ಮಳೆಗಾಲದಲ್ಲಿ ವಿವಿಧ ಕಣ್ಣಿನ ಕಾಯಿಲೆಗಳು ಬರುವ ಅಪಾಯವಿರುತ್ತದೆ. ಪರಿಸರದಲ್ಲಿನ ತೇವಾಂಶದಿಂದಾಗಿ ಅಲರ್ಜಿಗಳು ಹೆಚ್ಚುವ ಅಪಾಯವಿರುತ್ತದೆ. ಹಾಗಾಗಿ ಹೆಚ್ಚಿನ ಜಾಗ್ರತೆ ವಹಿಸಬೇಕು.
ಕಣ್ಣಿನ ಅಲರ್ಜಿಗಳು: ವಾತಾವರಣ ತೇವಾಂಶದಿಂದ ಕೂಡಿರುವುದರಿಂದ ದೂಳು ಮತ್ತು ಗಾಳಿಯಿಂದ ಪಸರಿಸುವ ಪರಾಗವು ಕಣ್ಣಿನ ಅಲರ್ಜಿಯನ್ನು ತಂದೊಡ್ಡಬಹುದು. ತುರಿಕೆ, ಕೆಂಪು ಬಣ್ಣಕ್ಕೆ ತಿರುಗಬಹುದು. ನೀರಿನಿಂದ ಕೂಡಿದ ಲಕ್ಷಣಗಳನ್ನು ತೋರಿಸಬಹುದು. ಇಂಥ ಪರಿಸ್ಥಿತಿ ಬಂದಾಗ ಮಕ್ಕಳು ಕಣ್ಣುಗಳನ್ನು ಹೆಚ್ಚು ಉಜ್ಜಿಕೊಳ್ಳುತ್ತಾರೆ. ಇದರಿಂದ ಕಣ್ಣಿನ ಆರೋಗ್ಯ ಮತ್ತಷ್ಟೂ ಹದಗೆಡುವ ಸಾಧ್ಯತೆ ಇರುತ್ತದೆ. ಇದನ್ನು ಲ್ಯೂಬ್ರಿಕೇಟೆಡ್ ಐ ಡ್ರಾಪ್ಸ್, ಕೂಲ್ ಕಂಪ್ರೆಸಸ್ ಮತ್ತು ಓವರ್ ದಿ ಕೌಂಟರ್ ಆ್ಯಂಟಿ ಹಿಸ್ಟೇಮೈನ್ಸ್ ಅನ್ನು ಬಳಸಬೇಕಾಗುತ್ತದೆ. ಈ ರೋಗಲಕ್ಷಣ ನಿರಂತರವಾಗಿದ್ದರೆ ಕಣ್ಣಿನ ವೈದ್ಯರನ್ನು ಸಂಪರ್ಕಿಸಿ.
ಕಾಂಜಂಕ್ಟಿವಿಟೀಸ್ (ಪಿಂಕ್ ಐ): ಕಲುಷಿತ ನೀರು ಅಥವಾ ಗಾಳಿಯ ಮೂಲಕ ಕಾಂಜಂಕ್ಟಿವಿಟೀಸ್ ಹರಡುತ್ತದೆ. ವೈರಾಣು ಅಥವಾ ಬ್ಯಾಕ್ಟೀರಿಯಾದ ಸೋಂಕಿನಿಂದ ಕಣ್ಣುಗಳು ಕೆಂಪಾಗುತ್ತವೆ. ತುರಿಕೆ, ಉರಿ ಮತ್ತು ಕಣ್ಣಿನಿಂದ ನೀರು ಸುರಿಯುತ್ತದೆ. ಇದನ್ನು ತಡೆಗಟ್ಟಲು ಆಗಾಗ್ಗೆ ಕೈ ತೊಳೆಯಬೇಕು, ಕೈ ತೊಳೆಯದೇ ಕಣ್ಣುಗಳನ್ನು ಮುಟ್ಟಬಾರದು ಮತ್ತು ವೈಯಕ್ತಿಕ ಸ್ವಚ್ಛತೆ ಕಾಪಾಡಿಕೊಳ್ಳಬೇಕು.
ಸ್ಟೈ (ಹಾರ್ಡಿಯೋಲಂ): ತೇವಾಂಶದಿಂದ ರಪ್ಪೆಯ ಮೇಲೆ ನೋವು ಕಾಣಿಸಿಕೊಂಡು, ಕೆಂಪು ಗಡ್ಡೆಗಳಿಗೂ ಕಾರಣವಾಗಬಹುದು. ಕೊಳಕು ಕೈಗಳಿಂದ ಕಣ್ಣುಗಳನ್ನು ಮುಟ್ಟಬೇಡಿ. ಕಣ್ಣಿನ ರಪ್ಪೆಯ ಶುಚಿತ್ವ ಕಾಪಾಡಿಕೊಳ್ಳಬೇಕು.
ಒಣಕಣ್ಣುಗಳು: ತೇವಾಂಶದಲ್ಲಿನ ಏರಿಳಿತವು ಒಣಕಣ್ಣುಗಳಿಗೆ ಕಾರಣವಾಗಬಹುದು. ಇದರಿಂದ ತುರಿಕೆ, ಸುಡುವಿಕೆ, ಕೆಂಪಗಾಗುವುದು, ದೃಷ್ಟಿ ಮಂದವಾಗುವ ಅನುಭವ ಉಂಟಾಗಬಹುದು. ಒಣಕಣ್ಣುಗಳ ಸಮಸ್ಯೆಯನ್ನು ನಿವಾರಿಸಿಕೊಳ್ಳಲು ಸಾಕಷ್ಟು ನೀರನ್ನು ಕುಡಿಯಬೇಕು. ಕಣ್ಣುಗಳನ್ನು ಮಿಟುಕಿಸುತ್ತಿರಬೇಕು ಮತ್ತು ಲ್ಯೂಬ್ರಿಕೇಟಿಂಗ್ ಐ ಡ್ರಾಪ್ಸ್ ಬಳಸಬೇಕು.
ಶಿಲೀಂಧ್ರ ಸೋಂಕು: ಕಲುಷಿತ ನೀರು ಶಿಲೀಂಧ್ರ ಸೋಂಕಿನ ಅಪಾಯವನ್ನು ಹೆಚ್ಚಿಸುತ್ತದೆ. ಕಣ್ಣನ್ನು ಕೆಂಪಗಾಗಿಸುವುದಲ್ಲದೇ, ನಿರಂತರವಾಗಿ ಕಣ್ಣಿನಲ್ಲಿ ನೀರು ಬರುತ್ತದೆ. ನಿಂತ ನೀರಿನ ಸಮೀಪ ಓಡಾಡುವುದನ್ನು ತಪ್ಪಿಸಬೇಕು. ಕಣ್ಣಿನ ರಕ್ಷಣೆಗೆ ಕನ್ನಡಕಗಳನ್ನು ಬಳಸಬೇಕು.
ಕಾರ್ನಿಯಲ್ ಹುಣ್ಣು: ಸೋಂಕಿನಿಂದ ಕಾರ್ನಿಯಲ್ ಹುಣ್ಣುಗಳು ಬರಬಹುದು. ಕಣ್ಣಿನಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಕೆಂಪಗಾಗುತ್ತದೆ. ಮಸುಕಾದ ದೃಷ್ಟಿ ಉಂಟಾಗುತ್ತದೆ. ತಡೆಯಲು ಕಣ್ಣಿನ ಸ್ವಚ್ಛತೆಗೆ ಸಂಸ್ಕರಿಸಿದ ನೀರನ್ನು ಬಳಸಬೇಕು. ರಕ್ಷಣೆಗೆ ಕನ್ನಡಕಗಳನ್ನು ಧರಿಸಬೇಕು.
ಸೋಂಕು ಕಾಣಿಸಿಕೊಂಡಾಗ ಹೀಗೆ ಮಾಡಿ
l ಆಗಾಗ್ಗೆ ಕೈಗಳನ್ನು ತೊಳೆದುಕೊಳ್ಳಬೇಕು ಮತ್ತು ಸ್ವಚ್ಛವಾದ ಟವೆಲ್‌ಗಳಿಂದ ಒರೆಸಿಕೊಳ್ಳಿ.
l ಯು.ವಿ.ಕಿರಣಗಳ ಕಿರಿಕಿರಿಯನ್ನು ತಪ್ಪಿಸಲು ಕಣ್ಣಿನ ರಕ್ಷಣೆಗೆ ಸನ್‌ಗ್ಲಾಸ್‌ಗಳನ್ನು ಬಳಸಬೇಕು.
l ಸಾಕಷ್ಟು ನೀರು ಕುಡಿಯಿರಿ. ಕಣ್ಣುಗಳನ್ನು ಉಜ್ಜಬೇಡಿ.
l ಒಬ್ಬರ ಟವೆಲ್‌ಗಳನ್ನು ಮತ್ತೊಬ್ಬರು ಬಳಸಬೇಡಿ.
l ಅವಧಿಗೆ ಮೀರಿದ ಕಣ್ಣಿನ ಡ್ರಾಪ್ಸ್‌ಗಳನ್ನು ಬಳಸಬೇಡಿ ಮಾಲಿನ್ಯಕ್ಕೆ ಕಣ್ಣುಗಳನ್ನು ಒಡ್ಡಬೇಡಿ.
ಡಾ.ಅಮೋದ್ ನಾಯಕ್, ಹೆಡ್ ಕ್ಲಿನಿಕಲ್ ಸರ್ವೀಸಸ್, ಡಾ.ಅಗರ್ವಾಲ್ಸ್ ಐ ಹಾಸ್ಪಿಟಲ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.