ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರೀಕ್ಷೆ; ಮಕ್ಕಳೊಂದಿಗೆ ಪೋಷಕರೂ ಸಿದ್ಧವಾಗಬೇಕು

Published 22 ಜನವರಿ 2024, 22:54 IST
Last Updated 22 ಜನವರಿ 2024, 22:54 IST
ಅಕ್ಷರ ಗಾತ್ರ

ಮಕ್ಕಳು ಬೆಳವಣಿಗೆಯ ವಿವಿಧ ಹಂತಗಳನ್ನು ದಾಟುತ್ತಹೋದಂತೆ ಮಕ್ಕಳು ಮತ್ತು ಪೋಷಕರ ನಡುವಿನ ಬಾಂಧವ್ಯದ ಸ್ವರೂಪವೂ ಅನಾವರಣಗೊಳ್ಳುತ್ತಾ ಹೋಗುತ್ತದೆ. ಮಕ್ಕಳು ಶಾಲೆಗೆ ಹೋಗುವ ಮುನ್ನ ಅಥವಾ ಶೈಕ್ಷಣಿಕ ಪರೀಕ್ಷೆಗಳು ಮಕ್ಕಳಲ್ಲಿ ಒತ್ತಡ ಉಂಟುಮಾಡದ ವಯಸ್ಸಿನಲ್ಲಿ ಪೋಷಕರಿಗೆ ಒದಗುವ ಸವಾಲುಗಳೇ ಬೇರೆ. ಆಗ ಮಕ್ಕಳ ಆಟ, ಆಹಾರ, ನಿದ್ರೆ, ಭದ್ರತಾಭಾವ, ನಡೆ ನುಡಿ, ಮಕ್ಕಳ ಹಠ, ವಿಶಿಷ್ಟ ಸ್ವಭಾವಗಳು, ಅಭ್ಯಾಸಗಳು – ಇವುಗಳ ಕಡೆಗೆ ಪೋಷಕರ ಗಮನ ಹೆಚ್ಚಿರುತ್ತದೆ. ಆಗ ಪೋಷಕರ ಮತ್ತು ಮಕ್ಕಳ ಬಾಂಧವ್ಯದ ಸ್ವರೂಪ ಒಂದು ರೀತಿಯದಾಗಿ ತೋರುತ್ತದೆ. ಆದರೆ ಮಕ್ಕಳು ಬೆಳೆದು ಪ್ರಪಂಚವನ್ನು ನೋಡುತ್ತಾ ಅದರ ಪ್ರಭಾವಗಳಿಗೆ ತೆರೆದುಕೊಳ್ಳುತ್ತಾ ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುತ್ತಾ ಸಾಗುವಾಗ ಪೋಷಕರಿಗೆ ಬೇರೆ ಬಗೆಯ ಸವಾಲುಗಳು ಹುಟ್ಟಿಕೊಳ್ಳುತ್ತದೆ.

ಏಕೆಂದರೆ ಆಗ ಮಕ್ಕಳು ತಮ್ಮತನವನ್ನು ವ್ಯಕ್ತಪಡಿಸಲು, ತಮ್ಮ ‘ಐಡೆಂಟಿಟಿ’ಯನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತಿರುತ್ತಾರೆ. ‘ನಾನು ಯಾರು?’ ‘ನಾನು ಏನಾಗಬಲ್ಲೆ?’ ‘ಏನು ಮಾಡಬಲ್ಲೆ?’ – ಎಂಬ ಅನ್ವೇಷಣೆ ಮಕ್ಕಳಲ್ಲಿ ಸುಮಾರು ಹನ್ನೊಂದರಿಂದ ಹತ್ತೊಂಬತ್ತು ವಯಸ್ಸಿನವರೆಗೂ ತೀಕ್ಷ್ಣವಾಗಿರುತ್ತದೆ. ಹಾಗಾಗಿ ಈ ವಯಸ್ಸಿನಲ್ಲಿ ‘ಐಡೆಂಟಿಟಿ’ಯ ಬಗೆಗಿನ ಗೊಂದಲ ಜಾಸ್ತಿಯಿರುತ್ತದೆ ಎನ್ನುತ್ತಾರೆ, ಮನೋವಿಜ್ಞಾನಿ ಎರಿಕ್ ಏರಿಕ್ಸೊನ್; ಮನುಷ್ಯನ ಮನೋ–ಸಾಮಾಜಿಕ ಬೆಳವಣಿಗೆಯ ಹಲವು ಹಂತಗಳನ್ನು ಗುರುತಿಸಿ ಹೇಳುವಾಗ ಇದನ್ನು ಪ್ರಸ್ತಾಪಿಸಿದ್ದಾರೆ.

ಹನ್ನೊಂದರಿಂದ ಹತ್ತೊಂಬತ್ತು ವಯಸ್ಸಿನ ನಡುವೆಯೇ ಮಕ್ಕಳು ತಮ್ಮ ಶೈಕ್ಷಣಿಕ ಜೀವನದ ಪ್ರಮುಖ ಪರೀಕ್ಷೆಗಳನ್ನು ಎದುರಿಸಬೇಕಾಗಿರುವುದರಿಂದ, ಪರೀಕ್ಷೆ, ಅದರ ಫಲಿತಾಂಶ, ಪರೀಕ್ಷೆಯ ಬಗೆಗಿನ ಆಲೋಚನೆ, ಭಾವನೆ ಎಲ್ಲವೂ ಮಕ್ಕಳ ಸ್ವ–ನಂಬಿಕೆಯ ಮೇಲೆ ಆಳವಾದ ಪರಿಣಾಮ ಬೀರುತ್ತದೆ. ಮಕ್ಕಳ ಈ ತಮ್ಮತನದ ಆನ್ವೇಷಣೆ ಮತ್ತು ಅದರ ಬಗೆಗಿರುವ ಗೊಂದಲಗಳನ್ನು ಅರಿತು ಪೋಷಕರು ಮಕ್ಕಳ ಜೊತೆ ಮಾತನಾಡುವುದು, ಪರೀಕ್ಷೆಗೆ ಅವರನ್ನು ಸಿದ್ಧಪಡಿಸುವುದು ಪ್ರಯೋಜನಕಾರಿ; ಅದಲ್ಲದೆ ಮಕ್ಕಳು ತಮ್ಮ ಅಪೇಕ್ಷೆಗೆ ತಕ್ಕಂತೆ ದಿನಕ್ಕೆ ಇಂತಿಷ್ಟು ಗಂಟೆಗಳು ಓದುತ್ತಿಲ್ಲ, ತಮ್ಮ ನಿರೀಕ್ಷೆಯಂತೆ ಅಂಕಗಳನ್ನು ಗಳಿಸುತ್ತಿಲ್ಲ ಎಂದು ದೂರುವುದು, ದುಃಖಿಸುವುದು, ಮಕ್ಕಳ ಮೇಲೆ ಕೋಪಗೊಂಡು ಅವರನ್ನು ನಿಂದಿಸುವುದು ಮಕ್ಕಳಲ್ಲಿ ತಮ್ಮ ಬಗೆಗೆನ ಗೊಂದಲವನ್ನು ಮತ್ತೂ ಹೆಚ್ಚಿಸುತ್ತದೆ.

ಮಕ್ಕಳಿಗೆ ಸ್ವಾತಂತ್ರ್ಯ ಬೇಕು, ಆದರೆ ನಿಯಮಗಳಿಗೆ ಒಳಪಡಲೂಬೇಕು; ಮಕ್ಕಳು ತಮ್ಮತನವನ್ನು ಅಭಿವ್ಯಕ್ತಿಸಬೇಕು. ಆದರೆ ಸಮಾಜದ ರೀತಿನೀತಿಗಳನ್ನೂ ಕಲಿಯಬೇಕು. ಮಕ್ಕಳು ತಮ್ಮ ಪೋಷಕರಿಗಿಂತ ಭಿನ್ನ, ಅನನ್ಯ; ಹಾಗೆಂದು ಅವರಿಗೆ ಪೋಷಕರ ಮಾರ್ಗದರ್ಶನ ಬೇಡವೆಂದು ಅಲ್ಲ; ಮಕ್ಕಳಿಗೆ ಅತಿಯಾದ ನಿರ್ದೇಶನಗಳನ್ನು ಕೊಡುತ್ತಿದ್ದರೆ ಅವರು ಮಂಕಾಗುತ್ತಾರೆ. ಏನೂ ಹೇಳದೆ ಅವರಷ್ಟಕ್ಕೇ ಅವರನ್ನು ಬಿಟ್ಟುಬಿಟ್ಟರೆ ದಿಕ್ಕೇ ತೋಚದಂತಾಗುತ್ತಾರೆ. ಇದನ್ನೆಲ್ಲಾ ಗಮನಿಸಿದಾಗ ಪೋಷಕತ್ವವೆಂದರೆ ‘ಸಮತೋಲನ’ ಎನ್ನುವುದನ್ನು ಕಲಿಯುವ, ಕಲಿಸುವ ಪ್ರಕ್ರಿಯೆಯೆಂದರೆ ತಪ್ಪಾಗುವುದಿಲ್ಲ. ಮಕ್ಕಳ ಪರೀಕ್ಷೆಯ ಸಮಯ ಪೋಷಕರಿಗೂ ತಾವು ‘ಸಮತೋಲನ’ವನ್ನು ಎಷ್ಟು ಚೆನ್ನಾಗಿ ಕಲಿತಿದ್ದಾರೆ ಎನ್ನುವುದನ್ನು ಪರೀಕ್ಷಿಸಿಕೊಳ್ಳುವ ಸಮಯ.

ಮಕ್ಕಳು ಮತ್ತು ಪೋಷಕರ ನಡುವಿನ ಒಡನಾಟ ಎಷ್ಟು ಪ್ರೀತಿಪೂರ್ವಕವಾಗಿರುತ್ತದೆಯೋ ಅಷ್ಟು ಮಕ್ಕಳ ಪರೀಕ್ಷಾ ತಯಾರಿಯು ಪರಿಣಾಮಕಾರಿಯಾಗಿರುತ್ತದೆ. ಈ ದಿಕ್ಕಿನಲ್ಲಿ ಕೆಲವು ವಿಷಯಗಳನ್ನು ನೆನಪಿಟ್ಟುಕೊಳ್ಳುವುದು ಉಪಯೋಗಕಾರಿ:

1. ಪರೀಕ್ಷೆಯ ಸಮಯದಲ್ಲಿ ಮಗುವಿಗೆ ಅತಿ ಹೆಚ್ಚು ಸಮಸ್ಯೆ ತರುತ್ತಿರುವ ವಿಷಯದ ಬಗೆಗೆ ಪೋಷಕರು ಮಗುವಿನ ಜೊತೆಗೆ ಸಮಾಧಾನದಿಂದ ಚರ್ಚಿಸುವುದು ಒಳ್ಳೆಯದು. ಉದಾಹರಣೆಗೆ: ಸಮಯ ಪಾಲನೆ, ಏಕಾಗ್ರತೆ, ನೆನಪಿನ ಶಕ್ತಿ, ಬರೆವಣಿಗೆಗೆ ಸಂಬಂಧಪಟ್ಟ ತೊಂದರೆಗಳು, ಸೋಲಿನ ಭಯ, ಭವಿಷ್ಯದ ಆತಂಕ – ಹೀಗೆ ಮಕ್ಕಳನ್ನು ತಮ್ಮ ಸಮಸ್ಯೆಗಳ ಬಗೆಗೆ ಮಾತನಾಡುವಂತೆ ಪ್ರೋತ್ಸಾಹಿಸುವುದು. ಸಮಸ್ಯೆಗೆ ಪರಿಹಾರ ಎರಡನೆಯ ಹಂತ. ಆದರೆ ತಮ್ಮ ಸಮಸ್ಯೆಯನ್ನು ಆಲಿಸುವ, ಪ್ರೀತಿಯಿಂದ ಸ್ಪಂದಿಸುವ ಪೋಷಕರಿದ್ದಾರೆ ಎನ್ನುವುದು ಮಕ್ಕಳಿಗೆ ಸ್ಥೈರ್ಯ ಕೊಡುತ್ತದೆ.

2. ಪರೀಕ್ಷೆಯ ಸಮಯದಲ್ಲಿ ಏಕಾಗ್ರತೆ ಸಾಮಾನ್ಯವಾಗಿ ಎಲ್ಲ ಮಕ್ಕಳ ದೊಡ್ಡ ಸಮಸ್ಯೆಯಾಗಿರುತ್ತದೆ. ಇದಕ್ಕೆ ಒಳ್ಳೆಯ ಪರಿಹಾರವೆಂದರೆ ಅಧ್ಯಯನದ ಸಮಯದಲ್ಲಿ ಬರವಣಿಗೆಯ ಅಭ್ಯಾಸವನ್ನು ರೂಢಿಸಿಕೊಳ್ಳುವುದು. ಪಾಠದ ಸಾರಾಂಶ, ಪ್ರಶ್ನೆಗಳು, ಸಂದೇಹಗಳು, ಪಾಠದ ಮುಖ್ಯ ಅಂಶಗಳು, ಪರಿಕಲ್ಪನೆಗಳು, ಸೂತ್ರಗಳು ಎಲ್ಲವನ್ನೂ ಬರೆದಿಡುವುದು. ಮಕ್ಕಳು ಪರೀಕ್ಷೆಯ ಸಮಯವಷ್ಟೇ ಅಲ್ಲದೆ ಬೇರೆ ದಿನಗಳಲ್ಲೂ ತಮ್ಮ ಆಲೋಚನೆ, ಅನುಭವಗಳನ್ನು ಬರೆಯುವ ಅಭ್ಯಾಸವಿಟ್ಟುಕೊಂಡರೆ ಏಕಾಗ್ರತೆಯನ್ನು ಮತ್ತಷ್ಟು ಹೆಚ್ಚುಮಾಡಿಕೊಳ್ಳಬಹುದು. ಜೊತೆಗೆ ಮಕ್ಕಳಲ್ಲಿ ಸೂಕ್ಷ್ಮವಾಗಿ ಎಲ್ಲವನ್ನೂ ಗಮನಿಸುವ ಪ್ರವೃತ್ತಿ, ಕುತೂಹಲ, ಇನ್ನಷ್ಟು ಅರಿಯುವ ತವಕ, ನೆನಪಿನ ಶಕ್ತಿ, ಇಲ್ಲಿಯವರೆಗೆ ಕಲಿತಿರುವುದರ ಬಗೆಗೆ ಸಂತಸ, ಸಮಾಧಾನವನ್ನು ನೀಡುವಲ್ಲಿಯೂ ಬರವಣಿಗೆಯ ಅಭ್ಯಾಸ ಸಹಕಾರಿ.

3. ಮಕ್ಕಳು ಸಾಮಾನ್ಯವಾಗಿ ಓದುವಾಗ ಮನಸ್ಸಿಲ್ಲವೆಂದೋ, ಓದುವುದಕ್ಕೆ ಬೇಜಾರೆಂದೋ, ಓದುವುದಕ್ಕೆ ಪ್ರೇರಣೆ (Motivation) ಇಲ್ಲವೆಂದೋ ಕಾಲಹರಣ ಮಾಡುತ್ತಿರುತ್ತಾರೆ. ಆದರೆ ಓದಲು ಪ್ರೇರಣೆಗಿಂತಲೂ ಶಿಸ್ತು (Discipline) ಬಹಳ ಮುಖ್ಯ ಎಂದು ಅವರನ್ನು ಎಚ್ಚರಿಸಬೇಕಾದ್ದು ಪೋಷಕರ ಕರ್ತವ್ಯ.

4. ಒಂದು ದಿನ ಅತಿಯಾಗಿ ಓದುವುದರಿಂದ ಏನೂ ಸಾಧಿಸಲಾಗುವುದಿಲ್ಲ; ಅಥವಾ ಕೆಲವೊಂದು ದಿನಗಳು ಎಷ್ಟು ಕಷ್ಟಪಟ್ಟರೂ ಒಂದು ಪಾಠವನ್ನೂ ಪೂರ್ತಿಯಾಗಿ ಅರ್ಥಮಾಡಿಕೊಳ್ಳಲು ಆಗುವುದಿಲ್ಲ. ಈ ಎಲ್ಲ ಏರುಪೇರುಗಳು ಅಧ್ಯಯನದಲ್ಲಿ ಸಾಮಾನ್ಯ. ಯಾವ ಕಾರಣಕ್ಕೂ ಶಿಸ್ತುಬದ್ಧವಾಗಿ ಓದುವ ಬರೆಯುವ ಅಭ್ಯಾಸವನ್ನು ಒಂದು ದಿನವೂ ತಪ್ಪಿಸಬಾರದೆನ್ನುವುದು ಮುಖ್ಯ.

5. ಮಕ್ಕಳು ಪರೀಕ್ಷೆಗೆ ತಯಾರಾಗುವಾಗ ಅವರಿಗೆ ಎದುರಾಗುವ ದೊಡ್ಡ ತೊಡಕೆಂದರೆ ಅದು ಅವರ ಮನಸ್ಸೇ ಹೌದು ಎನ್ನುವುದನ್ನು ಅರಿಯಲು ಪೋಷಕರು ನೆರವಾಗಬಹುದು. ಮನಸ್ಸು/ ಗಮನ ಎತ್ತೆತ್ತಲೋ ಹರಿಯುವುದು ಸಹಜ. ಹಾಗೆಯೇ ಅದನ್ನು ಮತ್ತೆ ಎಳೆದು ತಂದು ಅಧ್ಯಯನದಲ್ಲಿ ತೊಡಗಿಸುವುದು ಸಾಧ್ಯ, ಹಾಗೆ ಮಾಡಿಯೇ ಎಲ್ಲ ಸಾಧಕರು ತಮ್ಮ ಗುರಿಯನ್ನು ತಲುಪಿರುವುದು ಎನ್ನುವ ಸಕಾರಾತ್ಮಕ ವಿಷಯವನ್ನು, ಸಾಧಕರ ಮಾತುಗಳನ್ನು, ಅವರ ಜೀವನಕಥೆಗಳನ್ನು ಆಗಾಗ ಮಕ್ಕಳಿಗೆ ನೆನಪು ಮಾಡಿಕೊಡುವುದು ಮಕ್ಕಳಿಗೆ ಉತ್ತೇಜನವನ್ನು ಕೊಟ್ಟಂತಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT