ಶನಿವಾರ, 2 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳಿಗೆ ಜಂಕ್‌ಫುಡ್‌ ಏಕೆ ಅಪಾಯ? ಇಲ್ಲಿದೆ ಸಂಪೂರ್ಣ ಮಾಹಿತಿ

Last Updated 13 ಜುಲೈ 2020, 9:14 IST
ಅಕ್ಷರ ಗಾತ್ರ
[object Object]
ADVERTISEMENT
""

‘ಮಕ್ಕಳನ್ನು ಸಿನಿಮಾ ಕರೆದುಕೊಂಡು ಹೋಗುವಾಗ ಯಾವ ಸಿನಿಮಾ, ಯಾರು ನಟಿಸಿದ್ದಾರೆ, ಮಕ್ಕಳು ನೋಡಬಹುದಾದ ಸಿನಿಮಾವೇ ಎಂದು ಆಲೋಚಿಸುತ್ತೇವೆ. ಮಕ್ಕಳಿಗೆ ಪುಸ್ತಕ ಕೊಡಿಸುವಾಗಲೂ ಹತ್ತು ಬಾರಿ ಆಲೋಚನೆ ಮಾಡುವ ಪೋಷಕರು, ಮಕ್ಕಳು ಜಂಕ್‌ಫುಡ್‌ಗೆ ಕೇಳಿದಾಗ ಆ ತಿಂಡಿ ಪ್ಯಾಕೆಟ್‌ನ ಯಾವ ವಿವರವನ್ನೂ ನೋಡದೇ ಹೇಗೆ ಕೊಡಿಸುತ್ತಾರೆ’ ಎಂದು ಪ್ರಶ್ನಿಸುತ್ತಾರೆ ಮಕ್ಕಳ ಪೌಷ್ಟಿಕ ಆಹಾರ ತಜ್ಞ, ಟಿಮಿಯೋಸ್‌ ಮಕ್ಕಳ ಆಹಾರ ಸಂಸ್ಥೆಯ ಸಹಸ್ಥಾಪಕ ಅಶ್ವನಿ ಚೈತನ್ಯ.

[object Object]
ಮಕ್ಕಳ ಪೌಷ್ಟಿಕ ಆಹಾರ
ತಜ್ಞ ಅಶ್ವನಿ ಚೈತನ್ಯ

ಮಕ್ಕಳನ್ನು ಸುಲಭವಾಗಿ ಸಮಾಧಾನ ಪಡಿಸಲುಪೋಷಕರು ಕಂಡುಕೊಂಡ ಸರಳ ಮಾರ್ಗ ಜಂಕ್‌ಫುಡ್‌, ಫಾಸ್ಟ್‌ ಫುಡ್‌ ಅಥವಾ ಪ್ಯಾಕೆಟ್‌ ತಿಂಡಿ. ಪ್ರಯಾಣದ ಅವಧಿಯಲ್ಲಿ ಅಥವಾ ವಿಭಕ್ತ ಕುಟುಂಬಗಳಲ್ಲಿ ಮಕ್ಕಳ ಮೇಲೆ ಗಮನ ನೀಡಲು ಆಗುತ್ತಿಲ್ಲ ಎಂದಾಗ ಇಂತಹ ಪ್ಯಾಕೆಟ್‌ ತಿಂಡಿ ಕೊಟ್ಟು ಕೂರಿಸುತ್ತಾರೆ. ಇಂತಹ ಜಂಕ್‌ಫುಡ್‌ನಲ್ಲಿ ಅನೇಕ ದಿನಗಳ ಕಾಲ ಕೆಡದಂತೆ ಇರಲು ರಾಸಾಯನಿಕ ಅಂಶ, ರುಚಿ ಹೆಚ್ಚಿಸಲು ಟೇಸ್ಟಿಂಗ್‌ ಪೌಡರ್‌, ಉಪ್ಪು, ಮಸಾಲ ಎಲ್ಲವನ್ನೂ ಸ್ವಲ್ಪ ಹೆಚ್ಚಾಗಿಯೇ ಬಳಸಿರುತ್ತಾರೆ. ಇಂತಹ ಪದಾರ್ಥಗಳನ್ನು ಮಕ್ಕಳು ಹೆಚ್ಚು ತಿನ್ನುವುದು ಅಪಾಯಕಾರಿ ಎನ್ನುವ ವೈದ್ಯರು, ಜಂಕ್‌ಫುಡ್‌ ಕುರಿತಾಗಿ ಕೆಲ ಸಂಗತಿಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ.

ಜಂಕ್‌ಫುಡ್‌ ಆಯ್ಕೆ ಹೇಗೆ?

ಅನಿವಾರ್ಯವಾದರೆ ಮಾತ್ರ ಮಕ್ಕಳಿಗೆ ಮಿತವಾಗಿ ಜಂಕ್‌ಫುಡ್‌ ಅಭ್ಯಾಸ ಅಡ್ಡಿ ಇಲ್ಲ. ಆ ಜಂಕ್‌ಫುಡ್ ಪ್ಯಾಕೆಟ್‌ ಹಿಂಭಾಗದಲ್ಲಿರುವ ವಿವರಗಳನ್ನು ಪೋಷಕರು ಗಮನಿಸಬೇಕು. ಕುರುಕಲು ತಿಂಡಿಯನ್ನು‌ ಯಾವುದರಿಂದ ತಯಾರಿಸಲಾಗಿದೆ, ಯಾವಾಗ ತಯಾರಿಸಲಾಗಿದೆ ಎಂಬ ವಿವರವನ್ನು ತಪ್ಪದೇ ಗಮನಿಸಬೇಕು.

ಈಗ ಎಲ್ಲಾ ಬ್ರಾಂಡ್‌ ಪ್ಯಾಕೆಟ್‌ ತಿಂಡಿಗಳ ಹಿಂದೆ ಅದನ್ನು ತಯಾರಿಸಲು ಬಳಸಿರುವ ಪದಾರ್ಥಗಳ ವಿವರವನ್ನು ಕಡ್ಡಾಯವಾಗಿ ನಮೂದಿಸಿರಲಾಗುತ್ತದೆ. ಅದರಲ್ಲಿರುವ ಕಾರ್ಬೋಹೈಡ್ರೇಟ್‌, ಕೊಬ್ಬು, ಪ್ರೋಟಿನ್ ಪ್ರಮಾಣ‌, ಅದಕ್ಕೆ ಬಳಸಿದ ಪದಾರ್ಥಗಳ ಪ್ರಮಾಣವನ್ನು ಪೋಷಕರು ಗಮನಿಸಬೇಕು.

ವೈದ್ಯಕೀಯ ಲೆಕ್ಕಾಚಾರದ ಪ್ರಕಾರ ಮಕ್ಕಳವಯಸ್ಸಿನ ಅನುಗುಣವಾಗಿ ಪ್ರತಿದಿನ ಇಂತಿಷ್ಟೇ ಪ್ರಮಾಣದ ಕೊಬ್ಬು, ಪ್ರೋಟಿನ್‌ ಅಥವಾ ಪೋಷಕಾಂಶಗಳು ದೇಹ ಸೇರಬೇಕು. ಇದುವಯಸ್ಸಿನಿಂದ ವಯಸ್ಸಿಗೆ ಬೇರೆ ಬೇರೆ ಆಗಿರುವುದರಿಂದ ಪೋಷಕರು ಅರಿತುಕೊಂಡರೆ ಉತ್ತಮ. ಜಂಕ್‌ಫುಡ್‌ನಲ್ಲಿ ಅತಿ ಹೆಚ್ಚು ಕೊಬ್ಬಿನ ಅಂಶ ಇದ್ದರೆ ಮಕ್ಕಳು ಒಂದು ಪ್ಯಾಕೆಟ್‌ ತಿಂದರೆ ಸಾಕಾಗುತ್ತದೆ. ಮಕ್ಕಳು ಎಷ್ಟು ಪ್ರಮಾಣದಲ್ಲಿ ಸೇವಿಸಬಹುದು ಎಂದು ಪ್ಯಾಕೆಟ್‌ನಲ್ಲಿ ನಮೂದಿಸಿದ ವಿವರಗಳನ್ನು ಓದಿದ ಬಳಿಕವಷ್ಟೇ ಇಂಥ ಆಹಾರವನ್ನು ಮಕ್ಕಳಿಗೆ ನೀಡಬೇಕು.

ಆದರೆ ಜಂಕ್‌ಫುಡ್‌ ಪ್ಯಾಕೆಟ್‌ಗಳನ್ನು ಮಕ್ಕಳು ದಿನಕ್ಕೆ 5–6 ತಿನ್ನುವವರೂ ಇದ್ದಾರೆ. ಇಂತಹ ಚಟದಿಂದಾಗಿ ಮಕ್ಕಳು ಕಾಯಿಲೆಗಳಿಗೆ ತುತ್ತಾಗಬಹುದು. ಮಕ್ಕಳ ದೇಹದಲ್ಲಿ ಅಗತ್ಯಕ್ಕಿಂತ ಹೆಚ್ಚು ಕೊಬ್ಬು ಸೇರುವುದರ ಜೊತೆಗೆ ರಾಸಾಯನಿಕ ಅಂಶಗಳು ಹೊಟ್ಟೆ ಸೇರುತ್ತದೆ.ತಿಂಡಿಗಳನ್ನು ಆಯ್ಕೆ ಮಾಡುವಾಗ ಅದರಲ್ಲಿ ಉಪ್ಪು, ಮಸಾಲ, ರಾಸಾಯನಿಕ ಪದಾರ್ಥಗಳು ಕಡಿಮೆ ಇರುವುದನ್ನು ಪೋಷಕರು ಖಾತ್ರಿ ಪಡಿಸಿಕೊಳ್ಳಬೇಕು.

ಮಕ್ಕಳ ವಯಸ್ಸಿಗನುಗುಣವಾಗಿ ಮಾರ್ಕೆಟ್‌ನಲ್ಲಿ ತಿಂಡಿ, ಆಹಾರ ಸಿಗುತ್ತವೆ. ಅದೇ ರೀತಿ ಅವುಗಳನ್ನು ಕೊಡಬೇಕು. 2 ವರ್ಷದೊಳಗಿನ ಮಕ್ಕಳಿಗೆ ಮಾರುಕಟ್ಟೆಯಲ್ಲಿ ನಾನಾ ರೀತಿಯ ಸಿದ್ಧ ಆಹಾರ ಸಿಗುತ್ತವೆ. ಪೋಷಕರು ಕಡ್ಡಾಯವಾಗಿ ದಿನಾಂಕ ನೋಡಿ ಖರೀದಿಸಬೇಕು. ಒಮ್ಮೊಮ್ಮೆ ಆ ಪ್ಯಾಕೆಟ್,‌ ಮಗುವಿನ ವಯಸ್ಸಿಗಿಂತ ಹಳೆಯದಾಗಿರುತ್ತವೆ ಎನ್ನುತ್ತಾರೆ ಅಶ್ವನಿ.

ಎಷ್ಟು ಮತ್ತು ಯಾವ ಸಮಯದಲ್ಲಿ ತಿನ್ನಬೇಕು?

ಕೆಲ ಪೋಷಕರು ಚಿಪ್ಸ್‌, ಕರಿದ ತಿಂಡಿಗಳ ಇಡೀ ಪ್ಯಾಕೆಟ್‌ಗಳನ್ನು ಮಕ್ಕಳ ಕೈಯಲ್ಲಿಟ್ಟು ಆಟವಾಡಲು ಬಿಡುತ್ತಾರೆ. ಆದರೆ, ಇದು ತಪ್ಪು.ಈಗಿನ ಕೆಲ ಆಹಾರ ಬ್ರ್ಯಾಂಡ್‌ನವರು ಪ್ಯಾಕೆಟ್‌ ದೊಡ್ಡ ಮಾಡಿ, ಅದರಲ್ಲಿ ಸ್ವಲ್ಪವೇ ತಿಂಡಿಗಳನ್ನು ಹಾಕಿರುತ್ತಾರೆ. ಇದರ ಹಿಂದೆ ಇರುವುದು ಇದೇ ಗುಟ್ಟು. ಮಕ್ಕಳು ತಿನ್ನುವ ಪ್ರಮಾಣಕ್ಕೆ ಅನುಗುಣವಾಗಿ ಅದರಲ್ಲಿ ತಿಂಡಿ ಹಾಕಿರುತ್ತಾರೆ. ಆದರೆ ನಾವು ಮಕ್ಕಳು ಹಠ ಮಾಡುತ್ತಾರೆ ಎಂದು 4–5 ಪ್ಯಾಕೆಟ್‌ ತಿಂಡಿ ಕೊಡಿಸುತ್ತೇವೆ ಎನ್ನುತ್ತಾರೆ ಅಶ್ವನಿ.

ಮಕ್ಕಳು ಯಾವ ಅವಧಿಯಲ್ಲಿ ಈ ತಿಂಡಿಗಳನ್ನು ತಿನ್ನುತ್ತಿದ್ದಾರೆ ಎಂಬುದೂ ಮುಖ್ಯ. ಊಟದ ಸಮಯದಲ್ಲಿ ಈ ತಿಂಡಿಗಳನ್ನು ತಿಂದರೆ ಮಕ್ಕಳು ನಂತರ ಊಟ ಮಾಡುವುದಿಲ್ಲ. ಹಾಗಾಗಿ ಆದಷ್ಟು ಉಪಾಹಾರ, ಊಟದ ಸಮಯ ತಪ್ಪಿಸಿ, ಬೇರೆ ಅವಧಿಯಲ್ಲಿ ಇಂತಹ ತಿಂಡಿಗಳನ್ನು ಕೊಡಬೇಕು.

ಮಕ್ಕಳ ತಿನ್ನುವ ಅಭ್ಯಾಸ ನಿರ್ಬಂಧಿಸಬಾರದು. ಅತಿಯಾದ ತಿನ್ನುವ ಚಟಕ್ಕೆ ಕಡಿವಾಣ ಹಾಕಬೇಕು. ಹೋಟೆಲ್‌, ಪಿಜ್ಜಾ, ಬರ್ಗರ್‌ ಎಲ್ಲಾ ಬಗೆಯ ಆಹಾರದ ಪರಿಚಯ ಮಕ್ಕಳಿಗೆ ಇರಬೇಕು. ಅದೇ ಅಭ್ಯಾಸವಾಗಬಾರದು ಎಂಬುದು ಅವರ ಸಲಹೆ.

ಸೋಡಾ ಜ್ಯೂಸ್‌ ಮಕ್ಕಳಿಗೆ ಅಪಾಯ

ಈ ಜ್ಯೂಸ್‌ಗಳಲ್ಲಿ ಸೋಡಾಕ್ಕಿಂತ ಸಕ್ಕರೆ ಅಂಶ ಹೆಚ್ಚು. ಈಗ ಮೂರು ವರ್ಷದ ಮಕ್ಕಳಿಂದಲೇ ಅಂತಹ ಜ್ಯೂಸ್‌ ಕುಡಿಯುತ್ತಾರೆ. ಇದರಲ್ಲಿರುವ ಸಕ್ಕರೆ ಅಂಶ ಮಕ್ಕಳಲ್ಲಿ ಮಧುಮೇಹದಂತಹ ಗಂಭೀರ ಕಾಯಿಲೆಗಳ ಅಪಾಯ ತರಬಹುದು.

ಪೋಷಕರಿಗೆ ಸಲಹೆ

  1. ಮಕ್ಕಳು ಆರೋಗ್ಯಯುತ ಆಹಾರ ಸೇವಿಸಬೇಕು ಎಂದರೆ ಪೋಷಕರು ಮೊದಲು ಅಂತಹ ಅಭ್ಯಾಸ ಬೆಳೆಸಿಕೊಳ್ಳಬೇಕು. ಮನೆಯಲ್ಲಿ ಮಾಡಿದ ಆಹಾರ, ಹಣ್ಣು, ತರಕಾರಿ ಜಾಸ್ತಿ ಸೇವನೆ ಮಾಡಿ. ಮನೆಯೂಟ ರೂಢಿಸಿಕೊಳ್ಳಬೇಕು
  2. ಮನೆಯಲ್ಲೇ ಪಿಜ್ಜಾ, ಬರ್ಗರ್‌ನಂತಹ ತಿಂಡಿಗಳನ್ನು ಮಕ್ಕಳಿಗೆ ಮಾಡಿಕೊಡಿ. ಮಾರ್ಕೆಟ್‌ನಲ್ಲಿ ಅದಕ್ಕೆ ಹೆಚ್ಚು ಉಪ್ಪು, ಮಸಾಲ ಬಳಸಿರುತ್ತಾರೆ
  3. ಮಕ್ಕಳಿಗೆ ವಾರಕ್ಕೆ ಒಂದು ಬಾರಿಕರಿದ ಪದಾರ್ಥಗಳನ್ನು ಕೊಟ್ಟರೆ ಸಾಕು
  4. ಶೇಂಗಾ, ಎಳ್ಳು, ರವೆ ಮುಂತಾದ ಪದಾರ್ಥಗಳಿಂದ ಮಾಡಿದ ಉಂಡೆ, ಲಡ್ಡುಗಳನ್ನು, ಸಾಂಪ್ರದಾಯಿಕ ತಿಂಡಿಗಳನ್ನುಮಕ್ಕಳಿಗೆ ಮಾಡಿ ಕೊಡಿ
  5. ಮಕ್ಕಳು ಹೊಟ್ಟೆ ತುಂಬಿದೆ, ಊಟ ಮಾಡಲ್ಲ ಎಂದಾಗ ಅವರ ಮಾತಿಗೆ ಬೆಲೆ ಕೊಡಿ. ಅತಿಯಾಗಿ ತಿನ್ನಿಸಬೇಡಿ. ಜಂಕ್‌ಫುಡ್‌ ಬಗ್ಗೆ, ಅತಿ ಹೆಚ್ಚು ಜಂಕ್‌ ತಿಂದರೆ ಏನಾಗುತ್ತದೆ ಎಂಬುದನ್ನು ಮಕ್ಕಳಿಗೆ ಅರಿವಾಗುವಂತೆ ಬಿಡಿಸಿ ಹೇಳಿ
  6. ಮಕ್ಕಳು ಟಿವಿ ನೋಡುವಾಗ, ಓದುವ ಸಮಯದಲ್ಲಿ ಹಣ್ಣುಗಳನ್ನು ತಿನ್ನುವುದು, ಅವುಗಳ ಜ್ಯೂಸ್‌ ಕುಡಿಯುವುದನ್ನು ಅಭ್ಯಾಸ ಮಾಡಿಸಿ
  7. ಹೊರ ಹೋಗುವಾಗ ಕಡಲೆ ಬೀಜ, ಬಾದಾಮಿ, ಗೋಡಂಬಿ, ದ್ರಾಕ್ಷಿಯಂತಹ ಒಣಹಣ್ಣುಗಳನ್ನು ಜೊತೆಗೆ ಒಯ್ಯಿರಿ. ಮಕ್ಕಳಿಗೆ ಹಸಿವಾದರೆ ಅದನ್ನೇ ಕೊಡಿ
  8. ಮಕ್ಕಳಿಗೆ ದಿನಕ್ಕೆ ಕನಿಷ್ಟ 6 ಗ್ಲಾಸ್‌ ನೀರು ಕುಡಿಯುವಂತೆ ನೋಡಿಕೊಳ್ಳಿ
  9. ಮಕ್ಕಳ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚು ಮಾಡುವಂತಹ ಆಹಾರ ನೀಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT