ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್-19 ಕಾಲದಲ್ಲಿ ದೈಹಿಕ ವ್ಯಾಯಾಮ ಮತ್ತು ಕ್ರೀಡೆಗಳು

Last Updated 28 ಸೆಪ್ಟೆಂಬರ್ 2020, 8:26 IST
ಅಕ್ಷರ ಗಾತ್ರ

ಮನುಷ್ಯನ ದೈಹಿಕ ಹಾಗೂ ಮಾನಸಿಕ ಆರೋಗ್ಯ ಸುಧಾರಣೆಯಲ್ಲಿ ಆಹಾರಕ್ರಮ ಹಾಗೂ ವಾಯ್ಯಾಮ, ಯೋಗದಂತಹ ಚಟುವಟಿಕೆಗಳೂ ಪ್ರಮುಖ ಪಾತ್ರ ವಹಿಸುತ್ತವೆ. ನಿಯಮಿತ ವ್ಯಾಯಾಮದಿಂದ ದೈಹಿಕ ಕಾರ್ಯವ್ಯವಸ್ಥೆಗಳನ್ನು ಸುಧಾರಿಸಬಹುದು. ಅದರಲ್ಲೂ ಈ ಕೊರೊನಾ ಸಮಯದಲ್ಲಿ ಮನೆಯೊಳಗೆ ಹೆಚ್ಚು ಕುಳಿತಿರುವ ದೇಹಕ್ಕೆ ವ್ಯಾಯಾಮದ ಅಗತ್ಯ ಹೆಚ್ಚಿದೆ.

ನಿಯಮಿತವಾಗಿ ವ್ಯಾಯಾಮ ಮಾಡಿ ಫಿಟ್‌ನೆಸ್‌ ಕಾಪಾಡಿಕೊಳ್ಳುವುದರಿಂದಾಗುವ ಪ್ರಯೋಜನಗಳು ಹಲವು. ಇದರಿಂದಹೃದಯದ ಕಾರ್ಯನಿರ್ವಹಣೆ ಸುಧಾರಿಸುವುದಲ್ಲದೇ ಹೃದ್ರೋಗ, ಮಧುಮೇಹ, ರಕ್ತದೊತ್ತಡ, ಪಾರ್ಶ್ವವಾಯು, ಕ್ಯಾನ್ಸರ್‌ನಂತಹ ಅಪಾಯದಿಂದಲೂ ದೂರವಿರಬಹುದು.

ವ್ಯಾಯಾಮದ ಪ್ರಯೋಜನಗಳು

* ಒತ್ತಡವನ್ನು ಕಡಿಮೆ ಮಾಡಿ, ನಿದ್ದೆಯ ಮಟ್ಟವನ್ನು ಸುಧಾರಿಸುತ್ತದೆ.

* ಗಮನಶಕ್ತಿಯನ್ನು ಹೆಚ್ಚಿಸುವುದಲ್ಲದೇ ದೈಹಿಕ ಹಾಗೂ ಮಾನಸಿಕ ಉತ್ಪಾದಕತೆಯನ್ನು ಸುಧಾರಿಸುತ್ತದೆ.

* ಮೆದುಳು ಹಾಗೂ ನೆನಪಿನ ಕಾರ್ಯನಿರ್ವಹಣಾ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.

* ಖಿನ್ನತೆ, ಆತಂಕದಂತಹ ಲಕ್ಷಣಗಳನ್ನು ದೂರ ಮಾಡಿ ಮಾನಸಿಕ ಆರೋಗ್ಯವನ್ನು ಸುಧಾರಿಸುತ್ತದೆ.

* ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಹಾಗಾಗಿ‍ಪ್ರತಿದಿನ 45 ನಿಮಿಷಗಳವರೆಗೆ ನಿಯಮಿತ ಹಾಗೂ ಸರಳ ವ್ಯಾಯಾಮ ಮಾಡುವುದು ಉತ್ತಮ.

ಕೋವಿಡ್‌ –19 ಹಾಗೂ ದೈಹಿಕ ಚಟುವಟಿಕೆ

ಕೋವಿಡ್‌–19 ಕಾರಣದಿಂದ ವಿಶ್ವದ ಬಹುತೇಕ ದೇಶಗಳಲ್ಲಿ ಲಾಕ್‌ಡೌನ್ ವಿಧಿಸಲಾಗಿತ್ತು. ಅಲ್ಲದೇ ಇದರಿಂದ ಜನಜೀವನವು ಅಸ್ತವ್ಯಸ್ಥವಾಗಿತ್ತು.ಜಿಮ್‌ಗಳು, ಕ್ರೀಡಾಂಗಣಗಳು, ಈಜುಕೊಳಗಳು, ಉದ್ಯಾನಗಳು, ಆಟದ ಮೈದಾನಗಳು ಮುಚ್ಚಿದ್ದ ಕಾರಣದೈಹಿಕ ಚಟುವಟಿಕೆಗಳಿಗೆ ಅವಕಾಶ ಇಲ್ಲದಂತಾಗಿತ್ತು. ಪ್ರತಿದಿನ ಜಿಮ್‌ಗಳು, ಯೋಗ ತರಬೇತಿ ಕೇಂದ್ರಗಳಲ್ಲಿ ಬೆವರಿಸುತ್ತಿದ್ದವರನ್ನೂ ಲಾಕ್‌ಡೌನ್ ಸುಮ್ಮನೆ ಕುಳಿತುಕೊಳ್ಳುವಂತೆ ಮಾಡಿತ್ತು. ಇದರೊಂದಿಗೆ ಮನೆಯಿಂದಲೇ ಕೆಲಸ ಮಾಡುವ ಅನಿವಾರ್ಯತೆ ಕೂಡ. ಇದರಿಂದ ‘ಸ್ಕ್ರೀನ್‌ ಟೈಮ್‌’ ಹೆಚ್ಚಿದೆ. ನಿದ್ದೆಯ ಕ್ರಮದಲ್ಲಿ ಏರುಪೇರಾಗಿದೆ, ಆಹಾರಪದ್ಧತಿಯಲ್ಲಿ ಬದಲಾವಣೆಗಳಾಗಿವೆ, ತೂಕ ಹೆಚ್ಚಳವಾಗಿದೆ. ಅಷ್ಟೇ ಅಲ್ಲದೇ ದೈಹಿಕ ಸಾಮರ್ಥ್ಯವೂ ಕುಂದುವಂತಾಗಿದೆ. ಜೀವನಶೈಲಿಯಲ್ಲಿ ಇದ್ದಕ್ಕಿದ್ದಂತೆ ಬದಲಾವಣೆ ತಂದಿರುವ ಈ ಪರಿಸ್ಥಿತಿಯು ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು.

ಕೋವಿಡ್‌–19ನಿಂದಾಗಿ ಫಿಟ್‌ನೆಸ್‌ ಮೇಲೆ ಯಾವ ರೀತಿ ಪರಿಣಾಮ ಬೀರಿದೆ ಎಂಬುದರ ಬಗ್ಗೆ ಈವರೆಗೆ ಯಾವುದೇ ಅಂಕಿ–ಅಂಶಗಳು ಲಭ್ಯವಾಗಿಲ್ಲ. ಆದರೂ ಜನರು ಹೃದಯ ಸಂಬಂಧಿ ಕಾಯಿಲೆಗಳು, ಅಧಿಕ ಒತ್ತಡ, ಬೊಜ್ಜು, ಕ್ಯಾನ್ಸರ್‌ನಂತಹ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಕೋವಿಡ್–19ನಿಂದ ಇಂತಹ ರೋಗಗಳನ್ನು ಹೊಂದಿರುವವರಲ್ಲಿ ಅಪಾಯದ ಮಟ್ಟವೂ ಹೆಚ್ಚುತ್ತಿದೆ. ವ್ಯಾಯಾಮದಿಂದ ದೀರ್ಘಕಾಲಿನ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ, ಅಲ್ಲದೇನಿರೋಧಕ ಶಕ್ತಿಯೂ ಹೆಚ್ಚುವುದರಿಂದ ಕೋವಿಡ್‌ –19 ಸೋಂಕು ನಿಯಂತ್ರಣಕ್ಕೂ ಪ್ರಯೋಜನಕಾರಿ.

* ಕೋವಿಡ್‌– 19 ಸೋಂಕಿನ ಗುಣಲಕ್ಷಣಗಳು ಕಂಡುಬಂದರೆ ಅಥವಾ ಸೋಂಕು ಪೀಡಿತರಾದರೆ ತಕ್ಷಣ ವ್ಯಾಯಾಮವನ್ನು ನಿಲ್ಲಿಸಬೇಕು. ಸೋಂಕಿದ್ದಾಗ ವ್ಯಾಯಾಮ ಮಾಡುವುದು ಸಲ್ಲ.

* ಗುಣಮುಖರಾದ ಮೇಲೂ ನಿಧಾನಕ್ಕೆ ದೈಹಿಕ ಚಟುವಟಿಕೆ ಹಾಗೂ ವ್ಯಾಯಾಮವನ್ನು ಆರಂಭಿಸಬೇಕು.

ಕೋವಿಡ್ ರೋಗಿಗಳಿಗೆ ವ್ಯಾಯಾಮ

ಕೋವಿಡ್‌– 19 ಹೃದಯ ಹಾಗೂ ಶ್ವಾಸಕೋಶ ವ್ಯವಸ್ಥೆಯ ಮೇಲೆ ನೇರ ಹಾಗೂ ಪರೋಕ್ಷ ಪರಿಣಾಮ ಬೀರುತ್ತದೆ. ಕೋವಿಡ್ ಸೋಂಕು ಪೀಡಿತರು ವ್ಯಾಯಾಮ ಮಾಡುವುದರಿಂದ ಅಪಾಯದ ಪ್ರಮಾಣದ ಹೆಚ್ಚುವ ಸಾಧ್ಯತೆ ಇದೆ. ಈ ಅಪಾಯವು ಸೋಂಕಿನಿಂದ ಗುಣಮುಖರಾದ ನಂತರವೂ ವಿಸ್ತರಣೆ ಆಗುವ ಸಾಧ್ಯತೆ ಹೆಚ್ಚು.ಈ ಹಿನ್ನೆಲೆಯಲ್ಲಿ ಸೋಂಕು ಸಕ್ರಿಯವಾಗಿದ್ದ ಸಂದರ್ಭದಲ್ಲಿ ವ್ಯಾಯಾಮ ತರಬೇತಿಯನ್ನು ನಿಲ್ಲಿಸುವುದು ಸೂಕ್ತ.

ವ್ಯಾಯಾಮ ತರಬೇತಿ ನೀಡುವವರು ಕೂಡ ಸಾಮಾನ್ಯ ರೋಗಲಕ್ಷಣಗಳು ಕಾಣಿಸಿಕೊಂಡಾಗ ಆಸ್ಪತ್ರೆಗೆ ದಾಖಲಾಗಿರುವುದಿಲ್ಲ ‌ಹಾಗೂ ಅವರಲ್ಲಿ ಹೃದಯಕ್ಕೆ ಸಂಬಂಧಿಸಿದ ಸೋಂಕಿನ ಯಾವುದೇ ಲಕ್ಷಣಗಳು ಕಂಡು ಬಂದಿರುವುದಿಲ್ಲ. ಹೀಗಾಗಿ ಅವರು ಕೊರೊನಾದಿಂದ ಸಂಪೂರ್ಣ ಮುಕ್ತರಾದ ಮೇಲಷ್ಟೇ ತರಬೇತಿ ಪ್ರಕ್ರಿಯೆ ಆರಂಭಿಸುವುದು ಸೂಕ್ತ.ಗುಣಮುಖರಾದ ನಂತರ ನಿಧಾನವಾಗಿ ವ್ಯಾಯಾಮ ಆರಂಭಿಸಿ ಕ್ರಮೇಣ ಹಿಂದಿನ ಮಟ್ಟದಲ್ಲಿ ವ್ಯಾಯಾಮ ಮಾಡಬಹುದಾಗಿದೆ. ಆದರೆ, ಈ ಸಂದರ್ಭದಲ್ಲಿ ಯಾವುದೇ ಕ್ಲಿನಿಕಲ್ ಬದಲಾವಣೆ ಅಥವಾ ಹೃದಯ ರಕ್ತನಾಳಗಳ ಕಾರ್ಯಕ್ಷಮತೆ ಬಗ್ಗೆ ಎಚ್ಚರವಿರಬೇಕು. ವ್ಯಾಯಾಮ ಚಟುವಟಿಕೆಗಳನ್ನು ಪುನರಾರಂಭಿಸಿದ ನಂತರ ಯಾವುದೇ ಹೃದಯಕ್ಕೆ ಸಂಬಂಧಿಸಿದ ರೋಗಗಳ ಗುಣಲಕ್ಷಣಗಳು ಕಂಡುಬರದಿದ್ದರೆ ಹೆಚ್ಚುವರಿ ಪರೀಕ್ಷೆಯ ಅಗತ್ಯ ಇರುವುದಿಲ್ಲ.

ಆದರೆ, ಕೋವಿಡ್-19ನಿಂದ ಹೃದಯಕ್ಕೆ ಸಂಬಂಧಿಸಿದ ರೋಗಗಳ ಸಂಕೀರ್ಣತೆಯನ್ನು ಹೊಂದಬಹುದಾದ ಅಪಾಯಗಳು ಇರುವ ರೋಗಿಗಳು (ಉದಾಹರಣೆಗೆ: ಹೈಪರ್‌ಟ್ರೋಪಿಕ್ ಕಾರ್ಡಿಯೋಮಿಯೋಪತಿ, ಲೆಫ್ಟ್ ವೆಂಟ್ರಿಕ್ಯುಲರ್ ಸಿಸ್ಟೋಲಿಕ್ ಡಿಸ್‌ಫಂಕ್ಷನ್, ಅಥೆರೋಸ್ಕೆಲರೋಟಿಕ್ ಹಾರ್ಟ್ ಡಿಸೀಸ್) ಹೆಚ್ಚುವರಿ ಪರೀಕ್ಷೆಗೆ ಒಳಗಾಗುವುದು ಅಗತ್ಯವಾಗಿದೆ ಮತ್ತು ನಿಯಮಿತವಾದ ವ್ಯಾಯಾಮ ಮಟ್ಟಕ್ಕೆ ಮರಳುವ ಮುನ್ನ ಅಪಾಯದ ಮೌಲ್ಯಮಾಪನ ಮಾಡಿಸಿಕೊಳ್ಳುವುದು ಸೂಕ್ತವಾಗಿದೆ.

ಕೋವಿಡ್-19 ಸೋಂಕು ಇರುವ ಸ್ಪಧಾತ್ಮಕ ಕ್ರೀಡಾಪಟುಗಳಲ್ಲಿ (ಗುಣಲಕ್ಷಣ ಇರುವ ಅಥವಾ ಇಲ್ಲದಿರುವ), ಗುಣಲಕ್ಷಣಗಳು ಕಂಡುಬಂದ ನಂತರ ಎರಡು ವಾರಗಳು ಮತ್ತು ಸೋಂಕು ಸಕ್ರಿಯವಾಗಿದ್ದರೆ 2 ವಾರಗಳ ವಿಶ್ರಾಂತಿ ಅಗತ್ಯವಿರುತ್ತದೆ. ಕ್ರೀಡಾಪಟುಗಳು ಆಟಕ್ಕೆ ಮರಳಲು ಪರಿಗಣಿಸುತ್ತಿರುವ ಸಮಯದಲ್ಲಿ ಚೇತರಿಸಿಕೊಂಡ 3 ರಿಂದ 6 ತಿಂಗಳ ನಂತರ ಈ ಪರೀಕ್ಷೆಯನ್ನು ಮಾಡಲಾಗುತ್ತದೆ.‌

ಕೋವಿಡ್ ಸೋಂಕು ಇಲ್ಲದವರಿಗೆ ವ್ಯಾಯಾಮ

ಕೋವಿಡ್-19 ಸೋಂಕು ಪೀಡಿತರಲ್ಲದವರು, ಹಿಂದಿನಂತೆಯೇ ನಿಯಮಿತವಾಗಿ ವ್ಯಾಯಾಮವನ್ನು ಮುಂದುವರಿಸಬಹುದು. ಆದರೆ, ಸಾಂಕ್ರಾಮಿಕ ಹರಡುವ ಹೆಚ್ಚು ಅಪಾಯ ಇರುವುದರಿಂದ (ವ್ಯಕ್ತಿಯಿಂದ ವ್ಯಕ್ತಿಗೆ ಅಥವಾ ಸೋಂಕು ತಗುಲಿದ ಮೇಲ್ಮೆನಿಂದ) ಉತ್ತಮ ಗಾಳಿ, ಬೆಳಕು ಇರುವ ಖಾಸಗಿ ಸ್ಥಳ ಅಥವಾ ವಾತಾವರಣದಲ್ಲಿ ವ್ಯಾಯಾಮ ಮಾಡುವುದು ಸೂಕ್ತ. ಈ ವೇಳೆ ನಿಮ್ಮ ವೈಯಕ್ತಿಕ ಉಪಕರಣಗಳಿಂದಲೇ ವ್ಯಾಯಾಮ ಮಾಡುವುದು ಒಳ್ಳೆಯದು. ಗಾಳಿಯ ಮೂಲಕ ಕೊರೊನಾ ವೈರಸ್ ಹರಡುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಮನೆಯಲ್ಲಿ ಸುರಕ್ಷಿತ, ಸರಳ ಮತ್ತು ಸುಲಭವಾಗಿ ಕೈಗೊಳ್ಳಬಹುದಾದ ವ್ಯಾಯಾಮ ಅಥವಾ ದೈಹಿಕ ಕಸರತ್ತುಗಳನ್ನು ನಡೆಸಬಹುದಾಗಿದೆ.

ಸೋಂಕು ಹರಡುವಿಕೆಯನ್ನು ತಡೆಯುವ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿರುವಂತಹ ಹೊರಾಂಗಣದಲ್ಲಿ ವ್ಯಾಯಾಮವನ್ನು ಮಾಡಬಹುದಾಗಿದೆ. ಗುಂಪುಗಳಲ್ಲಿ ವ್ಯಾಯಾಮ ಮಾಡದಿರುವುದು ಸೇರಿದಂತೆ ಇನ್ನಿತರೆ ಮಾರ್ಗಸೂಚಿಗಳ ಜೊತೆಗೆ ಸಾಮಾಜಿಕ ಅಂತರವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ವ್ಯಾಯಾಮ ಮಾಡುವ ಸಂದರ್ಭದಲ್ಲಿ ಸಾಮಾಜಿಕ ಅಂತರಕ್ಕೆ ಕೆಲವು ಬದಲಾವಣೆಗಳು ಬೇಕಾಗುತ್ತವೆ. ಕೆಲವು ಪರಿಣತರ ಪ್ರಕಾರ, ವ್ಯಕ್ತಿಯಿಂದ ವ್ಯಕ್ತಿಯ ನಡುವೆ 2 ಮೀಟರ್ ಅಂತರದಲ್ಲಿ ವ್ಯಾಯಾಮ ಮಾಡಬಹುದಾಗಿದೆ. ಆದರೆ, ವಾಕಿಂಗ್ ಸಂದರ್ಭದಲ್ಲಿ 4 ರಿಂದ 5 ಮೀಟರ್, ರನ್ನಿಂಗ್ ವೇಳೆ 10 ಮೀಟರ್ ಮತ್ತು ಸೈಕ್ಲಿಂಗ್ ಸಂದರ್ಭದಲ್ಲಿ ಕನಿಷ್ಠ 20 ಮೀಟರ್ ಅಂತರವನ್ನು ಕಾಯ್ದುಕೊಳ್ಳಬೇಕು. ಈ ಮೂಲಕ ಸೋಂಕಿನ ಅಪಾಯದ ಪ್ರಮಾಣವನ್ನು ಕಡಿಮೆ ಮಾಡಬಹುದು ಎನ್ನುತ್ತಾರೆ ಪರಿಣತರು.

ನಿಯಮಿತವಾಗಿ ವ್ಯಾಯಾಮ ಮಾಡದಿರುವ ಜನರು, ಕಡಿಮೆ ಅವಧಿಯ ಹಾಗೂ ಸಾಮಾನ್ಯ ವ್ಯಾಯಾಮ ಮಾಡುವುದನ್ನು ಆರಂಭಿಸಬೇಕು ಮತ್ತು ನಂತರ ಕ್ರಮೇಣವಾಗಿ ಅವಧಿ ಮತ್ತು ತೀವ್ರತೆಯನ್ನು ಹೆಚ್ಚು ಮಾಡಿಕೊಳ್ಳಬೇಕು.

(ಲೇಖಕ: ಕನ್ಸಲ್ಟೆಂಟ್ ಕಾರ್ಡಿಯೋಲಾಜಿಸ್ಟ್, ವಿಕ್ರಂ ಆಸ್ಪತ್ರೆ, ಬೆಂಗಳೂರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT