ಶನಿವಾರ, ಫೆಬ್ರವರಿ 27, 2021
23 °C

ನವಜಾತ ಶಿಶುಗಳಲ್ಲಿ ಯಕೃತ್ತಿನ ಸಮಸ್ಯೆ

ಡಾ. ಸುರೇಂದ್ರ ಕೆ ಯಾಚ Updated:

ಅಕ್ಷರ ಗಾತ್ರ : | |

Prajavani

ವ್ಯಕ್ತಿಯ ಚಯಾಪಚಯ ಕ್ರಿಯೆ, ಕೊಬ್ಬಿನ ಸಂಗ್ರಹ, ನಿರ್ವಿಷೀಕರಣವಲ್ಲದೇ ಸಣ್ಣ ಕರುಳಿನಲ್ಲಿ ನಡೆಯುವ ಜೀರ್ಣಕ್ರಿಯೆಗೆ ಬೇಕಾದ ರಸಗಳನ್ನು ಬಿಡುಗಡೆ ಮಾಡುವ ಮಹತ್ವದ ಕಾರ್ಯ ಯಕೃತ್ತಿನದ್ದು. ಈ ಯಕೃತ್ತಿನ ಸಮಸ್ಯೆಯಿಂದಾಗಿ ಮಕ್ಕಳಲ್ಲಿ ಚಯಾಪಚಯ ಕ್ರಿಯೆಯಲ್ಲಿ ದೋಷ, ಸೋಂಕು ಮೊದಲಾದ ತೊಂದರೆಗಳು ತಲೆದೋರಬಹುದು.

ಭಾರತದಲ್ಲಿ ಮಕ್ಕಳಲ್ಲಿ ತಲೆದೋರುವ ಯಕೃತ್ತಿನ ಸಮಸ್ಯೆಗಳೆಂದರೆ ಶೇ 30ರಷ್ಟು ನವಜಾತ ಶಿಶುಗಳಲ್ಲಿ ಕಾಣಿಸಿಕೊಳ್ಳುವ ಕೊಲೆಸ್ಟಾಸಿಸ್‌. ಅಂದರೆ ಇದು ನವಜಾತ ಹಾಗೂ ಚಿಕ್ಕ ಮಕ್ಕಳಲ್ಲಿ ಕಂಡುಬರುವ ಯಕೃತ್ತಿನ ತೊಂದರೆ. ನವಜಾತ ಶಿಶುಗಳಲ್ಲಿ ಯಕೃತ್ತಿನ ಕಾಯಿಲೆಗಳನ್ನು ಪತ್ತೆ ಹಚ್ಚಿ ತಕ್ಷಣ ಚಿಕಿತ್ಸೆ ನೀಡುವುದು ಅತ್ಯಂತ ಮಹತ್ವದ್ದು.

ಕಾಮಾಲೆ ಸಮಸ್ಯೆ

ಮಗು ಜನಿಸಿದ ಮೊದಲ ಕೆಲವು ವಾರಗಳಲ್ಲಿ ಮಗುವಿಗೆ ಕಾಮಾಲೆ ರೋಗ ಬರುವ ಸಾಧ್ಯತೆ ಇರುತ್ತದೆ. ಹಳದಿ ಮೂತ್ರ ವಿಸರ್ಜನೆ, ಡಯಾಪರ್‌ನಲ್ಲಿ ಕಲೆ ಬೀಳುವುದು ಮಗು ಯಕೃತ್ತಿನ ಕಾಯಿಲೆಯಿಂದ ಬಳಲುತ್ತಿದೆ ಎನ್ನುವುದಕ್ಕೆ ಸ್ಪಷ್ಟ ಸೂಚನೆ. ಅಲ್ಲದೇ ಇದು ತುರ್ತು ಚಿಕಿತ್ಸೆಯ ಅಗತ್ಯವಿದೆ ಎಂಬುದರ ಸಂಕೇತ ಕೂಡ.

ನವಜಾತ ಶಿಶುವಿನ ಚರ್ಮ ಮತ್ತು ಕಣ್ಣುಗಳು ಕೂಡ ಹಳದಿಗಟ್ಟಿದರೆ ಅದು ಕಾಮಾಲೆಯಿಂದ ಬಳಲುತ್ತಿದೆ ಎಂದು ಅರ್ಥ. ಅಂತಹ ಸಂದರ್ಭದಲ್ಲಿ ಪೋಷಕರು ಜಾಗೃತರಾಗಿ ವೈದ್ಯರ ಗಮನಕ್ಕೆ ತರುವುದು ಸೂಕ್ತ.

ಭಾರತ ದೇಶದ ಮಕ್ಕಳಲ್ಲಿ ಬರುವ ಯಕೃತ್ತಿನ ಕಾಯಿಲೆಗಳೆಂದರೆ ನವಜಾತ ಶಿಶುವಿಗೆ ಬರುವ ಕೊಲೆಸ್ಟಾಸಿಸ್, ಗ್ಯಾಲಟೋಸೇಮಿಯಾ (ಗ್ಯಾಲಕ್ಟೋಸ್ ಎಂಬ ಸರಳ ಸಕ್ಕರೆಯನ್ನು ಸಂಸ್ಕರಿಸಲು ದೇಹಕ್ಕೆ ಸಾಮರ್ಥ್ಯ ಇರುವುದಿಲ್ಲ. ಇದು ಆನುವಂಶಿಕ ಕಾಯಿಲೆ), ವಿಲ್ಸನ್ ಕಾಯಿಲೆ (ಯಕೃತ್ತು ತಾಮ್ರವನ್ನು ಸಂಗ್ರಹಿಸಲು ಕಾರಣವಾಗುವ ಕಾಯಿಲೆಯಾಗಿದ್ದು ಬಹುಶಃ ಮಾರಣಾಂತಿಕ ಮಟ್ಟವಿದು), ಆಟೋ ಇಮ್ಯೂನ್‌ ಮತ್ತು ತೀವ್ರ ಹಾಗೂ ದೀರ್ಘಕಾಲದ ಹೆಪಟೈಟಿಸ್‌. ಆರಂಭದಲ್ಲೇ ರೋಗ ಪತ್ತೆ ಹಚ್ಚಿದರೆ ಈ ರೋಗಗಳಿಗೆ ಚಿಕಿತ್ಸೆ ನೀಡಬಹುದು.

ಬೈಲಿಯರಿ ಅಟ್ರೆಸಿಯಾ ಎಂಬುದು ಹುಟ್ಟಿದಾಗಿನಿಂದ ಪಿತ್ತರಸವನ್ನು ನಿರ್ಬಂಧಿಸುವ ಸಮಸ್ಯೆ. ಅಂತಹ ಮಕ್ಕಳನ್ನು ಹುಟ್ಟಿದ 8 ವಾರಗಳಲ್ಲಿ ತಕ್ಷಣ ಶಸ್ತ್ರಚಿಕಿತ್ಸೆಗೆ ಒಳಪಡಿಸಬೇಕು. ಶಸ್ತ್ರಚಿಕಿತ್ಸೆಯಲ್ಲಿನ ಯಾವುದೇ ವಿಳಂಬವು ಯಕೃತ್ತಿನ ಸಿರೋಸಿಸ್ ಸಮಸ್ಯೆಗೆ ಕಾರಣವಾಗಬಹುದು ಮತ್ತು ಅಂತಿಮವಾಗಿ ಯಕೃತ್ತಿನ ಕಸಿ ಅನಿವಾರ್ಯವಾಗುತ್ತದೆ. ತೀವ್ರವಾದ ವೈರಲ್ ಹೆಪಟೈಟಿಸ್ ಒಂದು ಸಾಮಾನ್ಯ ಪಿತ್ತಜನಕಾಂಗದ ಸೋಂಕು. ಇದು ಅಂಗದ ಉರಿಯೂತಕ್ಕೆ ಕಾರಣವಾಗುತ್ತದೆ ಮತ್ತು ಯಕೃತ್ತಿನ ಕೋಶಗಳಿಗೆ ಹಾನಿ ಉಂಟು ಮಾಡಬಹುದು. ಕೆಲವೊಮ್ಮೆ ಈ ಕೋಶಗಳು ಶಾಶ್ವತವಾಗಿ ನಾಶವಾಗಬಹುದು. ರೋಗನಿರೋಧಕ ಶಕ್ತಿಯ ಭಾಗವಾಗಿ ಹೆಪಟೈಟಿಸ್ ಬಿ ವೈರಸ್‌ಗೆ ಮಕ್ಕಳಿಗೆ ಲಸಿಕೆ ಹಾಕುವುದು ಸೂಕ್ತ.

ತಡೆಗಟ್ಟುವಿಕೆ

ನವಜಾತ ಶಿಶುವಿಗೆ ಕಾಡುವ ಯಕೃತ್ತಿನ ಕಾಯಿಲೆಗಳಿಗೆ ಚಿಕಿತ್ಸೆ ನೀಡಬಹುದು. ಆದರೆ ಆದಷ್ಟು ಬೇಗ ರೋಗ ಹಾಗೂ ಅದರ ಲಕ್ಷಣವನ್ನು ಪತ್ತೆ ಮಾಡುವ ಕಾರ್ಯ ಆಗಬೇಕು. ಪರಿಸ್ಥಿತಿ ಹದಗೆಡುವ ಮುನ್ನ ಚಿಕಿತ್ಸೆ ಸಿಕ್ಕರೆ ಅಪಾಯವನ್ನು ತಡೆಯಬಹುದು. ಯಾವುದೇ ಸಾಮಾನ್ಯವಲ್ಲದ ಲಕ್ಷಣಗಳು ಗೋಚರಿಸಿದರೆ ಮಕ್ಕಳ ಗ್ಯಾಸ್ಟ್ರೊಎಂಟರಾಲಜಿಸ್ಟ್ ತಜ್ಞರನ್ನು ಸಂಪರ್ಕಿಸುವುದು ಉತ್ತಮ. ಪಿತ್ತಜನಕಾಂಗದಲ್ಲಿ ಕೊಬ್ಬು ಸಂಗ್ರಹವಾಗುವುದರಿಂದ ಅನೇಕ ಯಕೃತ್ತಿನ ಕಾಯಿಲೆಗಳು ಎದುರಾಗುವ ಆತಂಕ ಇರುತ್ತದೆ. ಹೀಗಾಗಿ ಮಕ್ಕಳಿಗೆ ಸಂಸ್ಕರಿಸಿದ ಆಹಾರ (ಕುರುಕಲು ತಿಂಡಿ) ತಿನ್ನಲು ಬಿಡಬೇಡಿ.

ಕಾಯಿಲೆ ಪತ್ತೆ ಹೇಗೆ?

ಕಾಮಾಲೆ ಹಾಗೂ ಗಾಢವಾದ ಹಳದಿ ಬಣ್ಣದಿಂದ ಕೂಡಿದ ಮೂತ್ರ ವಿಸರ್ಜನೆಯು ಯಕೃತ್ತು ಮತ್ತು ಗುಲ್ಮ ಹಿಗ್ಗಿವೆ ಎಂಬುದರ ಲಕ್ಷಣ. ನವಜಾತ ಶಿಶುವಿನ ಒಟ್ಟಾರೆ ಆರೋಗ್ಯ ಪರಿಶೀಲಿಸುವುದು, ಚರ್ಮ, ಮೂತ್ರ ಮತ್ತು ಮಲದಲ್ಲಿನ ಬಣ್ಣವನ್ನು ಗುರುತಿಸುವುದು ಈ ಸಂದರ್ಭದಲ್ಲಿ ಅತ್ಯಂತ ಮಹತ್ವದ್ದಾಗಿದೆ.

(ಲೇಖಕರು ಸಕ್ರ ವರ್ಲ್ಡ್ ಆಸ್ಪತ್ರೆಯಲ್ಲಿ ಮಕ್ಕಳ ತಜ್ಞರು)

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು