ಶನಿವಾರ, ಜುಲೈ 31, 2021
27 °C

ಇದು ಕೇವಲ ಅಂತರಂಗದ ಮಾತಲ್ಲ...

ಎಸ್ಸೆಚ್‌ Updated:

ಅಕ್ಷರ ಗಾತ್ರ : | |

ಈ ಕೋವಿಡ್‌–19, ಲಾಕ್‌ಡೌನ್‌, ಮನೆಯಿಂದಲೇ ಕಚೇರಿ ಕೆಲಸ ಎಲ್ಲವೂ ನಮ್ಮ ಬದುಕಿನಲ್ಲಿ ಎಷ್ಟೆಲ್ಲ ಬದಲಾವಣೆಗಳನ್ನು ತಂದುಬಿಟ್ಟಿವೆ. ಹಲವು ಬದಲಾವಣೆಗಳು ಮಹಿಳೆಗೆ ಮಾತ್ರ ಸೀಮಿತವಾಗಿವೆ ಎಂಬುದನ್ನೂ ಗಮನಿಸಬಹುದು. ಮನೆಯಲ್ಲೇ ಇರುವಾಗ, ಮನೆಯಿಂದಲೇ ಕೆಲಸ ಮಾಡುವಾಗ ಉಡುಪಿನ ಬಗ್ಗೆ ಬಹಳ ಮಂದಿಗೆ ಗಮನ ಹೋಗುವುದಿಲ್ಲ. ನೈಟಿಯಲ್ಲಿ, ಟೀ ಶರ್ಟ್‌– ಪೈಜಾಮಾದಲ್ಲಿ ಆರಾಮವಾಗಿ ಇರುವುದು ಸಹಜ. ಲ್ಯಾಪ್‌ಟಾಪ್‌ ಮುಂದೆ ಕೂತಾಗಲೂ ಬಹುತೇಕರದ್ದು ಇದೇ ಉಡುಪು. ಝೂಮ್‌, ಗೂಗಲ್ ಮೀಟ್‌ ಇದ್ದಾಗ ಒಂದಿಷ್ಟು ನೀಟಾಗಿದ್ದರಾಯಿತು ಎಂಬ ಮನೋಭಾವ. ಇದು ಕಂಚುಕದಂತಹ ಒಳ ಉಡುಪಿಗೂ ಅನ್ವಯವಾಗುತ್ತಿದೆ.

ಬಹುತೇಕರಿಗೆ ಇದೇನು ಅಷ್ಟು ಮಹತ್ವದ್ದಲ್ಲ ಎನಿಸಬಹುದು. ಆದರೆ ಇಡೀ ದಿನ ಈ ಒಳ ಉಡುಪು ಧರಿಸಿದರೆ ಆಗುವ ಕಿರಿಕಿರಿ, ಫಿಟ್‌ ಇಲ್ಲದಿದ್ದರೆ ದೈಹಿಕವಾಗಿ ಆಗುವ ಸಮಸ್ಯೆ, ಬೆನ್ನುನೋವು, ಸ್ನಾಯು ಹಾಗೂ ಲಿಗಾಮೆಂಟ್‌ಗೆ ಆಗುವ ಧಕ್ಕೆ.. ಹೀಗೆ ಹಲವಾರು ತೊಂದರೆಗಳು ಉದ್ಭವಿಸುತ್ತವೆ. ಧರಿಸದಿದ್ದರೆ ಆರಾಮದಾಯಕ ಎನಿಸಿದರೂ ಕೆಲವೊಮ್ಮೆ ಇದು ಕೂಡ ಸಮಸ್ಯೆಗಳಿಗೆ ದಾರಿ ಮಾಡಿಕೊಡಬಹುದು ಎಂದೇ ಇದುವರೆಗೆ ಬಿಂಬಿಸಲಾಗಿತ್ತು.

ತ್ವಚೆಗೆ ತೊಂದರೆ

ಹೆಣ್ಣುಮಕ್ಕಳ ಅವಶ್ಯಕ ಉಡುಪಾಗಿರುವ ಇದನ್ನು ಧರಿಸಿದಾಗ ತ್ವಚೆಯನ್ನು ಅಪ್ಪಿ ಕೂಡುವ ಪಟ್ಟಿ ಕೆಲವೊಮ್ಮೆ ಚರ್ಮದ ಮೇಲ್ಪದರವನ್ನು ಉಜ್ಜಿ ಗಾಯವನ್ನೂ ಉಂಟು ಮಾಡಬಹುದು. ಅದಕ್ಕೆ ಬಳಸುವ ಲೇಸ್‌ ಅಥವಾ ಬಟ್ಟೆಯ ಗುಣಮಟ್ಟ ಸರಿ ಇಲ್ಲದಿದ್ದರೆ ತುರಿಕೆಗೆ ಕಾರಣವಾಗಬಹುದು.

ಬಿಗಿಯಾದ ಕಂಚುಕದಿಂದ ಎದೆ ಹಾಗೂ ಬೆನ್ನಿನ ಭಾಗದ ಸ್ನಾಯುಗಳಿಗೆ ರಕ್ತ ಸಂಚಲನ ಸರಿಯಾಗಿ ಆಗುವುದಿಲ್ಲ. ಕೆಲವು ಸಲ ಸ್ನಾಯುಗಳು ಒತ್ತಿಕೊಂಡು ನೋವಿನ ಅನುಭವವಾಗಬಹುದು. ಕೆಲವೊಮ್ಮೆ ಉಸಿರಾಡಲು ಕಷ್ಟವಾಗಬಹುದು.

ಕಂಚುಕ ಧರಿಸಿದರೆ ಬೆವರು ಅಧಿಕವಾಗಿ ಬೆವರಿನ ರಂಧ್ರಗಳು ಕಟ್ಟಿಕೊಳ್ಳಬಹುದು. ತ್ವಚೆಯಲ್ಲಿ ತುರಿಕೆ ಕಂಡು ಬರಬಹುದು. ಫಂಗಸ್‌ ಸೋಂಕು ಉಂಟಾಗಬಹುದು ಎಂಬುದು ತಜ್ಞರ ಅನಿಸಿಕೆ.

ಆದರೆ ಕಂಚುಕವನ್ನು ಧರಿಸದಿದ್ದರೆ ನಿಲ್ಲುವ ಅಥವಾ ಕೂರುವ ಭಂಗಿ ಬದಲಾಗಬಹುದು. ಬೆನ್ನು ನೋವು, ಭುಜ ಅಥವಾ ಕತ್ತು ನೋವಿಗೆ ಕಾರಣವಾಗಬಹುದು ಎನ್ನುವ ವಾದಗಳೂ ಇವೆ. ಆದರೆ ಭಾರತದಂತಹ ದೇಶದಲ್ಲಿ ಎಷ್ಟೋ ಮಹಿಳೆಯರಿಗೆ ಈ ಕಂಚುಕ ಧರಿಸುವ ಅಭ್ಯಾಸವಿಲ್ಲ. ಅವರೆಲ್ಲ ಇಂತಹ ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆಯೇ?

ನೈಸರ್ಗಿಕ

‘ಕ್ಲಿನಿಕಲ್‌ ಸ್ಟಡಿ ಆಫ್‌ ಪೇಯ್ನ್‌’ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ ಕಂಚುಕ ಧರಿಸದವರಿಗೆ ಕತ್ತು ಹಾಗೂ ಭುಜದ ನೋವು ಅನುಭವಕ್ಕೆ ಬರಲಿಲ್ಲವಂತೆ. ಸ್ತನವನ್ನು ಎತ್ತಿ ಹಿಡಿಯುವ ಸ್ನಾಯುಗಳ ನೋವೂ ಕಡಿಮೆಯಾಯಿತು ಎಂದು ಅಧ್ಯಯನದಲ್ಲಿ ಪಾಲ್ಗೊಂಡವರೇ ಹೇಳಿಕೊಂಡಿದ್ದಾರೆ.

ಇಡೀ ದಿನ ಕಂಚುಕ ಧರಿಸುವ ಅಭ್ಯಾಸ ಮಾಡಿಕೊಂಡರೆ ಸ್ತನಕ್ಕೆ ಆಧಾರ ಕೊಡುವ ಸ್ನಾಯುಗಳು ಹಾಗೂ ಲಿಗಾಮೆಂಟ್‌ಗಳು ಕಾಲ ಕಳೆದಂತೆ ತಾಕತ್ತು ಕಳೆದುಕೊಳ್ಳುತ್ತವೆ. ಹಾಗೆ ನೋಡಿದರೆ ನೈಸರ್ಗಿಕವಾಗಿದ್ದರೆ ಎದೆ ಹಾಗೂ ಬೆನ್ನಿನ ಭಾಗದ ಸ್ನಾಯು ಬಲಗೊಳ್ಳುತ್ತವೆ ಎಂಬುದು ಈ ಅಧ್ಯಯನ ಕೈಗೊಂಡ ಪ್ರಸೂತಿ ತಜ್ಞೆ ಲಕಿ ಸೆಕೊನ್‌ ಹೇಳುತ್ತಾರೆ.

ಫ್ರಾನ್ಸ್‌ ವಿಶ್ವವಿದ್ಯಾಲಯದ ಕ್ರೀಡಾ ವಿಜ್ಞಾನ ತಜ್ಞ ಪ್ರೊ. ಜೀನ್‌ ಡೆನಿಸ್‌ 15 ವರ್ಷಗಳಷ್ಟು ದೀರ್ಘ ಕಾಲ ನಡೆಸಿದ ಅಧ್ಯಯನದ ಪ್ರಕಾರ, ಕಂಚುಕ ಧರಿಸುವುದರಿಂದ ಸ್ತನಕ್ಕೆ ಆಧಾರ ನೀಡುವ ಸ್ನಾಯುವಿಗೆ ಅಪಾಯವಾಗುತ್ತದೆ. ಹದಿಹರೆಯದಿಂದಲೇ ಇದನ್ನು ಧರಿಸುವುದರಿಂದ ಅವು ಬಹು ಬೇಗ ಬಾಗುತ್ತವೆ. 

ತ್ವಚೆಗೆ ತೊಂದರೆಯಾಗಬಹುದು

ಮಹಿಳೆಯರು ಕಂಚುಕ ಧರಿಸದಿದ್ದರೆ ಏನೂ ತೊಂದರೆಯಿಲ್ಲ. ವಯಸ್ಸಾದ ಮೇಲೆ ಸ್ತನ ಸಡಿಲವಾಗುವುದು, ಬಾಗುವುದು ನೈಸರ್ಗಿಕ. ಹಾಗೆಯೇ ಇದನ್ನು ಧರಿಸಿ ದೀರ್ಘಕಾಲ ಕುಳಿತುಕೊಂಡು ಕೆಲಸ ಮಾಡುವುದರಿಂದ ಎಲಾಸ್ಟಿಕ್‌ ಬಿಗಿದುಕೊಂಡು ತ್ವಚೆಗೆ ತೊಂದರೆಯಾಗಬಹುದು. ಬೆವರಿನಿಂದ ಫಂಗಸ್‌ ಸೋಂಕು ಉಂಟಾಗಬಹುದು. ವೈರ್ ಇರುವ ಕಂಚುಕ ಧರಿಸಿದರೆ ಕ್ಯಾನ್ಸರ್‌ ಬರುತ್ತದೆ ಎಂಬ ವಾದದಲ್ಲೂ ಹುರುಳಿಲ್ಲ. ಅದು ಚರ್ಮಕ್ಕೆ ಒತ್ತುವುದರಿಂದ ಗಾಯವಾಗಬಹುದು ಅಷ್ಟೆ ಎನ್ನುತ್ತಾರೆ ರಾಧಾಕೃಷ್ಣ ಮಲ್ಟಿಸ್ಪೆಷಲಿಟಿ ಆಸ್ಪತ್ರೆಯ ಲ್ಯಾಪ್ರೊಸ್ಕೋಪಿಕ್‌ ಸರ್ಜನ್‌ ಮತ್ತು ಫರ್ಟಿಲಿಟಿ ತಜ್ಞೆ ಡಾ.ವಿದ್ಯಾ ವಿ. ಭಟ್‌.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು