ಭಾನುವಾರ, ಏಪ್ರಿಲ್ 11, 2021
30 °C

ಅಡುಗೆಮನೆಯಲ್ಲೇ ಇದೆ ಔಷಧ

ಡಾ. ಟಿ.ಎಸ್‌. ತೇಜಸ್‌ Updated:

ಅಕ್ಷರ ಗಾತ್ರ : | |

Prajavani

ಗಿಡಮೂಲಿಕೆ ಹಾಗೂ ಸಂಬಾರು ಪದಾರ್ಥಗಳನ್ನು ಚಿಕಿತ್ಸೆಗಾಗಿ ಬಳಸುವ ಸಂಪ್ರದಾಯ ಬಹಳ ಹಿಂದಿನಿಂದಲೂ ಇದೆ. ಅಷ್ಟೇ ಅಲ್ಲ, ಇತ್ತೀಚೆಗೆ ನಡೆದ ಹಲವಾರು ಸಂಶೋಧನೆಗಳು ಕೂಡ ವಿವಿಧ ಕಾಯಿಲೆಗಳಿಗೆ ಗಿಡಮೂಲಿಕೆ ಹಾಗೂ ಸಂಬಾರು ಪದಾರ್ಥಗಳಲ್ಲಿರುವ ಔಷಧೀಯ ಗುಣಗಳು ಪರಿಹಾರ ಒದಗಿಸುತ್ತವೆ ಎಂಬ ಅಂಶವನ್ನು ಸಾಬೀತುಪಡಿಸಿವೆ.

ಗ್ರಂಧಿಗೆ ಸಾಮಗ್ರಿಗಳನ್ನು ಮಾರಾಟ ಮಾಡುವವರೇ ಆರೋಗ್ಯ ಸಮಸ್ಯೆಗಳಿಗೆ ಗಿಡಮೂಲಿಕೆ ಹಾಗೂ ಸಂಬಾರು ಪದಾರ್ಥಗಳನ್ನು ಔಷಧವಾಗಿ ನೀಡುವ ಪರಿಪಾಠ ಈಗಲೂ ಕೂಡ ಕೆಲವು ಪಟ್ಟಣಗಳಲ್ಲಿ ಚಾಲ್ತಿಯಲ್ಲಿದೆ. ಬೀಜ, ಬೇರು, ತೊಗಟೆ, ಒಣಗಿದ ಎಲೆ, ಅಂಟು, ಕಾಡಿನ ಕಾಯಿಗಳು.. ಹೀಗೆ ಕಾಡಿನಲ್ಲಿ ಬೆಳೆಯುವ ಮರ– ಗಿಡಗಳ ವಿವಿಧ ಭಾಗಗಳು ಅತ್ಯುತ್ತಮ ಔಷಧಗಳಾಗಿ ಜನಪ್ರಿಯವಾಗಿವೆ. ಇಂತಹ ಸಸ್ಯಗಳ ಭಾಗಗಳನ್ನು ಕುದಿಸಿ ಕಷಾಯ ರೂಪದಲ್ಲಿ ಕುಡಿದರೂ ದೇಹವನ್ನು ಅನಾರೋಗ್ಯವು ಕಾಡದಂತೆ ಕಾಪಿಡುವ ದಿವ್ಯಶಕ್ತಿ ಇದಕ್ಕಿದೆ. ಈಗ ಇದೊಂದು ಕಲೆ ಮಾತ್ರವಲ್ಲ, ವಿಜ್ಞಾನ ಕೂಡ.

ಶುಂಠಿ: ತೀಕ್ಷ್ಣ ಪರಿಮಳವಿರುವ ಈ ಬೇರು ಜೀರ್ಣಕಾರಿ. ಇದು ಶೀತ, ಕಟ್ಟಿಕೊಂಡ ಮೂಗಿಗೆ ಪರಿಣಾಮಕಾರಿ ಔಷಧ. ಇದನ್ನು ನೀರಿನಲ್ಲಿ ಕುದಿಸಿ ಅಥವಾ ಜಜ್ಜಿ ಜೇನುತುಪ್ಪದೊಂದಿಗೆ ಸೇವಿಸುವುದರಿಂದ ಶೀತ, ಸೈನಸ್‌ ದೂರ ಓಡುತ್ತದೆ ಎಂಬುದು ಅಜ್ಜಿಯ ಕಾಲದಿಂದಲೂ ಗೊತ್ತಿರುವ ಅಂಶವೇ. ಇದು ವಾಕರಿಕೆ ಹಾಗೂ ಅಜೀರ್ಣಕ್ಕೆ ಕೂಡ ದಿವ್ಯ ಔಷಧ. ಜೊತೆಗೆ ಸಣ್ಣ ಕರುಳಿಗೆ ನಿರ್ವಿಷಕಾರಿ (ಡಿಟಾಕ್ಸಿಫೈ). ವಿಷಕಾರಿ ಆಹಾರದಿಂದ ಉಂಟಾಗುವ ಸಮಸ್ಯೆಯನ್ನು ನಿವಾರಿಸುತ್ತದೆ. ಇದರಲ್ಲಿರುವ ಉರಿಯೂತ ನಿವಾರಕ ಗುಣದಿಂದ ಕೊಲೆಸ್ಟ್ರಾಲ್‌ ಹಾಗೂ ಕ್ಯಾನ್ಸರ್‌ಗೆ ಕೂಡ ಬಳಕೆ ಮಾಡಲಾಗುತ್ತದೆ. ಕ್ಯಾನ್ಸರ್‌ ಕೋಶಗಳು ತಮ್ಮಷ್ಟಕ್ಕೇ ತಾವೇ ಕೊಂದುಕೊಳ್ಳುವ ಅಂಶ ಇದರಲ್ಲಿದೆ ಎಂಬುದು ಸಂಶೋಧನೆಯಿಂದ ತಿಳಿದು ಬಂದಿದೆ. ಅರಿಸಿನ, ಕಾಳು ಮೆಣಸಿನ ಜೊತೆ ಇದನ್ನು ಸೇರಿಸಿ ತಯಾರಿಸಲಾದ ಮಿಶ್ರಣ ಸ್ತನ ಕ್ಯಾನ್ಸರ್‌, ಗುದ ಕ್ಯಾನ್ಸರ್ ಕೋಶಗಳನ್ನು ನಾಶ ಮಾಡುತ್ತದೆ.

ಅರಿಸಿನ: ಇದು ಕೂಡ ಬೇರಾಗಿದ್ದು, ಉಪಶಮನಕಾರಿ ಆ್ಯಂಟಿಆಕ್ಸಿಡೆಂಟ್‌ಗಳನ್ನು ಹೊಂದಿದೆ. ಭಾರತೀಯರು ನಿತ್ಯ ಅಡುಗೆಯಲ್ಲಿ ಬಳಸುವ ಈ ಸಂಬಾರು ಪದಾರ್ಥ ಹೃದ್ರೋಗ, ಅಲ್ಝಮೇರ್‌ ಹಾಗೂ ಕ್ಯಾನ್ಸರ್‌ಗೆ ರಾಮಬಾಣ. ಜೀರಿಗೆ ಹಾಗೂ ಸಾಸಿವೆಯಲ್ಲಿರುವ ಕರ್ಕ್ಯುಮಿನ್‌ ಅರಿಸಿನದಲ್ಲಿದ್ದು, ಮೂಳೆ ಮುರಿತ, ಜಜ್ಜುಗಾಯ, ಊತದಲ್ಲಿ ಉರಿಯೂತ ಉಂಟು ಮಾಡುವ ಕಿಣ್ವವನ್ನು ನಿವಾರಿಸುವ ಗುಣ ಇದಕ್ಕಿದೆ. ಹಾಲಿಗೆ ಅರಿಸಿನ ಸೇರಿಸಿ ಕುಡಿಯುವ ಸಂಪ್ರದಾಯ ಶೀತವಾದಾಗ, ಗಾಯವಾದಾಗ ಹಿಂದಿನಿಂದಲೂ ಭಾರತೀಯರಲ್ಲಿದೆ.

ಬೆಳ್ಳುಳ್ಳಿ: ಅಡುಗೆ ಪದಾರ್ಥಗಳ ರುಚಿ ಹೆಚ್ಚಿಸುವ ಬೆಳ್ಳುಳ್ಳಿಯಲ್ಲಿರುವ ಸಲ್ಫರ್‌ ರಾಸಾಯನಿಕ ಬ್ಯಾಕ್ಟೀರಿಯ, ಯೀಸ್ಟ್‌ ವಿರುದ್ಧ ಹೋರಾಡುವಂತಹ ರೋಗನಿರೋಧಕ ಅಂಶ ಹೊಂದಿದೆ. ರಕ್ತನಾಳವನ್ನು ಕಟ್ಟಿಕೊಳ್ಳುವ ಕೊಲೆಸ್ಟ್ರಾಲ್‌ ಅನ್ನು ಕರಗಿಸುವ ಆ್ಯಂಟಿ ಆಕ್ಸಿಡೆಂಟ್‌ ಇದರಲ್ಲಿದ್ದು, ರಕ್ತ ಗರಣೆ (ಕ್ಲಾಟಿಂಗ್‌) ಕಟ್ಟುವುದನ್ನು ಹಾಗೂ ಪಾರ್ಶ್ವವಾಯು ಸಮಸ್ಯೆಗೆ ಒಳಗಾಗುವುದನ್ನು ತಡೆಯುತ್ತದೆ. ಕ್ಯಾನ್ಸರ್‌ ಕೋಶಗಳ ವಿರುದ್ಧವೂ ಹೋರಾಡಬಲ್ಲದು. ಬೆಳ್ಳುಳ್ಳಿಯನ್ನು ಸ್ವಲ್ಪ ಹುರಿದು ಸೇವಿಸುವುದು ಒಳ್ಳೆಯದು. ಇಲ್ಲದಿದ್ದರೆ ಆಮ್ಲೀಯತೆಯನ್ನು ಕೆರಳಿಸಬಹುದು.

ಬೆಳ್ಳುಳ್ಳಿಯನ್ನು ಕೊಬ್ಬರಿ ಎಣ್ಣೆಗೆ ಸೇರಿಸಿ ಬಿಸಿ ಮಾಡಿ ಕಿವಿಗೆ ಬಿಟ್ಟರೆ ಕಿವಿ ನೋವು ಕೂಡ ಕಡಿಮೆಯಾಗುತ್ತದೆ. ಇದನ್ನು ಈರುಳ್ಳಿ, ಶುಂಠಿ, ಕಾಳು ಮೆಣಸಿನ ಪುಡಿಯ ಜೊತೆ ಸೇರಿಸಿ, ತರಕಾರಿ ಸೂಪ್‌ ಮಾಡಿಕೊಂಡು ಸೇವಿಸಿದರೆ ಇನ್‌ಫ್ಲುಯೆಂಝಾದಿಂದ ಬರುವ ನೆಗಡಿ ಮತ್ತು ಜ್ವರದ ಪರಿಣಾಮ ಕಡಿಮೆಯಾಗುತ್ತದೆ.

ದಾಲ್ಚಿನ್ನಿ ಅಥವಾ ಚಕ್ಕೆ: ನಾವು ಭಾರತೀಯರು ಅಡುಗೆಯಲ್ಲಿ ಹೆಚ್ಚಾಗಿ ಬಳಸುವ ಈ ಸಂಬಾರು ಪದಾರ್ಥವು ರೋಗಕ್ಕೆ ಕಾರಣವಾಗುವ ಫ್ರೀ ರ‍್ಯಾಡಿಕಲ್‌ಗಳು ಹಾಗೂ ರೋಗಾಣುಗಳನ್ನು ದೂರವಿಡುತ್ತದೆ. ಈ ಮೂಲಕ ದೇಹದ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಇದು ಇನ್ಸುಲಿನ್‌ ದೇಹದಲ್ಲಿ ಹೆಚ್ಚು ಪರಿಣಾಮಕಾರಿಯಾಗುವಂತೆ ಮಾಡುವುದಲ್ಲದೇ, ಪೂರ್ವ ಮಧುಮೇಹದ ಲಕ್ಷಣಗಳನ್ನು ಕಡಿಮೆ ಮಾಡಬಲ್ಲದು. ನಿತ್ಯ ಬೆಳಿಗ್ಗೆ ಅರ್ಧ ಚಮಚ ದಾಲ್ಚಿನ್ನಿ ಪುಡಿಯನ್ನು ಬಿಸಿ ನೀರು, ಜೇನುತುಪ್ಪದ ಜೊತೆಗೆ ಸೇವಿಸಿದರೆ ರಕ್ತದಲ್ಲಿನ ಸಕ್ಕರೆ ಪ್ರಮಾಣ ಕಡಿಮೆಯಾಗುವುದಲ್ಲದೇ, ಬೊಜ್ಜು ಸಹ ಕರಗುತ್ತದೆ. ಇದು ಕೊಲೆಸ್ಟ್ರಾಲ್‌ ಪ್ರಮಾಣವನ್ನೂ ಕಡಿಮೆ ಮಾಡಬಲ್ಲದು. ಇದರಿಂದ ವಾಯು, ಹೊಟ್ಟೆಯುಬ್ಬರವನ್ನು ನಿವಾರಿಸಬಹುದು. ಸಂಧಿವಾತದ ನೋವನ್ನು ಕಡಿಮೆ ಮಾಡುವ ಗುಣವೂ ಇದರಲ್ಲಿದೆ. ಆದರೆ ಇದು ಕೂಡ ಆಮ್ಲೀಯತೆಯನ್ನು ಹೆಚ್ಚಿಸುವುದರಿಂದ ಸೇವಿಸುವ ಪ್ರಮಾಣದ ಮೇಲೆ ಮಿತಿಯಿರಲಿ.

ಲವಂಗ: ಇದು ಅತ್ಯಂತ ಶಕ್ತಿಯುತ ಆ್ಯಂಟಿ ಆಕ್ಸಿಡೆಂಟ್‌ಗಳ ಆಗರವಾಗಿದ್ದು, ಸೋಂಕು, ವಿಷಕಾರಿ ಪದಾರ್ಥಗಳ ಮೇಲೆ ಹೆಚ್ಚಿನ ಪರಿಣಾಮ ಉಂಟು ಮಾಡಬಲ್ಲದು. ಫೈಟೊ ರಾಸಾಯನಿಕಗಳಿರುವ ಲವಂಗ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಉರಿಯೂತವನ್ನು ತಡೆಯುವ ಶಕ್ತಿಯುಳ್ಳ ಲವಂಗವು ದೇಹವನ್ನು ಶುದ್ಧೀಕರಿಸುವ ಕೆಲಸ ಮಾಡುತ್ತದೆ. ಹಲ್ಲು ನೋವಿಗೆ ಬಳಸುವ ಸಂಪ್ರದಾಯ ನಮ್ಮಲ್ಲಿದ್ದು, ಇದು ವಾಕರಿಕೆಯನ್ನು ಕಡಿಮೆ ಮಾಡಬಲ್ಲದು.

ಈ ಗಿಡಮೂಲಿಕೆ ಅಥವಾ ಸಂಬಾರು ಪದಾರ್ಥಗಳ ಶಮನಕಾರಿ ಗುಣವನ್ನು ಹೆಚ್ಚಿಸಲು ಅವುಗಳನ್ನು ಮಿಶ್ರ ಮಾಡಿ ತೆಗೆದುಕೊಳ್ಳುವುದು ಒಳಿತು. ಏಕೆಂದರೆ ಪ್ರತಿಯೊಂದಕ್ಕೂ ತನ್ನದೇ ಆದ ಔಷಧೀಯ ಗುಣಗಳಿದ್ದು, ಮಿಶ್ರ ಮಾಡುವುದರಿಂದ ಹೆಚ್ಚು ಪರಿಣಾಮಕಾರಿ ಲಾಭಗಳನ್ನು ಪಡೆಯಬಹುದು. ಉದಾಹರಣೆಗೆ ಶುಂಠಿ, ದಾಲ್ಚಿನ್ನಿ, ಏಲಕ್ಕಿ ಅಥವಾ ಲವಂಗವನ್ನು ಪುದಿನ, ನಿಂಬೆ ಹುಲ್ಲು ಅಥವಾ ಕರ್ಪೂರ ತುಳಸಿಯ ಎಲೆಯೊಂದಿಗೆ ಸೇರಿಸಿ ಕಷಾಯ ತಯಾರಿಸಬಹುದು. ಇದರಿಂದ ರುಚಿಯೂ ಹೆಚ್ಚಾಗುತ್ತದೆ. ಅಡುಗೆ ಪದಾರ್ಥಗಳಲ್ಲಿ ಹೇಗೆ ಶುಂಠಿ, ಅರಿಸಿನ, ಬೆಳ್ಳುಳ್ಳಿ, ಜೀರಿಗೆ, ಮೆಣಸು ಬಳಸುವುದರಿಂದ ರುಚಿ, ಪರಿಮಳ ಹೆಚ್ಚಾಗುತ್ತದೆಯೋ ಹಾಗೆಯೇ ಕಷಾಯವೂ ಕೂಡ.

ಕಾಯಿಲೆ ಬಂದಾಗ ಮಾತ್ರ ಇವುಗಳನ್ನು ಬಳಸುವುದಕ್ಕಿಂತ ನಿತ್ಯ ಅಡುಗೆ ಪದಾರ್ಥಗಳಲ್ಲಿ ಅಂದರೆ ಸಾರು, ಸಲಾಡ್‌, ಪಲ್ಯ ಮೊದಲಾದವುಗಳಲ್ಲಿ ಇವುಗಳನ್ನು ಬಳಸುವುದರಿಂದ ರೋಗ ನಿರೋಧಕ ಶಕ್ತಿಯನ್ನು ಬೆಳೆಸಿಕೊಳ್ಳಬಹುದು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು