ಗುರುವಾರ , ಜನವರಿ 28, 2021
27 °C

ಅಂತರ್ಜಾಲ ಆಟದ ವ್ಯಸನದಿಂದ ಮುಕ್ತಿ ಹೇಗೆ?

ಡಾ. ರವೀಶ್‌ ಬಿ.ಎನ್‌. Updated:

ಅಕ್ಷರ ಗಾತ್ರ : | |

Prajavani

ಆಟದ ವ್ಯಸನಕ್ಕೆ ಒಳಗಾದವರು ದೈಹಿಕ, ಮಾನಸಿಕ, ಭಾವನಾತ್ಮಕ, ಸಾಮಾಜಿಕ, ಆಧ್ಯಾತ್ಮಿಕ ಮತ್ತು ಆರ್ಥಿಕ ಸಂಕಷ್ಟಗಳಿಗೆ ಗುರಿಯಾಗುತ್ತಾರೆ. ಇಂದಿನ ಯುವ ಸಮೂಹವನ್ನು ಇದು ಪಿಡುಗಾಗಿಯೂ ಕಾಡುತ್ತಿದೆ.

ಅಂತರ್ಜಾಲದ ಆಟಗಳು ನಮ್ಮ ಯುವಜನಾಂಗದ ಮೇಲೆ ಭಾರೀ ಪ್ರಮಾಣದ ಪರಿಣಾಮ ಬೀರಿವೆ. ಅಂತರ್ಜಾಲ ಆಟಗಳ ವ್ಯಸನವು ಮಾದಕ ವ್ಯಸನದಂತೆಯೇ ಕಾಡುವುದರಿಂದ ಅದರ ಸಾಮಾಜಿಕ ಮತ್ತು ವೈಯಕ್ತಿಕ ತೊಂದರೆಗಳು ಹಲವು. ಅಂತರ್ಜಾಲದ ಆಟ ಒಂದು ವ್ಯಸನ. ಏಕೆಂದರೆ:

1 ಪದೇಪದೇ ಉಪಯೋಗಿಸಬೇಕು ಅಥವಾ ಆಡಬೇಕು ಎಂಬ ಗೀಳಿಗೆ ಅಂಟಿಕೊಳ್ಳುವಂತೆ ಮಾಡುತ್ತದೆ

2 ಅಂತರ್ಜಾಲದಲ್ಲಿ ಆಟವಾಡುವ ಸಮಯವನ್ನು ಹೆಚ್ಚು ಮಾಡಿಕೊಳ್ಳುತ್ತಾ ಹೋಗುವಂತೆ ಉದ್ದೀಪಿಸುತ್ತದೆ (ಯಾಕೆಂದರೆ ಅದರಿಂದ ಸಿಗುವ ತಾತ್ಕಾಲಿಕ ಮನರಂಜನೆ ಕ್ಷೀಣಿಸುತ್ತಾ ಹೋಗುವುದರಿಂದ ಹಾಗೂ ಅದನ್ನು ಆಡದಿದ್ದಲ್ಲಿ ಮಾನಸಿಕ ಮತ್ತು ದೈಹಿಕ ತಳಮಳಕ್ಕೆ ಒಳಗಾಗುವುದನ್ನು ತಪ್ಪಿಸಿಕೊಳ್ಳಲು)

3 ಎಲ್ಲಾ ತರದ ತೊಂದರೆಗಳನ್ನು (ದೈಹಿಕ, ಮಾನಸಿಕ, ಸಾಮಾಜಿಕ ಇತ್ಯಾದಿ) ಗಣನೆಗೆ ತೆಗೆದುಕೊಳ್ಳದೆ ಅಂತರ್ಜಾಲದಲ್ಲಿ ಆಟವಾಡುವುದನ್ನು  ಮುಂದುವರೆಸುತ್ತಾ ಹೋಗುವಂತೆ ಮಾಡುತ್ತದೆ

ಇದಲ್ಲದೆ ಅಂತರ್ಜಾಲದ ಆಟದ ವ್ಯಸನಕ್ಕೆ ಒಳಗಾದವರಲ್ಲಿ ಕೆಲವು ನಡವಳಿಕೆಗಳನ್ನು ಮನೋವಿಜ್ಞಾನಿಗಳು ಕಂಡಿದ್ದಾರೆ. ಅವುಗಳೆಂದರೆ:

* ಬದಲಾದ ನಿದ್ರಾ ಕ್ರಮ

* ಆಟವಾಡದೇ ಇದ್ದಲ್ಲಿ ಮನಸ್ಸಿಗೆ ಸಮಾಧಾನವಿಲ್ಲ, ಊಟ ತಿಂಡಿ ಅಂತರ್ಜಾಲದ ಸಾಧನಗಳ ಮುಂದೆಯೇ ಮಾಡುವುದು

* ತನ್ನ ಈ ಆಟ ಆಡುವ ನಡವಳಿಕೆಯನ್ನು ಉತ್ಪ್ರೇಕ್ಷೆಯಲ್ಲಿ ಹೊಗಳಿಕೊಳ್ಳುವುದು

* ಅಂತರ್ಜಾಲ ಸಾಧನವನ್ನು ಬೇರ್ಪಡಿಸಿದರೆ ಅಥವಾ ದೂರ ಮಾಡಿದರೆ ಭಾವನಾತ್ಮಕವಾಗಿ ಕ್ಷೋಭೆಗೆ ಒಳಗಾಗುವುದು

* ಅವಶ್ಯಕತೆ ಇಲ್ಲದಿದ್ದರೂ ಆಗಾಗ ಉತ್ತಮ ಸಾಧನಗಳನ್ನು ಕೊಂಡುಕೊಳ್ಳುವುದು

* ಸಮಯದ ಪರಿಜ್ಞಾನ ಇಲ್ಲದೇ ಇರುವುದು (ಹಗಲು, ರಾತ್ರಿ, ಊಟದ ಸಮಯ, ಸ್ನಾನ, ಸ್ವಚ್ಛತೆ ಬಗ್ಗೆ ಗಮನವೇ ಇಲ್ಲದೆ ಇರುವುದು)

* ಸುಳ್ಳು ಹೇಳಿ ಆಟ ಆಡುವುದು

* ಭಾವನೆಗಳ ಏರಿಳಿತ

* ಆಟದಲ್ಲಿ ತೊಡಗಿಸಿಕೊಳ್ಳುವ ಸಮಯವನ್ನು ಹತೋಟಿಗೆ ತರುವಲ್ಲಿ ವಿಫಲರಾಗುವುದು

ಎಷ್ಟು ಪ್ರಮಾಣದಲ್ಲಿ ಅಂತರ್ಜಾಲದಲ್ಲಿ ಆಟ ಆಡುವುದನ್ನು ವ್ಯಸನವೆಂದು ಕರೆಯಬೇಕು ಎಂಬುದರಲ್ಲಿ ಸಾಕಷ್ಟು ಗೊಂದಲಗಳಿವೆ. ಆದರೆ ದಿನಕ್ಕೆ ಎರಡು ಗಂಟೆಗಿಂತ ಜಾಸ್ತಿ ಒಂದು ವಾರದಲ್ಲಿ ನಾಲ್ಕು ದಿನಗಳು ಈ ರೀತಿ ಮಾಡಿದರೆ ಅದನ್ನು ಅಂತರ್ಜಾಲದ ಆಟದ ವ್ಯಸನ ಎಂದು ಕರೆಯುವ ಪರಿಪಾಟವಿದೆ.

ಅಂತರ್ಜಾಲದ ಆಟದಲ್ಲಿ ತಾವು ವ್ಯಸನಿಗಳಾಗಿದ್ದೀರಾ  ಎಂದು ಮೌಲ್ಯಮಾಪನ ಮಾಡಿಕೊಳ್ಳಲು  ಕೆಳಗಿನ ಪ್ರಶ್ನೆಗಳನ್ನು ಹೌದು/ ಇಲ್ಲ ಎಂದು ಉತ್ತರಿಸಿ ನೋಡಿ

1. ಇಡೀ ದಿನ ತಾವು ಆಟ ಆಡಬೇಕೆಂದು ಯೋಚಿಸುತ್ತಿದ್ದೀರಾ?

2. ಅಂದುಕೊಂಡ ಸಮಯಕ್ಕಿಂತ ಹೆಚ್ಚು ಆಟ ಆಡಿದ್ದೀರ?

3. ನಿಜಜೀವನವನ್ನು ಮರೆಯಲು ಆಟ ಆಡಿದ್ದೀರ?

4. ಆಟ ಆಡುವ ಸಮಯ ಕಡಿತಗೊಳಿಸಲು ವಿಫಲರಾಗಿದ್ದೀರಾ?

5. ಆಟ ಆಡಲು ಆಗದಿದ್ದಾಗ ಅಸಮಾಧಾನಗೊಂಡಿರುವಿರಾ?

6. ಮನೆಯವರೊಂದಿಗೆ ಅಥವಾ ಇತರರೊಂದಿಗೆ ನೀವು ಆಟ ಆಡಲು ಉಪಯೋಗಿಸಿದ ಸಮಯದ ಬಗ್ಗೆ ವಾದಿಸಿದ್ದೀರಾ?

7. ಆಟ ಆಡುವ ಕಾರಣದಿಂದ, ದೈನಂದಿನ ಮುಖ್ಯವಾದ ಕೆಲಸವನ್ನು ಮಾಡಲು ಮರೆತಿದ್ದೀರಾ?

ಐದಕ್ಕಿಂತ ಹೆಚ್ಚು ಪ್ರಶ್ನೆಗಳಿಗೆ ನಿಮ್ಮ ಉತ್ತರಗಳು ಹೌದು ಎಂದಿದ್ದರೆ ಮನೋವೈದ್ಯರನ್ನು ಭೇಟಿ ಮಾಡುವುದು ಒಳಿತು.

ಅಂತರ್ಜಾಲದಲ್ಲಿ ಆಟದ ವ್ಯಸನಕ್ಕೆ ಒಳಗಾದವರು ದೈಹಿಕ, ಮಾನಸಿಕ, ಭಾವನಾತ್ಮಕ, ಸಾಮಾಜಿಕ, ಆಧ್ಯಾತ್ಮಿಕ ಮತ್ತು ಆರ್ಥಿಕ ಸಂಕಷ್ಟಗಳಿಗೆ ಗುರಿಯಾಗುತ್ತಾರೆ.

ದೈಹಿಕ ಸಂಕಷ್ಟಗಳು
ಅತಿಯಾಗಿ ಅಂತರ್ಜಾಲ ಸಾಧನಗಳನ್ನು ಬಳಸುವುದರಿಂದ ಕಣ್ಣು ನೋವು, ಕಣ್ಣು ಉರಿ, ಕಿವಿ ನೋವು, ತಲೆ ನೋವು, ಕುತ್ತಿಗೆ ನೋವು, ಸ್ನಾಯು ಸೆಳೆತ, ದೇಹದ ಭಂಗಿಯಲ್ಲಿ ತೊಂದರೆಗಳು, ಸೂರ್ಯನ ಕಿರಣಗಳು ಚರ್ಮಕ್ಕೆ ತಾಗದೆ ವಿಟಮಿನ್ ಡಿ ಕ್ಷೀಣಗೊಂಡು ಮೂಳೆಗಳ ಸಾಂದ್ರತೆ ಕಡಿಮೆ ಆಗುವುದು, ದೇಹದ ಪ್ರತಿರೋಧಕ ಶಕ್ತಿಯನ್ನು ಕಳೆದುಕೊಳ್ಳುವುದು, ಇದರಿಂದ ಸೋಂಕುಗಳು ಜಾಸ್ತಿಯಾಗುವುದು, ದೇಹದಲ್ಲಿ ರಕ್ತ ಚಲನೆಯ ತೊಂದರೆಯಾಗುವುದು, ಹಸಿವು ಕಡಿಮೆ ಆಗುವುದು ಅಥವಾ ಜಾಸ್ತಿಯಾಗಿ ದೇಹದ ತೂಕದಲ್ಲಿ ಏರುಪೇರಾಗುವುದು ಈ ರೀತಿ ಹತ್ತು ಹಲವು ದೈಹಿಕ ತೊಂದರೆಗಳು ಬರುತ್ತವೆ.

ಮಾನಸಿಕ ಸಂಕಷ್ಟಗಳು
ದೈಹಿಕ ತೊಂದರೆಗಳಂತೆ ಅನೇಕ ಮಾನಸಿಕ ತೊಂದರೆಗಳಿಗೂ ಅಂತರ್ಜಾಲ ಆಟದಲ್ಲಿ ತೊಡಗುವ ಮಕ್ಕಳು ಮತ್ತು ವ್ಯಕ್ತಿಗಳು ಒಳಗಾಗುವರು.ಆತಂಕಗೊಳ್ಳುವುದು ಅದರಲ್ಲಿ ಮುಖ್ಯವಾದುದು. ಇದು ಅತಿ ಸಾಮಾನ್ಯವಾದ ತೊಂದರೆ. ಸದಾಕಾಲ ಹೇಗೆ ಆಟವಾಡಲಿ ಎನ್ನುವ ಆತಂಕ ಕಾಡುತ್ತಿರುತ್ತದೆ. ಎಲ್ಲಿ ಅಂತರ್ಜಾಲದ ಸಂಪರ್ಕವನ್ನು ಕಡಿದುಕೊಳ್ಳುವೆನೋ ಎನ್ನುವ ಆತಂಕದಿಂದ (ಪ್ಯಾನಿಕ್ ಅಟ್ಯಾಕ್) ಹೃದಯ ಬಡಿತ ಜಾಸ್ತಿಯಾಗಿ ಬೆವರುವುದು, ಉಸಿರಾಟದಲ್ಲಿ ವೇಗ ಹೆಚ್ಚಾಗುವುದು, ಸಾಮಾಜಿಕ ಸಂಪರ್ಕಕ್ಕೆ ಹೋಗಲು ಭಯಪಡುವುದು, ನೈಜ ಸ್ನೇಹ ಬೆಳೆಸುವುದರಲ್ಲಿ ಹಿಂಜರಿಯುವುದು ಇಂತಹ ಸಮಸ್ಯೆಗಳಿಂದ ಬಳಲುವರು.

ಬೇಗನೆ ಆಸಕ್ತಿ ಕಳೆದುಕೊಳ್ಳುವುದು, ಅನ್ಯ ಚಟುವಟಿಕೆಗಳಲ್ಲಿ ನಿರಾಸಕ್ತಿ ತಾಳುವುದು, ಒಂಟಿತನ ಅನುಭವಿಸುವುದು, ಕೋಪ, ಸಿಟ್ಟು ಮಾಡಿಕೊಳ್ಳುವುದು, ಜೀವನದ ಮೇಲೆ ಹಿಡಿತ ಕಳೆದುಕೊಳ್ಳುವುದು, ಅಸಹಾಯಕತೆಯಿಂದ ಆತ್ಮಹತ್ಯೆ ಯೋಚನೆ ಮಾಡುವುದು, ಹತಾಶ ಮನೋಭಾವದಿಂದ ಕಣ್ಣೀರಿಡುವುದು –ಇಂತಹ ಖಿನ್ನತೆಯ ಲಕ್ಷಣಗಳು ಅಂತರ್ಜಾಲದ ಆಟದ ವ್ಯಸನಿಗಳಲ್ಲಿ ಸಾಮಾನ್ಯ.

ಮತಿಭ್ರಮಣೆ
ಇದು ತೀವ್ರತರವಾದ ಮಾನಸಿಕ ತೊಂದರೆ. ಇದು ಅಂತರ್ಜಾಲ ಆಟದ ವ್ಯಸನದ ಗಾಢತೆಯನ್ನು ತೋರಿಸುತ್ತದೆ. ಹಗಲುಗನಸು, ನೈಜ ಜೀವನಕ್ಕೂ ಕಲ್ಪನೆಗೂ ವ್ಯತ್ಯಾಸ ತಿಳಿಯದೇ ಇರುವುದು, ತನಗೆ ಆಗಿರುವ ತೊಂದರೆಯ ಅರಿವನ್ನು ಸಹ ಕಳೆದುಕೊಳ್ಳುವುದು ಇದರ ಲಕ್ಷಣಗಳು.

ಮೆದುಳಿನಲ್ಲಿ ಬದಲಾವಣೆಗಳು
ದೀರ್ಘಕಾಲ ಅಂತರ್ಜಾಲದ ಆಟದಲ್ಲಿ ತೊಡಗಿಸಿಕೊಳ್ಳುವುದರಿಂದ ಮೆದುಳಿನ ರಾಸಾಯನಿಕ ಕ್ರಿಯೆಗಳಲ್ಲಿ ಬಹಳಷ್ಟು ಬದಲಾವಣೆಗಳು ಆಗುತ್ತವೆ. ಇದರಿಂದ ನೆನಪಿನ ಶಕ್ತಿ ಕುಂದುವುದು, ಏಕಾಗ್ರತೆಯಲ್ಲಿ ತೊಂದರೆ ಕಾಣಿಸಿಕೊಳ್ಳುವುದು, ಅನುಭೂತಿ, ಸಹಾನುಭೂತಿ ಇನ್ನಿತರ ಮೆದುಳಿನ ಶಕ್ತಿಗಳನ್ನು (ಮನುಷ್ಯರಲ್ಲಿ ಕಂಡುಬರುವಂತಹ) ಕಳೆದುಕೊಳ್ಳುವುದು ಆಕ್ರಮಣಶೀಲತೆಯ ಅಪಾಯ ಮತ್ತು ಆಘಾತಕಾರಿ ಕ್ರಿಯಾಶೀಲತೆಯು ಕಂಡುಬರುವುದು.

ಚಿಕಿತ್ಸೆ
ವಿಶ್ವ ಆರೋಗ್ಯ ಸಂಸ್ಥೆಯು ಅಂತರ್ಜಾಲ ಸಂಬಂಧಿತ ವ್ಯಸನಗಳನ್ನು ಮಾನಸಿಕ ಕಾಯಿಲೆ ಎಂದು ಪರಿಗಣಿಸಿದೆ. ಹೇಗೆ ಮಾದಕ ವಸ್ತು ವ್ಯಸನಿಗಳಿಗೆ ಮನೋವೈದ್ಯರು  ಚಿಕಿತ್ಸೆಯನ್ನು ನೀಡುತ್ತಾರೆಯೋ ಇಂತಹ ತೊಂದರೆಗಳಿಗೂ ಚಿಕಿತ್ಸೆಯನ್ನು ಔಷಧ ಮತ್ತು ಔಷಧೇತರ ಅಂದರೆ ಮನೋಸಾಮಾಜಿಕ ಚಿಕಿತ್ಸೆ ಮೂಲಕ ನೀಡುತ್ತಾರೆ. ಇದಕ್ಕೆಂದೇ ಬಿಹೇವಿಯರಲ್ ಅಡಿಕ್ಷನ್ ಕ್ಲಿನಿಕ್ಸ್ ತೆರೆಯಬೇಕೆಂದು ಸರ್ಕಾರಗಳಿಗೆ ಸಲಹೆಯನ್ನೂ ವಿಶ್ವ ಆರೋಗ್ಯ ಸಂಸ್ಥೆ ನೀಡಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು