ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾವ ನೋವಿಗೆ ಯಾವ ರೋಗ

Published 22 ಮೇ 2023, 23:30 IST
Last Updated 22 ಮೇ 2023, 23:30 IST
ಅಕ್ಷರ ಗಾತ್ರ

ಡಾ.ವಿನಯ ಶ್ರೀನಿವಾಸ್

ನೋವು – ರೋಗಲಕ್ಷಣಗಳಲ್ಲಿ ಮುಖ್ಯವಾದುದು. ದೇಹದ ಯಾವುದೇ ಭಾಗದಲ್ಲಿ ನೋವು ಕಾಣಿಸಿಕೊಳ್ಳಬಹುದು. ನೋವಿನ ತೀವ್ರತೆ ಮತ್ತು ಬಗೆ ವೈದ್ಯರಿಗೆ ಕಾಯಿಲೆಯ ಬಗ್ಗೆ ಮಹತ್ವದ ಸೂಚನೆಯನ್ನು ಕೊಡುತ್ತದೆ. ನೋವಿನ ಜೊತೆಯಲ್ಲಿಯೇ ಕಾಣಿಸಿಕೊಳ್ಳುವ ಇತರ ಲಕ್ಷಣಗಳೂ ರೋಗಪತ್ತೆಯಲ್ಲಿ ನೆರವಾಗುತ್ತವೆ. ಆದ್ದರಿಂದಲೇ ನಾವು ನಮ್ಮನ್ನು ಬಾಧಿಸುತ್ತಿರುವ ನೋವನ್ನು ವೈದ್ಯರ ಬಳಿ ಸಮರ್ಪಕವಾಗಿ ವಿವರಿಸುವುದು ಮುಖ್ಯ.

ಯಾವ ಕಾಯಿಲೆ, ಎಂತಹ ನೋವು?

  • ವೈರಾಣು ಜ್ವರದಲ್ಲಿ (ವೈರಲ್ ಫಿವರ್) ವ್ಯಕ್ತಿಗೆ ದೇಹದಾದ್ಯಂತ ನೋವು ಕಾಣಿಸಿಕೊಳ್ಳುತ್ತದೆ. ಇದು ಒಮ್ಮೊಮ್ಮೆ ತೀವ್ರವಾಗಿರುವುದೂ ಉಂಟು. ಕೈಕಾಲುಗಳಲ್ಲಿಯೂ ಕಂಡು ಬರುವ ಈ ನೋವಿನಿಂದ ವ್ಯಕ್ತಿ ನಿತ್ಯದ ಕೆಲಸಗಳನ್ನು ಮಾಡಲೂ ನಿತ್ರಾಣನಾಗುತ್ತಾನೆ. ಸಾಮಾನ್ಯವಾಗಿ ಆರರಿಂದ ಏಳು ದಿನಗಳ ಕಾಲ ಬಾಧಿಸುವ ವೈರಾಣು ಜ್ವರದ ನಿಯಂತ್ರಣದೊಂದಿಗೆ ದೈಹಿಕ ನೋವೂ ಶಮನವಾಗುವುದು. ಈ ಸಮಯದಲ್ಲಿ ಸಾಕಷ್ಟು ವಿಶ್ರಾಂತಿ, ನೀರು ಹಾಗೂ ಇತರ ದ್ರವ ರೂಪದ ಪೌಷ್ಟಿಕ ಆಹಾರದ ಸೇವನೆ ಅತ್ಯಗತ್ಯ. ಹೆಚ್ಚಿನ ಸಂದರ್ಭಗಳಲ್ಲಿ ನೋವು ನಿವಾರಕ ಔಷಧಗಳು ಅಗತ್ಯವೆನಿಸುತ್ತವೆ.

  • ಮೂತ್ರಪಿಂಡ ಅಥವಾ ಮೂತ್ರನಾಳಗಳಲ್ಲಿ ಕಲ್ಲುಗಳಾದಾಗ ವಕ್ತಿ ವಿಪರೀತ ನೋವಿನಿಂದ ಬಳಲುತ್ತಾನೆ. ಸೊಂಟದ ಭಾಗದಲ್ಲಿ ಕಾಣಿಸಿಕೊಳ್ಳುವ ಈ ನೋವು ಒಮ್ಮೊಮ್ಮೆ ಕೆಳ ಹೊಟ್ಟೆಗೂ ಹರಿಯುವುದಲ್ಲದೆ, ತೀವ್ರ ಸ್ವರೂಪದ್ದೂ ಆಗಿರುತ್ತದೆ. ಈ ನೋವನ್ನು ತಾತ್ಕಾಲಿಕವಾಗಿ ಶಮನಗೊಳಿಸಲು ನೋವು ನಿವಾರಕ ಚುಚ್ಚುಮದ್ದುಗಳೇ ಬೇಕಾಗುತ್ತವೆ. ಹೊಟ್ಟೆಯ ಸ್ಕ್ಯಾನಿಂಗ್ ಮಾಡಿ, ಕಲ್ಲು ಎಲ್ಲಿದೆ, ಅದರ ಗಾತ್ರ ಎಷ್ಟಿದೆ ಎಂಬುದನ್ನು ಗಮನಿಸಿ ನಂತರ ಸೂಕ್ತ ಚಿಕಿತ್ಸೆಯನ್ನು ಮಾಡಬೇಕಾಗುತ್ತದೆ.

  • ಅಪಾಘಾತಗಳಲ್ಲಿ ಚರ್ಮ ತುಂಡರಸಿ ಅಥವಾ ತರಚಿ ಆಗುವ ಗಾಯಗಳು ವಿಪರೀತ ಉರಿಯಿಂದ ಕೂಡಿರುತ್ತವೆ. ಒಮ್ಮೊಮ್ಮೆ ಅಲ್ಲಿ ರಕ್ತಸ್ರಾವವೂ ಇರುತ್ತದೆ. ಇಂತಹ ಗಾಯಗಳನ್ನು ಸ್ವಚ್ಛಗೊಳಿಸಿ, ಸೂಕ್ತ ಔಷಧಗಳನ್ನು ಲೇಪಿಸಿದಾಗ ಉರಿ ಕಡಿಮೆಯಾಗುವುದು. ಕೆಲವೊಮ್ಮೆ ನೋವು ನಿವಾರಕ ಮಾತ್ರೆಗಳೂ ಬೇಕಾಗಬಹುದು.

  • ದಂತಕ್ಷಯ ಮತ್ತು ದಂತಕುಳಿಯಲ್ಲಿ ಹಲ್ಲುನೋವು ಸಾಮಾನ್ಯ. ಒಮ್ಮೊಮ್ಮೆ ಈ ನೋವು ಕಿವಿನೋವು ಮತ್ತು ತಲೆನೋವಿನ ಸ್ವರೂಪವನ್ನೂ ಪಡೆಯಬಹುದು.

  • ದೀರ್ಘಕಾಲದವರೆಗೆ ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡಬೇಕಾದ ಅನಿವಾರ್ಯತೆಯಿರುವ ಈ ದಿನಗಳಲ್ಲಿ ಬೆನ್ನು ಮತ್ತು ಕುತ್ತಿಗೆಯ ನೋವು ಸಾಮಾನ್ಯ. ಸರಿಯಾದ ಭಂಗಿಯಲ್ಲಿ ಕುಳಿತುಕೊಳ್ಳುವುದು ಮತ್ತು ಆಗಾಗ್ಗೆ ಎದ್ದು ದೇಹವನ್ನು ಸ್ಟ್ರೆಚ್ ಮಾಡುವುದು ನೋವನ್ನು ಕಡಿಮೆ ಮಾಡಲು ಸ್ವಲ್ಪ ಮಟ್ಟಿಗೆ ನೆರವಾಗಬಹುದು.

  • ಯಾವುದೇ ಕಾರಣದಿಂದ ದೇಹದ ಮೂಳೆ ಮುರಿತಕ್ಕೆ ಒಳಗಾದಾಗ, ಆ ಭಾಗದಲ್ಲಿ ತೀವ್ರತರವಾದ ನೋವು ಮತ್ತು ಊತ ಕಾಣಿಸಿಕೊಳ್ಳುತ್ತದೆ. ಪೆಟ್ಟು ಬಿದ್ದ ಭಾಗದಲ್ಲಿ ಈ ರೀತಿ ಊತ ಮತ್ತು ನೋವು ಎರಡೂ ಲಕ್ಷಣಗಳು ಒಟ್ಟಿಗೇ ಇದ್ದು, ಸಹಜ ಚಲನೆ ಇಲ್ಲದಿದ್ದಾಗ ಮತ್ತು ಆ ಭಾಗವು ತನ್ನ ಮೂಲ ಆಕಾರ ಹಾಗೂ ಸ್ಥಿತಿಯನ್ನು ಕಳೆದುಕೊಂಡಾಗ ಅಲ್ಲಿನ ಮೂಳೆ ಮುರಿತಕ್ಕೆ ಒಳಗಾಗಿರುವುದು ಖಚಿತ. ಮುಂದಿನ ಚಿಕಿತ್ಸಾ ಕ್ರಮಕ್ಕಾಗಿ ಎಕ್ಸ್–ರೇ ಪರೀಕ್ಷೆ ಬೇಕಾಗುತ್ತದೆ.

  • ಎದೆಯ ಭಾಗದ ನೋವನ್ನು ಎಂದಿಗೂ ನಿರ್ಲಕ್ಷಿಸಬಾರದು. ಈ ಭಾಗದ ನೋವು ಹೃದಯ, ಶ್ವಾಸಕೋಶ ಮತ್ತು ಎದೆಗೂಡಿನ ಮೂಳೆಗಳಿಗೆ ಸಂಬಂಧಿಸಿದ್ದಾಗಿರುತ್ತದೆ. ಹೃದಯಾಘಾತದ ನೋವು ಎಡಭಾಗದ ಎದೆಯ ಮೇಲೆ ಚುಚ್ಚಿದಂತೆ ಅಥವಾ ಒತ್ತಿದಂತೆ ಭಾಸವಾಗಬಹುದು. ನೋವು ಒಮ್ಮೊಮ್ಮೆ ಎಡತೋಳು, ಬೆನ್ನು, ಕುತ್ತಿಗೆ ಮತ್ತು ಎದೆಯ ಬಲಭಾಗಕ್ಕೂ ಹರಿದಂತೆ ಭಾಸವಾಗಬಹುದು. ಶರೀರ ಬೆವರುವುದು, ವಾಕರಿಕೆ, ವಾಂತಿ, ಉಸಿರಾಡಲು ಕಷ್ಟೆನಿಸುವುದು ಮೊದಲಾದ ಇತರ ಗುಣಲಕ್ಷಣಗಳು ಎದೆಯ ನೋವಿನ ಜೊತೆ ಇದ್ದಾಗ ವ್ಯಕ್ತಿಯನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಬೇಕು.

  • ಪ್ರತಿಬಾರಿ ಉಸಿರಾಡುವಾಗ ಅಥವಾ ಕೆಮ್ಮುವಾಗ ಕಾಣಿಸಿಕೊಳ್ಳುವ ಪಕ್ಕೆ ಅಥವಾ ಎದೆನೋವು ಶ್ವಾಸಕೋಶಗಳ ಅಥವಾ ಮೇಲಿನ ರಕ್ಷಣಾ ಕವಚಗಳಲ್ಲಿನ ಉರಿಯೂತದಿಂದಾಗಿರಬಹುದು. ಶ್ವಾಸಕೋಶಗಳ ರಕ್ಷಣಾ ಪದರಗಳ ನಡುವೆ ಅಸಹಜ ನೀರಿನಾಂಶ ತುಂಬಿಕೊಂಡಾಗಲೂ ಈ ಬಗೆಯ ನೋವು ಸಾಮಾನ್ಯ. ಇಂತಹ ಸಂದರ್ಭಗಳಲ್ಲಿ ವೈದ್ಯರ ಸಲಹೆ ಅತ್ಯಗತ್ಯ.

  • ಮೆಲು ಹೊಟ್ಟೆಯಲ್ಲಿ ಚುಚ್ಚಿದಂತಹ ಅಥವಾ ಉರಿಯಂತಹ ನೋವಿಗೆ ಸಾಮಾನ್ಯವಾಗಿ ಜಠರ ಅಥವಾ ಸಣ್ಣ ಕರುಳುಗಳಲ್ಲಿನ ಉರಿಯೂತವೇ (ಗ್ಯಾಸ್ಟ್ರೈಟಿಸ್) ಕಾರಣ. ಆಹಾದಲ್ಲಿ ಅತಿಯಾದ ಮಸಾಲೆ, ಸಮಯಕ್ಕೆ ಸರಿಯಾಗಿ ಆಹಾರ ಸೇವಿಸದಿರುವುದು, ಕೆಲವು ಔಷಧಗಳ ಸೇವನೆ, ಅತಿಯಾದ ಕಾಫಿ, ಚಹದ ಬಳಕೆ, ಧೂಮಪಾನ, ಮದ್ಯಪಾನ ಮೊದಲಾದುವು ಈ ಜಠರದ ಮತ್ತು ಕರುಳುಗಳ ಉರಿಯೂತಕ್ಕೆ ಕಾರಣ. ಆಹಾರಶೈಲಿ ಮತ್ತು ಜೀವನಶೈಲಿಯಲ್ಲಿನ ಸೂಕ್ತ ಬದಲಾವಣೆ ಈ ಸಮಸ್ಯೆಯನ್ನು ನಿಯಂತ್ರಿಸಲು ಸಹಕಾರಿ.

  • ಕರುಳುಬೇನೆಯಲ್ಲಿ ಕೆಳ ಹೊಟ್ಟೆಯಲ್ಲಿ ನೋವು ಕಾಣಿಸಿಕೊಳ್ಳಬಹುದು. ಕಲುಷಿತ ಆಹಾರಸೇವನೆ ಇದಕ್ಕೆ ಮುಖ್ಯ ಕಾರಣ. ಇಲ್ಲಿ ವ್ಯಕ್ತಿ ಹೊಟ್ಟೆ ಹಿಂಡಿದಂತಹ ನೊವು ಎಂದೂ ಮತ್ತು ಬಿಟ್ಟಿ ಬಿಟ್ಟಿ ಬರುತ್ತದೆ ಎಂದೂ ದೂರಬಹುದು. ನೋವಿನ ಜೊತೆಯಲ್ಲಿ ಭೇದಿ ಮತ್ತು ವಾಂತಿಯೂ ವ್ಯಕ್ತಿಯನ್ನು ಬಾಧಿಸುತ್ತದೆ. ಆ್ಯಂಟಿಬಯೋಟಿಕ್ ಔಷಧಗಳು ನೋವನ್ನು ಶಮನಗೊಳಿಸುತ್ತವೆ. ಸುರಕ್ಷಿತ ಆಹಾರ ಮತ್ತು ನೀರಿನ ಸೇವನೆ ಮತ್ತು ನಿಯಮಿತ ಜಂತುಹುಳು ನಿವಾರಕ ಔಷಧದ ಬಳಕೆ ಇಂತಹ ಹೊಟ್ಟೆನೋವು ಬರದಂತೆ ತಡೆಯಲು ಸಹಕಾರಿ.

  • ಅಪೆಂಡಿಕ್ಸ್ ಉರಿಯೂತದಲ್ಲಿ ವ್ಯಕ್ತಿ ಕೆಳ ಹೊಟ್ಟೆಯ ಬಲಭಾಗದಲ್ಲಿ ನೋವನ್ನು ಅನುಭವಿಸುತ್ತಾನೆ. ಒಮ್ಮೊಮ್ಮೆ ಜ್ವರ, ವಾಂತಿ, ಆಯಾಸದಂತಹ ಲಕ್ಷಣಗಳೂ ಇರಬಹುದು. ಈ ಬಗೆಯ ನೋವು ಪದೇ ಪದೇ ಬಾಧಿಸುತ್ತಿದ್ದರೆ ವೈದ್ಯರ ಸಲಹೆ ಅತ್ಯಗತ್ಯ.

  • ಟಾನ್ಸಿಲ್, ಗಂಟಲಕುಳಿ ಮತ್ತು ಧ್ವನಿಪೆಟ್ಟಿಗೆಯ ಉರಿಯೂತದಲ್ಲಿ ಗಂಟಲು ನೋವು ಸಾಮಾನ್ಯ. ದಿನದಲ್ಲಿ ಎರಡು ಮೂರು ಬಾರಿ ಬೆಚ್ಚಗಿನ ನೀರಿಗೆ ಸ್ವಲ್ಪ ಉಪ್ಪು ಬೆರೆಸಿ ಬಾಯಿಯನ್ನು ಮುಕ್ಕಳಿಸವುದು ನೋವು ಹಾಗೂ ಉರಿಯೂತವನ್ನು ನಿಯಂತ್ರಿಸಬಲ್ಲದು. ಕಡಿಮೆಯಾಗದಿದ್ದಾಗ ಆ್ಯಂಟಿಬಯೋಟಿಕ್ ಔಷಧ ಬೇಕಾಗಬಹುದು.

  • ಜುಮ್ಮೆನಿಸುವ ಮತ್ತು ಮರಗಟ್ಟುವಂತಹ ಸಂವೇದನೆಗೆ ನರಗಳ ಉರಿಯೂತವೇ ಕಾರಣ. ಎರಡೂ ಪಾದಗಳಲ್ಲಿ ಕಂಡು ಬರುವ ಈ ಬಗೆಯ ನೋವು ಒಮ್ಮೊಮ್ಮೆ ಮಧುಮೇಹದ ಧೀರ್ಘಕಾಲದ ಸಂಭವನೀಯ ಪರಿಣಾಮವಿರಬಹುದು. ವೈದ್ಯರ ಸಲಹೆ ಅತ್ಯಗತ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT