ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಹಭಾಷೆ ಅರಿತರೆ ಅದೇ ಫಿಟ್‌ನೆಸ್‌: ನಟಿ ಕಾವ್ಯ ಶಾ

Last Updated 17 ನವೆಂಬರ್ 2019, 19:31 IST
ಅಕ್ಷರ ಗಾತ್ರ

ದೇಹಕ್ಕೊಂದು ಭಾಷೆಯಿದೆ. ಅದನ್ನು ಸರಿಯಾಗಿ ಅರ್ಥಮಾಡಿಕೊಳ್ಳುವುದೇ ಫಿಟ್‌ನೆಸ್‌. ದೇಹದ ಅಂಗಾಂಗಗಳು ಒಂದಕ್ಕೊಂದು ಪೂರಕವಾಗಿ ಕೆಲಸ ಮಾಡುತ್ತವೆ. ಅದು ತನಗೆ ಕಷ್ಟವಾದಾಗ ತನ್ನದೇ ಧಾಟಿಯಲ್ಲಿ ಹೇಳುತ್ತದೆ. ಅವೆಲ್ಲವನ್ನೂ ನಾವೊಮ್ಮೆ ಸೂಕ್ಷ್ಮವಾಗಿ ಅರಿಯಲು ಸಾಧ್ಯವಾದರೆ ಅದಕ್ಕಿಂತ ದೊಡ್ಡ ಫಿಟ್‌ನೆಸ್‌ ಮಂತ್ರ ಬೇರೇನಿದೆ ಹೇಳಿ ಎನ್ನುತ್ತಾರೆ ನಟಿ ಕಾವ್ಯಾ ಶಾ.

ದಿನವೊಂದಕ್ಕೆ ಕನಿಷ್ಠ ಒಂದು ಗಂಟೆಯಾದರೂ ಜಿಮ್‌ನಲ್ಲಿ ಬೆವರಿಳಿಸುವ ಅವರು, ದೇಹ ಸದೃಢವಾಗಿದ್ದರೆ, ಮನಸ್ಸು ಲವಲವಿಕೆಯಿಂದ ಇರುತ್ತದೆ. ಮನಸ್ಸು ಗಟ್ಟಿಯಾಗಿದ್ದರೆ, ದೇಹಕ್ಕೆ ಯಾವುದೇ ಕಾಯಿಲೆಯೂ ತಕ್ಷಣಕ್ಕೆ ಅಂಟುವುದಿಲ್ಲ. ಮನಸ್ಸು ದೇಹಗಳೆರಡೂ ಒಂದಕ್ಕೊಂದು ಪೂರಕವಾಗಿ ಕೆಲಸ ಮಾಡುತ್ತವೆ. ಹಾಗಾಗಿ ಅವನ್ನು ಚೆನ್ನಾಗಿ ಇಟ್ಟುಕೊಳ್ಳುವುದಕ್ಕೆ ಆದ್ಯತೆ ಸಿಗಬೇಕು ಎನ್ನುವ ಅವರು ಮೂಲತಃ ಭರತನಾಟ್ಯ ನೃತ್ಯಪಟು. ಜೀವನ ಹಾಗೂ ಆರೋಗ್ಯದ ಬಗ್ಗೆ ಅಪಾರ ಆಸಕ್ತಿ ಇಟ್ಟುಕೊಂಡಿರುವ ಕಾವ್ಯಾ ಬಿಡುವಿನ ವೇಳೆಯಲ್ಲಿ ನೊಂದವರಿಗೆ, ಜೀವನದ ಅಸಹಾಯಕ ಸ್ಥಿತಿಯಲ್ಲಿರುವವರಿಗೆ ಆಪ್ತಸಮಾಲೋಚನೆಯನ್ನೂ ನಡೆಸುತ್ತಾರೆ.‌

ಸತ್ವಯುತ ಆಹಾರ ಸೇವನೆ, ಎಂಟು ಗಂಟೆ ನಿದ್ದೆ, ಕನಿಷ್ಠ 8ರಿಂದ 10 ಲೋಟ ನೀರು ಕುಡಿಯುವುದು, ಊಟದಲ್ಲಿ ತರಕಾರಿ ಮತ್ತು ಹಣ್ಣು ಹೇರಳವಾಗಿರುವಂತೆ ನೋಡಿಕೊಳ್ಳುವುದು, ಹೇಗಾದರೂ ಸರಿ ದೈಹಿಕ ಶ್ರಮ ಪ್ರೇರಿತ ಕೆಲಸ ಮಾಡುವುದು, ಧನಾತ್ಮಕ ಆಲೋಚನೆಯನ್ನು ಅಳವಡಿಸಿಕೊಳ್ಳುವುದು, ಅದಕ್ಕಾಗಿ ಪುಸ್ತಕಗಳನ್ನು ಓದುವುದು, ಕಥೆ ಕೇಳುವುದು ಇವೆಲ್ಲವೂ ಆರೋಗ್ಯದ ದೃಷ್ಟಿಯಿಂದ ನಿತ್ಯ ಅಳವಡಿಸಿಕೊಳ್ಳಲೇಬೇಕಾದ ಅಂಶಗಳು.

ಸದ್ಯಕ್ಕೆ ಬುದ್ಧನ ಚಿಂತನೆಗಳಿಂದ ಪ್ರಭಾವಿತಳಾಗಿದ್ದೇನೆ. ಆತನ ಬೋಧನೆಗಳು ಇರುವ ಚಿಕ್ಕ ಚಿಕ್ಕ ಕಥೆಗಳು ಜೀವನದಲ್ಲಿ ಸಂದರ್ಭವನ್ನು ಹೇಗೆ ನಿಭಾಯಿಸಬೇಕು ಎಂಬುದನ್ನು ಹೇಳಿಕೊಟ್ಟಿವೆ. ಜನರ ಜತೆ ಬೆರೆಯಲು ಇವೆಲ್ಲವೂ ಸಹಾಯಕವಾಗಿದೆ ಎನ್ನುವ ಅವರು ನಟಿಸಿರುವ ‘ಮೂಕಜ್ಜಿಯ ಕನಸುಗಳು’ ಇನ್ನೇನು ಬಿಡುಗಡೆಯಾಗಬೇಕಿದೆ. ಜತೆಗೆ ತಮಿಳು ಸಿನಿಮಾಗಳಲ್ಲಿಯೂ ನಟಿಸಿ ಬಂದಿದ್ದಾರೆ.

ಅವರ ವ್ಯಾಯಾಮ ಪಟ್ಟಿಯಲ್ಲಿ ಇಷ್ಟಂತೂ ಇರುತ್ತದೆ; 10 ರಿಂದ 20 ನಿಮಿಷ ಕಾರ್ಡಿಯೊ ಮಾಡುವುದು. ಅದರಲ್ಲಿ ಸೈಕ್ಲಿಂಗ್‌, ವಾಕಿಂಗ್‌ ಮತ್ತು ರನ್ನಿಂಗ್‌ ಯಾವುದಾದರೊಂದನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಜತೆಗೆ ದೇಹ ಕಂಡೀಷನಿಂಗ್‌ಗೆ ಒಳಗಾಗಲೆಂದೇ ವ್ಯಾಯಾಮವಿರುತ್ತದೆ. ಇದಾದ ಮೇಲೆ ಜೀವನಿರೋಧಕ ಶಕ್ತಿ ಹೆಚ್ಚಿಸುವಂತಹ ವರ್ಕ್‌ ಔಟ್‌ ನಡೆಸುತ್ತಾರೆ. ಸಾಮಾನ್ಯವಾಗಿ ಟೇಬಲ್‌ ಬಳಸಿ, ಪುಷ್‌ಅಪ್‌ ಮತ್ತು ಪುಲ್‌ ಅಪ್‌ ಮಾಡುತ್ತಾರೆ.

ಯಾವುದೇ ಕೆಲಸ ಆರಂಭಿಸುವಾಗಲೂ ಅದಕ್ಕೊಂದಷ್ಟು ತಯಾರಿ ಬೇಕಾಗುತ್ತದೆ. ಅದನ್ನು ಮುಗಿಸುವಾಗಲೂ ಅಷ್ಟೇ ಬದ್ಧತೆ ಬೇಕು. ವ್ಯಾಯಾಮವೂ ಇದಕ್ಕೆ ಹೊರತಲ್ಲ. ವಾರ್ಮ್‌ ಅಪ್‌ ವ್ಯಾಯಾಮದ ಮೂಲಕ ದೇಹವನ್ನು ಅಣಿಗೊಳಿಸಲಾಗುತ್ತದೆ. ಕೂಲಿಂಗ್‌ ವರ್ಕ್‌ಔಟ್‌ ಮೂಲಕ ಮುಗಿಸಲಾಗುತ್ತದೆ. ಬಹುತೇಕರು ಆರಂಭಿಸಿ, ಸಮಯವಾಯಿತು ಎಂದು ಗಡಿಬಿಡಿಯಲ್ಲಿ ಹೊರಟು ಬಿಡುತ್ತಾರೆ. ಇದು ಸರಿಯಲ್ಲ. ಒಂದೇ ಸಮ ವರ್ಕ್‌ಔಟ್‌ನಲ್ಲಿ ಸ್ಪಂದಿಸಿದ ದೇಹದ ಸ್ನಾಯುಗಳು ಮುಂದೇನು? ಎಂದು ತಬ್ಬಿಬ್ಬಾಗುವ ಸಾಧ್ಯತೆಯೇ ಹೆಚ್ಚು. ಇನ್ನು ವ್ಯಾಯಾಮ ಮಾಡುವಾಗ ಏಕಾಗ್ರತೆ ಬಹಳ ಮುಖ್ಯ. ಒಂದು ಗಂಟೆ ಮೀಸಲಿಡ್ತೀವಿ ಅಂತ ಯೋಚಿಸಿದ ಮೇಲೆ ಮೊಬೈಲ್‌, ಮೆಸೇಜ್‌ ಅಂತೆಲ್ಲ ಚಿತ್ತ ಹರಿ ಬಿಡುವ ಹಾಗಿಲ್ಲ ಎನ್ನುವ ಕಿವಿಮಾತು ಕಾವ್ಯಾರದ್ದು.

ಒತ್ತಡದ ಬದುಕಿಗೆ ಸಂಗೀತವೇ ಮದ್ದು. ಬೇಸರವೆನಿಸಿದಾಗೆಲ್ಲ ಒಬ್ಬಳೇ ಡ್ರೈವ್ ಮಾಡಿಕೊಂಡು ಹೋಗ್ತೀನಿ. ಆಕಾಶದಲ್ಲಿರುವ ನಕ್ಷತ್ರಗಳನ್ನು ಎಣಿಸಿ ಮನಸ್ಸು ಹಗುರ ಮಾಡಿಕೊಳ್ಳುತ್ತೇನೆ. ಚಿಕ್ಕವಳಾಗಿದ್ದಾನಿಂದಲೂ ಅಪ್ಪ ನಾಗೇಂದ್ರ ಅವರ ಯೋಗವನ್ನು ನೋಡಿಕೊಂಡು ಬೆಳೆದವಳು. ಅವರು ಕೊಟ್ಟ ಸ್ವಾತಂತ್ರ್ಯ ನನ್ನ ಬದುಕನ್ನು ಚಂದಗೆ ರೂಪಿಸಿದೆ.ಈ ಬಗ್ಗೆ ಖುಷಿ ಇದೆ ಎಂದು ಹೇಳುವ ಅವರು ಕನ್ನಡದಲ್ಲಿ ಅವಕಾಶ ಸಿಕ್ಕಿಲ್ಲದಕ್ಕೇನೂ ಬೇಸರವಿಲ್ಲ ಎಂದು ಒತ್ತಿ ಹೇಳುತ್ತಾರೆ.

ಉಪಾಹಾರ ಸೇವಿಸುವುದಿಲ್ಲ. ಬದಲಿಗೆ ಹರ್ಬಲ್‌ ಲೈಫ್‌ ಶೇಕ್‌ ಕುಡಿಯುತ್ತೀನಿ. ಮಧ್ಯಾಹ್ನ ಹಾಗೂ ರಾತ್ರಿ ತರಕಾರಿ, ಹಣ್ಣು, ಕಾಳುಗಳಿರುವ ಊಟವನ್ನು ಮಾಡುತ್ತೀನಿ. ಗ್ರೀನ್‌ ಟೀ ಕಡ್ಡಾಯವಾಗಿರುತ್ತದೆ. ಹಾಗೆಂದೂ ಪಾನೀಪೂರಿ, ಫಿಜ್ಜಾ ತಿನ್ನುವುದೇ ಇಲ್ಲ ಎಂದು ಹೇಳಲಾರೆ. ಎಷ್ಟೇ ತಿಂದರೂ ಎಲ್ಲವೂ ಮಿತಿಯಲ್ಲಿರುತ್ತದೆ. ತರಹೇವಾರಿ ಹಣ್ಣು, ತರಕಾರಿ ಹಾಗೂ ಡ್ರೈಫ್ರೂಟ್ಸ್‌ ಬಳಸಿ ಸಲಾಡ್‌ ಮಾಡುತ್ತೀನಿ ಎಂದು ಫಿಟ್‌ನೆಸ್‌ನಿಂದಾಗಿ ಅಡುಗೆಯಲ್ಲಿ ಆಸಕ್ತಿ ಮೂಡಿದ ಬಗೆಯನ್ನು ಹೇಳಿಕೊಳ್ಳುತ್ತಾರೆ.

ಇದರ ಮಧ್ಯೆ ನೃತ್ಯಾಭ್ಯಾಸ ಬಿಟ್ಟಿಲ್ಲ. ಕನ್ನಡ, ತಮಿಳು, ಮಲಯಾಳಂ ಪ್ರಶಸ್ತಿ ಪ್ರದಾನ ಸಮಾರಂಭಗಳಲ್ಲಿ ನೃತ್ಯ ಕಾರ್ಯಕ್ರಮ ನೀಡುವುದರ ಜತಗೆ ನೃತ್ಯ ನಿರ್ದೇಶಕಿಯಾಗಿಯೂ ಕೆಲಸ ಮಾಡುತ್ತಾ ಇದ್ದಾರೆ. ಊರು ಸುತ್ತುವ ಖಯಾಲಿಯೂ ಜತೆಯಾಗಿದೆ. ಮಲೇಷ್ಯಾ, ಸಿಂಗಪುರ, ಅಮೆರಿಕ ಹಲವು ದೇಶಗಳ ಗಾಳಿಗೂ ಮೈಯೊಡ್ಡಿದ್ದಾರೆ.

ಸಾಮಾನ್ಯವಾಗಿ ಹೊರ ದೇಶಗಳಲ್ಲಿ ಪ್ರವಾಸದಲ್ಲಿರುವಾಗ ಸಾರ್ವಜನಿಕ ಸಾರಿಗೆಯನ್ನೇ ಹೆಚ್ಚಾಗಿ ಬಳಸುತ್ತೀನಿ. ದುಬೈಯಲ್ಲಿ ಒಮ್ಮೆ ಮಧ್ಯರಾತ್ರಿ 12 ಗಂಟೆಗೆ ಪಾಕಿಸ್ತಾನಿ ಡ್ರೈವರ್‌ ಇರುವ ಗಾಡಿ ಹತ್ತಿದ್ದೆ. ಏನೇನೋ ಓದಿದ ಬರೀ ಪೂರ್ವಾಗ್ರಹಗಳೇ ತುಂಬಿಕೊಂಡಿರುವಾಗ ಅವರನ್ನು ತುಸು ಹಿಂಜರಿಕೆಯಿಂದಲೇ ಮಾತನಾಡಿಸಿದ್ದೆ. ಆದರೆ, ಅವರು ನಾನು ಭಾರತೀಯಳು ಎನ್ನುವ ಕಾರಣಕ್ಕೆ ದುಡ್ಡು ತೆಗೆದುಕೊಳ್ಳಲಿಲ್ಲ. ಮನೆಯ ಸದಸ್ಯರೊಬ್ಬರು ಸಿಕ್ಕಷ್ಟು ಆತ್ಮೀಯವಾಗಿ ಮಾತನಾಡಿಸಿದರು. ಮನುಷ್ಯ ಮನುಷ್ಯರ ನಡುವೆ ಸೇತುವೆಯಾಗಿರುವುದು ಪ್ರೀತಿಯೊಂದು ಎಂದು ಹೇಳುವುದನ್ನು ಕಾವ್ಯಾ ಮರೆಯುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT