ಶನಿವಾರ, ಡಿಸೆಂಬರ್ 3, 2022
21 °C

ನಾಳೆಯ ಆತಂಕ ಬೇಡ

ರಘು ವಿ. Updated:

ಅಕ್ಷರ ಗಾತ್ರ : | |

Prajavani

ಹಿಂದೊಮ್ಮೆ ಕೂಗುಮಾರಿಯ ಕಥೆ ಹುಟ್ಟಿ ಅನಕ್ಷರಸ್ಥರಿಂದ ಮೊದಲ್ಗೊಂಡು ಅತಿ ವಿದ್ಯಾವಂತರೂ ತಮ್ಮತಮ್ಮ ಮನೆಬಾಗಿಲುಗಳ ಮೇಲೆ ‘ನಾಳೆ ಬಾ’ ಎಂದು ಬರೆದುಕೊಂಡ ಪ್ರಸಂಗ ನೆನಪಿದೆಯಲ್ಲವೆ?

ನನಗೇಕೋ ‘ಈಗಲೇ ಬಾ’ ಎಂದು ಬರೆಯಬೇಕೆನಿಸಿತ್ತು. ವಠಾರದ ಮನೆಯಾದ್ದರಿಂದ ಉಳಿದವರ ನೆಮ್ಮದಿಗೆ ಭಂಗವಾದೀತೆಂದು ಏನೂ ಬರೆಯದೆ ಸುಮ್ಮನಾದೆ. ಇಲ್ಲಿ ಎದ್ದುಕಾಣುವ ಅಂಶ: ಕಾಣದ್ದನ್ನು ಊಹಿಸಿಕೊಂಡು ಭಯಪಡುವ ಅವಸ್ಥೆ. ಹುಟ್ಟಾಗಲೀ ಬದುಕಾಗಲೀ ಸಾವಾಗಲೀ ಸಾಕ್ಷಿಯಾಗಿ ಕುಳಿತಾಗಲೇ ಅರಿವಿನ ವಿಸ್ತಾರವಾಗುವುದು. ನನ್ನ ಮಿತ್ರರೊಬ್ಬರು, ಪ್ರಸೂತಿತಜ್ಞರೂ ಹೌದು. ಅವರೆನ್ನುತ್ತಾರೆ: ‘ಭಾರತದಲ್ಲಿ ಜನಸಂಖ್ಯೆ ಕಡಿಮೆಯಾಗಬೇಕಾದರೆ ಪ್ರಸವಸಮಯದಲ್ಲಿ ಪತಿಯನ್ನು ಪ್ರಸೂತಿಕೋಣೆಯಲ್ಲಿ ಹಾಜರಿರುವಂತೆ ಮಾಡಬೇಕು.’ ಹಾಗೇ ಮತ್ತೊಬ್ಬ ಪಶುವೈದ್ಯರು ಹೇಳುತ್ತಾರೆ: ‘ಅನೇಕ ವರ್ಷ ಪ್ರೀತಿಯಿಂದ ಸಾಕಿದ ತಮ್ಮ ಸಾಕುಪ್ರಾಣಿಯ ಕೊನೆಯ ಕ್ಷಣಗಳಲ್ಲಿ ಅದರ ಮಾಲೀಕರು ಉಪಸ್ಥಿತರಿರಲು ಸಿದ್ಧರಿರುವುದಿಲ್ಲ. ಪಾಪ ಅದು ಅವರಿಗಾಗಿ ಕಣ್ಣಾಡಿಸುತ್ತ ಹತಾಶೆಯಿಂದ ಕೊನೆಯುಸಿರೆಳೆಯುತ್ತದೆ.’ ಜೀವನದಿಂದ ಹಿಂದೆ ಸರಿಯುವ ಅಥವಾ ಅದರ ಅನುಭವದ ವಿಸ್ತಾರವನ್ನು ನಿರಾಕರಿಸುವ ಪ್ರಯತ್ನಗಳು ಇವು. ನಮ್ಮ ಜೀವನಕ್ರಮದಲ್ಲಿ ಮರೆಯಲಾಗದ ಅಂಶ ಮತ್ತು ಪಾತ್ರ ಕಾಲದ್ದು. ನಾವೆಲ್ಲ ಕಾಲವಶರು. ಹಿಂದಿನದರ ಮುಂದುವರಿಕೆ ಇಂದು, ಇಂದಿನ ಮುಂದುವರಿಕೆ ನಾಳೆಯು. ಈ ಚಕ್ರದಲ್ಲಿ ದುರದೃಷ್ಟವಶಾತ್‌ ಮಹತ್ವವಾದ ಇಂದನ್ನು ಕಡೆಗಣಿಸಿ ಹಿಂದುಮುಂದಿನದರಲ್ಲಿ ಸಿಲುಕಿ ಒದ್ದಾಡುತ್ತೇವೆ. ಬದುಕು ಕ್ಷಣಿಕವಲ್ಲ. ಬದುಕು ಆ ಕ್ಷಣದಲ್ಲಿದೆ. ಬದುಕಿನ ನಿಜವಾದ ಲಕ್ಷಣ ಈ ಕ್ಷಣ.

ಭವಿಷ್ಯದ ಭಯದ ಕಾರಣದಿಂದಾಗಿಯೇ ಮನುಷ್ಯ ಲೋಭಿಯಾಗುವುದು. ಲೋಭವೆಂದರೆ ಕೂಡಿಡುವ ಬುದ್ಧಿ. ನಾಳೆ ದೊರೆಯದಿದ್ದರೆ ನನಗೇನು ಗತಿ ಎಂಬ ಭಯವೇ ಲೋಭ. ಇದು ಬಡವ ಬಲ್ಲಿದರೆಂಬ ಭೇದವಿಲ್ಲದೆ ಎಲ್ಲರನ್ನೂ ಕಾಡುವಂತಹದ್ದು. ಸತ್ತ ಭಿಕ್ಷುಕನ ಜಂತೆ ಕೊಡವಿದಾಗ ಕಂತೆ ಕಂತೆ ಹಣ ದೊರೆತ ಪ್ರಸಂಗಗಳು ವರದಿಯಾಗಿವೆ. ಲೋಭವೇ ಇತರ ಕಾಮನೆಗಳಿಗೆ ಬೀಜ. ಇತಿಮಿತಿಯ ಬದುಕು ಕಟ್ಟಿಕೊಳ್ಳದೆ ಭವಿಷ್ಯದ ಸಂಕಟದಲ್ಲಿ ಬಾಳ್ವೆ ನಡೆಸುವುದು ಸರಿಯಲ್ಲ ಎಂದು ಧರ್ಮಗಳು ಸಾರುತ್ತವೆ. ‘... ಆದುದರಿಂದ ನಾನು ಹೇಳುತ್ತೇನೆ, ನಿಮ್ಮ ಬದುಕಿನ ಬಗ್ಗೆ ಆತಂಕಿತರಾಗದಿರಿ. ನಮಗೆ ತಿನ್ನಲು, ಕುಡಿಯಲು ದೊರೆಯುತ್ತದೋ ಇಲ್ಲವೋ ಎಂದು ಚಿಂತಿಸದಿರಿ, ನಿಮ್ಮ ದೇಹದ ಬಗೆಗೂ, ಅದಕ್ಕೆ ಬೇಕಾದ ದಿರಿಸನ್ನು ಹೊಂದಿಸುವ ಬಗೆಗೂ ಚಿಂತಿಸದಿರಿ. ಗಾಳಿಯಲ್ಲಿ ಹಾರಾಡುವ ಹಕ್ಕಿಗಳನ್ನು ನೋಡಿ. ಅವು ಬಿತ್ತಿ ಬೆಳೆಯುವುದಿಲ್ಲ, ಕಣಜಗಳಲ್ಲಿ ಕೂಡಿಡುವುದೂ ಇಲ್ಲ. ಆದರೆ ಅವುಗಳಿಗೆ ಸ್ವರ್ಗದಲ್ಲಿರುವ ತಂದೆಯು ಆಹಾರ ನೀಡುವುದಿಲ್ಲವೆ? ನೀವು ಅವುಗಳಿಗಿಂತ ಹೆಚ್ಚಿನವರಲ್ಲವೆ?’ ಎನ್ನುತ್ತದೆ, ಬೈಬಲ್‌(ಮ್ಯಾಥ್ಯೂ: 6:25-6).

ಭಗವದ್ಗೀತೆಯ ಎರಡನೆಯ ಅಧ್ಯಾಯದ ಕೊನೆಯ ಶ್ಲೋಕವನ್ನು ಗಮನಿಸಿ: ‘ವಿಹಾಯ ಕಾಮಾನ್‌ ಯಃ ಸರ್ವಾನ್‌ ಪುಮಾಂಶ್ಚರತಿ ನಿಸ್ಪ್ರಹಃ, ನಿರ್ಮಮೋ ನಿರಹಂಕಾರಃ ಸ ಶಾಂತಿಮಧಿಗಚ್ಛತಿ’ – ಅಂದರೆ ಬದುಕುವ ರೀತಿಯಲ್ಲಿ, ಅಂದರೆ ಶೈಲಿಯಲ್ಲಿ ಬದಲಾವಣೆಯನ್ನು ಇದು ಬಯಸುತ್ತದೆ. ಜೀವನದ ವ್ಯಾಪಾರಗಳಲ್ಲಿ ನಮ್ಮ ಮನೋಧರ್ಮ ಹೇಗಿರಬೇಕು ಎಂಬುದನ್ನು ಅದು ಸೂಚಿಸುತ್ತದೆ. ಭೋಗದ ಬಯಕೆಯನ್ನು ಬದಿಗಿಟ್ಟು ಒದಗಿದುದನು ಸಂತೋಷದಿಂದ ಅನುಭವಿಸಬೇಕು. ಸೀಮಿತವಾದ ಇಂದ್ರಿಯ ವ್ಯಾಪಾರಗಳನ್ನು ನಡೆಸಿದಾಗ ಶಾಂತಿ ದೊರೆಯುವುದು ಎಂಬುದು ಇದರ ಸಾರಾಂಶ.

‘ಕಗ್ಗ’ವಂತೂ ಇದನ್ನು ಎಷ್ಟು ಸೊಗಸಾಗಿ ಹೇಳುತ್ತದೆ ನೋಡಿ: ‘ಮುಂದೇನೋ ಮತ್ತೇನೋ ಇಂದಿಗಾ ಮಾತೇಕೆ? ಸಂದರ್ಭ ಬರಲಿ, ಬಂದಾಗಳಾ ಚಿಂತೆ, ಹೊಂದಿಸುವನಾರೊ ನಿನ್ನಾಳಲ್ಲ ಬೇರಿಹನು, ಇಂದಿಗಿಂದಿನ ಬದುಕು – ಮಂಕುತಿಮ್ಮ.’ ಭವಿಷ್ಯವು ನಮ್ಮ ಅಡಿಯಾಳಲ್ಲ, ಮುಂದೇನೋ ಮತ್ತೇನೋ ಎಂಬ ಚಿಂತೆ ಈಗ ಬೇಡ. ಸಂದರ್ಭ ಬಂದಾಗ ನೋಡಿದರಾಯಿತು. ಅದನ್ನು ಹೊಂದಿಸುವನು ಬೇರೆಯವನು. ಆದುದರಿಂದ ಇಂದಿನ ಬದುಕನ್ನಷ್ಟೇ ನೋಡು ಎನ್ನುತ್ತದೆ ಕಗ್ಗ. ಭವಿಷ್ಯದ ಬಗೆಗಿನ ಆಲೋಚನೆಯೇ ತಪ್ಪಲ್ಲ; ಆದರೆ ಅದರ ಬಗ್ಗೆ ಆತಂಕಿತರಾಗುವುದು ಒಳಿತಲ್ಲ. ಏಕೆಂದರೆ ಅದು ನಮ್ಮ ವರ್ತಮಾನವನ್ನು ಕಸಿದುಕೊಂಡುಬಿಡುತ್ತದೆ. ಗಿಬ್ರಾನ್ ಎನ್ನುತ್ತಾನೆ: ‘ನಮ್ಮ ಆತಂಕಗಳು ಭವಿಷ್ಯದ ಬಗೆಗಿನ ಆಲೋಚನೆಗಳಿಂದ ಬರುವುದಿಲ್ಲ, ಆದರೆ ಅದನ್ನು ನಿಯಂತ್ರಿಸುವ ಅಪೇಕ್ಷೆಯಿಂದ ಬರುತ್ತದೆ.’

ಆತಂಕ, ಭವಿಷ್ಯದ ಬಗೆಗಿನ ಕಕ್ಕುಲಾತಿ ಬೇಡವೆಂದರೂ ಜೀವನ ಯೋಜಿತವಾಗಿ ನಡೆಯಬೇಕಾದ ಕಾರಣದಿಂದ ಭವಿಷ್ಯದ ಬಗೆಗಿನ ಆತಂಕ ಕಾಡದೆ ಇರದು. ಇಂತಹ ಸಂದರ್ಭ ಒದಗಿದಾಗ ಅಥವಾ ಇದು ಅತಿಯಾಗಿ ಕಾಡಿದಾಗ ಹೇಗೆ ಎದುರಿಸಬೇಕು ಎಂದೂ ಆಲೋಚಿಸೋಣ. ಮೊದಲನೆಯದಾಗಿ ಕೊಂಚ ಆತಂಕ ಅಥವಾ ಬದುಕಿನ ಬಗ್ಗೆ ಸ್ವಲ್ಪ ಒತ್ತಡ ಇರಬೇಕು. ಇಲ್ಲದಿದ್ದರೆ ಜೀವನದ ಚಟುವಟಿಕೆಗಳು ರಭಸದಿಂದ ಕೂಡಿರುವುದಿಲ್ಲ. ಫಲಿತಾಂಶ ಉತ್ತಮವಾಗಿ ಬರಬೇಕು ಎಂದಾದರೆ ವಿದ್ಯಾರ್ಥಿಗೆ ಕೊಂಚವಾದರು ಅದರ ಬಗ್ಗೆ ಆತಂಕವಿರಬೇಕು. ಇದು ಆರೋಗ್ಯಕರ ಆತಂಕ. ಆದರೆ ಇದು ಒಂದು ಮಟ್ಟ ಮೀರಿ ಅವನ ಸಾಮಾನ್ಯ ಸಾಧನೆಗೂ ತಡೆಯಾಗುವಷ್ಟರ ಮಟ್ಟಿಗೆ ಆತಂಕಿತನಾದಾಗ ಎಚ್ಚೆತ್ತುಕೊಳ್ಳಬೇಕು. ಏಕಾಗ್ರತೆಯ ಕೊರತೆ, ಭಾವನೆಗಳ ನಿಯಂತ್ರಣ ತಪ್ಪುವುದು, ಭಾವಶೂನ್ಯತೆ ಆವರಿಸುವುದು, ಪತರಗುಟ್ಟುವುದು, ದಿಢೀರನೆ ಕೋಪಗೊಳ್ಳುವುದು, ಸ್ನಾಯುಗಳು ಬಿಗಿಯಾಗುವುದು - ನೋಯುವುದು, ಹೊಟ್ಟೆತೊಳಸು, ಹಸಿವಿಲ್ಲದಿರುವುದು, ನಿದ್ರೆ ಬಾರದಿರುವುದು – ಇವೆಲ್ಲ ಆತಂಕದ ಲಕ್ಷಣಗಳು. ದಯವಿಟ್ಟು ಗಮನಿಸಿ: ಇವು ಆತಂಕದ ಲಕ್ಷಣಗಳೆ ಹೊರತು ರೋಗವಲ್ಲ. ಇದಕ್ಕೆ ಮದ್ದು ಮನಸ್ಸನ್ನು ಆ ಸ್ಥಿತಿಯಿಂದ ಹೊರತರುವುದು. ಮುಖ್ಯವಾಗಿ ವ್ಯಾಯಾಮ, ಯೋಗ, ಪ್ರಾಣಾಯಾಮ ಇತ್ಯಾದಿ ದೈಹಿಕವಾಗಿ ಕೊಂಚ ಶ್ರಮನೀಡುವ ಅಭ್ಯಾಸ ಬೆಳೆಸಬೇಕು. ಜೊತೆಗೆ ಆತಂಕಗಳು ಹೇಗೆ ತರ್ಕಹೀನ ಎಂಬುದನ್ನೂ ನಮಗೆ ನಾವೇ ಮನದಟ್ಟು ಮಾಡಿಕೊಳ್ಳಬೇಕು. ಅಲ್ಲದೆ ನಂಬಿಕಸ್ಥರಲ್ಲಿ ನಮ್ಮ ಆತಂಕವನ್ನು ತೋಡಿಕೊಳ್ಳುವುದೂ ಅದನ್ನು ಕಡಿಮೆ ಮಾಡಬಲ್ಲದು.

ಕೆಲವು ಸಂದರ್ಭಗಳಲ್ಲಿ ವೈದ್ಯಕೀಯ ನೆರವು ಬೇಕಾದಾಗ ಸಂಕೋಚವಿಲ್ಲದೆ ಮನೋವೈದ್ಯರಲ್ಲಿ ಚಿಕಿತ್ಸೆ ಪಡೆದುಕೊಳ್ಳಬೇಕು. ಆರೋಗ್ಯವಾಗಿ ಸಂತೋಷದಿಂದ ಬಾಳುವುದು ಎಲ್ಲರ ಹಕ್ಕು. ಯಾವುದೇ ಕಾರಣಕ್ಕೂ ಇದರಿಂದ ನಾವು ವಂಚಿತರಾಗಬಾರದು; ಸೂಕ್ತಕ್ರಮಗಳನ್ನು ಅನುಸರಿಸಿ ಆತಂಕಗಳಿಂದ ಮುಕ್ತರಾಗಿ ಹರ್ಷಚಿತ್ತದಿಂದ ಬಾಳಬೇಕು.

ಕೊನೆಯದಾಗಿ, ಒಂದು ಆತಂಕದ ಬಗ್ಗೆ ಹೇಳಲೇಬೇಕು. ಅದು ಬದುಕಿನ ಬಗೆಗಿನ ಆತಂಕವಲ್ಲ. ಸಾವಿನ ಬಗೆಗಿನ ಆತಂಕ. ಆಶ್ಚರ್ಯವೆನಿಸಿದರೂ ವಯಸ್ಸಾದವರು ಮಾತ್ರ ಇದನ್ನು ಹೊಂದಿರುತ್ತಾರೆ ಎನ್ನಲಾಗದು. ಎಷ್ಟೋ ಬಾರಿ ಕಿರಿಯ ವಯಸ್ಸಿನವರಲ್ಲಿಯೂ ಇದು ಕಾಡುವ ಮಟ್ಟಕ್ಕೆ ಹೋಗುತ್ತದೆ. ಇದಕ್ಕೆ ಉತ್ತರದ ಕಗ್ಗ ಹೀಗಿದೆ: ಮರಣದಿಂ ಮುಂದೇನು? ಪ್ರೇತವೋ? ಭೂತವೋ? ಪರಲೋಕವೋ? ಪುನರ್ಜನ್ಮವೋ? ಅದೇನೋ! ತಿರುಗಿ ಬಂದವರಿಲ್ಲ, ವರದಿ ತಂದವರಿಲ್ಲ, ಧರೆಯ ಬಾಳ್ಗದರಿನೇಂ – ಮಂಕುತಿಮ್ಮ.’ ಇಹದ ಜೀವನಕ್ಕೆ ಮರಣೋತ್ತರದ ತರ್ಕ ಬೇಡವೆನ್ನುತ್ತಾರೆ, ಗುಂಡಪ್ಪನವರು. ಇದನ್ನೇ ವೀರಭಾವದಲ್ಲಿ ಬಸವಣ್ಣನವರು, ‘... ನಾಳೆ ಬಪ್ಪುದು ನಮಗಿಂದೆ ಬರಲಿ, ಇಂದು ಬಪ್ಪುದು ನಮಗೀಗಲೆ ಬರಲಿ, ಇದಕಾರಂಜುವರು ಇದಕಾರಳುಕುವರು ‘ಜಾತಸ್ಯ ಮರಣಂ ಧ್ರುವಂ’ ಎಂಬುದಾಗಿ ನಮ್ಮ ಕೂಡಲಸಂಗಮದೇವರು ಬರೆದ ಬರಹವ ತಪ್ಪಿಸುವಡೆ ಹರಿಬ್ರಹ್ಮಾದಿಗಳಿಗಳವಲ್ಲ’ ಎಂದಿದ್ದಾರೆ. ಮತ್ತೂ ಮುಂದುವರೆದು ಯಾವ ಸಾವನ್ನು ಮುಂದೂಡಲು ಎಲ್ಲ ಜೀವರೂ ಇಷ್ಟಪಡುತ್ತಾರೋ ಅಂತಹ ಸಾವನ್ನು ಮಹಾನವಮಿ ಎನ್ನುತ್ತಾರೆ ಬಸವಣ್ಣನವರು, ‘ಜೋಳವಾಳಿಯಾನಲ್ಲ, ವೇಳೆವಾಳಿಯವ ನಾನಯ್ಯ, ಹಾಳುಗೆಟ್ಟೋಡುವ ಆಳು ನಾನಲ್ಲಯ್ಯಾ; ಕೇಳು ಕೂಡಲ ಸಂಗಮದೇವಾ, ಮರಣವೇ ಮಹಾನವಮಿ’.

ನಾಳಿನ ಬಗೆಗಿನ ಆತಂಕ ಬಿಟ್ಟು ಈ ಕ್ಷಣದ ಅರಿವಿನಲ್ಲಿ ಬದುಕಿನ ಸೊಗಸನ್ನು ಆಸ್ವಾದಿಸುವ ಪ್ರಯತ್ನ ನಮ್ಮಿಂದ ನಿರಂತರವಾಗಿ ನಡೆಯಲಿ.

v

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು