ಶನಿವಾರ, ಅಕ್ಟೋಬರ್ 24, 2020
22 °C
ಕೊರೊನಾ ಒಂದಿಷ್ಟು ತಿಳಿಯೋಣ

‘ಸುಳ್ಳುಗಳನ್ನು ನಂಬಬೇಡಿ, ವೈದ್ಯರ ಮಾತಿಗೆ ಕಿವಿಕೊಡಿ’

ಡಾ. ಬಾಲಚಂದ್ರ ಜಿ. Updated:

ಅಕ್ಷರ ಗಾತ್ರ : | |

Prajavani

‘ಈವರೆಗೆ ಮಾನವ ಕುಲವನ್ನು ಕಾಡಿರುವ ಅನೇಕ ಸಾಂಕ್ರಾಮಿಕ ರೋಗಗಳಿಗಿಂತ ಕೊರೊನಾ ದೊಡ್ಡದೇನೂ ಅಲ್ಲ. ಕೊರೊನಾ ಚಿಕಿತ್ಸೆಯ ವಿಚಾರದಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುವ ಕಟ್ಟುಕತೆಗಳನ್ನು ನಂಬಲೇಬೇಡಿ. ವೈದ್ಯರ ಮಾತನ್ನು ನಂಬಿ, ಸರಿಯಾಗಿ ಪಾಲಿಸುವುದೊಂದೇ ಇದಕ್ಕಿರುವ ಪರಿಹಾರ’ ಎನ್ನುತ್ತಾರೆ ಬಿಜಿಎಸ್‌ ಗ್ಲೋಬಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮೆಡಿಕಲ್ ಸೈನ್ಸ್‌ನ ಮೆಡಿಸಿನ್ ವಿಭಾಗದ ಮುಖ್ಯಸ್ಥ ಡಾ. ಬಾಲಚಂದ್ರ ಜಿ.

‘ಕೊರೊನಾಕ್ಕಿಂತ ಭೀಕರ ರೋಗಗಳು ಈಗಲೂ ಮನುಷ್ಯರನ್ನು ಕಾಡುತ್ತಿವೆ. ಈ ಸಾಂಕ್ರಾಮಿಕ ರೋಗವನ್ನು ಧೈರ್ಯ, ಉತ್ತಮ ಜೀವನಶೈಲಿ ಮತ್ತು ಮುನ್ನೆಚ್ಚರಿಕೆಯಿಂದ ಮಾತ್ರ ಎದುರಿಸಲು ಸಾಧ್ಯವಿದೆ. ಕೊರೊನಾ ರೋಗವನ್ನು ಸಂಪೂರ್ಣ ಗುಣಪಡಿಸಬಲ್ಲ ಯಾವುದೇ ಔಷಧಿ ಈವರೆಗೂ ಹೊರಬಂದಿಲ್ಲ. ಇನ್ನೂ ಆರು ತಿಂಗಳ ಕಾಲ ಇದೇ ಸ್ಥಿತಿ ಇರಬಹುದು. ಮಾಸ್ಕ್‌ ಮತ್ತು ಸ್ಯಾನಿಟೈಸರ್‌ ಬಳಕೆ, ಪದೇ ಪದೇ ಸೋಪಿನಿಂದ ಕೈ ತೊಳೆಯುವುದು ಹಾಗೂ ಅಂತರ ಕಾಯ್ದುಕೊಳ್ಳುವುದರಿಂದ ಮಾತ್ರ ಕೊರೊನಾ ಸೋಂಕಿನಿಂದ ದೂರ ಇರಲು ಸಾಧ್ಯವಿದೆ’ ಎಂದು ಸಲಹೆ ನೀಡಿದರು.

ಸೋಂಕಿತರ ಸಂಪರ್ಕಕ್ಕೆ ಬಂದ ಎಲ್ಲರಿಗೂ ಕೊರೊನಾ ಬರುತ್ತದೆ ಎಂಬುದು ಇನ್ನೂ ಖಾತರಿಯಾಗಿಲ್ಲ. ಝಿಂಕ್‌ ಮತ್ತು ವಿಟಮಿನ್‌ ಮಾತ್ರೆಗಳು, ಕಷಾಯ ಸೇವಿಸಿದವರಿಗೆ ಕೊರೊನಾ ಸೋಂಕು ಬರುವುದೇ ಇಲ್ಲ ಎಂಬುದು ತಪ್ಪು ಕಲ್ಪನೆ. ಈ ಮಾತ್ರೆ, ಔಷಧಿಗಳು ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಅನುಕೂಲವಾಗುತ್ತವೆ. ಕೊರೊನಾ ಸೋಂಕಿನ ಲಕ್ಷಣಗಳು ಕಂಡುಬಂದರೆ ಸ್ವಯಂ ವೈದ್ಯರಾಗಲು ಯತ್ನಿಸಬಾರದು. ತಪ್ಪು ಸಲಹೆಗಳನ್ನು ಆಧರಿಸಿ ಅತಿಯಾದ ಮಸಾಲೆ ಪದಾರ್ಥ ಅಥವಾ ಎಂದೂ ಬಳಸದ ಆಹಾರ ಸೇವನೆ ಮಾಡುವುದು ಕೂಡ ಒಳಿತಲ್ಲ ಎಂದು ಹೇಳಿದರು.

ಮದ್ಯಪಾನ ಮತ್ತು ಧೂಮಪಾನದಿಂದ ದೂರವಿದ್ದರೆ ಶೇ 50ರಷ್ಟು ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಆರೋಗ್ಯವಂತ ವ್ಯಕ್ತಿಗಳು ದಿನಕ್ಕೆ ನಾಲ್ಕು ಲೀಟರ್‌ನಷ್ಟು ಬಿಸಿ ನೀರು ಸೇವಿಸಬೇಕು. ಸೋಂಕಿತರಾಗಿ ಕ್ವಾರಂಟೈನ್‌ನಲ್ಲಿದ್ದರೂ ಕನಿಷ್ಠ ಎಂಟು ಗಂಟೆ ನಿದ್ದೆ ಮಾಡಬೇಕು. ವಿಟಮಿನ್‌ ಮತ್ತು ಪ್ರೋಟೀನ್‌ಯುಕ್ತ ಆಹಾರ ಸೇವಿಸಬೇಕು ಎಂದರು.

ಕೊರೊನಾ ಸೋಂಕು ತಗುಲಿದವರೆಲ್ಲ ಸಾಯುತ್ತಾರೆ ಎಂಬ ಭಯ ಬೇಡ. 60 ವರ್ಷಕ್ಕಿಂತ ಹೆಚ್ಚು ವಯಸ್ಸಾದವರು, ಮೂತ್ರಪಿಂಡದ ತೊಂದರೆ, ಹೃದ್ರೋಗ, ಮಧುಮೇಹ, ಅತಿಯಾದ ರಕ್ತದೊತ್ತಡ, ಕ್ಯಾನ್ಸರ್‌, ಎಚ್‌ಐವಿ, ಕ್ಷಯ ರೋಗದಂತಹ ಗಂಭೀರ ಸಮಸ್ಯೆಗಳಿದ್ದು, ದುರ್ಬಲ ದೇಹ ಹೊಂದಿರುವವರು ಸೋಂಕಿತರಾಗದಂತೆ ಎಚ್ಚರ ವಹಿಸಲೇಬೇಕು. ಸೋಂಕಿನ ಯಾವುದೇ ಲಕ್ಷಣಗಳು ಕಂಡುಬಂದರೂ ವೈದ್ಯರನ್ನು ಸಂಪರ್ಕಿಸಿಯೇ ಮುಂದುವರಿಯುವುದು ಒಳಿತು ಎಂದು ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು