ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏನಾದ್ರೂ ಕೇಳ್ಬೋದು: ವೈವಾಹಿಕ ಬದುಕು-ಲೈಂಗಿಕತೆ-ಸಂತಾನ

Last Updated 9 ಅಕ್ಟೋಬರ್ 2020, 19:31 IST
ಅಕ್ಷರ ಗಾತ್ರ

ವಯಸ್ಸು 30, ಪತ್ನಿಯ ವಯಸ್ಸು 27. ಮದುವೆಯಾಗಿ 3 ವರ್ಷಗಳಾಗಿವೆ. ಒಬ್ಬರನ್ನೊಬ್ಬರು ಇಷ್ಟಪಡುತ್ತೇವೆ. ವಾರಕ್ಕೊಮ್ಮೆ ಸೇರುತ್ತೇವೆ. ಒಂದು ವರ್ಷದ ನಂತರ ಮಗುವಾಗಲಿ ಎಂದು ಯೋಚಿಸಿದ್ದೇವೆ. ಶಿಶ್ನದ ಹೈಪೋಸ್ಪಾಡಿಯಾಸ್‌ ತೊಂದರೆಗಾಗಿ ಮೂರು ಬಾರಿ ಶಸ್ತ್ರಚಿಕಿತ್ಸೆಯಾಗಿದೆ. ಹಾಗಿದ್ದರೂ ಸ್ಖಲನದ ಸಮಯದಲ್ಲಿ ಶಿಶ್ನದ ಬುಡದಲ್ಲಿರುವ ರಂದ್ರವನ್ನು ಮುಚ್ಚಿ ಹಿಡಿದುಕೊಳ್ಳುವ ಅಗತ್ಯವಿದೆ. ಇದರಿಂದ ಮಕ್ಕಳಾಗಲು ತೊಂದರೆಯಾಗಬಹುದೇ? ಲೈಂಗಿಕಕ್ರಿಯೆಯ ನಂತರ ನನ್ನ ಪತ್ನಿ ತೀವ್ರವಾದ ಹೊಟ್ಟೆನೋವಿನಿಂದ ಅಳುತ್ತಾಳೆ. ಇದರಿಂದಾಗಿ ಸಂಭೋಗ ಮಾಡಲು ನನಗೆ ಹಿಂಜರಿಕೆಯಾಗುತ್ತಿದೆ. ನನ್ನ ಸುಖದಾಂಪತ್ಯಕ್ಕೆ ಸಹಾಯಮಾಡಿ.

- ನಾಗರಾಜ್‌, ಊರಿನ ಹೆಸರಿಲ್ಲ.

ಹೈಪೋಸ್ಪಾಡಿಯಾಸಿಸ್‌ (ಶಿಶ್ನದ ತುದಿಯಲ್ಲಿ ತೆರೆದುಕೊಳ್ಳಬೇಕಾದ ಮೂತ್ರನಾಳ ಕೆಳಭಾಗದಲ್ಲಿ ತೆರೆದುಕೊಳ್ಳುವುದು) ತೊಂದರೆಯಿಂದ ಮಕ್ಕಳಾಗುವ ಕುರಿತು ವೈದ್ಯರಲ್ಲಿ ಚರ್ಚೆಮಾಡಿ. ಈ ಅಂಕಣ ಮಾನಸಿಕ ತೊಂದರೆಗಳಿಗೆ ಮಾತ್ರ ಸಂಬಂಧಪಟ್ಟಿರುವುದು. ಸದ್ಯಕ್ಕೆ ಇಬ್ಬರೂ ಲೈಂಗಿಕ ತೃಪ್ತಿಯನ್ನು ಹಂಚಿಕೊಳ್ಳುವುದು ಹೇಗೆ ಎಂದು ಯೋಚಿಸಿ.

ಲೈಂಗಿಕಕ್ರಿಯೆಯ ನಂತರ ನೋವನ್ನು ಅನುಭವಿಸುವ ಪತ್ನಿಗಾಗಿ ಮಿಡಿಯುವುದು ನಿಮ್ಮ ಪ್ರೀತಿಯ ಸಂಕೇತ. ನೋವಿಗೆ ದೈಹಿಕ ಕಾರಣಗಳಿರಬಹುದೇ ಎನ್ನುವುದನ್ನು ತಿಳಿಯಲು ಸ್ತ್ರೀರೋಗ ತಜ್ಞರನ್ನು ಸಂಪರ್ಕಿಸಿ. ದೈಹಿಕ ತೊಂದರೆಗಳಿಲ್ಲವೆಂದಾದರೆ ನೀವು ಅವರೊಳಗೆ ಚಲಿಸುವಾಗಿನ ಕೋನ ಮತು ಒತ್ತಡದಿಂದ ಅವರಿಗೆ ನೋವಾಗುತ್ತಿರಬಹುದು. ಹಾಗಾಗಿ ಸಂಭೋಗದ ರೀತಿಯನ್ನು ಬದಲಾಯಿಸಿ. ಪತ್ನಿಯೇ ಮೇಲೆ ಬಂದು ಅವರಿಗೆ ಆರಾಮವೆನ್ನಿಸುವಷ್ಟು ಒತ್ತಡವನ್ನು ಹಾಕುತ್ತಾ ಸುಖಿಸಬಹುದು. ಅಥವಾ ಅಕ್ಕಪಕ್ಕದಲ್ಲಿ ಮಲಗಿ ಇಬ್ಬರಿಗೂ ತೃಪ್ತಿಯಾಗುವಷ್ಟು ಮಾತ್ರ ಸಂಪರ್ಕವನ್ನು ಸಾಧಿಸುತ್ತಾ ಆನಂದಿಸಬಹದು. ಇದರಿಂದಲೂ ಸಹಾಯವಾಗುತ್ತಿಲ್ಲವೆಂದಾದರೆ ತಜ್ಞ ಲೈಂಗಿಕ ಮನೋಚಿಕಿತ್ಸಕರನ್ನು ಸಂಪರ್ಕಿಸಿ.

***

ಇತ್ತೀಚೆಗೆ ವಿವಾಹವಾಗಿದೆ. ವಯಸ್ಸು 28, ಪತಿಗೆ 34. ಲೈಂಗಿಕ ಕ್ರಿಯೆಯಲ್ಲಿ ಇಚ್ಛೆಯಿದ್ದರೂ ನನ್ನ ದೇಹದ ಯಾವುದೇ ಭಾಗವನ್ನು ಮುಟ್ಟಿದರೂ ಉದ್ದೀಪನವಾಗುತ್ತಿಲ್ಲ. ಪತಿ ಇದರ ಬಗೆಗೆ ಯಾವುದೇ ಮಾತನಾಡುತ್ತಿಲ್ಲ. ನನಗೆ ಯಾವುದೇ ತೃಪ್ತಿ ಸಿಗುತ್ತಿಲ್ಲ. ಪರಿಹಾರ ತಿಳಿಸಿ.

- ಸಂಪದಾ, ಊರಿನ ಹೆಸರಿಲ್ಲ.

ಲೈಂಗಿಕ ಕ್ರಿಯೆಯಲ್ಲಿ ಎಲ್ಲರಿಗೂ ಆಸಕ್ತಿ ಇರುವುದು ಸಹಜವಾದರೂ ಅದನ್ನು ಪಡೆದುಕೊಳ್ಳುವ ಮತ್ತು ಅನುಭವಿಸುವ ರೀತಿ ಅವರವರಿಗೆ ವಿಶಿಷ್ಟವಾದದ್ದು. ಲೈಂಗಿಕತೆಯ ಬಗೆಗೆ ನನ್ನೊಳಗಿರುವ ಕಲ್ಪನೆಗಳೇನು? ನನಗೆ ಲೈಂಗಿಕ ಆಸಕ್ತಿ ಕೆರಳುವುದು ಹೇಗೆ? ಅದನ್ನು ಹೇಗೆ ಪತಿಯೊಡನೆ ಹಂಚಿಕೊಳ್ಳಬೇಕೆನ್ನುವುದು ನನ್ನ ಕನಸು? ಸಂಪೂರ್ಣ ಲೈಂಗಿಕ ತೃಪ್ತಿ ಪಡೆಯಲು ನಾನು ಪತಿಯಿಂದ ಏನನ್ನು ನಿರೀಕ್ಷಿಸುತ್ತೇನೆ? ಪತಿಗೂ ಅಂತಹ ಅನುಭವ ನೀಡಲು ನಾನು ಹೇಗೆ ಸಹಕರಿಸಲು ಇಚ್ಛಿಸುತ್ತೇನೆ? ಇಂತಹ ಪ್ರಶ್ನೆಗಳಿಗೆ ಮೊದಲು ಉತ್ತರ ಹುಡುಕಿಕೊಳ್ಳಿ. ನಂತರ ಪತಿಯೊಡನೆ ಇವುಗಳನ್ನೆಲ್ಲಾ ಚರ್ಚೆಮಾಡಿ. ಈ ಉತ್ತರವನ್ನು ಪತಿಗೂ ತೋರಿಸಿ ಅವರ ಆಸಕ್ತಿ ಆಯ್ಕೆಗಳನ್ನು ತಿಳಿದುಕೊಳ್ಳುವ ಕುತೂಹಲ ವ್ಯಕ್ತಪಡಿಸಿ. ಮುಕ್ತವಾಗಿ ಮಾತನಾಡಲು ಇಬ್ಬರೂ ಹಿಂಜರಿದರೆ ಪರಿಹಾರಗಳು ಹೇಗೆ ಸಾಧ್ಯ?

***

ವಯಸ್ಸು 28. ಮದುವೆಯಾಗಿ 2 ವರ್ಷಗಳಾಗಿದ್ದು ದಾಂಪತ್ಯ ಜೀವನ ತುಂಬಾ ಚೆನ್ನಾಗಿದೆ. ಸದ್ಯಕ್ಕೆ ಮಕ್ಕಳು ಬೇಡವೆಂದು ಸುರಕ್ಷಿತ ಲೈಂಗಿಕ ಸಂಪರ್ಕ ಮಾಡುತ್ತಿದ್ದೇವೆ. ನನಗೆ ಹರ್ನಿಯಾ ಶಸ್ತ್ರಚಿಕಿತ್ಸೆಯಾಗಿದೆ. ಇತ್ತೀಚಿನ ಪರೀಕ್ಷೆಯಲ್ಲಿ ವೀರ್ಯಾಣುಗಳ ಸಂಖ್ಯೆ ಕಡಿಮೆ ಇದೆ, ಹಾಗಾಗಿ ನಿಮಗೆ ಮಕ್ಕಳಾಗುವುದಿಲ್ಲ ಎಂದು ವೈದ್ಯರು ಹೇಳುತ್ತಿದ್ದಾರೆ. ಇದನ್ನು ಹೆಂಡತಿಗೆ ಹೇಳಿದರೆ ದಾಂಪತ್ಯ ಜೀವನಕ್ಕೆ ತೊಂದರೆಯಾಗುವುದೆಂಬ ಭಯ. ಮುಂದೆ ನಾನೇನು ಮಾಡಲಿ?

- ಹೆಸರಿಲ್ಲ, ಮೈಸೂರು.

ಹೆಚ್ಚಿನ ಸಂದರ್ಭಗಳಲ್ಲಿ ಹರ್ನಿಯಾ ಶಸ್ತ್ರಚಿಕಿತ್ಸೆಗೂ ಮತ್ತು ವೀರ್ಯಾಣುಗಳ ಸಂಖ್ಯೆಗೂ ಸಂಬಂಧವಿರುವುದಿಲ್ಲ. ಸದ್ಯಕ್ಕೆ ಮಕ್ಕಳು ಬೇಡವೆಂದು ನಿರ್ಧರಿಸಿರುವ ನೀವು ಪರೀಕ್ಷೆ ಮಾಡಿಸಿಕೊಳ್ಳುವ ಅಗತ್ಯವೇನಿತ್ತು? ಪರೀಕ್ಷೆ ಮಾಡಿಸಿಕೊಂಡು ಆಹ್ವಾನಿಸಿಕೊಂಡಿರುವ ಆತಂಕವನ್ನು ಹಂಚಿಕೊಳ್ಳದಿದ್ದರೆ ಹೆಂಡತಿಯೊಡನೆ ಮುಕ್ತವಾಗಿ ಬೆರೆಯಲು ಸಾಧ್ಯವೇ? ಕೊನೆಗೆ ಪರಿಹಾರ ಹುಡುಕುವುದಾದರೂ ಇಬ್ಬರೂ ಸೇರಿಯೇ ಹುಡುಕಬೇಕಲ್ಲವೇ? ಈ ಉತ್ತರವನ್ನು ಅವರಿಗೆ ತೋರಿಸಿ ಇಬ್ಬರೂ ಮುಕ್ತವಾಗಿ ಚರ್ಚೆಮಾಡಿ.

ವೈದ್ಯಕೀಯ ಪರೀಕ್ಷೆಗಳು ಅಂತಿಮವೇನಲ್ಲ. ನಿಮಗೆ ಮಕ್ಕಳಾಗುವ ವಯಸ್ಸು ಮೀರಿಲ್ಲ. ಸದ್ಯಕ್ಕೆ ಕಾಮಸುಖವನ್ನೂ ಸಂಪೂರ್ಣವಾಗಿ ಅನುಭವಿಸಿ. ಮಕ್ಕಳು ಬೇಕೆಂದು ನಿರ್ಧರಿಸಿದ 2 ವರ್ಷಗಳ ನಂತರವೂ ಮಕ್ಕಳಾಗದಿದ್ದರೆ ಮುಂದಿನ ದಾರಿಗಳ ಬಗೆಗೆ ಯೋಚಿಸಬಹುದು. ಮಕ್ಕಳಾಗುವುದಕ್ಕೂ ದಾಂಪತ್ಯದ ಸುಖಕ್ಕೂ ತಳಕು ಹಾಕಿಕೊಂಡರೆ ಈಗಿನಿಂದಲೇ ಇಬ್ಬರಲ್ಲೂ ಬೇಸರ ಮೊಳಕೆಯೊಡೆಯುತ್ತದೆ.

***

ಪತಿಯ ವಯಸ್ಸು 37, ಪತ್ನಿಗೆ 25. ಮದುವೆಯಾಗಿ 2 ವರ್ಷಗಳಾಗಿವೆ. ಮಕ್ಕಳಾಗದಿರಲು ಕಾರಣ ಮತ್ತು ಪರಿಹಾರದ ಬಗೆಗೆ ಸಲಹೆ ನೀಡಿ.

- ಹೆಸರಿಲ್ಲ, ಕಾರವಾರ.

ನಿಮ್ಮ ಆತಂಕವನ್ನು ಅರ್ಥಮಾಡಿಕೊಳ್ಳುತ್ತಲೇ ಈ ಅಂಕಣ ಮಾನಸಿಕ ತೊಂದರೆಗಳಿಗೆ ಮಾತ್ರ ಸೀಮಿತವಾಗಿದೆ ಎಂದು ಸೂಚಿಸುತ್ತಿದ್ದೇನೆ. ಮಕ್ಕಳಾಗುವ ಕುರಿತು ತಿಳಿಯಲು ತಜ್ಞ ವೈದ್ಯರನ್ನು ಸಂಪರ್ಕಿಸಿ. ಮಕ್ಕಳಿಲ್ಲದ ದಾಂಪತ್ಯ ನಿರರ್ಥಕ ಎಂದು ನೀವಂದುಕೊಂಡರೆ ಕೈಯಳತೆಯಲ್ಲಿರುವ ಸುಖವನ್ನು ದೂರದ ಕನಸಿಗಾಗಿ ಕಳೆದುಕೊಳ್ಳುತ್ತಿರುತ್ತೀರಿ ಎನ್ನುವ ಎಚ್ಚರವಿರಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT