ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೂಪಾಂತರ ಕೊರೋನಾ: ಭಯ ಬಿಡೋಣ

‘ಪ್ರಜಾವಾಣಿ’ ಕನ್ನಡ ಧ್ವನಿ ಪಾಡ್‌ಕಾಸ್ಟ್‌ನ ’ಹರಟೆ ಕಟ್ಟೆ’ಯ ಚರ್ಚೆ
Last Updated 2 ಜನವರಿ 2021, 19:31 IST
ಅಕ್ಷರ ಗಾತ್ರ

ರೂಪಾಂತರಗೊಂಡ ಕೊರೊನಾ ವೈರಾಣುವಿನಿಂದ ಹೆಚ್ಚಿನ ಅಪಾಯ ಇಲ್ಲ. ಈಗಾಗಲೇ ಸಿದ್ಧವಾಗಿರುವ ಲಸಿಕೆ, ರೂಪಾಂತರಿ ವೈರಾಣುವನ್ನೂ ನಿಯಂತ್ರಿಸಲು ಸಾಧ್ಯ ಎಂದು ವೈದ್ಯರಾದ ಡಾ.ಶ್ರೀನಿವಾಸ ಕಕ್ಕಿಲ್ಲಾಯ ಹಾಗೂ ಡಾ. ಶ್ರೀಕಾಂತ್ ಹೆಗಡೆ ಅಭಿಪ್ರಾಯಪಟ್ಟಿದ್ದಾರೆ. ‘ಪ್ರಜಾವಾಣಿ’ ಕನ್ನಡ ಧ್ವನಿ ಪಾಡ್‌ಕಾಸ್ಟ್‌ ಚಾನಲ್‌ನ ‘ಹರಟೆ ಕಟ್ಟೆ’ಯಲ್ಲಿ ‘ರೂಪಾಂತರ ಕೊರೊನಾ–ಭಯ ಬಿಡೋಣ’ ಎಂಬ ವಿಷಯ ಕುರಿತ ಚರ್ಚೆಯಲ್ಲಿ ಪಾಲ್ಗೊಂಡ ಅವರು ತಮ್ಮ ಅಭಿಪ್ರಾಯವನ್ನು ಮಂಡಿಸಿದ್ದಾರೆ.

***

‘ವೈರಾಣುಗಳ ರೂಪಾಂತರ ಸಾಮಾನ್ಯ ಪ್ರಕ್ರಿಯೆ’
ಕೊರೊನಾ ವೈರಾಣುವಿನ ತಳಿಗಳ ಬಗ್ಗೆ ಜಗತ್ತಿನಾದ್ಯಂತ ಅಧ್ಯಯನಗಳು ನಡೆಯುತ್ತಿವೆ. ಈಗಾಗಲೇ 700ರಿಂದ 800 ಉಪವಿಧಗಳನ್ನು ಗುರುತಿಸಲಾಗಿದೆ. ನಮ್ಮ ದೇಶದಲ್ಲಿ ಕೂಡ 19 ಬಗೆಯ ರೂಪಾಂತರ ವೈರಾಣುವನ್ನು ಪತ್ತೆ ಮಾಡಲಾಗಿದೆ. ನಾವು ಪ್ರತಿನಿತ್ಯ ಬಟ್ಟೆ ಬದಲಿಸುತ್ತೇವೆ. ಆದರೆ, ನಾವು ನಾವಾಗಿಯೇ ಇರುತ್ತೇವೆ. ಅದೇ ರೀತಿ, ವೈರಾಣು ಕೂಡ ತನ್ನ ಸ್ವರೂಪವನ್ನು ಬದಲಿಸುತ್ತಲೇ ಇರುತ್ತವೆ. ಇದು ಸಾಮಾನ್ಯವಾದ ಪ್ರಕ್ರಿಯೆಯಾಗಿದೆ. ವೈರಾಣು ರೂಪಾಂತರಗೊಂಡರೂ ಅದರ ಲಕ್ಷಣಗಳು ಹಾಗೂ ಚಿಕಿತ್ಸೆಯ ವಿಧಾನದಲ್ಲಿ ವ್ಯತ್ಯಾಸ ಇರುವುದಿಲ್ಲ.

ಕೋವಿಡ್‌ ಲಸಿಕೆ ರೂಪಾಂತರಗೊಂಡ ವೈರಾಣುವಿನ ಮೇಲೆ ಕೂಡ ಉತ್ತಮವಾಗಿ ಕಾರ್ಯನಿರ್ವಹಿಸುವ ಸಾಮರ್ಥ್ಯ ಹೊಂದಿರಲಿವೆ. ಸ್ಪೈಕ್‌ ಪ್ರೋಟೀನ್‌ನಲ್ಲಿ ಸುಮಾರು 1,280 ಭಾಗಗಳಿರುತ್ತವೆ. ಅದರಲ್ಲಿ ಶೇ 8ರಷ್ಟು ಭಾಗಗಳು ಮಾತ್ರ ರೂಪಾಂತರಗೊಂಡಿವೆ. ಶೇ 92ರಷ್ಟು ಭಾಗಗಳಿಗೆ ಲಸಿಕೆ ಪರಿಣಾಮಕಾರಿಯಾಗಿ ಕೆಲಸ ಮಾಡಲಿದೆ.

ಕರ್ನಾಟಕದಲ್ಲಿ ಶೇ 65ರಷ್ಟು ಜನರಿಗೆ ಈಗಾಗಲೇ ಕೊರೊನಾ ಸೋಂಕು ತಗುಲಿ, ಅವರಿಗೆ ವಾಸಿಯೂ ಆಗಿದೆ. ಈ ಪೈಕಿ ಕೆಲವರಿಗೆ ಸೋಂಕು ತಗುಲಿರುವುದು ಗೊತ್ತೇ ಆಗಲಿಲ್ಲ. ಈ ಎಲ್ಲರಲ್ಲೂ ಪ್ರತಿರೋಧಕ ಶಕ್ತಿ ವೃದ್ಧಿಯಾಗಿರುತ್ತದೆ. ಶೇ 35ರಷ್ಟು ಮಂದಿಗೆ ಮಾತ್ರ ರೂಪಾಂತರಗೊಂಡ ವೈರಾಣು ಅಥವಾ ಮುಂದಿನ ದಿನಗಳಲ್ಲಿ ಬೇರೆ ಸ್ವರೂಪದಲ್ಲಿ ಕಾಣಿಸಿಕೊಳ್ಳುವ ವೈರಾಣು ತಗಲುವ ಸಾಧ್ಯತೆ ಇರುತ್ತದೆ.

ಎರಡನೇ ಅಲೆಯ ಬಗ್ಗೆ ಕೂಡ ಆತಂಕ ಪಡಬೇಕಿಲ್ಲ. ಬ್ರಿಟನ್‌ನಲ್ಲಿ ಈ ಮೊದಲು ವೈರಾಣು ಕಾಣಿಸಿಕೊಂಡಾಗ ಕಟ್ಟುನಿಟ್ಟಾಗಿ ಲಾಕ್‌ಡೌನ್ ಮಾಡಲಾಯಿತು. ಅಲ್ಲಿ ಆ ವೇಳೆ ವೈರಾಣು ಹರಡಿರಲಿಲ್ಲ. ಲಾಕ್‌ಡೌನ್‌ ತೆರವುಗೊಳಿಸಿದಾಗ ಹರಡುವಿಕೆಗೆ ವೇಗ ದೊರೆತಿದೆ. ಕೊರೊನಾ ಹರಡುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಸೋಂಕಿತರಲ್ಲಿ ಶೇ 98ರಷ್ಟು ಮಂದಿಗೆ ಲಕ್ಷಣವೇ ಇರುವುದಿಲ್ಲ. ಹಾಗಾಗಿ ಮನೆಯಲ್ಲಿಯೇ ಅದು ಹರಡುತ್ತದೆ. ಅದನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಯಾರಿಗೆ ಇದರಿಂದ ಸಮಸ್ಯೆಯಾಗುತ್ತದೆಯೋ ಅಂತಹವರನ್ನು ರಕ್ಷಿಸುವ ಕಾರ್ಯತಂತ್ರವನ್ನಷ್ಟೇ ಅಚ್ಚುಕಟ್ಟಾಗಿ ಮಾಡಬೇಕು.

ಕಳೆದ 9 ತಿಂಗಳಲ್ಲಿ ಆಗಿರುವುದನ್ನು ಪ್ರತಿಯೊಬ್ಬರೂ ಪುನರಾವಲೋಕನ ಮಾಡಿಕೊಳ್ಳಬೇಕು. ಆಗ ನಮಗೆ ಎಲ್ಲವೂ ಸ್ಪಷ್ಟವಾಗುತ್ತದೆ. ನಮ್ಮ ರಾಜ್ಯದಲ್ಲಿ ಕೋವಿಡ್ ಮರಣ ಪ್ರಮಾಣ ಶೇ 0.07ರಷ್ಟಿದೆ. ಕೋವಿಡ್‌ ಕಾಯಿಲೆ ಹೆಚ್ಚಿನವರಿಗೆ ಚಿಕಿತ್ಸೆ ಇಲ್ಲದೆಯೇ ಕಡಿಮೆಯಾಗುತ್ತದೆ. ಹಿಂದಿನ ಸಹಜ ಸ್ಥಿತಿಗೆ ಮರಳಬೇಕಿದೆ.

-ಡಾ.ಬಿ. ಶ್ರೀನಿವಾಸ ಕಕ್ಕಿಲ್ಲಾಯ, ವೈದ್ಯರು, ಮಂಗಳೂರು

**
‘ಎರಡನೇ ಅಲೆ ಅಪಾಯಕಾರಿಯಲ್ಲ’
ಕೊರೊನಾ ಅತ್ಯಂತ ಸೂಕ್ಷ್ಮ ವೈರಾಣು. ಮನುಷ್ಯನ ದೇಹ ಸೇರಿ ಬೆಳವಣಿಗೆ ಹೊಂದುವಾಗ ಮತ್ತು ಹರಡುವಾಗ ಈ ವೈರಾಣುಗಳು ಜೀವಕೋಶದಲ್ಲಿ ತನ್ನ ನಕಲು ಮಾದರಿಗಳನ್ನ ತಯಾರಿಸುತ್ತವೆ. ನಕಲು ಮಾದರಿ ತಯಾರಿಸುವಾಗ ಕೆಲವೊಂದು ವ್ಯತ್ಯಾಸಗಳಾಗುತ್ತವೆ. ಅದನ್ನು ರೂಪಾಂತರ ಎಂದು ಕರೆಯುತ್ತೇವೆ. ರೂಪಾಂತರ ಸ್ವಾಭಾವಿಕವಾದ ಪ್ರಕ್ರಿಯೆಯಾಗಿದ್ದು, ವೈರಾಣು ತಾನು ಬದುಕಲು ಕಂಡುಕೊಳ್ಳುವ ಬದಲಾವಣೆಯಾಗಿದೆ. ಹೊಸ ಬಗೆಯ ವೈರಾಣು ವೇಗವಾಗಿ ಹರಡಿದರೂ ಅಷ್ಟು ತೀವ್ರತೆ ಇರುವುದಿಲ್ಲ.

ವೈರಾಣುವಿನ ಮುಳ್ಳು ಶ್ವಾಸಕೋಶದ ಜೀವಕೋಶದ ಮೂಲಕ ದೇಹ ಸೇರುತ್ತದೆ. ಈವರೆಗೆ ಸಂಶೋಧಿಸಲ್ಪಟ್ಟ ಲಸಿಕೆಗಳು ರೂಪಾಂತರಗೊಂಡ ವೈರಾಣುವಿನ ಮೇಲೆ ಕೂಡ ಕಾರ್ಯನಿರ್ವಹಿಸಲಿವೆ. ಇದು ಸಂಶೋಧನಾ ವರದಿಗಳಲ್ಲಿ ಸಹ ಉಲ್ಲೇಖಿಸಲ್ಪಟ್ಟಿವೆ. ಸಾಮಾನ್ಯ ಕೊರೊನಾ ವೈರಾಣು ಹಾಗೂ ರೂಪಾಂತರಗೊಂಡ ವೈರಾಣುವಿನ ಲಕ್ಷಣಗಳಲ್ಲಿ ಅಷ್ಟಾಗಿ ವ್ಯತ್ಯಾಸವಿಲ್ಲ. ಕಾಯಿಲೆಯ ತೀವ್ರತೆಯನ್ನು ಹೆಚ್ಚಿಸುವುದು ಹಾಗೂ ಸಾವಿಗೆ ಕಾರಣವಾಗುವ ಗುಣಗಳು ಕೂಡ ಇದರಲ್ಲಿ ಈ ಮೊದಲಿನಷ್ಟಿಲ್ಲ. ಆದರೆ, ಈಗ ಇರುವ ಸಾಮಾನ್ಯ ಕೊರೊನಾ ವೈರಾಣುಗಿಂತ ಶೇ 50ರಷ್ಟು ವೇಗವಾಗಿ ಹರಡುತ್ತದೆ. ಇದರಿಂದಾಗಿ ಪ್ರಕರಣಗಳ ಸಂಖ್ಯೆ ಏರಿಕೆ ಕಾಣಬಹುದು.

ನಮ್ಮ ದೇಶದಲ್ಲಿ ಒಂದೊಂದು ಭಾಗದಲ್ಲಿ ಒಂದೊಂದು ಅವಧಿಯಲ್ಲಿ ಕೋವಿಡ್ ಕಾಣಿಸಿಕೊಂಡಿದೆ. ಮೊದಲು ಮಹಾರಾಷ್ಟ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಂಡಿತು. ರಾಜ್ಯದಿಂದ ರಾಜ್ಯಕ್ಕೆ ವ್ಯತ್ಯಾಸವನ್ನು ಕಾಣಬಹುದಾಗಿದೆ. ಕೆಲವರಿಗೆ ಅರಿವಿಲ್ಲದೆಯೇ ಈ ಕಾಯಿಲೆ ಬಂದು ಹೋಗಿದೆ. ಪ್ರತಿಕಾಯಗಳ ಪರೀಕ್ಷೆ ನಡೆಸಿದಲ್ಲಿ ಅದು ತಿಳಿಯುತ್ತದೆ. ಎರಡನೇ ಅಲೆ ಬಂದರೂ ಅದು ಮೊದಲನೇ ಅಲೆಯಷ್ಟು ತೀವ್ರತೆ ಇರುವುದಿಲ್ಲ. ಕೆಲವೊಂದು ಪ್ರದೇಶ, ನಗರಗಳಲ್ಲಿ ಕಾಣಿಸಿಕೊಳ್ಳಬಹುದು.

ವೈರಾಣು ತನ್ನ ಉಳಿವಿಗಾಗಿ ರೂಪಾಂತರಗೊಳ್ಳುತ್ತದೆ. ಅದೇ ರೀತಿ, ನಾವು ಕೂಡ ರೂಪಾಂತರಗೊಳ್ಳಬೇಕಿದೆ. ವೈರಾಣು ರೂಪಾಂತರಗೊಂಡರೂ ಅದು ಅಸಾಮಾನ್ಯ ಸಾಮರ್ಥ್ಯವನ್ನು ಬೆಳೆಸಿಕೊಂಡಿಲ್ಲ. ಅದು ಮನುಷ್ಯ ರೂಪವನ್ನೋ ಅಥವಾ ನಮ್ಮ ಮಾಸ್ಕ್‌, ಸ್ಯಾನಿಟೈಸರ್‌ ಕಿತ್ತುಕೊಳ್ಳುವ ರೂಪವನ್ನೇನೂ ಪಡೆದಿಲ್ಲ. ಹಿಂದಿನಂತೆಯೇ ಇದ್ದು ಸ್ವಲ್ಪ ರೂಪಾಂತರಗೊಂಡಿದ್ದು, ಅದನ್ನು ವೈಜ್ಞಾನಿಕವಾಗಿ ಎದುರಿಸುವ ಕಾರ್ಯತಂತ್ರ ಅಳವಡಿಸಿಕೊಳ್ಳಬೇಕಿದೆ.

–ಡಾ. ಶ್ರೀಕಾಂತ್ ಹೆಗಡೆ, ವೈದ್ಯರು, ಶಿವಮೊಗ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT