ಶುಕ್ರವಾರ, ಡಿಸೆಂಬರ್ 4, 2020
22 °C
ಭಾರತೀಯ ಸಿರಿಧಾನ್ಯ ಸಂಶೋಧನಾ ಕೇಂದ್ರದ ನಿರ್ದೇಶಕ ಡಾ. ವಿಲಾಸ್ ತೊನಾಪಿ ಅಭಿಮತ

ಜೀವನಶೈಲಿ ಕಾಯಿಲೆ: ಸಿರಿಧಾನ್ಯವೇ ಮದ್ದು- ಡಾ. ವಿಲಾಸ್ ತೊನಾಪಿ ಅಭಿಮತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಬದಲಾದ ಜೀವನ ವಿಧಾನದಿಂದ ಸ್ಥೂಲಕಾಯ, ಅಧಿಕ ರಕ್ತದೊತ್ತಡ, ಮಧುಮೇಹ ಸೇರಿದಂತೆ ವಿವಿಧ ಕಾಯಿಲೆಗಳು ಹಲವರಲ್ಲಿ ಕಾಣಿಸಿಕೊಳ್ಳುತ್ತಿವೆ. ಇಂತಹ ಕಾಯಿಲೆಗಳು ಬರದಂತೆ ತಡೆಯಲು ಸಿರಿಧಾನ್ಯದಿಂದ ತಯಾರಿಸಿದ ಆಹಾರಗಳು ಸಹಕಾರಿ ಎನ್ನುವುದು ಸಂಶೋಧನೆಗಳಿಂದ ಸಾಬೀತಾಗಿವೆ’ ಎಂದು ಭಾರತೀಯ ಸಿರಿಧಾನ್ಯ ಸಂಶೋಧನಾ ಕೇಂದ್ರದ ನಿರ್ದೇಶಕ ಡಾ. ವಿಲಾಸ್ ತೊನಾಪಿ ತಿಳಿಸಿದರು.

ಬೆಂಗಳೂರು ತಂತ್ರಜ್ಞಾನ ಶೃಂಗದಲ್ಲಿ ‘ಔಷಧಿಯಾಗಿ ಪೋಷಕಾಂಶಗಳು ಮತ್ತು ಆಹಾರ’ ವಿಷಯದ ಬಗ್ಗೆ ಮಾತನಾಡಿದ ಅವರು, ‘ರಾಸಾಯನಿಕ ಮಿಶ್ರಿತ ಆಹಾರ ಪದಾರ್ಥಗಳು ಹಾಗೂ ಫಾಸ್ಟ್ ಫುಡ್‌ಗಳ ಸೇವನೆಯಿಂದ ಆರೋಗ್ಯ ಹದಗೆಡುತ್ತಿದೆ. ಚಿಕ್ಕ ವಯಸ್ಸಿನಲ್ಲಿಯೇ ವಿವಿಧ ಕಾಯಿಲೆಗಳು ಆವರಿಸಿಕೊಳ್ಳುತ್ತಿವೆ. ಆದ್ದರಿಂದ ಜೀವನ ಕ್ರಮವನ್ನು ಬದಲಾಯಿಸಿಕೊಂಡು, ಉತ್ತಮ ಆಹಾರ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಅಧಿಕ ಪೋಷಕಾಂಶಗಳನ್ನು ಒಳಗೊಂಡಿರುವ ಸಾವಯವ ಸಿರಿಧಾನ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಕೆ ಮಾಡಬೇಕು’ ಎಂದರು. 

‘ಸಿರಿಧಾನ್ಯಗಳಲ್ಲಿ ಹಸಿವನ್ನು ತಗ್ಗಿಸುವ ಸಾಮರ್ಥ್ಯ ಅಕ್ಕಿಗಿಂತಲೂ ಅಧಿಕ ಇರುತ್ತದೆ. ಮಧುಮೇಹ, ಹೃದಯಸಂಬಂಧಿ ಕಾಯಿಲೆಗಳು, ಕರುಳಿನ ಬೇನೆ ಸೇರಿದಂತೆ ವಿವಿಧ ಕಾಯಿಲೆಗಳ ವಿರುದ್ಧ ಹೋರಾಡಿ, ಜಯಿಸುವ ಸಾಮರ್ಥ್ಯವನ್ನು ಸಿರಿಧಾನ್ಯಗಳು ಹೊಂದಿವೆ. ಕೋವಿಡ್‌ನಂತಹ ಕಾಯಿಲೆಯನ್ನು ಎದುರಿಸಬೇಕಾದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಕೊಳ್ಳಬೇಕಿದೆ. ರಾಗಿ ಒಳಗೊಂಡಂತೆ ಸಿರಿಧಾನ್ಯಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಕಾರಿಯಾಗಿವೆ’ ಎಂದರು.

ಆಹಾರವೇ ಔಷಧವಾಗಲಿ: ಪೌಷ್ಟಿಕ ಆಹಾರ ತಜ್ಞ ಡಾ. ಶಶಿಕರಣ್, ‘ನಾವು ತಿನ್ನುವ ಆಹಾರವೇ ನಮಗೆ ಔಷಧವಾಗಬೇಕು. ಪೌಷ್ಟಿಕ ಆಹಾರ ಎನ್ನುವುದು ಕೆಲವರಿಗೆ ಮಾತ್ರ ದಕ್ಕುವಂತೆ ಮಾಡುವುದರಲ್ಲಿ ಯಾವುದೇ ಹೆಚ್ಚುಗಾರಿಕೆ ಇಲ್ಲ. ಅದು ಪ್ರತಿಯೊಬ್ಬ ನಾಗರಿಕನಿಗೂ ಕೈಗೆಟಕುವಂತಿರಬೇಕು. ಅದು ಈ ಸಮಾಜದ ಕರ್ತವ್ಯ ಕೂಡ ಹೌದು. ಇಂತಹ ಪರಿಕಲ್ಪನೆಯಲ್ಲಿ ನಮ್ಮ ನೀತಿಗಳನ್ನು ರೂಪಿಸಬೇಕು. ಇತ್ತೀಚಿನ ದಿನಗಳಲ್ಲಿ ಶಕ್ತಿವರ್ಧಕ ಆಹಾರಗಳನ್ನು ನೀಡುವ ಗಂಭೀರ ಪ್ರಯತ್ನಗಳು ನಡೆಯುತ್ತಿವೆ. ಪೌಷ್ಟಿಕಾಂಶದಿಂದ ಕೂಡಿದ ಆಹಾರವು ಪ್ರತಿಯೊಬ್ಬರಿಗೂ ದೊರೆಯುವಂತೆ ಮಾಡುವುದು ಅತ್ಯಗತ್ಯ’ ಎಂದರು.

ವಿಜ್ಞಾನಿ ಪ್ರೊ. ಗುರುಮಿತ್ ಸಿಂಗ್, ‘ನಮ್ಮ ಆಹಾರ ಪದ್ಧತಿ ಹೇಗೆ ಇರಬೇಕೆಂದು ಚರಕ ಸಂಹಿತೆಯಲ್ಲಿಯೇ ಉಲ್ಲೇಖಿಸಲಾಗಿದೆ. ಸೂಕ್ತ ಆಹಾರ ಕ್ರಮವನ್ನು ಅಳವಡಿಸಿಕೊಳ್ಳದ ಪರಿಣಾಮ ಅಪೌಷ್ಟಿಕತೆ ಸೇರಿದಂತೆ ವಿವಿಧ ಸಮಸ್ಯೆಗಳನ್ನು ಎದುರಿಸುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಈ ನಡುವೆ ಪರಿಸರದಲ್ಲಿ ಉಂಟಾಗುತ್ತಿರುವ ಬದಲಾವಣೆಗಳು ಕೂಡ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮಗಳನ್ನು ಬೀರುತ್ತಿವೆ. ಈಗಲೇ ಎಚ್ಚೆತ್ತುಕೊಂಡಲ್ಲಿ ಮುಂದೆ ಸಂಭವಿಸುವ ಅನಾಹುತಗಳನ್ನು ತಡೆಯಲು ಸಾಧ್ಯ’ ಎಂದು ಹೇಳಿದರು.

ಬೆಳೆಗಳ ವಂಶವಾಹಿನಿ  ಪರಿವರ್ತನೆಯಿಂದ ಲಾಭ

‘ತರಕಾರಿ, ಹಣ್ಣು, ಭತ್ತ, ಗೋಧಿಯಂತಹ ಬೆಳೆಗಳ ವಂಶವಾಹಿ ಪರಿವರ್ತನೆಯು ಮುಂದಿನ ದಿನಗಳಲ್ಲಿ ರೈತರಿಗೆ ವರವಾಗಿ ಪರಿಣಮಿಸಲಿದೆ. ಈಗಾಗಲೇ ಅಮೆರಿಕ ಸೇರಿದಂತೆ ಕೆಲವು ರಾಷ್ಟ್ರಗಳಲ್ಲಿ ಅನುಷ್ಠಾನಕ್ಕೆ ತರಲಾಗಿದ್ದು, ಈ ವಿಧಾನಕ್ಕೆ ಅನುಮತಿ ನೀಡುವ ಬಗ್ಗೆ ಸರ್ಕಾರವು ಗಂಭೀರ ಚಿಂತನೆ ನಡೆಸಬೇಕು. ನಿಬಂಧನೆಗಳನ್ನು ಹೇರುವ ಸಂದರ್ಭದಲ್ಲಿ ಎಚ್ಚರಿಕೆಯ ನಿಲುವು ತಳೆಯಬೇಕು’ ಎಂದು ಜೈವಿಕ ತಂತ್ರಜ್ಞಾನದ ತಜ್ಞ ಡಾ. ಚನ್ನಪ್ರಕಾಶ್ ತಿಳಿಸಿದರು.

‘ಟೊಮೆಟೊದ ಕ್ರಿಸ್ಪರ್ ವಂಶವಾಹಿಯಲ್ಲಿ ಪರಿವರ್ತನೆ ಮಾಡುವುದರಿಂದ ಅದು ಮಾಗುವ ಅಥವಾ ಹಣ್ಣಾಗಲು ತಗಲುವ ಅವಧಿ ಹೆಚ್ಚಾಗುತ್ತಾ ಹೋಗುತ್ತದೆ. ಇದರಿಂದ ಅದನ್ನು ಕಾಪಿಡುವ ಅವಧಿ ಕೂಡ ಹೆಚ್ಚುತ್ತದೆ. ಇದರಿಂದಾಗಿ ಟೊಮೆಟೊ ಬೆಳೆಗಾರರು ತಮ್ಮ ಬೆಳೆಗಳನ್ನು ಹೆಚ್ಚು ಕಾಲ ಕಾಯ್ದಿಡಬಹುದು. ಅದನ್ನು ಅತ್ಯಂತ ಕಡಿಮೆ ಬೆಲೆಗೆ ಮಾರಾಟ ಮಾಡುವುದು, ಬೆಲೆಯೇ ಸಿಗಲಿಲ್ಲ ಎಂದು ಬೀದಿ ಬದಿಯಲ್ಲಿ ಚೆಲ್ಲುವ ಪರಿಸ್ಥಿತಿ ತಪ್ಪುತ್ತದೆ. ಇತರ ತರಕಾರಿಗಳು, ಹಣ್ಣುಗಳು, ಗೋಧಿ, ಭತ್ತದಲ್ಲಿಯೂ ಇದು ಸಾಧ್ಯವಿದೆ’ ಎಂದರು.

‘ಟೊಮೆಟೊದಲ್ಲಿನ ಲಿಕೊಪಿನ್ ಅಂಶವನ್ನು ಹೆಚ್ಚು ಮಾಡುವುದರಿಂದ ಪುರುಷರಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಪ್ರೊಸ್ಟೇಟ್ ಕ್ಯಾನ್ಸರ್‌ಗೆ ಕಡಿವಾಣ ಹಾಕಬಹುದು. ಸೋಯಾಬೀನ್‌ನಲ್ಲಿ ಹೆಚ್ಚುತೈಲದ ಅಂಶವಿರುವಂತೆ ವಂಶವಾಹಿ ಪರಿವರ್ತನೆ ಮಾಡಬಹುದು. ನಾವು ಬೆಳೆಯುವ ಭತ್ತವನ್ನು ರೋಗ ಪ್ರತಿಬಂಧಕವಾಗಿ ಪರಿವರ್ತಿಸಲು ಹಾಗೂ ಮಧುಮೇಹಿ ಸ್ನೇಹಿ ಭತ್ತವಾಗಿ ಪರಿವರ್ತಿಸಲು ಸಾಧ್ಯವಾಗಿದೆ.
ಅಕ್ಕಿಯ ಗಾತ್ರವನ್ನು ಹೆಚ್ಚು ಅಥವಾ ಕಡಿಮೆಮಾಡಲೂ ಇದರಿಂದ ಸಾಧ್ಯವಾಗುತ್ತದೆ’ ಎಂದು ವಿವರಿಸಿದರು.

 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು