ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಹ ಇಂದ್ರಿಯ ಮನಸ್ಸುಗಳ ಸಂಯೋಗ

Last Updated 7 ಜೂನ್ 2021, 19:30 IST
ಅಕ್ಷರ ಗಾತ್ರ

ಶರೀರ, ಇಂದ್ರಿಯ, ಮನಸ್ಸು ಮತ್ತು ಆತ್ಮಗಳ ಸಂಯೋಗವೇ ಈ ದೇಹ. ಇದರಲ್ಲಿ ಒಂದೊಂದು ವಿಕಾರ ಹೊಂದಿದರೇ ಜೀವನ ಕಷ್ಟ, ಇನ್ನು ಶರೀರ, ಇಂದ್ರಿಯ, ಮನಸ್ಸು - ಮೂರನ್ನೂ ಒಟ್ಟಿಗೆ ಆವರಿಸುವ ಕೋವಿಡ್‌ನ ಪರಿಣಾಮಗಳೇ ಇಂದು ನಾವು ಕಾಣುತ್ತಿರುವ ನಿತ್ಯದುಃಖ. ಈ ವ್ಯಾಧಿ ಹಾಗೂ ಅದರ ಅಡ್ಡಪರಿಣಾಮಗಳನ್ನು ತಡೆಯಬೇಕಾದರೆ ಶರೀರ, ಇಂದ್ರಿಯ ಮತ್ತು ಮನಸ್ಸು – ಮೂರೂ ಸಮತೋಲನದಲ್ಲಿರುವಂತೆ ನೋಡಿಕೊಳ್ಳಬೇಕು.

ಶರೀರವನ್ನು ಕಾಪಾಡಿಕೊಳ್ಳಲು ಶುದ್ಧವಾದ ಆಹಾರಸೇವನೆ ಮುಖ್ಯ; ಆಹಾರ ತಯಾರಿಕೆ ಮತ್ತು ಸೇವಿಸುವ ಸ್ಥಾನ, ವಿಧಾನ ಕೂಡ ಶುದ್ಧವಾಗಿರಬೇಕು. ಬಿಸಿ, ಬೇಯಿಸಿದ ಆಹಾರಸೇವನೆ, ಜೀರ್ಣಿಸಲು ಸುಲಭವಾಗುವ ಆಹಾರಗಳು, ಪ್ರಾದೇಶಿಕ ಆಹಾರಸೇವನೆ ಯಾವಾಗಲೂ ಹಿತಕರವಾದದ್ದು. ನಿತ್ಯವೂ ಆಹಾರದಲ್ಲಿ, ಸ್ವಲ್ಪ ಪ್ರಮಾಣವಾದರೂ ತುಪ್ಪವನ್ನು ಬಳಸುವುದು ಒಳ್ಳೆಯದು. ವಿಪರೀತವಾಗಿ ಕೊಬ್ಬು ಮತ್ತು ಜಿಡ್ಡಿನಿಂದ ಕೂಡಿರುವ ಆಹಾರ, ಪ್ರಾದೇಶಿಕ ಸಾಂಪ್ರದಾಯಿಕವಲ್ಲದ ಆಹಾರ, ತಂಪಾದ/ತಂಪು ಪೆಟ್ಟಿಗೆಯಲ್ಲಿಟ್ಟ ಆಹಾರ, ಯಾವುದೇ ಆಹಾರವಾದರೂ ಒಳ್ಳೆಯದು ಎಂದು ಅತಿಯಾಗಿ ನಿರಂತರವಾಗಿ ಸೇವಿಸಬಾರದು. ಕೋವಿಡ್‌ ಗುಣವಾದ ನಂತರ, ತಿಂಗಳಾದರೂ ಪಥ್ಯವನ್ನು ಪಾಲಿಸಿದರೆ ಜೀರ್ಣಶಕ್ತಿಯು ಸಮತೊಲನೆಗೆ ಬಂದು ಆಡ್ಡಪರಿಣಾಮಗಳಿಂದ ದೂರವಿರಬಹುದು.

ಇಂದ್ರಿಯಗಳು ಪ್ರಧಾನವಾಗಿ ಐದು. ಕೊರೊನಾದ/ಔಷಧಿಯ ಆಡ್ಡಪರಿಣಾಮಗಳು ಐದೂ ಇಂದ್ರಿಯಗಳ ಮೇಲೂ ಆಗುತ್ತದೆ. ಹಾಗಾಗಿ ಇವುಗಳನ್ನು ರಕ್ಷಿಸುವ ಭಾರ ದೊಡ್ಡದೇ.

ನಿತ್ಯವೂ ಬೆಚ್ಚಗಿರುವ ತ್ರಿಫಲಾ ಕಷಾಯದಿಂದ ದಿನಕ್ಕೆರಡು ಬಾರಿ (eye cupಗೆ ಹಾಕಿ) ಕಣ್ಣನ್ನು ತೊಳೆಯುವುದು. ಗುಲಾಬಿಜಲ (rose water)ದಲ್ಲಿ ಬಟ್ಟೆ ಅಥವಾ ಹತ್ತಿಯನ್ನು ಅದ್ದಿ ಕಣ್ಣಿನ ಮೇಲೆ 10 ನಿಮಿಷ ದಿನಕ್ಕೆರಡು ಬಾರಿ ಇರಿಸಿಕೊಳ್ಳುವುದು, ಕಣ್ಣಿನ ರೆಪ್ಪೆಗಳಿಗೆ ಕೊಬ್ಬರಿ ಅಥವಾ ಎಳ್ಳೆಣ್ಣೆಯನ್ನು ಹಚ್ಚುವುದು. ಈ ರೀತಿ ನಿತ್ಯವೂ ಮಾಡುವುದರಿಂದ ಕಣ್ಣಿಗೆ ಯಾವುದೇ ವೈರಾಣು ಅಥವಾ ಶಿಲೀಂದ್ರಗಳ ತೊಂದರೆ ನಿವಾರಣೆಯಾಗುತ್ತದೆ.

ಮೂಗಿನ ರಕ್ಷಣೆಗೆ ಮೂಗಿನ ಹೊಳ್ಳೆಗಳ ಒಳಗೆ ನಿತ್ಯವೂ ತುಪ್ಪ ಅಥವಾ ಕೊಬ್ಬರಿ ಎಣ್ಣೆಯನ್ನು ಬಳಸಬಹುದು; ಬಜೆ ಬೇರು ಅಥವಾ ಅರಿಶಿನದ ಬೇರನ್ನು ತುಪ್ಪದಲ್ಲಿ ನೆನೆಸಿ ಅದರ ತುದಿಗೆ ಬೆಂಕಿ ಹಚ್ಚಿ ಅದರಲ್ಲಿ ಅದರಿಂದ ಬರುವ ಹೊಗೆಯನ್ನು ಆಘ್ರಾಣಿಸುವುದು ಮೂಗಿನಲ್ಲಿರುವ ಕಫವನ್ನು ಕರಗಿಸುತ್ತದೆ, ಯಾವುದೇ ಸೋಂಕು ಬಾರದಂತೆಯೂ ತಡೆಗಟ್ಟುತ್ತದೆ. ನಾಲಿಗೆ, ಬಾಯಿಯ ರಕ್ಷಣೆಗೆ ಒಂದು ಚಮಚದಷ್ಟು ಎಳ್ಳೆಣ್ಣೆ ಅಥವಾ ಕೊಬ್ಬರಿ ಎಣ್ಣೆಯನ್ನು ಬಾಯಿಗೆ ಹಾಕಿ ದಿನಕ್ಕೆರಡು ಬಾರಿ ಬಾಯಿ ಮುಕ್ಕಳಿಸಬೇಕು.

ಚರ್ಮ ಮತ್ತು ಕಿವಿಗಳಿಗೆ, ಹೊಟ್ಟೆ ಖಾಲಿ ಇರುವಾಗ, ಎಣ್ಣೆಹಚ್ಚಿ ಶಾಖ ಕೊಡುವುದು, ಬಿಸಿನೀರಿನ ಸ್ನಾನವನ್ನು ಮಾಡುವುದರಿಂದ ಚರ್ಮವನ್ನು ಸೋಂಕಿನಿಂದ ಕಾಪಾಡಿಕೊಳ್ಳಬಹುದು. ಆಹಾರವನ್ನು ಸೇವಿಸಿ ಎಣ್ಣೆ ಹಚ್ಚುವುದು ಸೋಂಕಿಗೆ ಆಹ್ವಾನ ನೀಡಿದಂತೆ.

ಒಳ್ಳೆಯದು ಎಂದು ಅತಿಯಾಗಿ ಶುಂಠಿ–ಮೆಣಸಿನ ಕಷಾಯವನ್ನು ಕುಡಿಯುವುದು ಹೊಟ್ಟೆ ಉರಿ, ಅಮ್ಲಪಿತ್ತಗಳನ್ನು ಹೆಚ್ಚಿಸಿ ಅದೇ ವ್ಯಾಧಿಕ್ಷಮತೆಯನ್ನು ಕಡಿಮೆ ಮಾಡುತ್ತದೆ. ಎಲ್ಲರಿಗೂ ತಿಳಿದಿರುವಂತೆ, ಗಾಯವಾಗಿ ರಕ್ತ ಬರುತ್ತಿರುವಾಗ ಅರಿಶಿನವನ್ನು ಹಾಕಿದರೆ ರಕ್ತ ಹೆಪ್ಪುಗಟ್ಟುತ್ತದೆ, ಜೊತೆಗೆ ಗಾಯಕ್ಕೆ ಸೋಂಕಾಗದಂತೆ ಕಾಪಾಡುತ್ತದೆ. ಸೋಂಕನ್ನು ತಡೆಗಟ್ಟಬಹುದು ಎಂದು ಅತಿಯಾಗಿ ಅರಿಶಿನ ಸೇವಿಸಿದರೆ ಅದು ಸೋಂಕಿತರಲ್ಲಿ ರಕ್ತ ಹೆಪ್ಪುಗಟ್ಟುವಿಕೆಯನ್ನು ಹೆಚ್ಚುಮಾಡುವ ಸಾಧ್ಯತೆಯೂ ಇರುತ್ತದೆ. ಆದ್ದರಿಂದ ಔಷಧವಾಗಿ ಏನನ್ನೋ ಸೇವಿಸಬೇಕಾದರೂ ತಜ್ಞರ ಸಲಹೆಯನ್ನು ಪಡೆದು ಸೇವಿಸಿದರೆ ನಮ್ಮ ಆರೋಗ್ಯವನ್ನು ನಾವು ಕಾಪಾಡಿಕೊಳ್ಳಬಹುದು; ರೋಗ ಬಾರದಂತೆಯೂ ತಡೆಗಟ್ಟಬಹುದು.

ಸೋಂಕಿನಿಂದ ಭಯಭೀತರಾಗಿ, ಮಾಧ್ಯಮಗಳಲ್ಲಿ ಬರುವ ಎಲ್ಲಾ ವಿಧವಾದ ಚಿಕಿತ್ಸಾಕ್ರಮಗಳನ್ನು ವಿವೇಚನೆ ಇಲ್ಲದೆ, ಉಪಯೋಗಿಸುವುದು ಸರಿಯಲ್ಲ. ಸಿದ್ಧಗಂಗಾಮಠದ ಶ್ರೀ ಶಿವಕುಮಾರಸ್ವಾಮಿಗಳು ಹೇಳಿದಂತೆ ‘ರೋಗ ಬಂದವರೆಲ್ಲಾ ಸಾಯುವುದಿಲ್ಲ. ಸಾಯಲು ರೋಗ ಬರಲೇಬೇಕೆಂದೇನೂ ಇಲ್ಲ’ ಎನ್ನುವ ಮಾತನ್ನು ನೆನಪಿಟ್ಟುಕೊಂಡರೆ ರೋಗಭಯ/ಸಾವಿನ ಭಯದಿಂದ ವಿಮುಕ್ತರಾಗಬಹುದು.

ಯಾವುದೇ ಸಮಸ್ಯೆಗಾದರೂ ಪರಿಹಾರವಿರುತ್ತದೆ. ಸಮಸ್ಯೆಯನ್ನು ಎದುರಿಸಿ ಗೆಲ್ಲಬೇಕೇ ಹೊರತು ಸಮಸ್ಯೆಯಿಂದ ಓಡಿಹೋಗುವುದರಿಂದ ಸಮಸ್ಯೆ ನಮ್ಮನ್ನು ಅಟ್ಟಿಸಿಕೊಂಡು ಬರುತ್ತದೆ. ಆದ್ದರಿಂದ ದೈಹಿಕವಾಗಿ ಜ್ವರ, ಕೆಮ್ಮು, ನೆಗಡಿ, ಮೈ–ಕೈ ನೋವು ಅಥವಾ ಯಾವುದೇ ಸಂದರ್ಭದಲ್ಲಿ ಸೋಂಕಿತರೊಂದಿಗೆ ಸಂಪರ್ಕಕ್ಕೆ ಬಂದಿದ್ದರೆ ಪರೀಕ್ಷೆ ಮಾಡಿಸಿಕೊಳ್ಳಬೇಕು. ಸೋಂಕಿತರಾಗಿದ್ದರೆ ತಜ್ಞರ ಸಲಹೆಯಂತೆ ನಡೆದುಕೊಂಡರೆ ತಮ್ಮ ಆರೋಗ್ಯವನ್ನು ಕಾಪಾಡುವುದರ ಜೊತೆಗೆ ಸಮಾಜದಲ್ಲಿ ಸೋಂಕು ಹರಡುವುದನ್ನು ತಡೆಗಟ್ಟಬಹುದು. ಆದರೆ ಉದಾಸೀನ ಮಾಡಿ ಕೊನೆಗೆ ವೈದ್ಯರನ್ನೋ ವೈದ್ಯವಿದ್ಯೆಯನ್ನೋ ಸರ್ಕಾರವನ್ನೋ ಬೈಯ್ಯುವುದರಿಂದ ಯಾವುದೇ ಲಾಭವಿಲ್ಲ.

(ಲೇಖಕಿ: ಆಯುರ್ವೇದವೈದ್ಯೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT