ಗುರುವಾರ, 23 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾನಸಿಕ ಒತ್ತಡ ನೀಗಿಸುವ ಹವ್ಯಾಸ

Last Updated 3 ಮೇ 2021, 19:30 IST
ಅಕ್ಷರ ಗಾತ್ರ

ಕೊರೊನಾ ದಿನಗಳು ಆರಂಭವಾದಾಗಿನಿಂದ ಜನರಲ್ಲಿ ಒತ್ತಡ, ಖಿನ್ನತೆ ಹಾಗೂ ಬೇಸರದಂತಹ ಮಾನಸಿಕ ಸಮಸ್ಯೆಗಳು ಹೆಚ್ಚುತ್ತಿವೆ. ಅದರಲ್ಲೂ ಈ ಲಾಕ್‌ಡೌನ್‌ ಎನ್ನುವುದು ನಾಲ್ಕು ಗೋಡೆಗಳ ಮಧ್ಯೆ ಕುಳಿತ ಜನರಲ್ಲಿ ಇನ್ನಷ್ಟು ಒತ್ತಡ ಹೆಚ್ಚುವಂತೆ ಮಾಡಿದೆ. ಹಲವರಿಗೆ ಮನೆಯಿಂದಲೇ ಕೆಲಸ ಮಾಡುವ ಅವಕಾಶವಿದ್ದರೂ ಬಿಡುವಿನ ವೇಳೆಯಲ್ಲಿ ಬೇಸರ ಕಾಡುತ್ತಿದೆ. ಆ ಕಾರಣಕ್ಕೆ ತಮ್ಮ ಹಿಂದಿನ ಹವ್ಯಾಸಗಳಿಗೆ ಮರುಜೀವ ಕೊಡುತ್ತಿದ್ದಾರೆ. ಆ ಮೂಲಕ ಬೇಸರ, ದುಃಖ, ನೋವನ್ನು ಮರೆಯುವ ಪ್ರಯತ್ನ ಮಾಡುತ್ತಿದ್ದಾರೆ.

ಕಳೆದ ಬಾರಿ ಲಾಕ್‌ಡೌನ್‌ನಲ್ಲಿ ಕುಕಿಂಗ್‌, ಡ್ರಾಯಿಂಗ್ ಹಾಗೂ ಗಾರ್ಡನಿಂಗ್‌ ಮಾಡುವ ಮೂಲಕ ಬೇಸರ ನೀಗಿಸಿಕೊಂಡಿದ್ದರು. ಅಲ್ಲದೇ ಇದು ಮಾನಸಿಕವಾಗಿ ಕುಗ್ಗಿದ ಜನರಲ್ಲಿ ಹೊಸ ಚೈತನ್ಯ ಮೂಡಿಸಲು ಸಹಕಾರಿಯಾಗಿತ್ತು. ಇದರೊಂದಿಗೆ ಅಂತರ್ಜಾಲದಲ್ಲಿ ತಡಕಾಡಿ ಬ್ರೆಡ್‌, ಕೇಕ್‌ ಮಾಡುವುದು, ಟೈ ಡೈ ಮಾಡುವುದನ್ನು ಕಲಿತಿದ್ದರು. ತಮ್ಮಲ್ಲಿರುವ ಸುಪ್ತ ಪ್ರತಿಭೆಗಳನ್ನು ಫೇಸ್‌ಬುಕ್‌, ವಾಟ್ಸ್‌ಆ್ಯಪ್‌ ಸ್ಟೇಟಸ್‌ಗಳಲ್ಲಿ ಹಂಚಿಕೊಂಡು ಖುಷಿ ಪಟ್ಟಿದ್ದರು.

ಈಗ ಮತ್ತೆ ಕೊರೊನಾ ಕಾರಣದಿಂದ ಲಾಕ್‌ಡೌನ್ ವಿಧಿಸಲಾಗಿದೆ. ಈ ಬಾರಿ ಸಾವು– ನೋವು ಹೆಚ್ಚಿದ್ದು ಜನರಲ್ಲಿ ಒತ್ತಡ, ಖಿನ್ನತೆಯ ಜೊತೆಗೆ ಭಯವೂ ಹೆಚ್ಚಿದೆ. ಮನೆಯಲ್ಲೇ ಇದ್ದು ಸುರಕ್ಷತೆಯ ಮಾರ್ಗಗಳೊಂದಿಗೆ ಒಂದಿಷ್ಟು ಹೊಸ ಹವ್ಯಾಸಗಳನ್ನು ರೂಢಿಸಿಕೊಂಡರೆ ಮಾನಸಿಕ ನೆಮ್ಮದಿ ಹೆಚ್ಚಿಸಿಕೊಳ್ಳುವ ಜೊತೆಗೆ ಆತಂಕ, ಖಿನ್ನತೆಯನ್ನೂ ದೂರ ಮಾಡಿಕೊಳ್ಳಬಹುದು. ಹೊಸ ಹೊಸ ಕೌಶಲಗಳನ್ನು ಕಲಿಯಲು ನೆರವಾಗಲು ಅಂರ್ತಜಾಲದಲ್ಲಿ ಕೆಲವೊಂದು ವೆಬ್‌ಸೈಟ್‌ಗಳಿವೆ. ಅಲ್ಲದೇ ಯೂಟ್ಯೂಬ್‌ ಚಾನೆಲ್‌ಗಳನ್ನು ನೋಡಿಯೂ ಕಲಿಯಬಹುದು. ಇದರಿಂದ ಮನಸ್ಸಿಗೆ ಖುಷಿ ಸಿಗುವುದಲ್ಲದೇ ಹೊಸ ಹೊಸ ಸಂಗತಿ ಹಾಗೂ ಹವ್ಯಾಸಗಳನ್ನು ರೂಢಿಸಿಕೊಂಡ ಹಾಗೆ ಆಗುತ್ತದೆ.

ಸಂಗೀತ ಉಪಕರಣಗಳನ್ನು ನುಡಿಸುವುದು: ಗಿಟಾರ್‌, ಪಿಯಾನೊ ನುಡಿಸುವುದನ್ನು ಕಲಿಯುವುದು ಹಲವರ ಕನಸು. ಅದಕ್ಕಾಗಿ ತರಗತಿಗೇ ಹೋಗಬೇಕು ಎಂದೇನಿಲ್ಲ. ಅದನ್ನ ಕಲಿಸಲೆಂದೇ ಆನ್‌ಲೈನ್‌ ಸೈಟ್‌ಗಳಿವೆ. ಸಂಗೀತ ಉಪಕರಣಗಳನ್ನು ನುಡಿಸುವುದನ್ನು ಕಲಿಯುವುದರಿಂದ ಮನಸ್ಸಿಗೆ ಖುಷಿ ಸಿಗುವುದಲ್ಲದೇ ಖಿನ್ನತೆ, ಬೇಸರ ಕಳೆಯಲು ಇದರಿಂದ ಸಾಧ್ಯವಾಗುತ್ತದೆ.

ಪೇಂಟಿಂಗ್‌ ಹಾಗೂ ಡ್ರಾಯಿಂಗ್‌: ಡ್ರಾಯಿಂಗ್‌ ಮಾಡುವುದು, ಪೇಂಟಿಂಗ್ ಮಾಡುವುದು ಎಲ್ಲರಿಗೂ ಇಷ್ಟವಾಗುತ್ತದೆ. ಪೇಂಟಿಂಗ್‌ನಲ್ಲಿ ವಿವಿಧ ಬಗೆಯ ಹಾಗೂ ಇನ್ನಷ್ಟು ಕ್ರಿಯಾತ್ಮಕತೆಯನ್ನು ಕಲಿಯಲು ಕೆಲವೊಂದು ಆನ್‌ಲೈನ್‌ ಸೈಟ್‌ಗಳಿವೆ. ಇವುಗಳಲ್ಲಿ ವಾಟರ್‌ಕಲರ್‌ ಪೇಂಟಿಂಗ್‌, ಡ್ರಾಯಿಂಗ್ ಹಾಗೂ ಕ್ಯಾಲಿಗ್ರಫಿಗಳನ್ನು ಕಲಿಯಬಹುದು.

ಬಾರ್ಟೆಂಡಿಂಗ್‌ ಹಾಗೂ ಮಿಶ್ರಣಶಾಸ್ತ್ರ: ಬಾರ್ಟೆಂಡಿಂಗ್ ಎನ್ನುವುದು ಸದ್ಯದ ಟ್ರೆಂಡ್‌. ಇದರಲ್ಲಿ ವೈನ್ ತಯಾರಿಸುವುದು ಮುಂತಾದವುಗಳನ್ನು ಕಲಿಯಬಹುದು. ಇದು ಹವ್ಯಾಸದೊಂದಿಗೆ ಹಣ ಗಳಿಕೆಗೆ ದಾರಿ ಮಾಡಿಕೊಡುತ್ತದೆ. ಮಿಶ್ರಣಶಾಸ್ತ್ರವೂ ಬಾರ್ಟೆಂಡಿಂಗ್‌ಗೆ ಸಂಬಂಧಿಸಿದ್ದಾಗಿದ್ದು ಇದು ಬೇಸರ ನಿವಾರಣೆಗೆ ಮಾರ್ಗವಾಗಿದೆ.

ಹೊಸ ಪ್ರಕಾರದ ನೃತ್ಯ ಕಲಿಕೆ: ನೃತ್ಯ ಮಾಡುವುದು ಕೂಡ ಹಲವರ ನೆಚ್ಚಿನ ಹವ್ಯಾಸಗಳಲ್ಲಿ ಒಂದು. ಹಿಪ್‌ಹಾಪ್‌, ಬೆಲ್ಲಿಯಂತಹ ಪಾಶ್ಚಾತ್ಯ ನೃತ್ಯ ಶೈಲಿಯನ್ನು ಕಲಿಸಲು ಕೆಲವೊಂದು ವೆಬ್‌ಸೈಟ್‌ಗಳಿವೆ. ಆ ಮೂಲಕ ಹೊಸ ಹೊಸ ಬಗೆಯ ನೃತ್ಯ ಪ್ರಕಾರಗಳನ್ನು ಮನೆಯಲ್ಲೇ ಕಲಿತು ಒತ್ತಡ ಹಾಗೂ ಬೇಸರ ನೀಗಿಸಿಕೊಳ್ಳಬಹುದು. ಅಲ್ಲದೇ ಮನೆಯವರಿಗೆ ಮನರಂಜನೆ ನೀಡಬಹುದು.

ಫೋಟೊಗ್ರಫಿ ಹಾಗೂ ಸಿನಿಮಾ: ಸಿನಿಮಾಕ್ಕೆ ಸಂಬಂಧಿಸಿ ಎಡಿಟಿಂಗ್‌, ಕ್ಯಾಮೆರಾ ಹಾಗೂ ಗ್ರಾಫಿಕ್‌ ವರ್ಕ್ ಮುಂತಾದವುಗಳನ್ನು ಕಲಿಸಲು ಕೆಲವೊಂದು ಯೂಟ್ಯೂಬ್‌ ಚಾನೆಲ್‌ ಹಾಗೂ ಆನ್‌ಲೈನ್‌ ಸೈಟ್‌ಗಳಿವೆ. ಅದಕ್ಕೆ ನಿಮಗೆ ಬೇಸಿಕ್‌ ಡಿಎಸ್‌ಎಲ್‌ಆರ್‌ ಕ್ಯಾಮೆರಾ, ಐಫೋನ್ ಟ್ರೈಪಾಡ್‌ ಹಾಗೂ ಸಿಸ್ಟಂ ಇದ್ದರೆ ಸಾಕು. ಇದು ಸಮಯ ಕಳೆಯಲು ನೆರವಾಗುತ್ತದೆ. ಜೊತೆಗೆ ಹೊಸ ಹವ್ಯಾಸವನ್ನೂ ರೂಢಿಸಿಕೊಂಡ ಹಾಗೆ ಆಗುತ್ತದೆ.

ಕಸೂತಿ ಹಾಗೂ ಕರಕುಶಲ: ಬಟ್ಟೆಯಲ್ಲಿ ಕಸೂತಿ ಮಾಡುವುದು, ಆಭರಣ ತಯಾರಿಕೆ, ಕರಕುಶಲ ವಸ್ತುಗಳ ತಯಾರಿಕೆಯನ್ನು ಕಲಿಸಲು ಆನ್‌ಲೈನ್ ತರಗತಿಗಳಿವೆ. ಇದಕ್ಕೆ ಮನೆಯಲ್ಲೇ ಸಿಗುವ ವಸ್ತುಗಳನ್ನು ಬಳಸಿಕೊಳ್ಳಬಹುದು. ಇದು ಮಾನಸಿಕ ಒತ್ತಡವನ್ನು ಕಡಿಮೆ ಮಾಡುವುದಲ್ಲದೇ ಗಳಿಕೆಗೂ ದಾರಿಯಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT