ಗುರುವಾರ , ಡಿಸೆಂಬರ್ 5, 2019
20 °C
ಅಧ್ಯಯನ ವರದಿ

ಬೊಜ್ಜು, ವಸಡು ಸವೆತಕ್ಕೆ ಕಾರಣವಾಗಲಿದೆ ಪಾನೀಯ ಸೇವನೆ!

Published:
Updated:

ವಾಷಿಂಗ್ಟನ್‌ ಡಿಸಿ: ಸಕ್ಕರೆ ಅಂಶವುಳ್ಳ ಲಘು ಪಾನೀಯವನ್ನು(ಸಾಫ್ಟ್ ಡ್ರಿಂಕ್ಸ್) ಅತಿಯಾಗಿ ಸೇವಿಸುವುದರಿಂದ ಯುವಜನರಲ್ಲಿ ಸಾಮಾನ್ಯವಾಗಿ ಬೊಜ್ಜು ಹಾಗೂ ವಸಡು ಸವೆತದಂತ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ ಎಂದು ಇತ್ತೀಚಿನ ಅಧ್ಯಯನವೊಂದು ಎಚ್ಚರಿಸಿದೆ.

ಕಿಂಗ್ಸ್‌ ಕಾಲೇಜ್‌ ಲಂಡನ್‌ ಸಂಶೋದಕರು ಹಾಗೂ ವಿಜ್ಞಾನಿಗಳ ತಂಡವು ನಡೆಸಿದ ಕ್ಲಿನಿಕಲ್‌ ಓರಲ್‌ ಇನ್ವೆಸ್ಟಿಗೇಷನ್‌ ಇತ್ತೀಚೆಗೆ ನಿಯತಕಾಲಿಕೆಯೊಂದರಲ್ಲಿ ಪ್ರಕಟವಾಗಿದೆ. ವಸಡು ಸವೆತ ಸಮಸ್ಯೆ ಎದುರಿಸುತ್ತಿರುವವರು ಹಾಗೂ ಸ್ಥೂಲದೇಹಿಗಳನ್ನು ಈ ತಂಡವು ಅಧ್ಯಯನಕ್ಕೆ ಬಳಸಿಕೊಂಡಿತ್ತು. ಈ ವೇಳೆ ಬೊಜ್ಜು ಹಾಗೂ ವಸಡು ಸವೆತವು ಒಂದಕ್ಕೊಂದು ಸಂಬಂಧ ಹೊಂದಿವೆ ಎಂಬುದನ್ನು ಗುರುತಿಸಲಾಗಿದೆ.

ರಾಷ್ಟ್ರೀಯ ಅರೋಗ್ಯ ಮತ್ತು ಪೌಷ್ಟಿಕತೆ ಪರೀಕ್ಷೆಯ ಸಮೀಕ್ಷೆ 2003–04ರ ಅಂಕಿ ಅಂಶಗಳನ್ನು ಸಂಗ್ರಹಿಸಿಕೊಂಡ ತಂಡವು, ಸಮೀಕ್ಷೆಯಲ್ಲಿ ಭಾಗವಹಿಸಿದ್ದ ಅಮೆರಿಕದ ಸುಮಾರು 3,541 ಜನರನ್ನು ಮತ್ತೆ ತಪಾಸಣೆಗೆ ಒಳಪಡಿಸಿದೆ. ಅದರಲ್ಲಿ ರೋಗಿಯ ದೇಹದ ತೂಕ ಹಾಗೂ ವಸಡು ಸವೆತದ ಪ್ರಮಾಣವನ್ನು ಪರೀಕ್ಷಿಸಲಾಗಿದೆ. ಮೊದಲು ಹಲ್ಲಿನಲ್ಲಿ ರಂಧ್ರ ಹಾಗೂ ವಸಡಿನಲ್ಲಿ ಸಡಿಲತೆ ಕಾಣಿಸಿಕೊಳ್ಳುತ್ತದೆ ನಂತರ ಹಲ್ಲು, ವಸಡು ಸವೆತ ಆರಂಭವಾಗುತ್ತದೆ. ಅಂತೆಯೇ ಸ್ಥೂಲದೇಹಿಗಳಲ್ಲಿ ಹೆಚ್ಚಾಗಿ ಗ್ಯಾಸ್ಟ್ರಿಕ್‌ ನಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ ಎನ್ನಲಾಗಿದೆ. 

ಪರೀಕ್ಷೆಯ ಬಳಿಕ, ‘ಪಾನೀಯದಲ್ಲಿರುವ ಕಾರ್ಬನ್‌ ಆಮ್ಲದ ಸ್ವಾಭಾವಿಕ ಗುಣವಿದು. ಆಮ್ಲೀಯ ಪಾನೀಯಗಳು ವಸಡು ಸವೆತದಂತ ಸಮಸ್ಯೆಗಳನ್ನು ಹೆಚ್ಚಿಸುತ್ತವೆ’ ಎಂದು ಡಾ.ಸಾವೈರ್ಸ್‌ ಓ‘ತೂಲೆ ಹೇಳಿದ್ದಾರೆ.

‘ಬೊಜ್ಜು ದೇಹವನ್ನು ಹೊಂದಿರುವವರಿಗೆ ಬಹುಮುಖ್ಯವಾದ ಎಚ್ಚರಿಕೆ ಇದು. ಇಂತಹ ಪಾನೀಯಗಳು ಹಲ್ಲು ಮಾತ್ರವಲ್ಲದೆ ದೇಹಕ್ಕೂ ವಿವಿಧ ರೀತಿಯ ಸಮಸ್ಯೆಗಳನ್ನು ತಂದೊಡ್ಡುತ್ತವೆ. ದಂತ ವೈದ್ಯರಾದ ನಮಗೂ ಇದು ಅತ್ಯಂತ ಮಹತ್ವದ ಸಂದೇಶವಾಗಿದೆ. ನಮ್ಮಲ್ಲಿಗೆ ಬರುವ ರೋಗಿಗಳಲ್ಲಿ ಸ್ಥೂಲಕಾಯ ಮತ್ತು ವಸಡು ಸಮಸ್ಯೆ ಎದುರಿಸುತ್ತಿರುವವರಿಗೆ ಪಾನೀಯ ಸೇವನೆಯು ಕೇವಲ ಹಲ್ಲಿಗಷ್ಟೇ ಅಲ್ಲದೆ ಪೂರ್ಣ ದೇಹದ ಮೇಲೆಯೂ ಪರಿಣಾಮ ಉಂಟು ಮಾಡುತ್ತದೆ ಎಂಬುದನ್ನು ತಿಳಿಸಿಕೊಡಬೇಕಿದೆ’ ಎಂದು ಅವರು ಸಲಹೆ ನೀಡಿದ್ದಾರೆ.

ಕಿಂಗ್ಸ್‌ ಕಾಲೇಜು ಈ ಹಿಂದೆ ನಡೆಸಿದ್ದ ಸಂಶೋದನೆಯಲ್ಲಿ, ಯುರೋಪಿನ ಶೇ.30 ರಷ್ಟು ಯುವಕರು ವಸಡು ಸವೆತದಿಂದ ಬಳಲುತ್ತಿದ್ದಾರೆ ಎಂದು ತಿಳಿಸಿತ್ತು.

ಪ್ರತಿಕ್ರಿಯಿಸಿ (+)