ಶನಿವಾರ, ಜನವರಿ 16, 2021
25 °C

ಕೊರೊನಾ ಒಂದಿಷ್ಟು ತಿಳಿಯೋಣ: ಸ್ಲೀಪ್‌ ಅಪ್ನಿಯಾದಿಂದ ಸಮಸ್ಯೆ ಉಲ್ಬಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸ್ಲೀಪ್‌ ಅಪ್ನಿಯಾ ಸಮಸ್ಯೆ ಇದ್ದವರಿಗೆ ಕೊರೊನಾ ಸೋಂಕು ತಗುಲಿದರೆ ರೋಗಿಯ ಪರಿಸ್ಥಿತಿ ಇನ್ನಷ್ಟು ಗಂಭೀರವಾಗಬಹುದು; ಆಸ್ಪತ್ರೆಗೆ ಸೇರಿಸುವುದರ ಜೊತೆಗೆ ವೆಂಟಿಲೇಶನ್‌ ಅವಶ್ಯಕತೆಯೂ ಬೀಳಬಹುದು ಎಂಬುದು ಫಿನ್ಲೆಂಡ್‌ನ ತುರ್ಕು ವಿಶ್ವವಿದ್ಯಾಲಯದ ಸಂಶೋಧಕರು ನಡೆಸಿದ ಅಧ್ಯಯನದಿಂದ ತಿಳಿದುಬಂದಿದೆ.

ಕೋವಿಡ್‌–19ನಿಂದ ಆಸ್ಪತ್ರೆಗೆ ದಾಖಲಾದವರಲ್ಲಿ ಬಹಳಷ್ಟು ಮಂದಿಗೆ ಅಬ್‌ಸ್ಟ್ರಕ್ಟಿವ್‌ ಸ್ಲೀಪ್‌ ಅಪ್ನಿಯಾ ಸಮಸ್ಯೆಯಿತ್ತು ಎಂದು ಇತ್ತೀಚೆಗೆ ನಡೆಸಿದ ಈ ಅಧ್ಯಯನದ ವರದಿಯಲ್ಲಿ ಹೇಳಲಾಗಿದೆ. ಈ ವರದಿ ‘ಸ್ಲೀಪ್‌ ಮೆಡಿಸಿನ್‌ ಅಂಡ್‌ ಡಿಸಾರ್ಡರ್‌’ ಎಂಬ ಅಂತರರಾಷ್ಟ್ರೀಯ ವೈದ್ಯಕೀಯ ಜರ್ನಲ್‌ನಲ್ಲಿ ಪ್ರಕಟವಾಗಿದೆ. ಬೊಜ್ಜು, ಹೈಪರ್‌ಟೆನ್ಶನ್‌, ಟೈಪ್‌2 ಮಧುಮೇಹದಂತೆ ಸ್ಲೀಪ್‌ ಅಪ್ನಿಯಾ ಇರುವವರಿಗೆ ಕೋವಿಡ್‌–19 ಬಂದರೆ ಪರಿಸ್ಥಿತಿ ಗಂಭೀರವಾಗಬಹುದು.

ಈ ಅಧ್ಯಯನದಿಂದ ಪತ್ತೆಯಾದ ಇನ್ನೊಂದು ಹೊಸ ಸಂಗತಿಯೆಂದರೆ ಕೋವಿಡ್‌–19 ಬಂದ ನಂತರವೇ ಶೇ 85ರಷ್ಟು ಮಂದಿಗೆ ಸ್ಲೀಪ್‌ ಅಪ್ನಿಯಾ ಸಮಸ್ಯೆ ಇರುವುದು ಗೊತ್ತಾಗಿದೆ. ಹೀಗಾಗಿ ಸ್ಲೀಪ್‌ ಅಪ್ನಿಯಾ ಸಮಸ್ಯೆ ಬಗ್ಗೆ ಅರಿವಿಲ್ಲದವರಿಗೆ ಕೊರೊನಾ ಸೋಂಕು ತಗಲಿದರೆ ಜೀವಕ್ಕೇ ಅಪಾಯವಾಗಬಹುದು ಎಂದು ವರದಿಯಲ್ಲಿ ಎಚ್ಚರಿಸಲಾಗಿದೆ. ಮಲಗಿದಾಗ ಶ್ವಾಸ ಮಾರ್ಗದಲ್ಲಿ ತಡೆಯುಂಟಾಗಿ ಉಸಿರಾಟದಲ್ಲಿ ಏರುಪೇರಾಗುವುದು, ಆಮ್ಲಜನಕದ ಸ್ಯಾಚುರೇಶನ್‌ ಕಡಿಮೆಯಾಗುವುದು, ಎಚ್ಚರಗೊಳ್ಳುವುದು ಸ್ಲೀಪ್‌ ಅಪ್ನಿಯಾದ ಲಕ್ಷಣ. ಹೆಚ್ಚು ತೂಕ ಹೊಂದಿದವರು, 40 ವರ್ಷಕ್ಕಿಂತ ಹೆಚ್ಚು ವಯಸ್ಸಿನವರಿಗೆ ಇದರ ಬಾಧೆ ಜಾಸ್ತಿಯಾದರೂ, ಮಕ್ಕಳಲ್ಲೂ ತೊಂದರೆ ಕಾಣಿಸಿಕೊಳ್ಳಬಹುದು.

ಸ್ಲೀಪ್‌ ಅಪ್ನಿಯಾ ಇರುವವರಿಗೆ ಹೈಪರ್‌ಟೆನ್ಶನ್‌, ಕಾರ್ಡಿಯೊವಾಸ್ಕ್ಯುಲರ್ ಕಾಯಿಲೆ, ಬೊಜ್ಜು ಕೂಡ ಸಾಮಾನ್ಯ. ಬೊಜ್ಜಿರುವವರಿಗೆ ಕೋವಿಡ್‌–19 ಬಂದರೆ ಅಪಾಯಕಾರಿ ಎಂಬುದು ಈಗಾಗಲೇ ಸಾಬೀತಾಗಿರುವುದರಿಂದ ಇಂಥವರು ಎಚ್ಚರಿಕೆ ವಹಿಸಬೇಕಾಗುತ್ತದೆ.

ಸ್ಲೀಪ್‌ ಅಪ್ನಿಯಾ ಸಮಸ್ಯೆಯನ್ನು ಪತ್ತೆ ಹಚ್ಚುವ ಆ್ಯಪ್‌ಗಳು ಕೂಡ ಬಂದಿವೆ. ಹಾಗೆಯೇ ಟೆಲಿಕನ್ಸಲ್ಟೇಶನ್‌ ಮೂಲಕ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆದುಕೊಂಡು ಕೊರೊನಾ ಸೋಂಕು ತಗಲದಂತೆ ಎಚ್ಚರಿಕೆ ವಹಿಸಬೇಕಾಗುತ್ತದೆ ಎಂದು ತುರ್ಕು ವಿಶ್ವವಿದ್ಯಾಲಯದ ಸಂಶೋಧಕರು ಸಲಹೆ ನೀಡಿದ್ದಾರೆ. ಅದೇ ರೀತಿ ಬೊಜ್ಜನ್ನು ಕರಗಿಸಿ ಶೇ 10ರಷ್ಟು ತೂಕವನ್ನಾದರೂ ಇಳಿಸಿಕೊಳ್ಳಿ. ಮದ್ಯ ಸೇವನೆ ನಿಲ್ಲಿಸಿ. ಧೂಮಪಾನವನ್ನು ಮಾಡಬೇಡಿ. ನಿದ್ರೆ ಮಾತ್ರೆ ತೆಗೆದುಕೊಳ್ಳಬೇಡಿ. ಅಂಗಾತ ನಿದ್ರಿಸುವುದು ಒಳ್ಳೆಯದಲ್ಲ. ದಿಂಬು ಬಳಸಿ ಮಗ್ಗಲಾಗಿ ನಿದ್ರಿಸಿ ಎಂದು ಸಂಶೋಧಕರು ಸಲಹೆ ನೀಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು