ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಆರೋಗ್ಯ | ಐರಿಸಿನ್ ಎಂಬ ರಸದೂತ

Last Updated 21 ಫೆಬ್ರುವರಿ 2023, 2:19 IST
ಅಕ್ಷರ ಗಾತ್ರ

ವ್ಯಾಯಾಮದಿಂದ ತೂಕ ಇಳಿಸಿಕೊಳ್ಳುವುದರ ಬಗ್ಗೆ ಹಾಗೂ ದಿನವಿಡೀ ತಾಜಾತನ ಪಡೆಯುವುದರ ಬಗ್ಗೆ ಕೇಳಿದ್ದೇವೆ. ವ್ಯಾಯಾಮದ ಬಳಿಕ ಶರೀರದಲ್ಲಿ ಹೆಚ್ಚಾಗುವ ಎಂಡಾರ್ಫಿನ್, ಸೆರೆಟೊನಿನ್ ಮತ್ತು ಡೊಪಮಿನ್ ಎಂಬ ರಾಸಾಯನಿಕಗಳ ಬಗ್ಗೆಯೂ ಕೇಳಿದ್ದೇವೆ. ಆದರೆ ವ್ಯಾಯಾಮದ ನಂತರ ಉತ್ಪತ್ತಿಯಾಗುವ ಹೊಸ ರಸದೂತದ ಬಗ್ಗೆ ಕೇಳಿದ್ದೀರೇನು? ಹೌದು, ಸ್ನಾಯುಗಳು ‘ಐರಿಸಿನ್’ ಎಂಬ ರಸದೂತವನ್ನು ವ್ಯಾಯಾಮದ ನಂತರ ಸ್ರವಿಸುತ್ತವೆ ಎನ್ನುತ್ತದೆ ಹೊಸ ಸಂಶೋಧನೆ. ಇದು ಪತ್ತೆಯಾದದ್ದು 2012ರಲ್ಲಿ.

ಗ್ರೀಕ್ ದೇಶದ ದೇವತೆ ‘ಐರಿಸ್‍’ನ ನೆನಪಿಸಲು ಇದಕ್ಕೆ ಈ ಹೆಸರು. ಇತ್ತೀಚಿನ ವರ್ಷಗಳಲ್ಲಿ ವಿಜ್ಞಾನಿಗಳು ಈ ರಸದೂತದ ಬಗ್ಗೆ ಒಂದಿಷ್ಟು ಅಧ್ಯಯನ ಮಾಡಿದ್ದಾರೆ. ವ್ಯಾಯಾಮದ ವೇಳೆ ಸಂಕುಚನ ಮತ್ತು ವಿಕಸನಕ್ಕೊಳಗಾಗುವ ಸ್ನಾಯುಗಳು ಸ್ರವಿಸುವ ಈ ರಸದೂತವು ಒಂದು ವಿಶಿಷ್ಟ ಬಗೆಯ ಪ್ರೊಟೀನ್ ಆಗಿದ್ದು, ದೇಹದ ಸಂಪೂರ್ಣ ಆರೋಗ್ಯಕ್ಕೆ ಅಡಿಪಾಯ ಹಾಕುವ ಸಾಮರ್ಥ್ಯವನ್ನು ಹೊಂದಿದೆ. ಇದು ರಚನೆ ಮತ್ತು ಕಾರ್ಯನಿರ್ವಹಣೆಯಲ್ಲಿ ಮೇದೋಜೀರಕ ಗ್ರಂಥಿಯಿಂದ ಸ್ರವಿಸಲ್ಪಡುವ ಇನ್ಸುಲಿನ್ ಮತ್ತು ಗ್ಲುಕಾಗನ್ ರಸದೂತಗಳನ್ನು ಸಾಕಷ್ಟು ಹೋಲುತ್ತದೆ. ಹಾಗಾಗಿಯೇ ಈ ರಸದೂತವನ್ನು ಬೊಜ್ಜು, ಸ್ಥೂಲಕಾಯ ಮತ್ತು ಇತರ ಸಂಬಂಧಪಟ್ಟ ಆರೋಗ್ಯ ಸಮಸ್ಯೆಗಳಲ್ಲಿ ಔಷಧವಾಗಿ ಉಪಯೋಗಿಸುವ ಬಗ್ಗೆಯೂ ಪ್ರಯೋಗಗಳು ನಡೆದಿವೆ. ಸ್ನಾಯುಗಳು ನಿರ್ದಿಷ್ಟ ಅವಧಿಯವರೆಗೆ ಸಂಕುಚನ-ವಿಕಸನ ಕ್ರಿಯೆಗೆ ಒಳಗಾದಾಗ ಐರಿಸಿನ್ ಸ್ರವಿಕೆ ಆರಂಭವಾಗುತ್ತದೆ. ಹೀಗೆ ರಕ್ತಪರಿಚಲನೆಗೆ ಸೇರುವ ಈ ರಸದೂತ ಪ್ರತಿ ಜೀವಕೋಶಗಳಲ್ಲಿ ಚೈತನ್ಯವನ್ನು ತುಂಬಬಲ್ಲದು.

ಬೊಜ್ಜು, ಮಧುಮೇಹ ಮತ್ತು ಐರಿಸಿನ್
ಐರಿಸಿನ್ ಜೀವಕೋಶಗಳ ಶಕ್ತಿಕೇಂದ್ರವಾದ ಮೈಟೋಕಾಂಡ್ರಿಯಾಗಳ ಸಂಖ್ಯೆಯನ್ನು ವೃದ್ಧಿಸಿ, ಅಲ್ಲಿ ಶಕ್ತಿಯು ಹೆಚ್ಚು ವೇಗವಾಗಿ ಬಳಕೆಯಾಗುವಂತೆ ಮಾಡುತ್ತದೆ. ಮುಖ್ಯವಾಗಿ ಸ್ನಾಯು ಮತ್ತು ಕೊಬ್ಬಿನ ಜೀವಕೋಶಗಳಲ್ಲಿ ಚಯಾಪಚಯಾ ಕ್ರಿಯೆಯ ವೇಗವನ್ನು ಹೆಚ್ಚಿಸಿ, ರಕ್ತದಲ್ಲಿನ ಸಕ್ಕರೆ ಅಂಶವು ಕ್ರಮೇಣ ಸ್ನಾಯುಗಳ ಜೀವಕೋಶಗಳಿಗೆ ವರ್ಗಾವಣೆಯಾಗುವ ಪ್ರಕ್ರಿಯೆಯನ್ನು ಪ್ರಚೋದಿಸುತ್ತದೆ. ಸಕ್ಕರೆಯ ಅಂಶವು ಅತಿ ವೇಗವಾಗಿ ಜೀವಕೋಶಗಳಲ್ಲಿ ಉಪಯೋಗಿಸಲ್ಪಡುವುದರಿಂದ ರಕ್ತದಲ್ಲಿನ ಅದರ ಪ್ರಮಾಣ ಇಳಿಮುಖವಾಗುತ್ತದೆ. ಈ ಪ್ರಕ್ರಿಯೆಗಳು ಇನ್ಸುಲಿನ್‍ನ ಕ್ಷಮತೆಯನ್ನು ಹೆಚ್ಚಿಸಿ, ದೇಹದ ತೂಕ ಇಳಿಕೆಗೆ ಕಾರಣವಾಗುತ್ತವೆ. ಒಟ್ಟಾರೆ ಹೇಳುವುದಾದರೆ ಶರೀರದಲ್ಲಿ ಇನ್ಸುಲಿನ್ ಮಾಡುವ ಕಾರ್ಯವನ್ನೇ ಐರಿಸಿನ್ ಅತ್ಯಂತ ಯಶಸ್ವಿಯಾಗಿ ನಿರ್ವಹಿಸುತ್ತದೆ. ಮಧುಮೇಹಿಗಳಲ್ಲಿ ಮುಖ್ಯ ಸಮಸ್ಯೆಯಾಗಿರುವ ಇನ್ಸುಲಿನ್ ಪ್ರತಿರೋಧತೆಯನ್ನು ಐರಿಸಿನ್ ಅತ್ಯಂತ ಸುಲಭವಾಗಿ ನಿರ್ವಹಿಸಬಲ್ಲದು. ಹಾಗಾಗಿಯೇ ಮುಂದಿನ ದಿನಗಳಲ್ಲಿ ಇದನ್ನು ಮಧುಮೇಹದ ಚಿಕಿತ್ಸೆಯಲ್ಲಿ ಔಷಧಿಯಂತೆ ಉಪಯೋಗಿಸಿದರೆ ಆಶ್ಚರ್ಯಪಡಬೇಕಾಗಿಲ್ಲ. ಅಂತೆಯೇ ಇದು ಸ್ಥೂಲಕಾಯ ಮತ್ತು ಬೊಜ್ಜಿನ ಚಿಕಿತ್ಸೆಯಲ್ಲಿಯೂ ಮಹತ್ವದ ಬದಲಾವಣೆಯನ್ನು ತರಬಲ್ಲದು.

ಐರಿಸಿನ್ ಕೊರತೆ
ಎರಡನೆ ಬಗೆಯ ಮಧುಮೇಹಿಗಳಲ್ಲಿ, ಇನ್ಸುಲಿನ್ ಪ್ರತಿರೋಧತೆಯುಳ್ಳವರಲ್ಲಿ, ಮೆದುಳಿನ ರಕ್ತಪರಿಚಲನೆಯಲ್ಲಿ ವ್ಯತ್ಯಯವಾದವರಲ್ಲಿ (ಸ್ಟ್ರೋಕ್), ಹೃದಯಾಘಾತವದವರಲ್ಲಿ ಐರಿಸಿನ್ ಪ್ರಮಾಣ ಕಡಿಮೆಯಿರುವುದನ್ನು ವಿಜ್ಞಾನಿಗಳು ಗಮನಿಸಿದ್ದಾರೆ. ಇಂತಹ ವ್ಯಕ್ತಿಗಳಿಗೆ ಕೂಡಲೇ ಐರಿಸಿನ್ ರಸದೂತವನ್ನು ಔಷಧದ ರೂಪದಲ್ಲಿ ನೀಡಿದರೆ ಮೆದುಳು ಹಾಗೂ ಹೃದಯದಲ್ಲಿ ಆಗಬಹುದಾದ ಉರಿಯೂತದ ತೀವ್ರತೆಯನ್ನು ನಿಯಂತ್ರಿಸಿ, ಮುಂದೆ ಆಗುವ ಹಾನಿಯ ಪ್ರಮಾಣವನ್ನು ತಗ್ಗಿಸಬಹುದು ಎನ್ನುತ್ತವೆ ಅಧ್ಯಯನಗಳು.

ಉತ್ಪತ್ತಿ ಯಾವಾಗ?
• ವ್ಯಾಯಾಮದ ನಂತರ: ಈಜು, ಬಿರುಸಿನ ವ್ಯಾಯಾಮ, ಓಟ ಮೊದಲಾದ ಯಾವುದೇ ವ್ಯಾಯಾಮದ ನಂತರ ಐರಿಸಿನ್ ಸ್ರವಿಕೆ ಆರಂಭವಾಗುತ್ತದೆ. ಎರಡು ವಾರಗಳ ನಿಯಮಿತ ವ್ಯಾಯಾಮವು ರಕ್ತದಲ್ಲಿನ ಐರಿಸಿನ್ ಅಂಶವನ್ನು ದ್ವಿಗುಣಗೊಳಿಸಬಲ್ಲದು ಎನ್ನುತ್ತವೆ ಅಧ್ಯಯನಗಳು. ಒಂದು ಅವಧಿಯ ಬಿರುಸಿನ ವ್ಯಾಯಾಮದಿಂದ ಸ್ರವಿಸಲ್ಪಡುವ ಐರಿಸಿನ್ ರಕ್ತದಲ್ಲಿ ಸುಮಾರು ಮೂವತ್ತು ನಿಮಿಷದಿಂದ ಒಂದು ತಾಸಿನವರೆಗೂ ಇರಬಹುದು. ಒಂದು ತಾಸಿನ ಬಿರುಸಿನ ವ್ಯಾಯಾಮದಿಂದ ಸ್ರವಿಸಲ್ಪಡುವ ಐರಿಸಿನ್ ಸುಮಾರು ಹನ್ನೆರಡು ತಾಸುಗಳವರೆಗೆ ರಕ್ತ ಪರಿಚಲನೆಯಲ್ಲಿದ್ದು ಎಲ್ಲ ಅಂಗಾಂಗಗಳ ಮೇಲೆ ಪ್ರಯೋಜನಕಾರಿ ಪರಿಣಾಮಗಳನ್ನು ಬೀರಬಲ್ಲದು.

• ಆಹಾರದಲ್ಲಿನ ಕೆಲವು ಅಂಶಗಳಾದ ವಿಟಮಿನ್ ಡಿ, ಓಮೆಗಾ -3 ಫ್ಯಾಟಿ ಆಸಿಡ್, ಕೆಫಿನ್ ಮೊದಲಾದುವು ಕೂಡ ಐರಿಸಿನ್ ಸ್ರವಿಕೆಯನ್ನು ಪ್ರಚೋದಿಸಬಲ್ಲವು.

ಹೃದಯ, ಮೆದುಳು, ಮೂಳೆಗಳು ಸುರಕ್ಷಿತ
• ಮೆದುಳಿನ ಜೀವಕೋಶಗಳಲ್ಲಿ ಉತ್ಪತ್ತಿಯಾಗುವ ಒಂದು ಬಗೆಯ ವಿಶೇಷ ಪ್ರೊಟೀನ್ ಉತ್ಪಾದನೆಯನ್ನು ಹೆಚ್ಚಿಸುವ ಈ ರಸದೂತವು ಮೆದುಳಿನ ಕಾರ್ಯಕ್ಷಮತೆಯನ್ನು ವೃದ್ಧಿಸಬಲ್ಲದು. ವಯಸ್ಸಾದಂತೆ ಕಂಡುಬರುವ ಮರೆವು ಮತ್ತಿತರ ಮೆದುಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಸಹ ತಡೆಯಬಲ್ಲದು.

• ರಕ್ತನಾಳಗಳ ಒಳಪದರಗಳ ಜೀವಕೋಶಗಳ ಉರಿಯೂತವನ್ನು ನಿಯಂತ್ರಿಸುವುದರಿಂದ ರಕ್ತದೊತ್ತಡ ಮತ್ತು ಕೊಲೆಸ್ಟೆರಾಲ್ ಸಹ ಕಡಿಮೆಯಾಗಿ ಹೃದಯದ ಆರೋಗ್ಯವನ್ನೂ ಕಾಪಾಡಬಲ್ಲದು.

• ಮೂಳೆಗಳಲ್ಲಿಯೂ ಹೊಸ ಜೀವಕೋಶಗಳ ಉತ್ಪಾದನೆಗೆ ಪ್ರಚೋದಿಸುವ ಐರಿಸಿನ್ ಮೂಳೆಯ ಸಾಂಧ್ರತೆ ಕ್ಷೀಣಿಸುವುದನ್ನು ತಡೆಯಬಲ್ಲದು.

• ಪುರುಷರಲ್ಲಿ, ವೃಷಣ ಮತ್ತು ಉಪ ಅಂಗಾಂಗಳ ಕಾರ್ಯಕ್ಷಮತೆಯನ್ನು ವೃದ್ಧಿಸಿ ವೀರ್ಯಾಣುಗಳ ಸಂಖ್ಯೆ ಹಾಗೂ ಚಲನಶೀಲತೆಯನ್ನು ಸುಧಾರಿಸಬಲ್ಲದು.

• ಆ್ಯಂಟಿ ಆಕ್ಸಿಡೆಂಟ್‍ಗಳ ಉತ್ಪತ್ತಿಯನ್ನು ಪ್ರಚೋದಿಸಿ ಸದಾ ಕ್ರಿಯಾಶೀಲರಾಗಿರಲು ಮತ್ತು ಲವಲವಿಕೆಯಿಂದಿರಲು ನೆರವಾಗುವುದು.

• ಐರಿಸಿನ್ ಕೊಬ್ಬಿನಾಂಶವನ್ನು ಕಂದುಬಣ್ಣಕ್ಕೆ ತಿರುಗಿಸುತ್ತದೆ. ಈ ಕಂದುಜೀವಕೋಶಗಳು ಶರೀರದ ಸಕ್ಕರೆಯ ಅಂಶ ಮತ್ತು ಕೊಬ್ಬಿನಾಂಶವು ಬಳಕೆಯಾಗಿ ಶಾಖ ತಯಾರಾಗುವ ಪ್ರಕ್ರಿಯೆಯನ್ನು ಪ್ರಚೋದಿಸುವುದರಿಂದ ಶರೀರದ ತಾಪಮಾನವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವಲ್ಲಿಯೂ ಇದು ಸಹಕಾರಿ.

• ಕ್ಯಾನ್ಸರ್ ವಿರುದ್ಧವೂ ಈ ರಸದೂತ ಹೋರಾಡಬಲ್ಲದು ಎಂದು ಇತ್ತೀಚಿನ ಅಧ್ಯಯನಗಳು ಹೇಳುತ್ತವೆ.

ಈ ರಸದೂತದ ಬಗ್ಗೆ ಇನ್ನೂ ಸಾಕಷ್ಟು ಅಧ್ಯಯನಗಳು ನಡೆಯಬೇಕಿವೆ. ಆದರೆ, ಚಟುವಟಿಕೆಯ ಜೀವನ, ಉತ್ತಮ ಆಹಾರ ಮತ್ತು ಸಮರ್ಪಕ ನಿದ್ರೆ – ಇವು ಐರಿಸಿನ್ ರಸದೂತದ ಪ್ರಯೋಜನವನ್ನು ಮತ್ತಷ್ಟು ಹೆಚ್ಚಿಸಬಲ್ಲದು ಎಂಬುದಂತೂ ಸ್ಪಷ್ಟ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT