ಶುಕ್ರವಾರ, ಅಕ್ಟೋಬರ್ 29, 2021
20 °C

ಕನಸು: ನಿಮ್ಮೊಳಗೇ ಇರುವ ಅಪರಿಚಿತ ವ್ಯಕ್ತಿಯ ಪರಿಚಯ

ರಮ್ಯಾ ಶ್ರೀಹರಿ Updated:

ಅಕ್ಷರ ಗಾತ್ರ : | |

Prajavani

ನಿಮ್ಮ ಕನಸುಗಳು ನಿಮ್ಮೊಳಗೇ ಇರುವ ಅಪರಿಚಿತ ವ್ಯಕ್ತಿಯನ್ನು ನಿಮಗೆ ಪರಿಚಯ ಮಾಡಿಸಬಹುದು.

ರಾತ್ರಿ ಬಿದ್ದ ಕನಸುಗಳು ನಿಮ್ಮ ಹಗಲಿನ ಜೀವನವನ್ನು ಯಾವ ರೀತಿಯಲ್ಲಾದರೂ ಪ್ರಭಾವಿಸುತ್ತಿದೆಯಾ? ನೀವು ಕನಸುಗಳನ್ನು ನೆನಪಿಟ್ಟುಕೊಳ್ಳಲು ಯತ್ನಿಸುತ್ತಿರುವಿರೋ ಅಥವಾ ಅವುಗಳನ್ನು ಮರೆಯಲು ಹವಣಿಸುತ್ತಿರುವಿರೋ?

ಕನಸುಗಳ ಬಗ್ಗೆ ಅನೇಕ ವೈಜ್ಞಾನಿಕ, ಮನೋವಿಶ್ಲೇಷಣಾತ್ಮಕ ಅಧ್ಯಯನಗಳು ನಡೆದಿವೆ, ಅದನ್ನು ನಾವಿಲ್ಲಿ ಚರ್ಚಿಸಬೇಕಿಲ್ಲ. ಕನಸುಗಳನ್ನು ಸೃಜನಾತ್ಮಕವಾಗಿ, ನಮ್ಮ ಜೀವನವನ್ನು ಸಮೃದ್ಧವಾಗಿಸಲು ಬಳಸಿಕೊಳ್ಳುವುದು ಸಾಧ್ಯವಿದೆಯೇ? ಇದ್ದರೆ ಹೇಗೆ? ಇಂಥ ಪ್ರಶ್ನೆಗಳ ಕಡೆಗೆ ಗಮನ ನೀಡೋಣ.

ಹಗಲು ನಾವು ಕಾಣುವ ಕನಸೇ ಇರಲಿ, ರಾತ್ರಿ ನಮಗೆ ಬೀಳುವ ಕನಸೇ ಇರಲಿ, ಅದು ನಮ್ಮ ವರ್ತಮಾನವನ್ನು ಸಹ್ಯ ಮಾಡಿಕೊಳ್ಳುವ, ದಿನನಿತ್ಯದ ಹೊರಪ್ರಪಂಚದಲ್ಲಿ ಸುಲಭಕ್ಕೆ ಕಾಣಿಸದ್ದನ್ನು ನೋಡುವ, ಎಚ್ಚರದ ಬದುಕನ್ನು ಹೇಗಾದರೂ ಮೀರಿ ಹೋಗುವ ಕ್ರಿಯೆ. ಕನಸುಗಳೆಂದರೆ ಬೇರೊಂದು ಪ್ರಪಂಚದಂತೆ, ಸಣ್ಣದೊಂದು ಪ್ರವಾಸ ಮಾಡಿದಂತೆ, ಹೊಸಬರೊಬ್ಬರ ಪರಿಚಯ ಮಾಡಿಕೊಂಡಂತೆ, ನಮ್ಮನ್ನೇ ನಾವು ಬೇರೊಂದು ಬೆಳಕಿನಲ್ಲಿ ನೋಡಿಕೊಂಡಂತೆ. ಕನಸುಗಳಿಂದ ಪ್ರೇರಣೆ ಪಡೆದು ವೈಜ್ಞಾನಿಕ ಸಂಶೋಧನೆಗಳಲ್ಲಿ ಮಹತ್ತರವಾದದ್ದನ್ನು ಸಾಧಿಸಿದವರ ಕುರಿತು ಕೇಳಿದ್ದೇವೆ, ಹಾಗೆಯೇ ಕನಸುಗಳಿಂದ ಸ್ಫೂರ್ತಿ ಪಡೆದ ಕಲಾವಿದರು, ಸಾಹಿತಿಗಳೂ ಇರಬಹುದು. ಅಷ್ಟೇ ಏಕೆ ಅನೇಕರು ಕನಸುಗಳಿಂದಲೇ ಸೂಚನೆ ಪಡೆದು ತಮ್ಮ ವೈಯಕ್ತಿಕ ಸಮಸ್ಯೆಗಳನ್ನು ನಿವಾರಿಸಿಕೊಂಡ ಕಥೆಗಳು ಬಹಳಷ್ಟಿವೆ.

ಕಲಾತ್ಮಕ ಚಟುವಟಿಕೆಗಳಿಗೆ ಅಥವಾ ಸಮಸ್ಯೆ ಪರಿಹಾರಕ್ಕೆ ಯಾವ ರೀತಿಯಲ್ಲಿ ನೆರವಾಗದಿದ್ದರೂ ಕನಸುಗಳು ನಮ್ಮ ಜೀವನದ ಆಳ ಮತ್ತು ವಿಸ್ತಾರವನ್ನು ತಿಳಿಸುವ, ನಮ್ಮ ಆಂತರ್ಯದ ಬೆಳವಣಿಗೆಗೆ ಪೂರಕವಾಗುವ ಶಕ್ತಿ ಹೊಂದಿವೆ. ಕನಸುಗಳಿಂದ ನಾವು ನಮ್ಮ ಬದುಕಿಗೆ ಬೇಕಾದ ಸಂತೋಷವನ್ನು, ವೈವಿಧ್ಯವಯನ್ನು ಅನ್ವೇಷಿಸಿಕೊಳ್ಳಬಹುದು. ಕೆಟ್ಟ ಕನಸುಗಳೂ ಈ ಅನ್ವೇಷಣೆಗೆ ಹೊರತಾಗಿಲ್ಲ. ತಾತ್ಕಾಲಿಕವಾಗಿ ಅವು ನಮ್ಮನ್ನು ತಲ್ಲಣಗೊಳಿಸಿದರೂ ವಿವೇಕದ ದೃಷ್ಟಿಯಿಂದ ನೋಡಿದಾಗ ಅವೂ ಅಂತಿಮವಾಗಿ ಸಂತೋಷವನ್ನೇ ನೀಡುತ್ತವೆ.

ಕನಸುಗಳೂ ಒಂದು ಭಾಷೆ ಇದ್ದಂತೆ, ಅದನ್ನು ಅರಿಯಲು ನಾವು ಕನಸುಗಳ ವ್ಯಾಖ್ಯಾನ, ವಿಶ್ಲೇಷಣೆಯಂತಹ ಪರಿಕರಗಳನ್ನು ಬಳಸದಿರುವುದೇ ಒಳಿತು. ಬದಲಾಗಿ ಕನಸುಗಳ ಭಾಷೆಯನ್ನು ಬದುಕುವುದರ ಮೂಲಕ ಅರಿಯುವುದು ಲೇಸು. ಸಾವು ಮತ್ತು ಲೈಂಗಿಕತೆಯ ಕುರಿತಾದ ಕನಸುಗಳು ಎಲ್ಲರಿಗೂ ಬೀಳುವಂಥದ್ದು ಮತ್ತು ಅತಿ ಹೆಚ್ಚು ಕಳವಳವನ್ನು ಉಂಟುಮಾಡುವಂಥದ್ದು. ಏಕೆಂದರೆ ಮನುಷ್ಯ ಜೀವನದ ಮುಖ್ಯ ಸಂಘರ್ಷಗಳು ಎಂದಿಗೂ ಇವೆರಡರ ಸುತ್ತಲೇ ಇರುತ್ತವೆ.

ಒಮ್ಮೊಮ್ಮೆ ಕನಸುಗಳಲ್ಲಿ ಆತಂಕಗೊಳಿಸುವ ಯಾವುದೇ ನಿರ್ದಿಷ್ಟ ವಸ್ತು, ವ್ಯಕ್ತಿ, ಘಟನೆ ಗೋಚರಿಸದಿದ್ದರೂ ಕನಸಿನ ಪರಿಸರವೇ ಅಂದರೆ ಯಾವುದೋ ಮಸುಕು ಮಸುಕಾದ ದಾರಿ, ಮನೆ, ನೆಲಮಾಳಿಗೆ, ಬಯಲು ಇಂತಹ ಹಗಲು ಬೆಳಕಿನಲ್ಲಿ ನಾವು ಕಾಣುವ ಸಾಮಾನ್ಯ ನೋಟಗಳೇ ಕನಸಿನಲ್ಲಿ ಬಂದಾಗ ಸಾವನ್ನೇ ಕಂಡಷ್ಟು ವಿಹ್ವಲಗೊಳಿಸುತ್ತವೆ. ಅದರ ಅರ್ಥ ಏನಿರಬಹುದು ಎಂದು ತಲೆಕೆಡಿಸಿಕೊಳ್ಳುವ ಬದಲು ಅವುಗಳನ್ನು ನಮ್ಮ ಜಾಗೃತ ಮನಸ್ಸಿಗೆ ತಂದುಕೊಂಡು ಕೆಲ ಸಮಯದ ನಂತರ ಬಿಟ್ಟುಬಿಡುವುದು ಉತ್ತಮ ಉಪಾಯ. ಕನಸಿನಿಂದ ಎಚ್ಚರಾದ ತಕ್ಷಣ ಅದು ಎಷ್ಟು ನೆನಪಾಗುತ್ತದೆಯೋ ಅಷ್ಟನ್ನು ಕಣ್ಣು ಮುಚ್ಚಿಕೊಂಡು ನಮ್ಮ ಜಾಗೃತ ಮನಸ್ಸಿನಲ್ಲಿ ದಾಖಲಿಸಿಕೊಂಡು ಅವುಗಳನ್ನು ಬರೆದು ಅಥವಾ ಚಿತ್ರಬಿಡಿಸಿ ನಂತರ ಅದರ ಕುರಿತು ಮಾತನಾಡುವುದು ಮನೋಚಿಕಿತ್ಸೆಯಲ್ಲಿ ಉಪಯೋಗಿಸುವ ಒಂದು ತಂತ್ರವೂ ಹೌದು. ಕನಸುಗಳ ವಿಷಯ, ವಸ್ತು, ಘಟನೆಗಿಂತ ಮುಖ್ಯವಾದದ್ದು ಅದು ನೀಡುವ ಅನುಭವ ಮತ್ತು ಸಂವೇದನೆಗಳು.

ಸುಂದರವಾದ ಉದ್ಯಾನದಲ್ಲಿದ್ದಂತೆ ಬಿದ್ದ ಕನಸಿನಿಂದ ಎಚ್ಚರಾದಾಗ ಯಾವುದೋ ಅವ್ಯಕ್ತ ದುಃಖವಾಗುತ್ತಿತ್ತೇ? ನಿಮ್ಮದೇ ಮನೆ ಕನಸಿನಲ್ಲಿ ಯಾವುದೋ ವಿಚಿತ್ರ ಬೆಳಕಿನಲ್ಲಿ ಅದ್ದಿಟ್ಟಂತೆ ಕಾಣುತ್ತಿತ್ತೆ? ಯಾವುದೋ ಮುಖ್ಯ ವಸ್ತು ಕಳೆದು ಹೋದಂತೆ, ಎಷ್ಟು ಹುಡುಕಿದರೂ ಕಾಣದಂತೆ, ಸಮಯ ಮೀರಿ ಹೋದ ಮೇಲೆ ಪರೀಕ್ಷೆಗೆ ಹಾಜರಾಗುತ್ತಿರುವಂತೆ ಶಾಲಾ ಕಾಲೇಜನ್ನು ಬಿಟ್ಟ ಎಷ್ಟೋ ವರ್ಷಗಳ ನಂತರವೂ ಬೀಳುವ ಕನಸಿಗೆ ಸುಲಭದ ಅರ್ಥಗಳನ್ನು ಹಚ್ಚುವ ಬದಲು ಅದರೊಳಗೆ ಅಡಕವಾಗಿರುವ ಭಾವನೆಗಳನ್ನು ಗ್ರಹಿಸಲು ಅನುವಾಗುವಂತಹ ಪ್ರಶ್ನೆಗಳನ್ನು ಕೇಳಿಕೊಳ್ಳಿ. ಉದಾಹರಣೆಗೆ ಸಮಯ ಮೀರುತ್ತಿದೆ ಎನ್ನುವ ಆತಂಕ ಹುಟ್ಟಿಸಿದ ಕನಸು ಬಿದ್ದಾಗ ಕಾಲ ಸರಿದು ಹೋಗುವುದರೊಟ್ಟಿಗಿನ ನಿಮ್ಮ ಅನುಭವ ಎಂತಹದ್ದು ಎನ್ನುವುದನ್ನು ಮನಸ್ಸಿಗೆ ತಂದುಕೊಳ್ಳಿ. ಇಲ್ಲಿ ಕುತೂಹಲದಿಂದ, ತೆರೆದ ಮನಸ್ಸಿನಿಂದ ಎಲ್ಲ ಕನಸುಗಳನ್ನು ಸ್ವೀಕರಿಸಿ ಅನ್ವೇಷಣೆಯ ಮನೋಭಾವವನ್ನು ಹೊಂದುವುದಷ್ಟೇ ಮುಖ್ಯ.

ಕನಸುಗಳು ಬದುಕಿನ ಕುರಿತಾದ ನಮ್ಮ ರುಚಿ ಮತ್ತು ಆಸಕ್ತಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಇಲ್ಲಿರುವ ಮತ್ತು ಇಂಥದ್ದೇ ಹಲವು ಅಭ್ಯಾಸಗಳು, ಪ್ರಶ್ನೆಗಳು ಸಹಾಯಕವಾಗಬಹುದು:

l ನಿಮ್ಮ ಕನಸಿಗೆ ಹತ್ತಿರವಾದಂತಹ ಚಿತ್ರಗಳು ಪತ್ರಿಕೆಗಳಲ್ಲಿ, ಅಂತರ್ಜಾಲದಲ್ಲಿ ಕಣ್ಣಿಗೆ ಬಿದ್ದರೆ ಅವನ್ನು ಸಂಗ್ರಹಿಸಿಟ್ಟುಕೊಳ್ಳಿ ಅಥವಾ ಅವನ್ನು ಕೆಲ ನಿಮಿಷಗಳು ನೋಡಿ ಅದು ನೀಡುವ ಅನುಭವವನ್ನು ನೆನಪಿಟ್ಟುಕೊಳ್ಳಿ.

l ಒಂದೇ ಬಗೆಯ ಕನಸುಗಳು ಬೀಳುತ್ತಿದ್ದರೆ ಅದರ ಕುರಿತು ನೀವು ಹೇಳಬಹುದಾದ್ದನ್ನು ನಿಮ್ಮ ಧ್ವನಿಯಲ್ಲೇ ರೆಕಾರ್ಡ್ ಮಾಡಿ ಒಮ್ಮೆ ಕೇಳಿ. ಏನನಿಸುತ್ತದೆ?

l ನಿಮ್ಮ ಹಗಲುಗನಸುಗಳು ಸಾಮಾನ್ಯವಾಗಿ ಯಾವುದರ ಸುತ್ತ ಸುತ್ತುತ್ತಿರುತ್ತದೆ?

l ನಿಮ್ಮ ಆಳವಾದ ಭಯ ಮತ್ತು ಬಯಕೆ ಯಾವುದು?

l ನಿಮ್ಮ ಸುತ್ತಲಿನ ದೃಶ್ಯ ಪ್ರಪಂಚವನ್ನು, ಇಂದ್ರಿಯಾನುಭವಗಳನ್ನು, ಜನರನ್ನು ಸುಮ್ಮನೆ ಕುತೂಹಲಕ್ಕಾಗಿ ಗಮನಿಸುತ್ತಿರಿ.

ನಿಮ್ಮ ಕನಸುಗಳು ನಿಮ್ಮೊಳಗೇ ಇರುವ ಅಪರಿಚಿತ ವ್ಯಕ್ತಿಯನ್ನು ನಿಮಗೆ ಪರಿಚಯ ಮಾಡಿಸಬಹುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು