ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಗಿಯ ಮಹತ್ವ ತಿಳಿದರೆ, ನಿಮ್ಮ ಮಕ್ಕಳಿಗೆ ನಿತ್ಯ ಸೇವಿಸಲು ಕೊಡುವಿರಿ

Last Updated 6 ಡಿಸೆಂಬರ್ 2022, 11:09 IST
ಅಕ್ಷರ ಗಾತ್ರ

ರಾಗಿ.. ಪೌಷ್ಟಿಕ ಆಹಾರದ ಅಧಿಪತಿ ಎಂದರೆ ತಪ್ಪಾಗಲಾರದು. ರಾಗಿಯು ನಮ್ಮ ಸಾಂಪ್ರದಾಯಿಕ ಪ್ರಧಾನ ಆಹಾರವಾಗಿದ್ದು, ಈ ಸಣ್ಣ ಧಾನ್ಯದಲ್ಲಿ ಪೋಷಕಾಂಶಗಳು, ರೋಗನಿರೋಧಕ ಶಕ್ತಿ, ಫೈಬರ್, ಪ್ರೋಟಿನ್, ಕಬ್ಬಿಣ ಮತ್ತು ಕ್ಯಾಲ್ಸಿಯಂ ಗುಣಗಳಿವೆ ಹಾಗೂ ನಾರಿನಂಶ ಭರಿತವಾಗಿವೆ. ಅಷ್ಟೇ ಅಲ್ಲದೆ, ವಿಟಮಿನ್‌ ಬಿ, ವಿಟಮಿನ್ ಡಿ, ಮೆಗ್ನೀಸಿಯಂ, ಬಿ ಜೀವಸತ್ವಗಳಿದ್ದು, ರಕ್ತಹೀನತೆ ಸಮಸ್ಯೆಗೂ ರಾಮಬಾಣವಾಗಿದೆ.

ರಾಗಿಯಲ್ಲಿ ಜೋರ್ಗಮ್, ಬಜ್ರಾ, ಫಿಂಗರ್ ರಾಗಿ, ಲಿಟಲ್ ರಾಗಿ, ಕೊಡೋ ರಾಗಿ, ಫಾಕ್ಸ್‌ಟೇಲ್ ರಾಗಿ, ಪ್ರೊಸೊ ರಾಗಿ ಮತ್ತು ಬಾರ್ನ್ಯಾರ್ಡ್ ರಾಗಿ ಎಂಬ ತಳಿಗಳಿದ್ದು, ಈ ಎಲ್ಲಾ ತಳಿಗಳನ್ನು ಭಾರತದಾದ್ಯಂತ ಬೆಳೆಯಲಾಗುತ್ತದೆ.

ಮಕ್ಕಳಿಗೆ ರಾಗಿ ಅಭ್ಯಾಸ ಮಾಡಿಸಿ:ರಾಗಿ ಧಾನ್ಯದ ಸೇವನೆ ಇತ್ತೀಚಿನ ದಿನಗಳಲ್ಲಿ ಕಡಿಮೆಯಾಗುತ್ತಿದೆ. ಅದರಲ್ಲೂ ಮಕ್ಕಳಿಗೆ ರಾಗಿ ಎಂದರೆ ಕೇವಲ ರಾಗಿ ಮುದ್ದೆ ಅಥವಾ ಮಾಲ್ಟ್‌ನಂತಹ ಆಹಾರವನ್ನು ತಯಾರಿಸಬಹುದು ಎಂದಷ್ಟೇ ಗೊತ್ತಿದೆ. ಹೀಗಾಗಿ ಮಕ್ಕಳು ರಾಗಿಯನ್ನು ಸೇವಿಸಲು ಹಿಂದೇಟು ಹಾಕಬಹುದು. ಆದರೆ, ರಾಗಿ ಸೇವನೆಯು ಮಕ್ಕಳ ಆರೋಗ್ಯದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಕೇವಲ ದೈಹಿಕ ಆರೋಗ್ಯವಷ್ಟೇ ಅಲ್ಲದೆ, ಮಾನಸಿಕ ಆರೋಗ್ಯದ ಸುಧಾರಣೆಯಲ್ಲೂ ರಾಗಿಯ ಪಾತ್ರ ಪ್ರಮುಖವಾದದ್ದು. ರಾಗಿ ಮಕ್ಕಳಿಗೆ ಸಾಕಷ್ಟು ಪೌಷ್ಟಿಕಾಂಶವನ್ನು ಒದಗಿಸುವ ಅತ್ಯುತ್ತಮ ಧಾನ್ಯ. ಜೊತೆಗೆ, ಪೌಷ್ಟಿಕ, ಸುಲಭವಾಗಿ ಜೀರ್ಣವಾಗುವ, ಅಲರ್ಜಿ ರಹಿತ ಆಹಾರವಾಗಿದೆ. ಮಕ್ಕಳಲ್ಲಿ ರಾಗಿ ಸೇವನೆ ಬಗ್ಗೆ ಆಸಕ್ತಿ ಉಂಟು ಮಾಡಲು, ರಾಗಿಯಲ್ಲಿ ಸಿದ್ಧಪಡಿಸಬಹುದಾದ ವಿವಿಧ ಬಗೆಯ ಆಹಾರ ಪದಾರ್ಥಗಳಿವೆ.

ಆರು ತಿಂಗಳ ಮಗುವಿಗೆ ನೀಡಿ ರಾಗಿ ಮಾಲ್ಟ್‌: ಆರು ತಿಂಗಳು ತುಂಬಿದ ಮಗುವಿಗೆ ಮಾಲ್ಟ್‌ ಸೇವನೆ ಮಾಡಿಸಲು ವೈದ್ಯರು ಸಲಹೆ ನೀಡುತ್ತಾರೆ. ಈಗಿನ ಕಾಲದವರು ಮಾರುಕಟ್ಟೆಯಲ್ಲಿ ಲಭ್ಯವಿರುವ ಇನ್‌ಸ್ಟಂಟ್ ಫುಡ್‌ಗಳ ಮಾಲ್ಟ್‌ಗಳನ್ನು ಮಕ್ಕಳಿಗೆ ನೀಡುತ್ತಾರೆ. ಇದರ ಬದಲಿಗೆ ರಾಗಿ ಮಾಲ್ಟ್‌ ಮಾಡಿ ಮಗುವಿಗೆ ತಿನ್ನಿಸುವುದರಿಂದ ಮಗುವಿನ ಆರೋಗ್ಯ ಹೆಚ್ಚಲಿದೆ. ಮಗುವಿಗೆ ರಾಗಿ ಮಾಲ್ಟ್‌ ತಿನ್ನಿಸುವುದರಿಂದ ಸ್ನಾಯುಗಳ ಬೆಳವಣಿಗೆ, ರೋಗನಿರೋಧಕ ಶಕ್ತಿ ಹೆಚ್ಚಿಸುವುದು, ಮೂಳೆ ಬಲಗೊಳ್ಳುವುದು ಮತ್ತು ಅಗತ್ಯ ಪೋಷಕಾಂಶ ದೊರೆಯಲಿದೆ.

ರಾಗಿ ಮಾಲ್ಟ್‌ ತಯಾರಿಸುವುದು ಹೇಗೆ:
ಆರು ತಿಂಗಳ ಬಳಿಕ ಮಗುವಿನ ಬೆಳವಣಿಗೆಗೆ ಮಾಲ್ಟ್‌ನಂತಹ ಆಹಾರ ನೀಡಲು ವೈದ್ಯರು ಸಲಹೆ ನೀಡುತ್ತಾರೆ. ಆದರೆ, ಮಾಲ್ಟ್‌ ಅದರಲ್ಲೂ ರಾಗಿ ಮಾಲ್ಟ್‌ ತಯಾರಿಸುವ ಬಗ್ಗೆ ಇಂದಿನ ತಾಯಂದಿರಲ್ಲಿ ಗೊಂದಲವಿದೆ. ಅಂಗಡಿಯಲ್ಲಿ ಗುಣಮಟ್ಟದ ರಾಗಿಮಾಲ್ಟ್ ಸಿಗುತ್ತದೆಯಾದರೂ ಮನೆಯಲ್ಲಿಯೇ ರಾಗಿ ಮಾಲ್ಟ್ ತಯಾರಿಸಬಹುದಾಗಿದೆ.

ನುಣ್ಣಗೆ ಸೋಸಿದ ರಾಗಿ ಹಿಟ್ಟನ್ನು ತೆಗೆದುಕೊಳ್ಳಿ, ಸಣ್ಣ ಕಪ್‍ನಲ್ಲಿ ರಾಗಿ ಹಿಟ್ಟು ನೀರನ್ನು ಹಾಕಿ ಯಾವುದೇ ಗಂಟು ಕಟ್ಟದಂತೆ ಉಂಡೆಗಳಾಗದಂತೆ ಮಿಶ್ರ ಮಾಡಿಟ್ಟಿರಿ. ಪಾತ್ರೆಗೆ ನೀರನ್ನು ಹಾಕಿ, ನೀರು ಕುದಿಯಲು ಬಂದ ನಂತರ ಕರಗಿದ ರಾಗಿ ಹಿಟ್ಟಿನಲ್ಲಿ ಸೇರಿಸಿ, ಈ ಮಿಶ್ರಣವು 5 ನಿಮಿಷಗಳ ನಂತರ ಗಟ್ಟಿಯಾಗುತ್ತಾ ಹೋಗುತ್ತದೆ, ಆ ವೇಳೆ ಬೆಲ್ಲ ಮತ್ತು ಉಪ್ಪನ್ನು ಸೇರಿಸಿ ಚೆನ್ನಾಗಿ ಕುದಿಸಿ. ನಂತರ ಹಾಲು, ಏಲಕ್ಕಿ ಪುಡಿಯನ್ನು ಸೇರಿಸಬೇಕು. ಕನಿಷ್ಠ 5 ರಿಂದ 10 ನಿಮಿಷಗಳ ಕಾಲ ಕುದಿಸಬೇಕು. ಮಕ್ಕಳಿಗೆ ಸ್ವಲ್ಪ ಗಟ್ಟಿಯಾದ ಮಾಲ್ಟ್‌ ತಯಾರಿಸಬಹುದು. ವಯಸ್ಕರಿಗೆ ಅಥವಾ ಹಿರಿಯರಿಗೆ ತೆಳ್ಳಗಿನ ಮಾಲ್ಟ್‌ ಸಿದ್ಧಪಡಿಸಬೇಕು. ಹೀಗೆ ಸೇವಿಸುವುದರಿಂದ ದೇಹವು ತಂಪಾಗುವುದರ ಜೊತೆಗೆ, ಹೆಚ್ಚು ಆರೋಗ್ಯಕರವಾಗಿರಲಿದೆ. ಮಕ್ಕಳ ಬೆಳವಣಿಗೆಗೆ ಇದು ಪೂರಕ.

ಕರುಳಿನ ಆರೋಗ್ಯಕ್ಕೆ ರಾಗಿ ಸಂಜೀವಿನಿ:ರಾಗಿ ಸೇವನೆಯು ಕರುಳಿನ ಆರೋಗ್ಯಕ್ಕೂ ಅತ್ಯುತ್ತಮವಾದದ್ದು ಎಂದು ವೈದ್ಯಕೀಯದಲ್ಲೇ ಸಾಬೀತಾಗಿದೆ. ಅದರಲ್ಲೂ ಮಕ್ಕಳ ಜೀರ್ಣಕ್ರಿಯೆಗೆ ಉತ್ತಮ ಆಹಾರ ಪದಾರ್ಥವಾಗಿದೆ. ರಾಗಿಯು ಶೇಕಡ20ರಷ್ಟು ಪ್ರಮಾಣ ಫೈಬರ್ ಹೊಂದಿದ್ದು, ಸುಲಭವಾಗಿ ಜೀರ್ಣಕ್ರಿಯೆಗೆ ಸಹಕರಿಸಲಿದೆ. ಮಕ್ಕಳಲ್ಲಿ ಸರ್ವೇಸಾಮಾನ್ಯವಾಗಿ ಕಾಣಿಸಿಕೊಳ್ಳುವ ಕರುಳಿನ ಆರೋಗ್ಯಕರ ಬ್ಯಾಕ್ಟೀರಿಯಾದ ಬೆಳವಣಿಗೆಗೂ ಸಹಕಾರಿಯಾಗಿದೆ. ಹೀಗಾಗಿ ಪ್ರತಿಯೊಬ್ಬರೂ ಸೇವಿಸಬಹುದಾದ ಆಹಾರಧಾನ್ಯ ರಾಗಿ.

ಅಪೌಷ್ಟಿಕತೆ ನಿವಾರಣೆ

ಅರೆ-ಶುಷ್ಕ ಉಷ್ಣವಲಯದ ಅಂತರರಾಷ್ಟ್ರೀಯ ಬೆಳೆಗಳ ಸಂಶೋಧನಾ ಸಂಸ್ಥೆಯ ಹಿರಿಯ ವಿಜ್ಞಾನಿ, ಪೌಷ್ಟಿಕಾಂಶ ತಜ್ಞೆ ಡಾ. ಎಸ್. ಅನಿತಾ ನೇತೃತ್ವದಲ್ಲಿ, ನಾಲ್ಕು ದೇಶಗಳಲ್ಲಿ ಏಳು ಸಂಸ್ಥೆಗಳು ನಡೆಸಿದ ಇತ್ತೀಚಿನ ಅಧ್ಯಯನ ವರದಿಯ ಪ್ರಕಾರ, ರಾಗಿ ಧಾನ್ಯವು ಮಕ್ಕಳು ಮತ್ತು ಹದಿಹರೆಯದವರಲ್ಲಿ ಶೇಕಡ26-39ರಷ್ಟು ಬೆಳವಣಿಗೆಯನ್ನು ಹೆಚ್ಚಿಸಬಹುದು. ರಾಗಿಯ ಸೇವನೆಯು ಅಪೌಷ್ಟಿಕತೆಯನ್ನು ಹೋಗಲಾಡಿಸುತ್ತದೆ.

ಲೇಖಕರು: ಡಾ. ಭಾವನಾ ಶರ್ಮಾ, ಹೆಡ್, ನ್ಯೂಟ್ರಿಷನ್ ಸೈನ್ಸಸ್, ಐಟಿಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT