ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಣ್ಣಗಳಿಗೂ ಇದೆ ಮನಸ್ಸು: ಮನಸ್ಸನ್ನು ಪ್ರಭಾವಿಸುವ ಮಾಯೆ

Last Updated 29 ನವೆಂಬರ್ 2021, 21:00 IST
ಅಕ್ಷರ ಗಾತ್ರ

ಬಣ್ಣಗಳು ಎಂದರೆ ಚಿತ್ರಕಲೆಯೇ ಆಗಬೇಕಿಲ್ಲ; ನಮ್ಮ ಮನೆಯ ಕಿಟಕಿ, ಬಾಗಿಲಿನ ಪರದೆಗಳು, ನೆಲಕ್ಕೆ ಹಾಸುವ ಕಾರ್ಪೆಟ್, ಟೇಬಲ್ ಕ್ಲಾತ್, ಗೋಡೆಯ ಬಣ್ಣಗಳು, ಮನೆಯೊಳಗೆ ಬರುವ ಬೆಳಕು ಎಲ್ಲವೂ ನಮ್ಮ ಮನಸ್ಸನ್ನು ಪ್ರಭಾವಿಸುತ್ತಲೇ ಇರುತ್ತವೆ.

ಸೌಂದರ್ಯ ಮನಸ್ಸಿನ ಸಂತೋಷಕ್ಕೆ, ಶಾಂತಿಗೆ ಕಾರಣವಾಗುವುದರಿಂದಲೇ ಅದು ಮಾನವ ಜೀವನದ ಉತ್ಕೃಷ್ಟ ಮೌಲ್ಯವಾಗಿದೆ. ಒತ್ತಡದಲ್ಲಿದ್ದಾಗ ಪ್ರಯತ್ನಪಟ್ಟು ಸ್ವಲ್ಪವಾದರೂ ಮನಸ್ಸಿಗೆ ಸಮಾಧಾನ ತಂದುಕೊಂಡು ಕಲೆಯ ಕಡೆ ತಿರುಗಿಸಿದಾಗ ಸೌಂದರ್ಯವು ಮನಸ್ಸನ್ನು ತಿಳಿಯಾಗಿಸಿ ಸಂಸ್ಕರಿಸುತ್ತದೆ. ಹೀಗೆ ತಿಳಿಯಾದ ಮನಸ್ಸು ಸೌಂದರ್ಯಾನುಭವದಲ್ಲಿ ಮತ್ತಷ್ಟು ಪರಿಪಕ್ವಗೊಳ್ಳುತ್ತ ಅಂತಿಮವಾಗಿ ಶಾಂತಿಯನ್ನೇ ಅನುಭವಿಸುತ್ತದೆ. ಮನಃಶಾಂತಿಯೂ ಸೌಂದರ್ಯೋಪಾಸನೆಯೂ ಜೊತೆಜೊತೆಗೇ ಹೆಜ್ಜೆಯಿಡುತ್ತಾ ಒಂದನ್ನೊಂದು ಪೋಷಿಸುತ್ತಿರುತ್ತದೆ.

ಕಣ್ಣು ಎನ್ನುವ ಬೆರಗಿನ ಬಾಗಿಲನ್ನು ತಟ್ಟುವ ಆಕಾರಗಳು, ಬಣ್ಣಗಳು ಮನಸ್ಸಿನ ಮನೆಯೊಳಗೆ ನುಸುಳಿ ಸೌಂದರ್ಯದ ದರ್ಶನವನ್ನು ನೀಡುವ ಪ್ರಕ್ರಿಯೆಯೇ ಸೋಜಿಗದ್ದು. ಅದರಲ್ಲೂ ಆಕಾರಗಳಾದರೂ ತಮ್ಮದು ಎನ್ನುವಂತಹ ಯಾವುದೋ ಕಥೆಯನ್ನಾದರೂ ಹೇಳಲು ಪ್ರಯತ್ನಿಸುತ್ತಿರುತ್ತವೆ. ಆದರೆ ಬಣ್ಣಗಳಂತಹ ಅಮೂರ್ತ, ಮಾತಿಲ್ಲದ ಮಾಧ್ಯಮವೊಂದು ನಮ್ಮದೇ ಮನಸ್ಸಿನ ಮಾತನ್ನಾಲಿಸಲು ಸಾಧ್ಯವಾಗಿಸುವಂತಹ ಶಕ್ತಿ ಹೊಂದಿರುವುದು ಆಶ್ಚರ್ಯವನ್ನೇ ತರುತ್ತದೆ. ಒಂದೊಂದು ಬಣ್ಣಕ್ಕೂ ಮನಸ್ಸಿನ ಒಂದೊಂದು ಭಾವದ ಛಾಯೆಯಿದೆ. ಇದನ್ನು ಪರೀಕ್ಷಿಸಲು ಆರ್ಟ್‌ ಗ್ಯಾಲರಿಗಳಿಗೇ ಹೋಗಬೇಕಿಲ್ಲ, ಮೋಡ ಮುಸುಕಿದ ಒಂದು ಇಳಿ ಸಂಜೆಯ ನೇರಳೆಬಣ್ಣ ತರುವ ದುಗುಡವನ್ನು, ಒಂಟಿತನವನ್ನು ಅನುಭವಿಸಿದ್ದರೂ ಸಾಕು, ಬಣ್ಣಗಳು ನಮ್ಮ ಮನಸ್ಸನ್ನು ಪ್ರಭಾವಿಸುವುದರ ಅರಿವಾಗುತ್ತದೆ.

ಪ್ರಕೃತಿ ದಯಪಾಲಿಸುವ ಸುಂದರ ನೋಟಗಳನ್ನು, ಅದು ಮನಸ್ಸಿನಲ್ಲಿ ಉಕ್ಕಿಸುವ ಭಾವಗಳನ್ನು ಹೇಗಾದರೂ ಸೆರೆಹಿಡಿದು ದಕ್ಕಿಸಿಕೊಂಡು ನಾವು ಬಯಸಿದಾಗಲೆಲ್ಲ ನೋಡಿ ಸುಖಿಸುವುದು ಸಾಧ್ಯವಾಗಬೇಕು ಎಂಬ ಆಕಾಂಕ್ಷೆ ಪ್ರಕೃತಿಯಾಧಾರಿತ ವರ್ಣಚಿತ್ರಗಳ ಮೂಲವಿದ್ದಿರಲೂಬಹುದು. ಗಡಿಯಾರದ ಮುಳ್ಳುಗಳೊಂದಿಗೆ ಸ್ಪರ್ಧೆಗಿಳಿದಂತೆ ಓಡಿ, ಕ್ಷಣದೊಳಗೆ ಬದಲಾಗಿಬಿಡುವ ಪ್ರಕೃತಿಯಲ್ಲಿನ ಬಣ್ಣಗಳನ್ನು ಭಿತ್ತಿಯ ಮೇಲೆ ಮೂಡಿಸುವ ಆಸೆ ಒಂದು ಕಡೆಯಾದರೆ, ಹೊರಗಿನ ಪ್ರಪಂಚದಲ್ಲೆಲ್ಲೂ ಕಾಣಸಿಗದ ಒಳಲೋಕದ್ದೇ ವಿಶಿಷ್ಟ ಅನುಭವದ ಮೂರ್ತರೂಪವಾದ ಆಕಾರ, ಪ್ರತಿಮೆ ಇವುಗಳನ್ನು ಗ್ರಹಿಸಿ ಪ್ರಸ್ತುತಪಡಿಸುವ ಸಾಹಸ ಮತ್ತೊಂದು ಕಡೆ. ಒಟ್ಟಿನಲ್ಲಿ ಪ್ರಕೃತಿಯಲ್ಲಿನ ಮತ್ತು ಮನಸ್ಸಿನಾಳದ ಕ್ಷಣ ಕ್ಷಣದ ಬದಲಾವಣೆಗಳಿಗೆ ಬಣ್ಣಗಳದ್ದೇ ಸಾಕ್ಷಿ. ಪ್ರಕೃತಿಯಲ್ಲಿ ಕಾಣಸಿಗುವ ವರ್ಣವೈಭವವನ್ನು ಆಸ್ವಾದಿಸುತ್ತ ಇರಬಹುದಾದರೂ, ನಮ್ಮ ಅನುಭವದ ಮೂಲಕ ಹಾದುಬಂದಾಗ ಆ ದೃಶ್ಯ ಹೇಗೆ ಮೂಡಿಬರಬಹುದು ಎನ್ನುವ ಕುತೂಹಲ ಸಹಜವೇ. ಭಾಷೆಯಲ್ಲಿ ನಿರೂಪಿಸಲು ಸಾಧ್ಯವಾಗದ ಅನುಭವಗಳಾದ ಸಂವೇದನೆಗಳನ್ನು, ಹೀಗೇ ಎಂದು ಹೇಳಿಕೊಳ್ಳಲಾಗದ ಮನದ ಭಾವಗಳನ್ನು, ಮನಃಪಟಲದ ಮೇಲೆ ಹಾದುಹೋಗುವ ಮಾನಸಿಕ ಪ್ರತಿಮೆಗಳನ್ನು ಬಣ್ಣಗಳ ಸಹಾಯದಿಂದ ದೃಶ್ಯವಾಗಿಸುವುದನ್ನು ಬಿಟ್ಟು ಅನ್ಯಮಾರ್ಗವಿದೆಯೇ? ಬಣ್ಣಗಳೊಂದಿಗೆ ಆಟವಾಡುತ್ತಾ, ಅವುಗಳು ಮೈಕೈಗೆ ಮೆತ್ತಿಕೊಂಡಿರುವ ಪರಿವೆಯಿಲ್ಲದೆ ಯಾವುದೋ ಲಹರಿಯಲ್ಲಿ ಲೀನವಾಗಿ ಅಭಿವ್ಯಕ್ತಿಸುವ ತುಡಿತದಿಂದ ಚಡಪಡಿಸುತ್ತಾ, ಪ್ರಪಂಚದ ಗೊಡವೆಯಿಲ್ಲದೆ, ನಮ್ಮಲ್ಲಿಯೇ ನಾವು ಗಹನವಾಗಿ ತೊಡಗಿಕೊಳ್ಳುವುದರಲ್ಲಿರುವ ಸೊಗಸು, ತೃಪ್ತಿಯನ್ನು ಅನುಭವಿಸಿಯೇ ತಿಳಿಯಬೇಕು.

ಚಿತ್ರ ಬಿಡಿಸಲು, ಬಣ್ಣ ತುಂಬಿಸಲು ‘ನಾನೇನು ಕಲಾವಿದಳಲ್ಲ, ನನಗೆ ಪರಿಣತಿ, ತರಬೇತಿ ಯಾವುದೂ ಇಲ್ಲ ಎಂದು ಕೊರಗುವ ಮುಂಚೆ ನಾವೆಲ್ಲರೂ ಒಮ್ಮೆ ಬಾಲ್ಯವನ್ನು ನೆನಪಿಸಿಕೊಳ್ಳಬೇಕು. ಯಾವ ತರಬೇತಿಯೂ ಇರದೇ, ಯಾವ ಕಲಾ ಶಾಲೆಗೂ ಹೋಗದೆ, ಸ್ವಲ್ಪವೂ ಸಂಕೋಚ ಪಡದೆ ಎಂತೆಂತಹ ಚಿತ್ರಗಳನ್ನು ರಚಿಸಿ, ಅದಕ್ಕೆ ಸಂಬಂಧವೇ ಇರದ ಹೆಸರೊಂದನ್ನು ಇಟ್ಟು, ತೋಚಿದ್ದನ್ನೆಲ್ಲಾ ಆ ಚಿತ್ರದ ವಿವರಣೆಯಂತೆ ಹೇಳುತ್ತಿದ್ದೆವಲ್ಲ, ಅದು ಹೇಗೆ? ನಾವು ರಚಿಸಿದ ಚಿತ್ರ ಕಲೆಯಾಗಬಲ್ಲದೋ ಇಲ್ಲವೋ ಎನ್ನುವ ಚಿಂತೆ ಬಿಟ್ಟು ನಮ್ಮ ಸಂತೋಷಕ್ಕಾಗಿಯಷ್ಟೇ ಚಿತ್ರ ಬಿಡಿಸಿ ಬಣ್ಣ ತುಂಬಬಹುದು, ಬೇರೆಯವರ ಮೆಚ್ಚುಗೆ, ಟೀಕೆಗಳ ಚಿಂತೆ ನಮಗೇಕೆ?

ಜಾನಪದ ಕಲೆಗಳಾದ ಚಿತ್ತಾರ, ವಾರ್ಲಿ, ಮಧುಬನಿ, ಕಲಮ್ ಕಾರಿ ಮುಂತಾದವುಗಳಲ್ಲಿ ಉಪಯೋಗಿಸುವ ನೈಸರ್ಗಿಕ ಬಣ್ಣಗಳು ಆ ಕಲೆಗಳ ಚಿತ್ತಾಕರ್ಷಕ ವಿನ್ಯಾಸಗಳಿಗೆ ಅದ್ಭುತವಾಗಿ ಹೊಂದಿಕೊಳ್ಳುತ್ತ ನೋಡುಗರನ್ನು ಮತ್ತೊಂದೇ ಲೋಕಕ್ಕೆ ಕರೆದುಕೊಂಡು ಹೋಗುತ್ತವೆ. ಬಣ್ಣಗಳ ಸಹವಾಸವನ್ನು ಕೇವಲ ಚಿತ್ರಕಲೆಯ ಮೂಲಕವಷ್ಟೇ ಹೊಂದಬೇಕಿಲ್ಲ. ನಮ್ಮ ಮನೆಯ ಕಿಟಕಿ, ಬಾಗಿಲಿನ ಪರದೆಗಳು, ನೆಲಕ್ಕೆ ಹಾಸುವ ಕಾರ್ಪೆಟ್, ಟೇಬಲ್ ಕ್ಲಾತ್, ಗೋಡೆಯ ಬಣ್ಣಗಳು, ಮನೆಯೊಳಗೆ ಬರುವ ಬೆಳಕು ಎಲ್ಲವೂ ನಮ್ಮ ಮನಸ್ಸನ್ನು ಪ್ರಭಾವಿಸುತ್ತಲೇ ಇರುತ್ತವೆ. ವಿವಿಧ ಒಳ ಆವರಣಗಳು ಅಲ್ಲಿನ ಬಣ್ಣಗಳು ನಮ್ಮ ಮನಸ್ಸಿನ ಮೇಲೆ, ಆಲೋಚನೆಗಳ ಮೇಲೆ ಪ್ರಭಾವ ಬೀರುತ್ತಿದೆಯಾದರೆ ಹೇಗೆ ಎಂಬ ಕುತೂಹಲ ಬಣ್ಣಗಳೊಟ್ಟಿಗಿನ ಅನೇಕ ಪ್ರಯೋಗಗಳನ್ನು ಮಾಡಲು ಪ್ರೋತ್ಸಾಹಿಸುತ್ತದೆ, ಸೃಜನಶೀಲವಾಗಿ, ಕ್ರಿಯಾಶೀಲವಾಗಿ ಇರುವಂತೆಪ್ರಚೋದಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT