನೆ. ಮೈಸೂರರಸರ ಪೈಕಿ ಕಂಠೀರವ ನರಸರಾಜ ಒಡೆಯರ್ ಮಾದರಿ ಉಲ್ಲೇಖಾರ್ಹ. ಎಪ್ಪತ್ತರ ದಶಕರ ಖ್ಯಾತ ಚಲನಚಿತ್ರ ‘ರಣಧೀರ ಕಂಠೀರವ’; ಅದರ ನಿರ್ದೇಶಕ ಜಿ.ವಿ. ಅಯ್ಯರ್‌ ಸ್ವತಃ ಕುಸ್ತಿಪಟು. ಸ್ವಾಮಿ ವಿವೇಕಾನಂದರ ಸಿಂಹವಾಣಿಯಾದ ‘ಸೌಂಡ್‌ ಮೈಂಡ್ ಇನ್ ಸೌಂಡ್ ಬಾಡಿ’ (ದೇಹ ಸೌಷ್ಠವದಲ್ಲಿ ದೃಢ ಮನಸ್ಸು) ಎಂಬ ಸಂಗತಿಯನ್ನು ಅಕ್ಷರಶಃ ನಂಬಿದವರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು