ಸೋಮವಾರ, ಮಾರ್ಚ್ 1, 2021
24 °C

ಏನಾದ್ರೂ ಕೇಳ್ಬೋದು: ಅತ್ತೆ–ಸೊಸೆ ಜಗಳದಿಂದ ನೆಮ್ಮದಿ ಇಲ್ಲವೆ?

ನಡಹಳ್ಳಿ ವಸಂತ್‌ Updated:

ಅಕ್ಷರ ಗಾತ್ರ : | |

Prajavani

ವಿವಾಹಿತ ಶಿಕ್ಷಕ. ಮದುವೆಯಾದ ಮೊದಲು ಮೂರು ವರ್ಷ ಪೋಷಕರ ಜೊತೆಗಿದ್ದೆವು. ನಂತರ ಅತ್ತೆ–ಸೊಸೆಯರ ಭಿನ್ನಾಭಿಪ್ರಾಯದಿಂದಾಗಿ ಅದೇ ಮನೆಯ ಮಹಡಿಯಲ್ಲಿ ಪ್ರತ್ಯೇಕವಾಗಿ ಇದ್ದೇವೆ. ಅಂದಿನಿಂದ ನನ್ನ ಪೋಷಕರು ಮತ್ತು ತಂಗಿಯರು ನನ್ನನ್ನು ಕಡೆಗಣಿಸುತ್ತಿದ್ದಾರೆ. ಮನೆಯಲ್ಲಿ ಶುಭಕಾರ್ಯಗಳನ್ನು ನನ್ನನ್ನು ಬಿಟ್ಟು ನಡೆಸುತ್ತಿದ್ದಾರೆ. ನೆಮ್ಮದಿ ಕಳೆದುಕೊಂಡು ನನಗೆ ಏಕಾಗ್ರತೆ ಸಾಧ್ಯವಾಗುತ್ತಿಲ್ಲ. ನಿದ್ರೆಯೂ ಸರಿಯಾಗಿ ಬರದೆ ಯಾವಾಗಲೂ ಅದೇ ಯೋಚನೆಯಲ್ಲಿರುತ್ತೇನೆ. ಪರಿಹಾರವೇನು?
–ಅಬ್ದುಲ್‌, ಊರಿನ ಹೆಸರಿಲ್ಲ.

ಉತ್ತರ: ಪೋಷಕರು ನಿಮ್ಮನ್ನು ಕಡೆಗಣಿಸುವುದರ ಮೂಲಕ ನಿಮ್ಮ ಬಗೆಗಿನ ಅತೃಪ್ತಿಯನ್ನು ಸೂಚಿಸುತ್ತಿದ್ದಾರಲ್ಲವೇ? ಅವರಿಗೇಕೆ ನಿಮ್ಮ ಕುರಿತು ಸಿಟ್ಟು, ಬೇಸರವಿದೆ ಎಂದು ನಿಮಗೆ ಗೊತ್ತಿದೆ. ಅತ್ತೆ– ಸೊಸೆಯರ ಭಿನ್ನಾಭಿಪ್ರಾಯದಲ್ಲಿ ನೀವು ಹೇಗೆ ಪೋಷಕರಿಂದ ದೂರವಾದಿರಿ ಎಂದು ಯೋಚಿಸಿದ್ದೀರಾ? ಭಿನ್ನಾಭಿಪ್ರಾಯಗಳನ್ನು ಅವರಿಬ್ಬರಿಗೆ ತಮ್ಮೊಳಗೇ ನಿಭಾಯಿಸುವ ಜವಾಬ್ದಾರಿ ಕೊಟ್ಟು ನೀವು ಇಬ್ಬರ ಜೊತೆಗೂ ಸಮಾನವಾದ ಪ್ರೀತಿ, ಆತ್ಮೀಯತೆಯನ್ನು ಉಳಿಸಿಕೊಳ್ಳುವ ಸಾಧ್ಯತೆ ಇತ್ತಲ್ಲವೇ? ಅವರಿಬ್ಬರಿಂದ ಬರುತ್ತಿದ್ದ ಒತ್ತಡಗಳಿಗೆ ಒಳಗಾಗಿ ಇಬ್ಬರೂ ನಿಮಗೆ ಸಮಾನವಾಗಿ ಪ್ರೀತಿಪಾತ್ರರು ಎನ್ನುವುದನ್ನು ಇಬ್ಬರಿಗೂ ತಿಳಿಸಲಾಗಲಿಲ್ಲ. ಈಗ ಅಂತಹ ಪ್ರಯತ್ನವನ್ನು ಶುರುಮಾಡಿ ಪೋಷಕರ ಜೊತೆ ಹೊಸದಾಗಿ ಸಂಬಂಧವನ್ನು ರೂಪಿಸಿಕೊಳ್ಳಿ. ‘ಅತ್ತೆ– ಸೊಸೆಯರ ಜಗಳದಲ್ಲಿ ನಾನು ತಲೆಹಾಕುವುದಿಲ್ಲ, ನನಗೆ ಇಬ್ಬರ ಕುರಿತಾಗಿ ಸಮಾನವಾದ ಕಾಳಜಿ ಪ್ರೀತಿಗಳಿವೆ’ ಎನ್ನುವುದನ್ನು ನಿಮ್ಮ ಮಾತು ಮತ್ತು ವರ್ತನೆಗಳಲ್ಲಿ ತೋರಿಸಿ. ಮತ್ತೊಬ್ಬರ ವಿರುದ್ಧ ನಿಮ್ಮನ್ನು ಎತ್ತಿಕಟ್ಟುವ ಇಬ್ಬರ ಪ್ರಯತ್ನಗಳಿಗೂ ತಡೆಹಾಕಿ. ನಿಧಾನವಾಗಿ ಸಂಬಂಧ ಸರಿಯಾಗುತ್ತದೆ.

**
23 ವರ್ಷದ ವಿದ್ಯಾರ್ಥಿನಿ. ಚಿಕ್ಕವಳಿದ್ದಾಗ ಅಮ್ಮ ತೀರಿಹೋದರು. ಆಗಿನಿಂದ ಮನೆಯವರಿಂದ ಪ್ರೀತಿ ಸಿಕ್ಕಿಲ್ಲ. 3 ವರ್ಷದಿಂದ ಒಬ್ಬನನ್ನು ಪ್ರೀತಿಸುತ್ತಿದ್ದೇನೆ. ನನ್ನನ್ನು ಇಷ್ಟಪಡುತ್ತಿದ್ದ ಅವರು ಇತ್ತೀಚೆಗೆ ಸರಿಯಾಗಿ ಮಾತನಾಡದೆ ದೂರ ಮಾಡುತ್ತಿದ್ದಾರೆ. ಏಕೆಂದು ಗೊತ್ತಾಗದೆ ಮಾನಸಿಕವಾಗಿ ನೊಂದಿದ್ದೇನೆ. ಸಹಾಯ ಮಾಡಿ.
–ರಂಜಿತಾ, ಊರಿನ ಹೆಸರಿಲ್ಲ.

ಉತ್ತರ: ಪ್ರೀತಿಯನ್ನು ಬಯಸುವುದು ಎಲ್ಲರಿಗೂ ಸಹಜ. ಬಾಲ್ಯದಲ್ಲಿಯೇ ಅಮ್ಮನನ್ನು ಕಳೆದುಕೊಂಡಿರುವ ನೀವು ಮತ್ತೊಮ್ಮೆ ಪ್ರೀತಿಯನ್ನು ಕಳೆದುಕೊಳ್ಳುವ ಆತಂಕದಲ್ಲಿ ನೋವುಣ್ಣುತ್ತಿದ್ದೀರಿ. ಪೋಷಕರ ಪ್ರೀತಿ ಸಹಜವಾಗಿ ಬೇಡಿಕೆಯಿಲ್ಲದೆ ಸಿಗಬಹುದಾದದ್ದು. ಆದರೆ ವಯಸ್ಕರ ನಡುವಿನ ಪ್ರೀತಿ ಇಬ್ಬರ ಅಗತ್ಯವಾಗಿರಬೇಕು ಮತ್ತು ಸಹಜವಾಗಿ ಮೂಡಬೇಕು. ನೀವು ಇಷ್ಟಪಡುತ್ತಿರುವವರು ನಿಮ್ಮನ್ನು ದೂರಮಾಡುವ ಮೂಲಕ ತಮ್ಮ ಅತೃಪ್ತಿಯನ್ನು ಸೂಚಿಸುತ್ತಿರಬಹುದು. ನೇರವಾಗಿ ಅವರನ್ನೇಕೆ ಕೇಳಬಾರದು? ಅವರ ಕನಸು, ಆಸಕ್ತಿ ಮತ್ತು ನಿರೀಕ್ಷೆಗಳು ನಿಮಗೆ ಹೊಂದಲಾರವು ಅನ್ನಿಸಿದರೆ ಇಬ್ಬರೂ ಗೌರವಯುತವಾಗಿ ದೂರವಾಗಬಹುದು. ಇದರಿಂದ ನೋವಾಗಬಹುದಾದರೂ ನಿಮ್ಮ ಬಗೆಗೆ ನಿಮಗೂ ಸ್ಪಷ್ಟತೆ ದೊರೆಯುತ್ತದೆ. ಮುಂದೆ ಗೌರವಯುತವಾಗಿ ಪ್ರೀತಿಯನ್ನು ಪಡೆಯುವ ಕುರಿತು ನಿಮಗೆ ಆತ್ಮವಿಶ್ವಾಸವೂ ಮೂಡುತ್ತದೆ.   

**
33ರ ಪುರುಷ. ಕೆಲವು ತಿಂಗಳುಗಳಿಂದ ಏನನ್ನಾದರೂ ಬರೆಯುವಾಗ ಕೈ ಬಿಗಿಯಾಗಿ ಬರೆಯುವುದಕ್ಕೆ ಕಷ್ಟವಾಗುತ್ತದೆ ಮತ್ತು ಕೈನಡುಗುತ್ತದೆ. ಇದಕ್ಕೆ ಪರಿಹಾರವೇನು?
–ಅರುಣ್‌, ಊರಿನ ಹೆಸರಿಲ್ಲ.

ಉತ್ತರ: ನಿಮ್ಮ ತೊಂದರೆಗಳು ಇತ್ತೀಚೆಗೆ ಪ್ರಾರಂಭವಾಗಿರುವುದರಿಂದ ದೈಹಿಕ ಕಾರಣಗಳಿರಬಹುದು. ಮೊದಲು ನರರೋಗತಜ್ಞರ ಸಲಹೆ ಪಡೆಯಿರಿ. ಜೊತೆಗೆ ಬರೆಯುವುವಾಗ ಸ್ವಲ್ಪ ನಿಧಾನಿಸಿ ದೀರ್ಘವಾಗಿ ಉಸಿರಾಡುತ್ತಾ ದೇಹ ಮತ್ತು ಕೈಗಳನ್ನು ಸಡಿಲಬಿಡಿ. ಹಾಗೆಯೇ ಮನಸ್ಸಿನಲ್ಲಿ ನಡೆಯುತ್ತಿರುವ ಹೋರಾಟವನ್ನು ಗಮನಿಸಿ. ಆತಂಕ, ಹಿಂಜರಿಕೆ, ಭಯ, ಗೊಂದಲಗಳು ಕಾಡುತ್ತಿದ್ದರೆ ಮನೋಚಿಕಿತ್ಸಕರನ್ನು ಭೇಟಿಯಾಗಿ.

**
ನಾನೊಂದು ಹುಡುಗಿಯನ್ನು ಪ್ರೀತಿಸುತ್ತಿದ್ದೇನೆ. ಮೊದಲು ಯಾವುದೇ ಕಾಮದಾಸೆ ಇರದಿದ್ದ ನನಗೆ ಈಗ ಅವಳ ಗುಪ್ತಾಂಗಗಳನ್ನು ನೋಡಬೇಕೆನಿಸುತ್ತದೆ. ಅವಳು ಕಳಿಸುವ ಫೋಟೋಗಳಿಂದ ಮನಸ್ಸು ಕೆರಳಿ ಓದಿಗೆ ತೊಂದರೆಯಾಗುತ್ತಿದೆ. ನನ್ನ ವಿದ್ಯಾಭ್ಯಾಸದ ಕನಸಿಗಾಗಿ ಅವಳನ್ನು ಮರೆಯಬೇಕೆನ್ನಿಸಿದರೂ ಅವಳಿಗೆ ಮೋಸಮಾಡುತ್ತಿದ್ದೇನೆ ಎನ್ನಿಸುತ್ತದೆ. ಪರಿಹಾರವೇನು?
–ಹೆಸರು, ಊರು ತಿಳಿಸಿಲ್ಲ

ಓದಿಗೆ ತೊಂದರೆಯಾಗುತ್ತದೆ ಎನ್ನುವ ಕಾರಣಕ್ಕಾಗಿ ಪ್ರಕೃತಿಯ ವಿರುದ್ಧ ಹೋರಾಡುವ ಪ್ರಯತ್ನದಲ್ಲಿದ್ದೀರಿ. ಕಾಮದ ಆಸಕ್ತಿ ಮನುಷ್ಯ ಸಹಜವಾದದ್ದು. ನೀವು ಪ್ರೀತಿಸುವವಳ ಲೈಂಗಿಕ ಅಂಗಾಂಗಗಳನ್ನು ನೋಡಲು ಇಷ್ಟಪಡುವುದು ಕಾಮಾಸಕ್ತಿಯ ಒಂದು ಪ್ರಮುಖ ಭಾಗ. ನಿಮ್ಮ ಬಯಕೆ ಪ್ರಾಕೃತಿಕವಾದದ್ದು. ಅದಕ್ಕೆ ಕಾಲ ಸನ್ನಿಹಿತವಾಗಿಲ್ಲ. ಹಾಗಾಗಿ ಪಾಪಪ್ರಜ್ಞೆಯಿಲ್ಲದೆ ಕಲ್ಪನೆಯಲ್ಲಿ ಆನಂದಿಸಿ. ತಂದಿರುವ ಹೊಸಬಟ್ಟೆಯನ್ನು ಹಬ್ಬಕ್ಕೆ ತೊಡಲು ಕಾಯ್ದಿರಿಸುವಂತೆ ನಿಮ್ಮ ಬಯಕೆಗಳನ್ನು ಮದುವೆಯಾಗುವವರೆಗೆ ಸುರಕ್ಷಿತವಾಗಿ ಕಾಯ್ದಿರಿಸಿ. ಮೊಬೈಲ್‌ನಲ್ಲಿ ಚಿತ್ರಗಳನ್ನು ತರಿಸಿಕೊಳ್ಳುವಾಗ ಮೂರನೆಯವರ ಕೈಸೇರಬಹುದು. ಅಂತಹ ಅಪಾಯಕಾರಿ ಪ್ರಯೋಗಗಳಿಂದ ದೂರವಿರಿ.  

ಏನಾದ್ರೂ ಕೇಳ್ಬೋದು

ಹದಿಹರೆಯದ ಮತ್ತು ದಾಂಪತ್ಯದ ಲೈಂಗಿಕ ಸಮಸ್ಯೆ, ಮಾನಸಿಕ ಸಮಸ್ಯೆ ಕುರಿತು ಪ್ರಶ್ನೆಗಳನ್ನು ನಮಗೆ ಕಳುಹಿಸಿ. ನಿಮ್ಮ ಪ್ರಶ್ನೆಗಳಿಗೆ ಮನೋಚಿಕಿತ್ಸಕ ನಡಹಳ್ಳಿ ವಸಂತ್‌ ಉತ್ತರಿಸಲಿದ್ದಾರೆ. bhoomika@prajavani.co.in

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು