ಮಂಗಳವಾರ, ಜನವರಿ 21, 2020
24 °C

‘ದೊಡ್ಡ’ ಗೌರಿಯ ವ್ಯಾಯಾಮ

ರೂಪಾ ಕೆ.ಎಂ. Updated:

ಅಕ್ಷರ ಗಾತ್ರ : | |

ಏಳು ವರ್ಷಗಳ ಹಿಂದೆ ಕಿರುತೆರೆಯಲ್ಲಿ ಪ್ರಸಾರವಾಗುತ್ತಿದ್ದ ‘ಪುಟ್ಟಗೌರಿ ಮದುವೆ’ ಧಾರಾವಾಹಿ ಖ್ಯಾತಿಯ ಸಾನ್ಯಾ ಅಯ್ಯರ್‌ ಈಗ ದೊಡ್ಡ ಗೌರಿಯಾಗಿದ್ದಾರೆ. ಹೋದಲ್ಲೂ ಬಂದಲ್ಲೂ ‘ನೀವು ಪುಟ್ಟು ಗೌರಿ ಅಲ್ವಾ’ ಎಂದು ಜನರು  ಕೇಳುವ ಪ್ರಶ್ನೆಗಳಿಗೆ  ಸುಮ್ಮನೆ ನಕ್ಕು,  ಜನರು ಇನ್ನೂ ಪುಟ್ಟಗೌರಿಯನ್ನು ಮರೆತಿಲ್ಲ ಎಂದು ಒಳಗೊಳಗೆ ಖುಷಿ ಪಡುವ ಅವರು, ತಾನು ಪುಟ್ಟಗೌರಿಯಷ್ಟೆ ಅಲ್ಲ, ತಮ್ಮೊಳಗೆ ಮಹಾನಟಿಯ ಕನಸಿದೆ ಎಂದು ಕಣ್ಣರಳಿಸಿ ಹೇಳುತ್ತಾರೆ. 

ವಿದ್ಯಾಭ್ಯಾಸ, ನಾಟಕ , ಮಾಡೆಲಿಂಗ್‌ನಲ್ಲಿಯೂ ಬ್ಯುಸಿಯಾಗಿರುವ ಸಾನ್ಯಾ ವ್ಯಾಯಾಮಶಾಲೆಯಲ್ಲಿ ಬೆವರಿಳಿಸಲು ವೇಳಾಪಟ್ಟಿಯನ್ನು ಹಾಕಿಕೊಂಡಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿಯೂ ಕ್ರಿಯಾಶೀಲವಾಗಿರುವ ಅವರು ತಮ್ಮ ಫಿಟ್‌ನೆಸ್‌ ಬಗ್ಗೆ ಹೇಳಿಕೊಂಡಿದ್ದು ಹೀಗೆ...

ಫಿಟ್‌ ಆಗಿರುವುದರ ಬಗ್ಗೆ ಸಾಮಾನ್ಯವಾದ ಒಂದು ತಪ್ಪು ಕಲ್ಪನೆ ಇದೆ. ಸಣ್ಣಕ್ಕಿರೋದು, ದೇಹಕ್ಕೊಂದು ನಿರ್ದಿಷ್ಟವಾದ ಆಕಾರ ಇದ್ದರೆ ಅದೇ ಫಿಟ್‌ನೆಸ್ ಇತ್ಯಾದಿ. ಆದರೆ, ಫಿಟ್‌ ಆಗಿರೊದು ಅಂದ್ರೆ ಸಕಾರಾತ್ಮಕ ಆಲೋಚನೆಯಲ್ಲಿಯೇ ಇರುವುದು. ಫಿಟ್‌ನೆಸ್‌ ಎನ್ನುವುದು ರಾತ್ರೋರಾತ್ರಿ ಆಗಿಬಿಡುವಂಥದ್ದಲ್ಲ. ಅದು ಜೀವನ ಶೈಲಿಯ ಒಂದು ಭಾಗ. ಸದ್ಯಕ್ಕೆ ಎಲ್ಲರೂ ಫಿಟ್‌ನೆಸ್‌ ಬಗ್ಗೆ ಕಾಳಜಿ ವಹಿಸುತ್ತಿದ್ದಾರೆ. ಫಿಟ್‌ನೆಸ್‌ ಟ್ರೆಂಡ್‌ ಹೆಚ್ಚಾಗ್ತ ಇದೆ. ಅದು ನಿರಂತರವಾಗಿದ್ದಷ್ಟು ಒಳ್ಳೆಯದು ಅಂತಾರೆ ಅವರು. 

ದಯಾನಂದ್‌ ಸಾಗರ್‌ ಕಾಲೇಜಿನಲ್ಲಿ ಸಮೂಹ ಸಂವಹನದಲ್ಲಿ ಪದವಿ ಓದುತ್ತಿರುವ ಸಾನ್ಯಾಗೆ ಸದ್ಯ ರಜೆ ಇರುವುದರಿಂದ ಎರಡು ಹೊತ್ತು ವ್ಯಾಯಾಮ ಮಾಡಲು ಸಮಯ ಸಿಕ್ಕಿದೆ. 30 ನಿಮಿಷಗಳ ‌ವಾರ್ಮ್‌ ಅಪ್‌ ವ್ಯಾಯಾಮಗಳನ್ನು ಅವರು ಮಾಡುತ್ತಾರೆ. ‘ಎಲ್ಲ ಒತ್ತಡಗಳಿಂದ ಬಿಡುಗಡೆಗೊಳಿಸುವ ಈ ವ್ಯಾಯಾಮ ಬಹಳ ಮುಖ್ಯ. ಜತೆಗೆ ನಿತ್ಯವೂ ಬೇರೆ ಬೇರೆ ವ್ಯಾಯಾಮಗಳಿರುತ್ತದೆ. ಒಂದು ದಿನ ಕಾರ್ಡಿಯೊ ಮಾಡಿದರೆ, ಇನ್ನೊಂದು ದಿನ ಟಿಆರ್‌ಎಕ್ಸ್‌, ಪುಷ್‌ ಅಪ್‌, ಪುಲ್‌ ಅಪ್‌ ಹೀಗೆ. ಎಲ್ಲವನ್ನೂ ನಿರ್ದಿಷ್ಟ ಸಮಯದಲ್ಲಿ ಶಿಸ್ತು ಬದ್ಧವಾಗಿ ಮುಗಿಸುತ್ತೀನಿ’ ಎನ್ನುವ ಅವರು ದೇಹ ದೇಗುಲವಿದ್ದಂತೆ. ಅದನ್ನು ಆದಷ್ಟು ಕಲ್ಮಶ ಮುಕ್ತವಾಗಿರಿಸಿಕೊಳ್ಳಬೇಕು ಎಂದು ಹೇಳುವುದನ್ನು ಮರೆಯುವುದಿಲ್ಲ. ‌

‘ವ್ಯಾಯಾಮ ಆಗದಿದ್ದರೆ ಯಾವುದಾದರೂ ಕ್ರೀಡೆಯಲ್ಲಿ ಕ್ರಿಯಾಶೀಲವಾಗಿರಬೇಕು. ಮೊದಲು ಬಾಸ್ಕೆಟ್‌ಬಾಲ್‌ ಆಡುತ್ತಿದ್ದೆ. ಸದ್ಯಕ್ಕೆ ಸಮಯದ ಅಭಾವದಿಂದ ನಿಲ್ಲಿಸಿದ್ದೇನೆ. ಮುಂದಿನ ದಿನಗಳಲ್ಲಿ ಇದನ್ನು ಆರಂಭಿಸಲಿದ್ದೇನೆ’ ಎನ್ನುವ ಅವರು, ಸಾಧ್ಯವಾದಷ್ಟು ಜಂಕ್‌ಫುಡ್‌ನಿಂದ ದೂರವಿರುತ್ತಾರೆ. ಕಚ್ಚಾ ಆಹಾರ ಸೇವನೆಗೆ ಹೆಚ್ಚು ಹೆಚ್ಚು ಒತ್ತು ಕೊಡುವ ಅವರು, ಸಕ್ಕರೆ ಪದಾರ್ಥಗಳಿಂದಲೂ ದೂರ ಉಳಿದಿದ್ದಾರೆ. 

‘ಸಾನ್ಯಾ ಆಗಿಯೇ ಗುರುತಿಸಿಕೊಳ್ಳಲು ಇಷ್ಟಪಡುತ್ತೀನಿ. ನನ್ನ ಚಿತ್ತವೆಲ್ಲ ನಟನೆ ಮತ್ತು ಮಾಡೆಲಿಂಗ್‌. ಎಲ್‌ಕೆಜಿ ಓದುವಾಗಿನಿಂದಲೂ ನಟನೆಯಲ್ಲಿ ತೊಡಗಿಕೊಂಡಿದ್ದೇನೆ. ಸದ್ಯಕ್ಕೆ ಅವಕಾಶಗಳು ಬರ್ತಾ ಇವೆ. ಆದರೆ, ನಟನೆಗೆ ಬೇಕಿರುವ ನೃತ್ಯ, ಫಿಟ್‌ನೆಸ್‌ ಎಲ್ಲವನ್ನು ಒಂದು ಹಂತದವರೆಗೆ ಕಲಿತ ಮೇಲೆಯೇ ತೆರೆ ಮೇಲೆ ಕಾಣಿಸಿಕೊಳ್ಳಬೇಕು’ ಎಂದು ಹೇಳುವ ಅವರು, ಸದ್ಯಕ್ಕೆ ಕಥಕ್‌ ಅನ್ನು ಶ್ರದ್ಧೆಯಿಂದ ಒಲಿಸಿಕೊಳ್ಳಲು ಶ್ರಮಿಸುತ್ತಿದ್ದಾರೆ. 

ಬೇರೆ ಬೇರೆ ನೃತ್ಯಪ್ರಕಾರಗಳನ್ನು ಕಲಿಯೋಕೆ ಇಷ್ಟ. ಉತ್ತಮ ನಟಿ ಜತೆಗೆ ಒಳ್ಳೆಯ ನೃತ್ಯಗಾರ್ತಿ ಎಂದು ಜನರಿಂದ ಶಹಭಾಷ್‌ಗಿರಿ ಪಡೆಯಲು ಕಾತರರಾಗಿರುವ ಅವರು, ಕಾಲೇಜಿನ ರಂಗಭೂಮಿಯಲ್ಲಿಯೂ ಕ್ರಿಯಾಶೀಲರಾಗಿದ್ದಾರೆ. ಇವೆಲ್ಲವೂ ಅವರ ಫಿಟ್‌ನೆಸ್‌ ಗುರಿ ಏರುಪೇರಾಗದಂತೆ ನೋಡಿಕೊಂಡಿದೆ. 

ಬೆಳ್ಳಿಗೆ ಆ್ಯಪಲ್‌ಸೈಡರ್‌ ಅಥವಾ ನಿಂಬೆ ಹಣ್ಣಿನ ರಸಕ್ಕೆ ಜೇನು ಬೆರೆಸಿ ಕುಡಿಯುತ್ತಾರೆ. ಊಟಕ್ಕೆ ರಾಗಿ ಮುದ್ದೆ ಇರುತ್ತದೆ. ಜತೆಗೆ ಮೊಟ್ಟೆ ಇರುತ್ತದೆ. ಕೊಬ್ಬರಿ ಎಣ್ಣೆ ಬಿಟ್ಟು ಬೇರೆ ಯಾವ ಎಣ್ಣೆಯನ್ನೂ ಬಳಸುವುದಿಲ್ಲ. ರಾತ್ರಿಯ ಊಟಕ್ಕೆ 50 ಗ್ರಾಂ ಪನ್ನೀರ್‌, ಒಂದು ಹಣ್ಣು, ಒಂದು ಲೋಟ ಹಾಲು ಇಷ್ಟು ಅವರ ಊಟದ ಮೆನು. 

ಫಿಟ್‌ನೆಸ್‌ಗೆ ಒತ್ತು ಕೊಟ್ಟಷ್ಟು ಸಕಾರಾತ್ಮಕ ಆಲೋಚನೆ ಹೆಚ್ಚುತ್ತೆ. ಜತೆಗೆ ಸ್ವನಿಯಂತ್ರಣ, ತಾಳ್ಮೆ ಹೆಚ್ಚುತ್ತದೆ. ಫಿಟ್‌ನೆಸ್‌ ಅನ್ನು ಧೇನಿಸುವುದರಿಂದ ಈ ಎಲ್ಲ ಗುಣಗಳು ಅನಾಯಾಸವಾಗಿ ಬಂದುಬಿಡುತ್ತವೆ. ಆಗ ಸಾಧನೆಯ ಹಾದಿ ಸುಲಭವಾಗುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಇಚ್ಛಾಶಕ್ತಿಗೆ ದೊಡ್ಡ ಬಲ ಕೊಡುತ್ತದೆ.

ದಪ್ಪ ಇದ್ದವರು ಮಾತ್ರ ವ್ಯಾಯಾಮ ಮಾಡಬೇಕು ಅಂತೇನಿಲ್ಲ. ಫಿಟ್‌ ಆಗಿರಲು ಕ್ರೀಡೆ, ಈಜು, ನೃತ್ಯ ಯಾವುದಾದರೂ ಒಂದು ಪ್ರಕಾರವನ್ನು ರೂಢಿಸಿಕೊಳ್ಳಬಹುದು. ಮಾನಸಿಕ ಒತ್ತಡವನ್ನು ನೀಗಿಕೊಳ್ಳಲು ತನ್ನಷ್ಟಕ್ಕೆ ತಾನು ಮಾತನಾಡಿಕೊಳ್ಳುವುದಾಗಿಯೂ ಹೇಳಿಕೊಳ್ಳುವ ಅವರಿಗೆ ಫಿಟ್‌ನೆಸ್‌ ವಿಚಾರದಲ್ಲಿ ಬಾಲಿವುಡ್‌ನ ಜಾಕ್ವೆಲಿನ್‌ ಫರ್ನಾಂಡಿಸ್‌, ದಿಶಾ ಪಠಾನಿ ಅವರೇ ದೊಡ್ಡ ಸ್ಫೂರ್ತಿ. 

ಕನ್ನಡದಲ್ಲಿ ಯಶ್‌ ಅವರ ಜತೆ ನಟಿಸಬೇಕು ಎಂದು ಮಹದಾಸೆ ವ್ಯಕ್ತಪಡಿಸುವ ಸಾನ್ಯಾ, ಮಲಯಾಳಂನಲ್ಲಿ ದುಲ್ಕರ್‌ ಸಲ್ಮಾನ್‌, ಹಿಂದಿಯಲ್ಲಿ ವಿಕ್ಕಿ ಕೌಶಲ್‌, ತೆಲುಗಿನಲ್ಲಿ ಅಲ್ಲು ಅರ್ಜುನ್‌ ಹೀಗೆ ದೊಡ್ಡ ಪಟ್ಟಿಯನ್ನೇ ಮುಂದಿಡುತ್ತಾರೆ. ‘ನಟಿಗೆ ಯಾವುದೇ ಭಾಷೆ ಅಡ್ಡಿಯಾಗಬಾರದು. ನಟನೆಯ ವಿಚಾರದಲ್ಲಿ ಪ್ರಿಯಾಂಕ ಚೋಪ್ರಾ ನನಗೆ ರೋಲ್‌ ಮಾಡೆಲ್‌. ದೇಸಿ ಹುಡುಗಿಯಾಗಿ, ಸಾಮಾಜಿಕ ಕಳಕಳಿಯುಳ್ಳ ನಟಿಯಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಸಾಧ್ಯವಾದರೆ ಅವರಂಥಾಗಲು ಇಷ್ಟಪಡುತ್ತೇನೆ’ ಎಂದು ಹೇಳುವ ಸಾನ್ಯಾಗೆ ಬಿ–ಬಾಯಿಂಗ್‌ ಪ್ರಕಾರದ ನೃತ್ಯವನ್ನು ಪ್ರದರ್ಶಿಸಬೇಕೆಂಬ ಆಸೆಯಿದೆಯಂತೆ. 


ಸಾನ್ಯಾ ಅಯ್ಯರ್‌

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು