ಗುರುವಾರ , ಆಗಸ್ಟ್ 11, 2022
20 °C

ಹಣ್ಣಿನ ಮೇಲಿರಲಿ ಎಲ್ಲರ ಕಣ್ಣು

ಎಸ್ಸೆಚ್‌ Updated:

ಅಕ್ಷರ ಗಾತ್ರ : | |

Prajavani

ವಿಟಮಿನ್‌, ನಾರಿನಾಂಶ ಹಾಗೂ ಖನಿಜಾಂಶದ ಕಣಜವಾಗಿರುವ ಹಣ್ಣುಗಳನ್ನು ನಿಯಮಿತವಾಗಿ ಸೇವಿಸುವವರ ಸಂಖ್ಯೆ ಕಡಿಮೆ ಇತ್ತು. ಆದರೆ ಕೋವಿಡ್‌–19 ಹೇಗೆ ಸ್ವಚ್ಛತೆ ಬಗ್ಗೆ ಅರಿವು ಮೂಡಿಸಿದೆಯೊ ಹಾಗೆಯೇ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಹಣ್ಣುಗಳ ಕುರಿತೂ ಒಂದಿಷ್ಟು ತಿಳಿವಳಿಕೆ ಮೂಡಿಸಿದೆ.

ಹೆಚ್ಚು ಹಣ್ಣು ತಿನ್ನಿ, ನಿಮ್ಮ ಒಟ್ಟಾರೆ ಆರೋಗ್ಯವನ್ನು ಸುಧಾರಿಸುವುದಲ್ಲದೇ ಕಾಯಿಲೆ ಬೀಳುವುದನ್ನು ತಪ್ಪಿಸುತ್ತದೆ ಎಂದು ವೈದ್ಯರು ಹೇಳುತ್ತಲೇ ಬಂದಿದ್ದಾರೆ. ಆದರೂ ಬೊಜ್ಜು, ಮಧುಮೇಹ, ಹೈಪರ್‌ಟೆನ್ಶನ್‌ ಮತ್ತಿತರ ಕಾಯಿಲೆಗಳಿಗೆ ಮೂಲವಾದ ಜಂಕ್‌ಫುಡ್‌ ಮೇಲಿರುವಷ್ಟು ಪ್ರೀತಿಯನ್ನು ಆರೋಗ್ಯಕ್ಕೆ ಒತ್ತು ನೀಡುವ ಈ ಹಣ್ಣುಗಳ ಮೇಲೆ ತೋರಿಸುವುದು ಕಡಿಮೆಯೇ. ಇದಕ್ಕೆ ಜಿಹ್ವಾ ಚಾಪಲ್ಯವೊ, ತಕ್ಷಣಕ್ಕೆ ಒಂದಿಷ್ಟು ತೃಪ್ತಿಭಾವ ನೀಡುವುದೆಂಬ ಅಂಶವೊ ಕಾರಣವಿರಬಹುದು.

ಆದರೆ ಸದ್ಯಕ್ಕಂತೂ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಹಣ್ಣುಗಳನ್ನು ಅದರಲ್ಲೂ ಸಿಟ್ರಸ್‌ ಅಂಶವಿರುವಂಥವುಗಳನ್ನು ತಿನ್ನುವ ಬಗ್ಗೆ ಒಂದಿಷ್ಟು ಜಾಗೃತಿ ಮೂಡಿರುವುದಂತೂ ನಿಜ. ಸ್ಥಳೀಯವಾಗಿ ದೊರಕುವ, ಆಯಾ ಕಾಲಕ್ಕೆ ಸಿಗುವ ಹಣ್ಣುಗಳನ್ನು ಸೇವಿಸುವುದು ಉತ್ತಮ ಎನ್ನುತ್ತಾರೆ ತಜ್ಞರು.

‘ಹಣ್ಣು ಮತ್ತು ತರಕಾರಿ ಜಾಸ್ತಿಯಿರುವ ಡಯಟ್‌ ಮಧುಮೇಹ, ಹೃದ್ರೋಗ, ಉರಿಯೂತ ಮೊದಲಾದವುಗಳನ್ನು ದೂರ ಇಡುತ್ತದೆ. ಅದರಲ್ಲೂ ಸಿಟ್ರಸ್‌ ಹಾಗೂ ಬೆರಿ ಹಣ್ಣುಗಳು ಬಹಳ ಉಪಯುಕ್ತ’ ಎನ್ನುತ್ತಾರೆ ಪೌಷ್ಟಿಕಾಂಶ ತಜ್ಞೆ ವೈಶಾಲಿ ಎಂ.ಎಸ್‌.

ಪೌಷ್ಟಿಕಾಂಶಗಳು ಹೆಚ್ಚಿರುವ, ಕ್ಯಾಲರಿ ಕಡಿಮೆ ಇರುವ ಹಣ್ಣುಗಳನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ವೈಶಾಲಿ ಅವರ ಪ್ರಕಾರ, ಸಿಟ್ರಸ್‌ ಜಾತಿಗೆ ಸೇರಿದ ಲಿಂಬುವಿನಲ್ಲಿ ಆ್ಯಂಟಿ ಆಕ್ಸಿಡೆಂಟ್‌ ಮತ್ತು ವಿಟಮಿನ್‌ ಸಿ ಜಾಸ್ತಿಯಿರುವುದರಿಂದ ಆರೋಗ್ಯ ಕಾಯ್ದುಕೊಳ್ಳಲು ಬಹಳ ಉಪಯುಕ್ತ. ಭಾರತೀಯರಲ್ಲಿ ಇದು ಸಾಂಪ್ರದಾಯಿಕ ಔಷಧವಾಗಿ ಬಳಕೆಯಾಗುತ್ತದೆ. ಇದರಲ್ಲಿರುವ ಆ್ಯಂಟಿ ಆಕ್ಸಿಡೆಂಟ್‌ ಕಾಯಿಲೆಗೆ ಕಾರಣವಾಗುವ ಫ್ರೀ ರ‍್ಯಾಡಿಕಲ್‌ಗಳನ್ನು ದೂರ ಇಡುತ್ತದೆ. .

‘ವಿಟಮಿನ್‌ ಸಿ ಜೊತೆ ಫೋಲಿಕ್‌ ಆ್ಯಸಿಡ್‌, ಪೋಟ್ಯಾಸಿಯಂ, ಕ್ಯಾಲ್ಸಿಯಂ ಮೊದಲಾದ ಅಂಶಗಳಿದ್ದು, ಒಂದು ಲೋಟ ನೀರಿಗೆ ಒಂದು ಟೀ ಚಮಚ ಲಿಂಬೆ ರಸ ಮತ್ತು ಜೇನುತುಪ್ಪ ಸೇರಿಸಿ ಕುಡಿಯಬಹುದು. ಸಲಾಡ್‌ಗೆ ಹಿಂಡಿಕೊಳ್ಳಬಹುದು. ಆದರೆ ಆ್ಯಸಿಡಿಟಿ ಇರುವವರು ಎಚ್ಚರಿಕೆ ವಹಿಸಬೇಕು’ ಎನ್ನುತ್ತಾರೆ ವೈಶಾಲಿ.

ಸಿಟ್ರಸ್‌ ಜಾತಿಗೆ ಸೇರಿದ ಇನ್ನೊಂದು ಹಣ್ಣೆಂದರೆ ಕಿತ್ತಳೆ. ಇದು ಕೂಡ ವಿಟಮಿನ್‌ ಸಿ ಆಗರವಾಗಿದ್ದು, ಒಂದು ಕಿತ್ತಳೆ ಹಣ್ಣು ತಿಂದರೆ ಶೇ 110ರಷ್ಟು ವಿಟಮಿನ್‌ ಸಿ ನಮ್ಮ ದೇಹಕ್ಕೆ ಲಭ್ಯವಾಗುತ್ತದೆ. ಇದರಲ್ಲೂ ಕೂಡ ಕ್ಯಾಲ್ಸಿಯಂ, ಮ್ಯಾಗ್ನಿಸಿಯಂ, ನಾರಿನಾಂಶ ಹೇರಳವಾಗಿದ್ದು, ಕಾರ್ಬೊಹೈಡ್ರೇಟ್‌ ಅತ್ಯಂತ ಕಡಿಮೆ.

‘ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಳಕ್ಕೆ ಇದರ ಕೊಡುಗೆ ಅಪಾರ. ಕಬ್ಬಿಣದ ಅಂಶವನ್ನು ಹೀರಿಕೊಳ್ಳಲು ಇದು ನೆರವಾಗುತ್ತದೆ. ನಾರಿನಾಂಶವು ಕರುಳಿನ ಆರೋಗ್ಯಕ್ಕೆ ಸಹಕಾರಿ’ ಎನ್ನುತ್ತಾರೆ ಲೈಫ್‌ಸ್ಟೈಲ್ ಕಾಯಿಲೆ ತಜ್ಞ ಡಾ. ತೇಜಸ್‌ ಟಿ.ಎಸ್‌.

ಇನ್ನೊಂದು ಬಗೆಯ ಸಿಟ್ರಸ್‌ ಹಣ್ಣು ಚಕ್ಕೋತ ಅಥವಾ ಗ್ರೇಪ್‌ಫ್ರುಟ್‌. ಉರಿಯೂತಕ್ಕೆ ಕಡಿವಾಣ ಹಾಕುವ ಈ ಹಣ್ಣು ವಿಟಮಿನ್‌ ಹಾಗೂ ಖನಿಜಾಂಶಗಳ ಆಗರ. ಗರ್ಭಿಣಿಯರಿಗೂ ಇದನ್ನು ಸೇವಿಸಲು ಸಲಹೆ ನೀಡಲಾಗುತ್ತದೆ. ‘ಇದರಲ್ಲಿರುವ ಫ್ಲೆವನಾಯ್ಡ್‌ ಕ್ಯಾನ್ಸರ್‌ಗೆ ಕಾರಣವಾಗುವ ಉರಿಯೂತ ಕಡಿಮೆ ಮಾಡುತ್ತದೆ. ಎಲುವಿನ ಆರೋಗ್ಯಕ್ಕೂ ಇದು ಒಳ್ಳೆಯದು’ ಎನ್ನುತ್ತಾರೆ ವೈಶಾಲಿ.

ಇನ್ನೊಂದು ಸೂಪರ್‌ ಫುಡ್‌ ಎಂದರೆ ದಾಳಿಂಬೆ. ಆ್ಯಂಟಿ ಆಕ್ಸಿಡೆಂಟ್‌ ಅಂಶ ಜಾಸ್ತಿ ಇರುವ ಈ ಹಣ್ಣು ಕಾಯಿಲೆಗೆ ಕಾರಣವಾಗುವ ಪ್ರಿ ರ‍್ಯಾಡಿಕಲ್ಸ್‌ಗೆ ತಡೆ ಒಡ್ಡುತ್ತದೆ ಎನ್ನುತ್ತಾರೆ ತಜ್ಞರು. ಎಲುವಿನ ಆರೋಗ್ಯಕ್ಕೆ ಬೇಕಾದ ವಿಟಮಿನ್ ಕೆ ಇದರಲ್ಲಿ ಇರುತ್ತದೆ. ಮೆದುಳಿನ ಆರೋಗ್ಯಕ್ಕೂ ಒಳ್ಳೆಯದು ಎನ್ನುತ್ತಾರೆ ಡಾ. ತೇಜಸ್‌.

ಅನಾನಸ್‌ ಕೂಡ ಉರಿಯೂತ ಕಡಿಮೆ ಮಾಡಿ ಆರೋಗ್ಯಕರ ಜೀವಕೋಶಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಇದು ಸೈನುಸೈಟಿಸ್‌ ಸಮಸ್ಯೆಯನ್ನೂ ಕಡಿಮೆ ಮಾಡಬಲ್ಲದು ಎನ್ನುತ್ತಾರೆ ತಜ್ಞರು. ಎಲುವಿನ ಆರೋಗ್ಯಕ್ಕೆ ಬೇಕಾದ ಮ್ಯಾಂಗನೀಸ್‌ ಕೂಡ ಇದರಲ್ಲಿ ಹೇರಳವಾಗಿರುವುದರಿಂದ ನಿತ್ಯ ಸೇವಿಸಬಹುದು ಎಂಬುದು ಅವರ ಅಂಬೋಣ.

ಸ್ಥಳೀಯವಾಗಿ ಸಿಗುವ ಈ ಹಣ್ಣುಗಳ ಮಧ್ಯೆ ಬಾಳೆಹಣ್ಣನ್ನು ಮರೆಯುವುದಕ್ಕೆ ಸಾಧ್ಯವೇ? ಪೋಟ್ಯಾಸಿಯಂ ಅಂಶ ಜಾಸ್ತಿ ಇರುವ ಈ ಹಣ್ಣು ಹೃದಯದ ಆರೋಗ್ಯಕ್ಕೆ ಒಳ್ಳೆಯದು ಎನ್ನುತ್ತಾರೆ ತಜ್ಞರು. ಪಿತ್ತಕ್ಕೆ ಮತ್ತು ಮಲಬದ್ಧತೆಗೆ ಇದು ಪರಿಹಾರ ನೀಡುತ್ತದೆ.

ಬೆರಿ ಹಣ್ಣು
ಮಲ್‌ಬೆರಿ ಕೂಡ ನಮಗೆ ಪರಿಚಿತವಾದ ಹಣ್ಣು. ರೇಷ್ಮೆ ಹುಳು ಸಾಕಣಿಕೆಗೆ ಅಗತ್ಯವಾದ ಈ ಮಲ್‌ಬೆರಿ ಎಲೆಗಳು ಗೊತ್ತಿರುವಂತಹದ್ದೇ. ಈ ಗಿಡಗಳಲ್ಲಿ ಬೆಳೆಯುವ ಕಡು ನೇರಳೆ (ಕಪ್ಪಾಗಿ ಕಾಣುತ್ತದೆ) ರಂಗಿನ ಹಣ್ಣುಗಳಲ್ಲಿ ಕ್ಯಾಲ್ಸಿಯಂ, ಪೋಟ್ಯಾಸಿಯಂ, ವಿಟಮಿನ್‌ ಸಿ ಹೇರಳವಾಗಿರುತ್ತವೆ. ಇದನ್ನು ಹಾಗೆಯೇ ತಿನ್ನಬಹುದು ಅಥವಾ ಸಲಾಡ್‌ನಲ್ಲಿ ಬಳಸಬಹುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು