ಬುಧವಾರ, ಆಗಸ್ಟ್ 10, 2022
21 °C

ಮನೋಮಯ: ಸಾಂಗತ್ಯದೊಳು ಜಗಳವೆ, ದೌರ್ಜನ್ಯವೆ?

ರಶ್ಮಿ ಎಸ್‌ Updated:

ಅಕ್ಷರ ಗಾತ್ರ : | |

Prajavani

ಕಿರುಬೆರಳತುದಿಗೆ ತಾಕುವ ಸ್ಪರ್ಶ, ಮೈಮೇಲೆಲ್ಲ ಸುಖದ ಮೊಗ್ಗುಗಳು ಅರಳಲಾರಂಭಿಸುತ್ತವೆ. ಬೆರಳುಗಳೊಂದಿಗೆ ಬೆಸೆದ ಬೆರಳುಗಳಲ್ಲಿ ಬಾಂಧವ್ಯವೊಂದು ಸುಭದ್ರವಾಗತೊಡಗುತ್ತದೆ. ಈ ವ್ಯಕ್ತಿಯೊಂದಿಗೆ ಬದುಕು ಸುರಕ್ಷಿತ ಎಂಬ ಭಾವವೇ ಸಾಕು, ಅಲ್ಲಿ ಒಗ್ಗೂಡಲು. 

ಒಂದು ಸಾಂಗತ್ಯ ಸುರಕ್ಷೆಯನ್ನು ಸಂಭ್ರಮಿಸುವುದೇ ಪರಸ್ಪರ ಒಪ್ಪಿಸಿಕೊಳ್ಳುವಲ್ಲಿ. ಪರಸ್ಪರ ಗೌರವಿಸುವಲ್ಲಿ. ಆದರೆ ಭಾರತೀಯರಲ್ಲಿ ಮದುವೆಯಾದ ಪ್ರತಿ ಮೂವರಲ್ಲಿ ಒಬ್ಬ ಮಹಿಳೆ ಸಾಂಗತ್ಯ ದೌರ್ಜನ್ಯಕ್ಕೆ ಒಳಗಾಗಿರ್ತಾಳೆ. ಅದು ಸಾಂಗತ್ಯವನ್ನು ಸಂಭ್ರಮಿಸುವಾಗಲೇ.  ದೈಹಿಕವಾಗಿ, ಮಾನಸಿಕವಾಗಿ ಹಾಗೂ ಬೌದ್ಧಿಕವಾಗಿಯೂ ದೌರ್ಜನ್ಯವೆಸಗುವುದು ಸಾಮಾನ್ಯವಾಗಿದೆ. ಬದಲಾಗುತ್ತಿರುವ ಬಾಂಧವ್ಯಗಳ ಸ್ವರೂಪದಲ್ಲಿ ಪುರುಷಾಹಂಕಾರವು ಮಹಿಳೆಯರನ್ನು ನಿಯಂತ್ರಿಸಲು ಈ ದೌರ್ಜನ್ಯಕ್ಕೆ ಮುಂದಾಗುತ್ತಾರೆ. ಕೆಲವೊಮ್ಮೆ ವೈಯಕ್ತಿಕವಾಗಿ ನಿಯಂತ್ರಣ ಕಳೆದುಕೊಂಡೆ ಎಂಬ ಸಮಜಾಯಿಷಿ ನೀಡಿದರೂ ಅದು ನಿಯಂತ್ರಣ ಕಳೆದುಕೊಳ್ಳುವುದಲ್ಲ, ನಿಯಂತ್ರಣ ಸಾಧಿಸುವ ವರ್ತನೆಯಾಗಿಯೇ ಇರುತ್ತದೆ. 

ಏನಿದು ಸಾಂಗತ್ಯದೊಳ ದೌರ್ಜನ್ಯ: ಒಂದು ಬಾಂಧವ್ಯ ಗಟ್ಟಿಯಾಗಲು ಮಿಲನ ಸದಾಕಾಲ ತುಡಿಯುವ, ಮಿಡಿಯುವ ಪ್ರಕ್ರಿಯೆಯಾಗಿದೆ. ಇಲ್ಲಿ ಸಣ್ಣದೊಂದು ಸ್ಪರ್ಶ, ಅಪ್ಪುಗೆ, ಹಿಡಿತ, ಹೃದಯದ ಮಿಡಿತಕ್ಕೆ ಕಿವಿಗೊಡುವುದು ಎಲ್ಲವೂ ಒಂದು ಪ್ರಕ್ರಿಯೆಯೇ. ಅಂತಿಮವಾಗಿ ಪ್ರತಿ ಹಂತದಲ್ಲಿಯೂ ಜೊತೆಗಿರುವೆ ಎಂಬ ಧೈರ್ಯ ನೀಡುವ ಪ್ರಕ್ರಿಯೆಯೇ ಆಗಿರುತ್ತದೆ. ಪರಸ್ಪರ ಮೆಚ್ಚುಗೆ, ಕಿವಿಯೊಳು ಹೆಸರು ಉಚ್ಚರಿಸಿ, ಉನ್ಮತ್ತರಾಗುವುದೂ ಸುರಕ್ಷಿತಭಾವವನ್ನೇ ನೀಡುವ ಪ್ರಕ್ರಿಯೆ. ಇಲ್ಲಿ ಯಾವುದೂ ಕ್ರಿಯೆಯಾಗಿರುವುದಿಲ್ಲ. ಆದರೆ ದೌರ್ಜನ್ಯ ಇರುವ ಸಾಂಗತ್ಯದೊಳು ಮಿಲನವೆಂಬುದು ಕೇವಲ ಒಂದು ಅಗತ್ಯದ ಕ್ರಿಯೆ ಆಗಿರುತ್ತದೆ. ಈ ಸಂದರ್ಭದಲ್ಲಿಯೂ ಸಂಗಾತಿಯನ್ನು ಹೀಗಳೆಯುವುದು, ದೂಷಿಸುವುದು, ತುಚ್ಛಭಾವದಿಂದ ಕಾಣುವುದು, ಅಲಕ್ಷಿಸುವುದು, ಇಂಥ ಎಲ್ಲವೂ ಒಂದಲ್ಲ ಒಂದು ರೀತಿಯ ಕ್ರಿಯೆಗಳಾಗಿ ಹೊರಹೊಮ್ಮುತ್ತವೆ.
 
ದೈಹಿಕವಾಗಿ ಹಿಂಸಿಸದಿದ್ದರೂ ಇವು ಸಂಗಾತಿಯನ್ನು ನೋಯಿಸುವುದರಲ್ಲಿ, ಅವಮಾನದ ಕುಲುಮೆಯಲ್ಲಿ ನೂಕುವುದಂತೂ ನಿಜ. ಇವೆಲ್ಲವೂ ದೌರ್ಜನ್ಯವೆಂಬುದೂ ಅರಿವಾಗದಂತೆ ಜರುಗುತ್ತಲೇ ಇರುತ್ತವೆ ಎನ್ನುತ್ತಾರೆ ಮನೋಚಿಕಿತ್ಸಕರಾದ ಡಾ.ರತ್ನಾ ಇಸಾಕ್‌. 
ಪಿತೃಪ್ರಧಾನ ವ್ಯವಸ್ಥೆಯಲ್ಲಿ ಪುರುಷರು ತಮ್ಮ ಸಂಗಾತಿಯನ್ನು ಆಳುವ, ತಮಗೆ ಒಳಪಡುವ ಸ್ವಾಮ್ಯವನ್ನು ಸಾಧಿಸುವುದು ಅತಿ ಅಗತ್ಯ ಎಂಬ ಮನೋಭೂಮಿಕೆಯಲ್ಲಿ ಬೆಳೆದಿರುತ್ತಾರೆ. ಬದಲಾಗುತ್ತಿರುವ ಕಾಲದಲ್ಲಿ ಮಹಿಳೆಯರ ಸ್ವತಂತ್ರ ಮನೋಭಾವ, ಆರ್ಥಿಕ ಸ್ವಾವಲಂಬನೆ, ತೀರ್ಮಾನ ತೆಗೆದುಕೊಳ್ಳುವ ಶಕ್ತಿ, ಇವೆಲ್ಲವೂ ಒಳಗೊಳಗೆ ಸಹಿಸದ ಕುಲುಮೆಯನ್ನು ಹೊತ್ತಿಸಿರುತ್ತವೆ. 
ಹೀಗಳೆಯುವ ಮಾತಿನ ಕಿಡಿಗಳು ಆಚೆ ಬರುವುದು ಇಂಥದ್ದೇ ಒಂದು ಸಂಕೀರ್ಣ ಮನಃಸ್ಥಿತಿಯ ಬೆಂಕಿಯಿಂದ. 

ಸಂಗಾತಿಯೊಂದಿಗೆ ಇರುವಾಗಲೇ, ನೀನೊಳ್ಳೆಯ ಹೆಂಡ್ತಿಯಲ್ಲ, ನೀನೊಳ್ಳೆಯ ಅಮ್ಮನಲ್ಲ, ನಿನ್ನ ಗಳಿಕೆ ಮಣ್ಣಿನ ಸಮಾನ, ನಿನ್ನ ಮನೆಯವರು ಸರಿ ಇಲ್ಲ, ನೀನು ಮಂಕುಬೂದಿ ಎರಚಿದೆ, ನನ್ನ ದೌರ್ಭಾಗ್ಯ, ನಿನ್ನಂಥವಳೊಟ್ಟಿಗೆ ಬದುಕಬೇಕಾಗಿದೆ ಹೀಗೆ, ಹೀಗಳೆಯುತ್ತಲೇ ಆತ್ಮಗೌರವವನ್ನು ಅಲ್ಲಗಳೆಯುತ್ತ ಬರುತ್ತಾರೆ. ಇದು ಮೊದಮೊದಲು ಪರಸ್ಪರ ಮೂದಲಿಕೆಯಲ್ಲಿ ಮುಗಿಯತೊಡಗುತ್ತವೆ. ನಂತರ ಜಗಳಗಳಲ್ಲಿ, ಮತ್ತೆ ವಾದಗಳಲ್ಲಿ. ಇವು ಎಲ್ಲವೂ ಸಂಗಾತಿಗೆ ಅಗತ್ಯವಿರುವ ಸ್ವಾಮ್ಯ ಸುರಕ್ಷಿತ ಭಾವ ನೀಡದಿದ್ದಲ್ಲಿ, ಹೊಡೆಯುವುದು, ಹಿಂಸೆ ಮಾಡುವುದು, ಅತಿಕ್ರಮಿಸುವುದು, ಸಂಗಾತಿಯ ಒಪ್ಪಿಗೆ ಇಲ್ಲದಿದ್ದಲ್ಲೂ ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಳ್ಳುವಂತೆ ಒತ್ತಾಯಿಸುವುದು ಅತಿಯಾಗಿ ಕಾಮಿಸುವುದು, ಇಲ್ಲವೇ ಕಾಮದ ಉತ್ತುಂಗದಲ್ಲಿದ್ದಾಗ ದೈಹಿಕವಾಗಿ ಹಿಂಸಿಸುವುದು, ನಂತರ ಅಲಕ್ಷಿಸುವುದು... ಹೀಗೆ ಇವೆಲ್ಲವನ್ನೂ ಸಾಂಗತ್ಯದೊಳಗಿನ ದೌರ್ಜನ್ಯವೆಂದೇ ಕರೆಯಲಾಗುತ್ತದೆ.

ಯಾಕೆ ಇವು ಬೆಳಕಿಗೆ ಬರುವುದಿಲ್ಲ? 

ಒಂದು ಸಾಂಗತ್ಯದಲ್ಲಿ ಪ್ರೀತಿ ಒಡಮೂಡುವುದೇ ಪರಸ್ಪರ ಮೆಚ್ಚುಗೆಯಿಂದ. ಮೂದಲಿಕೆಯನ್ನು ಎದುರಿಸುವಂತಾದಾಗ ಏನಾಗುತ್ತದೆ? ಸಾಮಾನ್ಯವಾಗಿ ಮಹಿಳೆಯರು ಇಂಥ ಪರಿಸ್ಥಿತಿಯನ್ನು ಎದುರಿಸುವುದು ಅಥವಾ ಸ್ವೀಕರಿಸುವುದೇ ಸವಾಲಿನದ್ದಾಗಿರುತ್ತದೆ. ಮೂದಲಿಕೆಗಳು ಅತಿಕ್ರಮಣವಾಗಿ ಬದಲಾದಾಗ ಮಿದುಳು ಇಂಥವನ್ನು ಸ್ವೀಕರಿಸುವುದನ್ನೇ ನಿಲ್ಲಿಸುತ್ತದೆ. ಆಗ ಅದಕ್ಕೆ ಪ್ರತಿಕ್ರಿಯಿಸುವುದು ಹೇಗೆ ಎಂಬುದು ಅರ್ಥವೇ ಆಗುವುದಿಲ್ಲ. ’ಯೋಚನಾಸ್ತಂಭನ ಸ್ಥಿತಿ’ ಎಂದು ಕರೆಯಬಹುದು. ಇಂಥ ಪರಿಸ್ಥಿತಿ ಮೊದಲ ಸಲ ಎದುರಿಸಿದಾಗ ಮಹಿಳೆಯರು ಏನೂತೋಚದ ಅಯೋಮಯ ಸ್ಥಿತಿಯನ್ನು ಅನುಭವಿಸುತ್ತಾರೆ. ಯಾರಿಗೂ ಹೇಳುವಂತಿಲ್ಲ, ಇದನ್ನು ಅನುಭವಿಸುವಂತಿಲ್ಲ. ಹಿಂಗಾದಾಗ ಮಿದುಳು ಮುಂದೆ ಇಂಥ ಪರಿಸ್ಥತಿ ಎದುರಾಗದಂಥ ಸನ್ನಿವೇಶಗಳಿಗೆ ಸಿದ್ಧವಾಗತೊಡಗುತ್ತದೆ. ಆ ಕ್ಷಣದ ಆತಂಕಗಳಿಂದ ದೂರವಿರಲೆಂದೇ ಮತ್ತೆ ಮತ್ತೆ ಆ ವಿಷಯದ ಬಗ್ಗೆ ಯೋಚಿಸುವುದೇ ಇಲ್ಲ. ಮಾತನಾಡುವುದು ಕಡಿಮೆಯಾಗುತ್ತದೆ. 

ಪ್ರತಿಮಿಲನವೂ ಬಾಂಧವ್ಯವನ್ನು ಸರಿಪಡಿಸಬಹುದು ಎನ್ನುವ ನಿರೀಕ್ಷೆಯೊಂದಿಗೆ ಆರಂಭವಾದರೆ, ಪ್ರತಿಸಲವೂ ನನ್ನದೇ ಏನೋ ತಪ್ಪಿದೆ ಎಂಬ ಅಪರಾಧಿ ಭಾವದೊಂದಿಗೆ ಕೊನೆಗೊಳ್ಳಲಾರಂಭಿಸುತ್ತದೆ. ಈ ಸ್ವ ಹೀಯಾಳಿಕೆಯ ಹಂತದಲ್ಲಿರುವಾಗ ಆತ್ಮಾವಲೋಕನಕ್ಕೆ ಇಳಿಯದೆ, ಆತ್ಮಮರುಕಕ್ಕೆ ಒಳಗಾಗತೊಡಗುತ್ತಾರೆ. ಇಷ್ಟಾದರೂ ಯಾರ ಬಳಿಯೂ ಯಾವುದೇ ಕಾರಣಕ್ಕೂ ಈ ವಿಷಯವನ್ನು ಬಾಯ್ಬಿಡುವುದಿಲ್ಲ. ಚರ್ಚಿಸುವುದಿಲ್ಲ. ಕಾರಣ, ಹಾಸಿಗೆಯೊಳಗಿನ ಸರಸದಂತೆಯೇ, ವಿರಸವೂ ಮಾತನಾಡದ ವಿಷಯವಾಗಿದೆ. 

ಕಣ್ಣೀರಿನಿಂದ ತೊಯ್ದ ತಲೆದಿಂಬುಗಳು, ಮರುದಿನದ ಬೆಳಗನ್ನು ಭಾರವಾಗಿಸುತ್ತವೆ. ಆತ್ಮವಿಶ್ವಾಸವನ್ನು ಕಳೆದುಕೊಳ್ಳುತ್ತಲೇ ಪ್ರತಿಯೊಂದಕ್ಕೂ ಅಸಹನೆ ಹುಟ್ಟುವುದು ಸಾಮಾನ್ಯವಾಗಿರುತ್ತದೆ. ಈ ಬಗ್ಗೆ ಮಾತನಾಡಲು ಆರಂಭಿಸಲೇಬೇಕಿರುವುದು ಸದ್ಯದ ತುರ್ತಾಗಿದೆ.

ಮಿಲನ ಪ್ರಕ್ರಿಯೆಯಲ್ಲಿ ನಿಮ್ಮ ಮೈಮನಸು ಅರಳದಿದ್ದಲ್ಲಿ, ಮನಸು ನರಳಿದರೂ ಆ ಬಗ್ಗೆ ಸಂಗಾತಿಯೊಡನೆ ಚರ್ಚಿಸಲೇಬೇಕು. ಹಿರಿಯರ ಸಹಾಯ ಪಡೆಯುವುದಾಗಿಯೂ ತಿಳಿಸಬೇಕು. ಇಲ್ಲದಿದ್ದಲ್ಲಿ ಅಂಥ ಸಾಂಗತ್ಯಕ್ಕೆ ಒಳಪಡದೆ ಪ್ರತಿರೋಧ ಒಡ್ಡಬೇಕು.  ನಾಲ್ಕು ಗೋಡೆಗಳ ನಡುವೆ, ಅವಮಾನವೆಲ್ಲ ನುಂಗಿ ಬಿಕ್ಕಳಿಸುವಾಗ ಜೀವನಪ್ರೀತಿಯೆಂಬುದು ಕಂಬನಿಯಾಗಿ ಹರಿದುಹೋಗುತ್ತದೆ. ದೌರ್ಜನ್ಯದ ಪರಿಣಾಮ ಅದೆಷ್ಟು ತೀವ್ರವಾಗಿರುತ್ತದೆಯೆಂದರೆ, ಬದುಕುವುದನ್ನು ಯಾವತ್ತೋ ಬಿಟ್ಟಂತಾಗುತ್ತದೆ. ಸಾಯುವುದಿನ್ನೂ ಬಾಕಿ ಇರುತ್ತದೆ. 

ಹೇಗೆ ಬರಬೇಕು ಇಂಥ ಬಾಂಧವ್ಯಗಳಿಂದಾಚೆಗೆ? ಹೇಗೆ ತೇಪೆಹಾಕಬೇಕು ಈ ಬಾಂಧವ್ಯಕ್ಕೆ? ಚಿಕಿತ್ಸೆ ಅಗತ್ಯ ಇರುವುದು ಯಾರಿಗೆ? ಇದೊಂದು ಮನೋವೈಕಲ್ಯವೆ ಅಥವಾ ಕೇವಲ ದಬ್ಬಾಳಿಕೆಯೇ? ಈ ಪ್ರಶ್ನೆಗೆ ಖಡಾಖಂಡಿತವಾದ ಉತ್ತರವೆಂದರೆ, ಚಿಕತ್ಸೆಯ ಅಗತ್ಯವಿದೆ.

ಪಂಚಸೂತ್ರಗಳು:

* ಒಪ್ಪಿಕೊಳ್ಳಿ: ನಾವು ದೌರ್ಜನ್ಯದ ಸಾಂಗತ್ಯದಲ್ಲಿದೀವಿ ಅನ್ನುವುದನ್ನು ಮೊದಲು ನಾವೇ ಮನವರಿಕೆ ಮಾಡಿಕೊಳ್ಳಬೇಕು. ಎಲ್ಲವೂ ಸರಿ ಹೋಗುತ್ತದೆ. ಇದು ಕೇವಲ ಪೊಸೆಸಿವ್‌ನೆಸ್‌ ಅನ್ಕೊಂಡು ಮುಂದುವರಿದರೆ ದೌರ್ಜನ್ಯ ತೀವ್ರತರನಾಗಲು ನಾವೇ ಅವಕಾಶ ಮಾಡಿಕೊಟ್ಟಂತೆ. ನಮ್ಮ ಬದುಕಿನಲ್ಲಿ ಹೀಗಾಗುತ್ತಿದೆ ಎಂದು ನಾವು ಯಾರಬಳಿಯೂ ಹೇಳುವುದಿಲ್ಲ. ಆದರೆ ವಿಶ್ವಾಸನೀಯ ವ್ಯಕ್ತಿಗಳಲ್ಲಿ ಇದನ್ನು ಹೇಳಿಕೊಂಡರೆ ಒಂದಿನಿತು ಆತ್ಮಸ್ಥೈರ್ಯ ಬರುತ್ತದೆ. 

 * ಕೇಳಿಸಿಕೊಳ್ಳಿ: ಕೆಲವೊಮ್ಮೆ ಯಾರ ಬಳಿ ಹೇಳಿದರೂ ನಿಮ್ಮ ಮನದೊಳಗಿನ ಪ್ರತಿಕ್ರಿಯೆಯೇ ಬರಲಿ ಎಂದು ನಿರೀಕ್ಷಿಸದಿರಿ. ಕೆಲವರಿಗೆ ಆ ಕ್ಷಣಕ್ಕೆ ಸಹಾನುಭೂತಿ ಬೇಕಿರುತ್ತದೆ. ಕೆಲವೊಮ್ಮೆ ಅನುಕಂಪ, ಕೆಲವೊಮ್ಮೆ ರೋಷ, ಕೆಲವೊಮ್ಮೆ ದ್ವೇಷವೂ.. ಇಂಥ ಪ್ರತಿಕ್ರಿಯೆಗಳನ್ನು ನಿರೀಕ್ಷಿಸಿ, ನಡೆದದ್ದನ್ನು ನಿರೂಪಿಸಬೇಡಿ. ಅವು ವ್ಯತಿರಿಕ್ತ ಪರಿಣಾಮವನ್ನೂ ಬೀರಬಹುದು.

* ಅಲ್ಲಿಂದ ಹೊರಡಿ: ದೌರ್ಜನ್ಯಕ್ಕೆ ಒಳಗಾಗುವ ಮುನ್ನ, ಮನೆಯಲ್ಲಿಯೇ ಸುರಕ್ಷಿತ ಜಾಗಕ್ಕೆ ಹೊರಟುಬಿಡಿ. ಬಾಗಿಲು ಹಾಕಿಕೊಳ್ಳಿ. ಮರುದಿನ ಪರಸ್ಪರ ಚರ್ಚಿಸಿ, ಆಪ್ತ ಸಲಹೆಗಾರರ ಬಳಿ ತೆರಳಿ, ಸಹಾಯ ಪಡೆದುಕೊಳ್ಳಿ

ಎಲ್ಲ ಜಗಳಗಳೂ ಸಾಂಗತ್ಯದೊಳಗಿನ ದೌರ್ಜನ್ಯವೇ?

ಅಲ್ಲ, ಕೆಲವೊಂದು ಭಾವನಾತ್ಮಕ ಜಗಳಗಳಿರುತ್ತವೆ. ಪರಸ್ಪರ ಕಿತ್ತಾಡುವಾಗ ಕೆಲವೊಮ್ಮೆ ನಮ್ಮ ವೈಯಕ್ತಿಕ ಎಲ್ಲೆಯನ್ನು ಮೀರಿ, ದೈಹಿಕವಾಗಿ ದಂಡಿಸುತ್ತೇವೆ. ಈ ದಂಡನೆಯಿಂದ ಆ ಕ್ಷಣಕ್ಕೆ ಆ ಜಗಳವೂ ಕೊನೆಗೊಳ್ಳುವಂತಿರುತ್ತದೆ. ಇದು ಮೇಲಿಂದ ಮೇಲೆ ಆದರೆ ಆದರೆ ಸಮಾಲೋಚನೆ ಅತ್ಯಗತ್ಯ. 

 ದೌರ್ಜನ್ಯದ ಇನ್ನೊಂದು ಹಂತ, ಸಾಂಗತ್ಯದ ಭಯೋತ್ಪಾದನೆ (Intimidate terrorism) ಇಲ್ಲಿ ಪ್ರತಿ ಕ್ರಿಯೆಯೂ ಯೋಜಿತವಾಗಿರುತ್ತದೆ. ಹಿಂಸೆಯಿಂದ ಕೂಡಿರುತ್ತದೆ. ಕಾಮನೆಗಳನ್ನು ಅರಳಿಸುವ ಬಿಸುಪು ಅಲ್ಲಿರುವುದಿಲ್ಲ. ಸಂಗಾತಿಯನ್ನು ನರಳಿಸುವ ತಣ್ಣನೆಯ ಕ್ರೌರ್ಯ ಇರುತ್ತದೆ. ಹಾಗಿದ್ದಲ್ಲಿ ಚಿಕಿತ್ಸಕರನ್ನು ಕಾಣುವುದು ಒಳಿತು.

ಹಿಂಜರಿಕೆಗೆ ಕಾರಣಗಳು:

* ಮಕ್ಕಳ ಭವಿಷ್ಯ ಏನು?

* ಸಾಮಾಜಿಕ ನೋಟ ಹೇಗಿರುತ್ತದೆ?

* ಕುಟುಂಬವೊಂದು ಒಡಕಲು ಬಿಂಬ ಆಗಲು ಕಾರಣವಾಗಬೇಕೆ?

* ಚೂರು ಧಾರಣಾಶಕ್ತಿ ಹೆಚ್ಚಿಸಿಕೊಂಡರೆ ಅನುಕೂಲವಾಗಬಹುದು ಎಂಬ ರಾಜೀಭಾವ

 ಇಷ್ಟಕ್ಕೂ ಮಿಲನವೆಂಬುದು ಪರಸ್ಪರ ಒಟ್ಟಿಗಿದ್ದೇವೆ ಎಂಬ ಬೆಂಬಲ ಸೂಚಿಸುವ ಪ್ರಕ್ರಿಯೆಯೇ ಹೊರತು, ನಮಗೆ ಸೇರಿದ್ದು ಎಂಬ ಸ್ವಾಮ್ಯವನ್ನು ಪ್ರತಿಪಾದಿಸಲು ಇರುವ ಕ್ರಿಯೆ ಅಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು