ಗುರುವಾರ , ಜುಲೈ 7, 2022
23 °C

ಹೆಣ್ಣು ಮಕ್ಕಳು ಋತುಮತಿಯಾಗುವ ವಯೋಮಾನದಲ್ಲಿ ಕುಸಿತ: ಕಾರಣವೇನು ಗೊತ್ತೇ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬದಲಾದ ಜೀವನ ಶೈಲಿಯಿಂದ ಇಂದಿನ ಹೆಣ್ಣು ಮಕ್ಕಳು ಋತುಮತಿಯಾಗುವ ವಯೋಮಾನದಲ್ಲಿ ಕುಸಿತ ಕಂಡುಬಂದಿದೆ. 2012ರ ಸಮೀಕ್ಷೆ ಪ್ರಕಾರ, 13 ವರ್ಷ ಮೇಲ್ಪಟ್ಟ ಹೆಣ್ಣುಮಕ್ಕಳು ಸಹಜವಾಗಿ ಋತುಮತಿಯಾಗುತ್ತಿದ್ದರು. ಆದರೆ, 2016–17ರ ಸಮೀಕ್ಷೆ ಪ್ರಕಾರ ಇದು 11 ರಿಂದ 12 ವರ್ಷಕ್ಕೆ ಇಳಿದಿತ್ತು. ಆದರೆ, ಆತಂಕಾರಿ ವಿಷಯವೆಂದರೆ ಕಳೆದೆರಡು ವರ್ಷದಿಂದ ಈ ಅವಧಿಯು ೮ ರಿಂದ ೯ ವರ್ಷಕ್ಕೆ ಇಳಿದಿದೆ. ಕೇವಲ ೮ ವರ್ಷ ಒಳಗಿನ ಹೆಣ್ಣುಮಕ್ಕಳು ಋತುಮತಿಯಾಗುತ್ತಿರುವುದು ಆತಂಕಕಾರಿ. ಈ ಬಗ್ಗೆ ವೈದ್ಯರ ಇದಕ್ಕೆ ಕಾರಣ ಹಾಗೂ ಸಲಹೆಗಳನ್ನು ನೀಡಿದ್ದಾರೆ.

ಋತುಮತಿಯಾದ ಮೊದಲ ಮಾಸಿಕ ದಿನವನ್ನು ರಜೋದರ್ಶಕ ಅಥವಾ ಮೆನಾರ್ಚೆ ಅಂದು ಕರೆಯಲಾಗುತ್ತದೆ. ಮೊದಲೆಲ್ಲಾ 13 ವರ್ಷ ಮೇಲ್ಪಟ್ಟ ಹೆಣ್ಣುಮಕ್ಕಳು ಸಹಜವಾಗಿ ಮುಟ್ಟಾಗುತ್ತಿದ್ದರು. ಇದೀಗ ಈ ಅವಧಿಯ ಪ್ರಮಾಣ ತೀರ ಕುಸಿದಿದೆ. ಇದಕ್ಕೆ ಕಾರಣ ಬದಲಾದ ನಮ್ಮ ಜೀವನ ಶೈಲಿ. ಹಿಂದೆಲ್ಲಾ ಮಕ್ಕಳು ಗುಣಮಟ್ಟದ ಆಹಾರ ಸೇವಿಸುತ್ತಿದ್ದರು. ಪ್ರತಿನಿತ್ಯ ದೈಹಿಕ ಚಟುವಟಿಕೆ ಸಾಮಾನ್ಯವಾಗಿತ್ತು. ಕೋವಿಡ್‌ ಆಗಮನದಿಂದ ವಿಶ್ವವ್ಯಾಪಿ ಲಾಕ್‌ಡೌನ್‌ ಘೋಷಣೆಯಾಗಿ, ಎಲ್ಲಾ ಶಾಲಾ ಕಾಲೇಜು ಮನೆಯಿಂದಲೇ ಶಿಕ್ಷಣ ಕಲಿಯುವ ವ್ಯವಸ್ಥೆ ಒಗ್ಗಿಕೊಂಡೆವು. ಈ ವ್ಯವಸ್ಥೆ ಮಕ್ಕಳನ್ನು ಸಂಪೂರ್ಣವಾಗಿ ಕಟ್ಟಿಹಾಕಿತು. ಪ್ರತಿನಿತ್ಯ ಮೊಬೈಲ್‌ ಅಥವಾ ಲ್ಯಾಪ್‌ಟಾಪ್‌ ಮುಂದೆ ಕೂರುವ ಮಕ್ಕಳು ದೈಹಿಕ ಚಟುವಟಿಕೆಗೆ ಅವಕಾಶವೇ ಸಿಗಲಿಲ್ಲ. ಜೊತೆಗೆ ಮನೆಯಲ್ಲಿ ನಿಯಮಿತಕ್ಕಿಂತ ಹೆಚ್ಚು ಆಹಾರ, ಜಂಕ್‌ಫುಡ್‌ ಸೇವನೆ ಮಾಡುತ್ತಿದ್ದರಿಂದ ಹೆಣ್ಣು ಮಕ್ಕಳ ದೇಹವು ವಯಸ್ಸಿಗಿಂತ ಮೀರಿ ಬೆಳೆದಿದೆ. ಇದರ ಪರಿಣಾಮ 6-7ನೇ ತರಗತಿ ಮಕ್ಕಳೆಲ್ಲರೂ ಋತುಮತಿಯಾಗುತ್ತಿದ್ದಾರೆ,

ಬೇಗ ಋತುಮತಿಯಾಗಲು ಕಾರಣವೇನು? 
ಬೊಜ್ಜು, ಜಂಕ್ ಫುಡ್ ಸೇವನೆ, ಪ್ರಿಸವೇಟಿವ್‌ನಂಥ ಆಹಾರಗಳ ಸೇವನೆಯಿಂದ ಮಕ್ಕಳ ದೇಹ ಬೇಗ ಸ್ಪಂದಿಸಿ, ಹಾರ್ಮೋನ್ ಬದಲಾವಣೆಯಿಂದ ಮಕ್ಕಳು 8-9ನೇ ವಯಸ್ಸಿಗೇ ಋತುಮತಿಯಾಗುವ ಸಾಧ್ಯತೆ ಇದೆ. ಮೊದಲೆಲ್ಲಾ ಇಂಥ ಪ್ರಕರಣಗಳು ಒಂದೆರಡು ಮಾತ್ರ ಕಂಡು ಬರುತ್ತಿತ್ತು. ಆದರೆ ಈಗ ಬಹುತೇಕ ಹೆಣ್ಣು ಮಕ್ಕಳು ಚಿಕ್ಕವಯಸ್ಸಿಗೆ ಋತುಮತಿಯಾಗುತ್ತಿದ್ದಾರೆ,

ಬೊಜ್ಜು ಪ್ರಮುಖ ಕಾರಣ: 
ವಯಸ್ಸಿಗಿಂತ ಅಧಿಕ ತೂಕ ಹೊಂದಿರುವ ಮಕ್ಕಳು ಅವಧಿಗೂ ಮುನ್ನವೇ ಋತುಮತಿಯಾಗುವ ಸಾಧ್ಯತೆ ಹೆಚ್ಚು. ಮೊದಲೆಲ್ಲಾ ವಯಸ್ಸಿಗೂ ಮೊದಲೇ ಋತುಮತಿಯಾದರೆ, ಅವರಿಗೆ  ಮೆದುಳಿನಲ್ಲಿ ಗಡ್ಡೆ, ಥೈರಾಡ್ ನಂಥ ಪ್ರಮುಖ ಆರೋಗ್ಯ ಸಮಸ್ಯೆ ಕಾರಣವಾಗುತ್ತಿತ್ತು.

ಇತರೆ ಕಾರಣಗಳು:
ಸ್ಟಿರಾಯ್ಡ್ ಕ್ರೀಮ್, ಮಾತ್ರೆಗಳು, ರಾಸಾಯನಿಕಯುಕ್ತ ಶಾಂಪು ಹಾಗೂ ಇತರೆ ಬ್ಯೂಟಿ ಉತ್ಪನ್ನಗಳು ಸಹ ಅಸಹಜ ಋತುಚಕ್ರಕ್ಕೆ ಕಾರಣವಾಗುತ್ತದೆ. ಇತ್ತೀಚೆಗೆ ಬರುವ ಎಲ್ಲಾ ಕ್ರೀಮ್‌ ಹಾಗೂ ರಾಸಾಯನಿಯುಕ್ತ ಪದಾಥಗಳಲ್ಲಿ ಸ್ಟೀರಾಯ್ಡ್‌ ಸಾಮಾನ್ಯವಾಗಿದೆ. ಇದರ ಬಳಕೆಯು ಮಕ್ಕಳ ದೇಹದ ಹಾಗೂ ಹಾರ್ಮೋನ್‌ಗಳ ಮೇಲೆ ಹೆಚ್ಚು ಪರಿಣಾಮ ಬೀರುತ್ತಿದೆ. ಹೀಗಾಗಿ ಮಕ್ಕಳಿಗೆ ಬಳಸುವ ಯಾವುದೇ ಪದಾರ್ಥಗಳಿದ್ದಾರೂ ಸಹ ಅದರ ತಯಾರಿಕೆಗೆ ಬಳಸಿರುವ ವಸ್ತುಗಳ ಬಗ್ಗೆ ಓದಿ ತಿಳಿದುಕೊಂಡ ನಂತರವೇ ಬಳಸುವುದು ಮುಖ್ಯ.

ಪರಿಹಾರವೇನು? 
•ಜಂಕ್‌ಫುಡ್, ಪ್ರಿಸವೇಟಿವ್, ಹೆಚ್ಚು ಕ್ಯಾಲೋರಿ ಇರುವ ಆಹಾರ ಪದಾರ್ಥಗಳ ಸೇವನೆ ಕಡಿಮೆ ಮಾಡುವುದು
•ವ್ಯಾಯಾಮ ಅಥವಾ ಕ್ರೀಡಾ ಚಟುವಟಿಕೆಯಲ್ಲಿ ತೊಡಗಿಕೊಳ್ಳುವುದು
•ವಯಸ್ಸಿಗೂ ಮೀರಿದ ತೂಕ ಹೊಂದಿರದಂತೆ ಮಕ್ಕಳನ್ನ ಬೆಳೆಸುವುದು.
•8ನೇ ವಯಸ್ಸಿಗೆ ಮಗುವಿನ ದೇಹದಲ್ಲಿ ಬದಲಾವಣೆ( ಸ್ತನ ದೊಡ್ಡದಾಗುವುದು, ಕಂಕುಳಲ್ಲಿ ಕೂದಲು ಬೆಳೆಯುವುದು) ಕಂಡು ಬಂದರೆ ಕೂಡಲೇ ವೈದ್ಯರನ್ನು ಭೇಟಿ ಮಾಡಿ ಸಲಹೆ ಪಡೆಯುವುದು

ಪೋಷಕರ ಪಾತ್ರವೇನು?: ಒಂದು ವೇಳೆ ಮಕ್ಕಳು ಅವಧಿಗೂ ಮುನ್ನ ಋತುಮತಿಯಾದರೆ ಪೋಷಕರು ಆತಂಕ ಪಡುವ ಅಗತ್ಯವಿಲ್ಲ. ಮೊದಲ ಆ ಸತ್ಯವನ್ನು ಒಪ್ಪಿಕೊಂಡು, ಮಗುವಿನಲ್ಲೂ ಆತ್ಮಸೈರ್ಯ ತುಂಬಬೇಕು. ದೇಹದಲ್ಲಾಗುತ್ತಿರುವ ಬದಲಾವಣೆ ಬಗ್ಗೆ ಆ ಮಗುವಿಗೆ ತಿಳುವಳಿಕೆ ನೀಡಬೇಕು. ಯಾವುದೇ ಭಯದ ವಾತಾವರಣ ಇಲ್ಲದ ರೀತಿ ನೋಡಿಕೊಳ್ಳಬೇಕು, ಅಗತ್ಯವಿದ್ದರೆ ಆಪ್ತಸಹಾಯಕರನ್ನು ಭೇಟಿ ಮಾಡಬಹುದು.

– ಡಾ. ಗಾಯತ್ರಿ ಕಾಮತ್‌, ಸ್ತ್ರೀರೋಗ ತಜ್ಞೆ, ಫೊರ್ಟಿಸ್‌ ಆಸ್ಪತ್ರೆ 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು