ಗುರುವಾರ , ಆಗಸ್ಟ್ 11, 2022
23 °C

ಕೊರೊನಾ ಒಂದಿಷ್ಟು ತಿಳಿಯೋಣ: ರೂಪಾಂತರಗೊಂಡ ವೈರಸ್‌ ಅಪಾಯಕಾರಿಯೇ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವ್ಯಾಪಾರ ವಹಿವಾಟು, ಶಿಕ್ಷಣ, ಪ್ರವಾಸ ಸೇರಿದಂತೆ ಬಹಳಷ್ಟು ಕಾರಣಗಳಿಗಾಗಿ ಒಂದು ದೇಶದಿಂದ ಇನ್ನೊಂದಕ್ಕೆ ಪ್ರಯಾಣ ಮಾಡುವುದು ಅನಿವಾರ್ಯ. ಹೀಗಾಗಿ ಕ್ಷಿಪ್ರಗತಿಯಲ್ಲಿ ಎಲ್ಲಾ ಕಡೆ ಯಾವುದೇ ರೀತಿಯ ವೈರಸ್ ಹರಡಬಹುದು. ಪ್ರಯಾಣಕ್ಕೆ ಮುನ್ನ ಕೋವಿಡ್ ಪರೀಕ್ಷೆ ಮತ್ತು ಕ್ವಾರಂಟೈನ್‌ನಲ್ಲಿ ಇಡುವ ನಿಯಮಗಳು ಸೋಂಕಿನ ಸಾಧ್ಯತೆಯನ್ನು ಸ್ವಲ್ಪಮಟ್ಟಿಗೆ ಕಡಿಮೆ ಮಾಡಬಹುದಾದರೂ ಸೋಂಕು ಹರಡುವುದನ್ನು ಸಂಪೂರ್ಣವಾಗಿ ತಡೆಯುವುದು ಸಾಧ್ಯವಿಲ್ಲ.

ಈ ಹಿನ್ನೆಲೆಯಲ್ಲಿ ಇಂಗ್ಲೆಂಡ್‌ನಲ್ಲಿ ರೂಪಾಂತರ (ಮ್ಯುಟೇಶನ್‌) ಗೊಂಡಿರುವ ಕೊರೊನಾ ವೈರಸ್‌  ಭಾರತ ಸೇರಿದಂತೆ ಹಲವು ದೇಶಗಳಿಗೆ ಹರಡುವ ಸಾಧ್ಯತೆ ಇದ್ದೇ ಇರುತ್ತದೆ ಎನ್ನುತ್ತಾರೆ ಬೆಂಗಳೂರಿನ ಅಪೊಲೊ ಸ್ಪೆಕ್ಟ್ರಾ ಆಸ್ಪತ್ರೆಯ ಕನ್ಸಲ್ಟೆಂಟ್‌ ಜನರಲ್‌ ಫಿಜಿಷಿಯನ್‌ ಡಾ. ಎಸ್.ಪಿ. ರೂಪಶ್ರೀ.

ಕೋವಿಡ್‌–19 ಆರಂಭವಾದಾಗಿನಿಂದಲೂ ಈ ವೈರಸ್ ರೂಪಾಂತರಗೊಳ್ಳುತ್ತಲೇ ಇದೆ. ಇದುವರೆಗೆ 25 ಬಗೆಯ ರೂಪಾಂತರಗಳನ್ನು ಗುರುತಿಸಲಾಗಿದೆ. ಅಂದರೆ ಚೀನಾದ ವುಹಾನ್‌ನಲ್ಲಿ ಮೊದಲು ಗುರುತಿಸಿದ್ದಕ್ಕಿಂತ ಇಂದು ವೈರಸ್‌ನ ಆರ್‌ಎನ್‌ಎ ಸ್ವಲ್ಪ ಬೇರೆ ರೀತಿಯಲ್ಲಿ ಕಾಣಿಸುತ್ತದೆ. ಮುಂದಿನ ರೂಪಾಂತರ ಜಗತ್ತಿನ ಯಾವುದೇ ಮೂಲೆಯಲ್ಲಿ ನಡೆಯಬಹುದಾಗಿದ್ದು, ಭಾರತದಲ್ಲೂ ಇದು ನಡೆಯಬಹುದು.

ಪ್ರತಿ ಬಾರಿ ರೂಪಾಂತರವಾದಾಗ ವೈರಸ್‌ನ ಗುಣಲಕ್ಷಣ ಬದಲಾಗುತ್ತದೆ. ಇದರಿಂದ ವೈರಸ್ ಹೆಚ್ಚು ಅಥವಾ ಕಡಿಮೆ ಅಪಾಯಕಾರಿಯಾಗಬಹುದು. ಜೊತೆಗೆ ಅದು ನಮ್ಮ ದೇಹದ ರೋಗನಿರೋಧಕ ವ್ಯವಸ್ಥೆಯೊಂದಿಗೆ ತೊಡಗಿಸಿಕೊಳ್ಳುವ ರೀತಿಯನ್ನು ಕೂಡ ಬದಲಿಸಿಕೊಳ್ಳಬಹುದು. ಆದ್ದರಿಂದ ಈ ರೂಪಾಂತರ ಎನ್ನುವುದು ಯಾವಾಗಲೂ ಅಪಾಯಕಾರಿ ಅಲ್ಲದಿದ್ದರೂ ಅದು ಇನ್ನೊಂದು ರೀತಿಯ ಸಮಸ್ಯೆಗೆ ದಾರಿ ಮಾಡಿಕೊಡುತ್ತದೆ.

ಈ ರೂಪಾಂತರ ವೈರಸ್‌ನಲ್ಲಿ ಗಮನಾರ್ಹ ಬದಲಾವಣೆಗಳನ್ನು ಉಂಟುಮಾಡಿದರೆ ಮತ್ತು ಅದನ್ನು ಕ್ಷಿಪ್ರಗತಿಯಲ್ಲಿ ಉಂಟು ಮಾಡಿದರೆ ಆಗ ವೈರಸ್ ವಿರುದ್ಧ ಯಾವುದೇ ಲಸಿಕೆಯ ಪರಿಣಾಮ ಅಲ್ಪ ಕಾಲದ್ದಾಗಬಹುದು. ಪ್ರಸ್ತುತ ಫ್ಲು ಜ್ವರದ ವಿಷಯದಲ್ಲಿ ಪ್ರತಿ ವರ್ಷ ಹೊಸ ರೀತಿಯ ಲಸಿಕೆ ಪಡೆದುಕೊಳ್ಳಬೇಕಾಗುತ್ತದೆ. ಅದೇ ರೀತಿ ರೂಪಾಂತರಗೊಂಡ ಕೊರೊನಾ ವೈರಸ್‌ ವಿಷಯದಲ್ಲೂ ಆಗಬಹುದು. ಸದ್ಯ ಇಂಗ್ಲೆಂಡ್‌ನಲ್ಲಿ ರೂಪಾಂತರಗೊಂಡ ವೈರಸ್ ಎಷ್ಟು ಅಪಾಯಕಾರಿ ಎಂಬುದು ಗೊತ್ತಾಗಿಲ್ಲ. ಆದರೆ ಮಾಸ್ಕ್‌, ಸ್ಯಾನಿಟೈಸಿಂಗ್‌, ಅಂತರ ಕಾಪಾಡುವುದು ಸೇರಿದಂತೆ ಎಲ್ಲಾ ರೀತಿಯ ಸುರಕ್ಷಿತ ಕ್ರಮಗಳನ್ನು ಮುಂದುವರಿಸುವುದು ಸೂಕ್ತ.

ಇನ್ನು ಕೋವಿಡ್‌–19 ಕುರಿತ ಲಸಿಕೆಯ ಅಡ್ಡ ಪರಿಣಾಮಗಳು ಅಲ್ಪ ಪ್ರಮಾಣದ್ದಾಗಿದ್ದು ಅವುಗಳಲ್ಲಿ ಜ್ವರ, ಮೈಕೈ ನೋವು, ತಲೆನೋವು ಇತ್ಯಾದಿ ಸೇರಿರಬಹುದು. ಬಹಳಷ್ಟು ಸಂಕೀರ್ಣ ಸಮಸ್ಯೆಗಳು ಹಾಗೂ ಸಾವು ಉಂಟು ಮಾಡಬಹುದಾದ ಕೋವಿಡ್-19ಗೆ ಹೋಲಿಸಿದರೆ ಕಡಿಮೆ ಅಡ್ಡ ಪರಿಣಾಮಗಳುಳ್ಳ, ಉತ್ತಮವೆಂದು ಶಿಫಾರಸ್ಸು ಮಾಡಲಾದ ಲಸಿಕೆಯನ್ನು ಹಾಕಿಸಿಕೊಳ್ಳುವುದು ಒಳ್ಳೆಯದು ಎನ್ನುತ್ತಾರೆ ಡಾ. ರೂಪಶ್ರೀ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು