ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕತ್ರೀನಾ ಕೈಫ್ ಫಿಟ್‌ನೆಸ್ ರಹಸ್ಯ

Last Updated 17 ನವೆಂಬರ್ 2019, 19:31 IST
ಅಕ್ಷರ ಗಾತ್ರ

ಹಾಲು ಬೆಳದಿಂಗಳ ಮೈಬಣ್ಣ, ಸೂಜಿಗಲ್ಲಿನಂತೆ ಸೆಳೆಯುವ ಕಂಗಳು, ಬಿರಿದ ಮಲ್ಲಿಗೆಯ ನಗು ಹೊತ್ತ ಚೆಲುವೆ ಕತ್ರೀನಾ ಕೈಫ್ ಬಾಲಿವುಡ್‌ನಲ್ಲಿ ‘ಕ್ಯಾಟ್’ ಅಂತಲೇ ಪ್ರಸಿದ್ಧಿ. ಚೀನಾದಲ್ಲಿ ಹುಟ್ಟಿದ ಈ ಚೆಲುವೆಗೆ ವಯಸ್ಸು ಮೂವತ್ತೈದು ಎಂದರೆ ನಂಬುವುದು ಕಷ್ಟ!. ಅದಕ್ಕೆ ಕಾರಣ ಕತ್ರೀನಾಳ ಅಂದದ ಮೈಕಟ್ಟು.

ಈ ವಯಸ್ಸಿನಲ್ಲೂ ಮೊದಲಿನಂತೆಯೇ ಕತ್ರೀನಾ ತನ್ನ ದೇಹಸಿರಿಯನ್ನು ಕಾಪಾಡಿಕೊಂಡಿರುವ ರಹಸ್ಯವೆಂದರೆ ಜಿಮ್ ಮತ್ತು ಯೋಗ. ಫಿಟ್‌ನೆಸ್ ವಿಷಯದಲ್ಲಿ ಬಲು ಕಟ್ಟುನಿಟ್ಟಾಗಿರುವ ಕತ್ರೀನಾ ಆ ವಿಚಾರದಲ್ಲಿ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲವಂತೆ. ದೇಹವನ್ನು ಶಿಲ್ಪದಂತೆ ಕಡೆಯುವಂಥ ಕೆಲಸ ರಾತ್ರೋರಾತ್ರಿಯಾಗುವಂಥದ್ದಲ್ಲ ಅದಕ್ಕೆ ಅಪಾರವಾದ ತಾಳ್ಮೆ ಮತ್ತು ದೈಹಿಕ ಕಸರತ್ತಿನ ಅವಶ್ಯಕತೆ ಇದೆ ಅನ್ನುವುದು ಕತ್ರೀನಾ ಅಭಿಮತ.

‘ಸ್ಟೇ ಫಿಟ್, ಈಡ್ ಫಿಟ್’ ಅನ್ನುವುದನ್ನೇ ಮಂತ್ರವಾಗಿರಿಸಿಕೊಂಡಿರುವ ಕತ್ರೀನಾ ಎಂದಿಗೂ ಜಿಮ್ ತಪ್ಪಿಸುವುದಿಲ್ಲ. ಸೆಲೆಬ್ರಿಟಿ ಫಿಟ್‌ನೆಸ್ ಟ್ರೇನರ್ ಯಾಸ್ಮೀನ್ ಕರಾಚಿವಾಲಾ ಅವರ ಮಾರ್ಗದರ್ಶನದಲ್ಲಿ ಜಿಮ್‌ನಲ್ಲಿ ಬೆವರಿಳಿಸುವ ಕತ್ರೀನಾ, ಯುವಜನರ ಫಿಟ್‌ನೆಸ್ ಐಕಾನ್ ಆಗಿದ್ದಾರೆ.

ವ್ಯಾಯಾಮ ಮತ್ತು ಯೋಗಕ್ಕೆ ಮೊರೆ

ತೂಕದ ನಿಯಂತ್ರಣಕ್ಕಾಗಿ ಕತ್ರೀನಾ ಕಠಿಣ ವ್ಯಾಯಾಮದ ಮೊರೆ ಹೋಗುತ್ತಾರಂತೆ. ಅಂತೆಯೇ ಸ್ನಾಯುಗಳ ಬಲಕ್ಕಾಗಿ ಯೋಗ ಮಾಡುತ್ತಾರೆ. ಇದರಿಂದಾಗಿ ದೇಹ ತೂಕ ನಿಯಂತ್ರಣದಲ್ಲಿಟ್ಟುಕೊಳ್ಳುವುದಲ್ಲದೇ, ಸ್ನಾಯುಬಲದ ಜೊತೆಗೆ ದೇಹ ಮತ್ತು ಮನಸ್ಸು ಸದೃಢವಾಗಿರಬಲ್ಲದು ಅನ್ನುತ್ತಾರೆ ಅವರು.

ವಿಶೇಷ ಉಪಕರಣ ಬಳಸಿ ಮಾಡುವ ಪೈಲೇಟ್ಸ್ ವ್ಯಾಯಾಮ ಮತ್ತು ಕಾರ್ಡಿಯೊಕ್ಕೆ ಆದ್ಯತೆ ನೀಡುವ ಕತ್ರೀನಾ, ನಿರ್ದಿಷ್ಟ ಗುರಿ ಇಟ್ಟುಕೊಂಡೇ ನಿತ್ಯವೂ ವ್ಯಾಯಾಮದಲ್ಲಿ ತೊಡಗಿಕೊಳ್ಳುತ್ತಾರೆ. ಪೈಲೇಟ್ಸ್‌ ಮತ್ತು ಕಾರ್ಡಿಯೊ ದಿಂದಾಗಿ ದೇಹದ ಭಂಗಿಗಳನ್ನು ಸುಧಾರಿಸಲು ಸಾಧ್ಯ. ಮನಸಿನ ಏಕಾಗ್ರತೆಗೂ ಇದು ಪೂರಕ. ನಿತ್ಯವೂ ಮಾಡುವ ಯೋಗ ಅವರ ದೇಹ ತೆಳ್ಳಗಾಗಲು ಸಹಕಾರಿಯಾಗಿದೆ. ಇದರ ಜೊತೆಗೆ ವಾಕಿಂಗ್, ಜಾಗಿಂಗ್, ಸೈಕ್ಲಿಂಗ್‌, ಫುಟ್‌ಬಾಲ್ ಆಡುವುದು, ಈಜುವುದನ್ನೂ ಮಾಡುತ್ತಾರೆ.

‘ಯಾವುದೇ ವ್ಯಾಯಾಮ ಮಾಡುವ ಮುನ್ನ ನಿರ್ದಿಷ್ಟವಾದ ಗುರಿಯನ್ನು ನಿಶ್ಚಯಿಸಿಕೊಳ್ಳಿ. ಎಲ್ಲರ ದೇಹವೂ ಒಂದೇ ರೀತಿ ಇರುವುದಿಲ್ಲ. ನಿಮ್ಮ ದೈಹಿಕ ಸಾಮರ್ಥ್ಯಕ್ಕನುಗುಣವಾಗಿ ನೀವು ಮಾಡಬಯಸುವ ವ್ಯಾಯಾಮ, ಕಸರತ್ತುಗಳನ್ನು ಯೋಜಿಸಿಕೊಳ್ಳಿ. ವರ್ಕೌಟ್ ಮಾಡುವಾಗ ಆ ಕ್ಷಣಗಳನ್ನು ಹಿಂಸೆಯಂತೆ ಕಳೆಯಬೇಡಿ.ವರ್ಕೌಟ್ ಮಾಡುವುದನ್ನು ಎಂಜಾಯ್ ಮಾಡಿ, ಪ್ರೀತಿಸಿ ಆಗ ಮಾತ್ರ ನೀವಂದುಕೊಂಡ ಗುರಿ ಮುಟ್ಟಲು ಸಾಧ್ಯ’ ಅನ್ನುತ್ತಾರೆ ಕತ್ರೀನಾ ಅವರ ಫಿಟ್‌ನೆಸ್‌ ಟ್ರೇನರ್ ಯಾಸ್ಮಿನ್ ಕರಾಚಿವಾಲಾ.

ಏನ್ ತಿಂತಾರೆ?

ದೇಹಾಕೃತಿಯನ್ನು ಒಂದೇ ರೀತಿಯಲ್ಲಿ ಕಾಪಾಡಿಕೊಳ್ಳಲು ಸರಿಯಾದ ಸಮಯಕ್ಕೆ ಊಟ ಮಾಡುವುದು ಮುಖ್ಯ ಅನ್ನುವ ಕತ್ರೀನಾ, ತಮ್ಮ ಆಹಾರದಲ್ಲಿ ದ್ರವಾಂಶ, ಪ್ರೋಟೀನ್ ಮತ್ತು ನಾರಿನಾಂಶ ಹೆಚ್ಚು ಇರುವಂತೆ ನೋಡಿಕೊಳ್ಳುತ್ತಾರೆ. ಹಾಗೆಂದು ಕೊಬ್ಬಿನಾಂಶವುಳ್ಳ ತಿನ್ನುವುದಿಲ್ಲವೆಂತಲ್ಲ. ಆರೋಗ್ಯಕ್ಕೆ ಅಗತ್ಯವಾಗಿರುವಷ್ಟೇ ಕೊಬ್ಬಿನಾಂಶದ ಆಹಾರ ಸೇವಿಸುತ್ತಾರೆ.

ಬೆಳಿಗ್ಗೆ: ಎದ್ದ ತಕ್ಷಣ ನಾಲ್ಕು ಲೋಟ ನೀರು ಸೇವನೆ, ತುಸು ಹೊತ್ತಿನ ಬಳಿಕ ಓಟ್‌ಮೀಲ್, ಮೊಳಕೆಕಾಳು ತಿಂದ ಬಳಿಕ ಮೊಟ್ಟೆಯ ಬಿಳಿಭಾಗ ಮತ್ತು ತಾಜಾ ದಾಳಿಂಬೆಯ ಜ್ಯೂಸ್.

ಮಧ್ಯಾಹ್ನ: ಗ್ರೀನ್ ಸಲಾಡ್, ಸುಟ್ಟಿರುವ ಮೀನು, ಬ್ರೌನ್ ಬ್ರೆಡ್ ಮತ್ತು ಮಜ್ಜಿಗೆ

ಸಂಜೆ: ಬ್ರೌನ್ ಬ್ರೆಡ್ ಅಥವಾ ಸ್ಯಾಂಡ್‌ವಿಚ್

ರಾತ್ರಿ: ಎಣ್ಣೆರಹಿತವಾಗಿ ಬೇಯಿಸಿದ ತರಕಾರಿಗಳು. ಗ್ರೀನ್ ಸಲಾಡ್, ದಾಲ್, ಚಪಾತಿ ಮತ್ತು ತರಕಾರಿ ಸೂಪ್. ಒಮ್ಮೆಮ್ಮೆ ಮೊಟ್ಟೆಯ ಬಿಳಿಭಾಗ

ಹುಟ್ಟಿದ್ದು: ಜುಲೈ 16, 1984 (35 ವರ್ಷ)

ಎತ್ತರ: 5 ಅಡಿ 8 ಇಂಚು

ತೂಕ: 58 ಕೆ.ಜಿ.

ಸುತ್ತಳತೆ: 34–26–34

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT