ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿಕ್ಸ್‌ ಮಾರ್ಷಲ್‌ ಆರ್ಟ್ಸ್‌ನಲ್ಲಿದೆ ಆರೋಗ್ಯ ಸೂತ್ರ

Last Updated 18 ಆಗಸ್ಟ್ 2019, 19:30 IST
ಅಕ್ಷರ ಗಾತ್ರ

ಆರೋಗ್ಯವೆಂದರೆ ಕೇವಲ ಮಾಂಸಖಂಡಗಳನ್ನು ಬೆಳೆಸುವುದಲ್ಲ. ದೇಹದಾರ್ಢ್ಯ ಗಳಿಸುವ ಸಲುವಾಗಿಯೇ ನಿತ್ಯ ಜಿಮ್‌ನಲ್ಲಿ ಬೆವರು ಸುರಿಸುವವರಿದ್ದಾರೆ. ಆದರೆ, ಆರೋಗ್ಯದ ಗುಟ್ಟು ಕೇವಲ ಮಾಂಸಖಂಡಗಳಲ್ಲಿ ಇಲ್ಲ ಎಂಬುದನ್ನು ಮೊದಲು ಅರ್ಥಮಾಡಿಕೊಳ್ಳಬೇಕಿದೆ ಎನ್ನುತ್ತಾರೆ ರೂಪದರ್ಶಿ ಚಿರಾಗ್‌ ಡಿ. ಕುಂದಾಪುರ.

ಮೊದಲೇ ರೂಪದರ್ಶಿ, ಕಾಯವನ್ನು ಕಟೆದಿಟ್ಟುಕೊಂಡೇ ಇರಬೇಕು. ಅದಕ್ಕಾಗಿಯೇ ಅವರು ಮಿಕ್ಸ್‌ ಮಾರ್ಷಲ್‌ ಆರ್ಟ್ಸ್‌ನ ಮೊರೆ ಹೋಗಿದ್ದಾರೆ. ಬಾಕ್ಸಿಂಗ್‌, ಕಿಕ್‌ ಬಾಕ್ಸಿಂಗ್‌, ಕರಾಟೆ, ಜುಡೊ, ಕುಸ್ತಿ, ಸ್ಕಿಪ್ಪಿಂಗ್‌ ಹೀಗೆ ಎಲ್ಲ ಕ್ರೀಡೆಗಳ ಪಟ್ಟುಗಳು ಸೇರಿ ರೂಪುಗೊಂಡಿರುವುದೇ ಮಿಕ್ಸ್‌ ಮಾರ್ಷಲ್‌ ಆರ್ಟ್ಸ್‌. ಇತ್ತೀಚಿನ ದಿನಗಳಲ್ಲಿ ಇದಕ್ಕೆ ಹೆಚ್ಚಿನಬೇಡಿಕೆ ಇದೆ. ಕುಸ್ತಿ ಮಾಡುವವನು‌ಹೊಡೆಯುವುದಿಲ್ಲ. ಎತ್ತಿ ಬಿಸಾಕುತ್ತಾನೆ. ಕಿಕ್‌ ಬಾಕ್ಸಿಂಗ್‌ ಮಾಡುವವನು ಹೊಡೆಯುತ್ತಾನೆ. ಎರಡೂ ಪಟ್ಟುಗಳನ್ನು ಏಕಕಾಲಕ್ಕೆ ಕಲಿಯುವುದರಿಂದ ದೇಹದ ಕಾರ್ಯಕ್ಷಮತೆ ಹೆಚ್ಚುತ್ತದೆ. ಹಾಗಾಗಿ ನಾನು ಮಿಕ್ಸ್‌ ಮಾರ್ಷಲ್‌ ಆರ್ಟ್ಸ್‌ (ಎಂ.ಎಂ.ಎ) ಅನ್ನು ಬಹುವಾಗಿ ಮೆಚ್ಚಿಕೊಂಡಿದ್ದೇನೆ ಎನ್ನುತ್ತಾರೆ ಅವರು.

ಈ ಮಿಕ್ಸ್‌ ಮಾರ್ಷಲ್‌ ಆರ್ಟ್ಸ್‌ (ಎಂ.ಎಂ.ಎ) ಮಾಡುವ ಮುಂಚೆ ಸರ್ಕ್ಯುಟ್‌ ಟ್ರೇನಿಂಗ್‌ (ಕ್ರಾಸ್‌ ಫಿಟ್‌ ) ಮಾಡಲಾಗುತ್ತದೆ. ಇದು ಬಹಳ ಮುಖ್ಯ. ದೇಹವನ್ನು ಈ ಮಿಕ್ಸ್‌ ಮಾರ್ಷಲ್‌ ಆರ್ಟ್ಸ್‌ಗೆ ಒಗ್ಗಿಸಲು ಬೇಕಾದ ಕೆಲವು ಪೂರ್ವ ವ್ಯಾಯಾಮಗಳನ್ನು ಮಾಡಿಸಲಾಗುತ್ತದೆ. ಇದು ಬಹಳ ಉಪಯುಕ್ತವಾಗಿದ್ದು, ಬೊಜ್ಜು ಇಳಿಸಲು ಸಹಕಾರಿ. ಟೂರ್ನಮೆಂಟ್‌ನಲ್ಲಿ ಭಾಗವಹಿಸಲು ಕೆಲವರು ಎಂ.ಎಂ.ಎ ತರಬೇತಿ ಪಡೆಯುವವರಿದ್ದಾರೆ. ಆದರೆ ನನ್ನ ಫಿಟ್‌ನೆಸ್‌ ಮಂತ್ರ ಇದರಲ್ಲಿಯೇ ಇದೆ ಎಂದು ಆತ್ಮವಿಶ್ವಾಸ ಮಾತುಗಳನ್ನಾಡುತ್ತಾರೆ ಚಿರಾಗ್‌.

‌ಕೆಲವು ಜಿಮ್‌ಗಳಲ್ಲಿ ಮಾಂಸಖಂಡಗಳು ಬೆಳೆಯಲು ಪೌಷ್ಟಿಕಾಂಶಗಳ ಪೌಡರ್‌ಗಳನ್ನು ಮಾರಾಟ ಮಾಡಲಾಗುತ್ತದೆ. ಬಹುತೇಕ ಪೌಡರ್‌ಗಳಲ್ಲಿ ಸ್ಟಿರಾಯ್ಡ್‌ಗಳಿರುತ್ತದೆ. ಇದು ಬಹುಬೇಗ ಫಲಿತಾಂಶ ನೀಡುತ್ತದೆ. ಆದರೆ, ಇದರಿಂದ ಅಡ್ಡಪರಿಣಾಮಗಳೇ ಹೆಚ್ಚು. ಆದರೆ, ಎಂ.ಎಂ.ಎನಲ್ಲಿ ಯಾವುದೇ ಪೌಡರ್‌ಗಳನ್ನು ನೀಡುವುದಿಲ್ಲ. ದೇಹವನ್ನು ಕಟೆಯಲು ಯಾವುದೇ ಅಡ್ಡದಾರಿಗಳಿಲ್ಲ. 20 ಸುತ್ತು ಓಡಲು ಬೇಕಾಗುವಷ್ಟು ಕಾರ್ಯಕ್ಷಮತೆ ಪಡೆಯಲು ಶ್ರಮವೊಂದೇ ಮಾರ್ಗ ಎನ್ನುತ್ತ ಫಿಟ್‌ನೆಸ್‌ ಸೂತ್ರ ಬಿಚ್ಚಿಟ್ಟರು.

ಇನ್‌ಫಿನಿಟಿ ಎಂಟರ್‌ಟೈನ್‌ಮೆಂಟ್‌ ಆಯೋಜಿಸಿದ್ದ ಮಿಸ್ಟರ್‌ ಮಂಗಳೂರು ಸ್ಪರ್ಧೆಯಲ್ಲಿ ಭಾಗವಹಿಸಿ ‘ಮಿಸ್ಟರ್‌ ಫೋಟೋಜೆನಿಕ್‌’ ಪ್ರಶಸ್ತಿಯನ್ನು ಪಡೆದಿದ್ದಾರೆ. ಈವರೆಗೆ ಹಲವು ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕಿರುಚಿತ್ರಗಳಲ್ಲಿಯೂ ನಟಿಸಿದ್ದಾರೆ. ಇದಲ್ಲದೇ ಹಲವು ಫ್ಯಾಷನ್‌ ಷೋಗಳ ಆಯೋಜಕರಾಗಿಯೂ ಕೆಲಸ ಮಾಡಿದ್ದಾರೆ. ಥರಂ ಎಂಟರ್‌ಟೈನ್‌ಮೆಂಟ್ಸ್‌ ಸಂಸ್ಥೆಯಿಂದ ಮಾಡೆಲಿಂಗ್‌ ಟ್ರೇನರ್‌ ಆಗಿಯೂ ಕೆಲಸ ಮಾಡಿರುವ ಅವರು, ಹಲವು ಫ್ಯಾಷನ್‌ಶೋಗಳಲ್ಲಿ ರ್‍ಯಾಂಪ್‌ ಮೇಲೆ ಹೆಜ್ಜೆ ಹಾಕಿರುವುದಾಗಿ ಹೇಳಿಕೊಂಡರು.

ಆಹಾರ ವಿಷಯದಲ್ಲಿ ಕಟ್ಟುನಿಟ್ಟಾಗಿಯೇನೂ ಇಲ್ಲ. ಆದರೆ, ಊಟದಲ್ಲಿ ಯಥೇಚ್ಛವಾಗಿ ತರಕಾರಿ ಇರುವಂತೆ ನೋಡಿಕೊಳ್ಳುತ್ತೇನೆ. ಫಿಜ್ಜಾ, ಬರ್ಗರ್‌, ಚಾಕಲೇಟ್‌ನಿಂದ ದೂರ. ಊಟದಲ್ಲಿ ಅಗತ್ಯವಿರುವಷ್ಟು ಕಾರ್ಬೋಹೈಡ್ರೇಟ್‌, ಪೌಷ್ಟಿಕಾಂಶಗಳು ಇರುವಂತೆ ನೋಡಿಕೊಳ್ಳುತ್ತೇನೆ. ನನ್ನ ತಂದೆ, ತಾಯಿ ಇಬ್ಬರೂ ವೈದ್ಯರಾಗಿರುವುದರಿಂದ ಆರೋಗ್ಯದ ಕಾಳಜಿಗೆ ಹೆಚ್ಚಿನ ಒತ್ತು ನೀಡುತ್ತಾರೆ ಎನ್ನುತ್ತಾರೆ ಅವರು.

ವ್ಯಾಯಾಮದಲ್ಲಿ ತೊಡಗಿಕೊಂಡವರ ಮನಸ್ಸು ಪ್ರಶಾಂತವಾಗಿರುತ್ತದೆ. ಗಡಿಬಿಡಿ ಇರುವುದಿಲ್ಲ. ಚಿಕ್ಕಂದಿನಲ್ಲಿ ಇದ್ದ ಸಭಾಕಂಪನ ಮಾಡೆಲಿಂಗ್‌ ಮತ್ತು ಮಾರ್ಷಲ್‌ ಆರ್ಟ್ಸ್‌ನಿಂದ ದೂರವಾಗಿದೆ. ಈ ಎಂ.ಎಂ.ಎನಲ್ಲಿ 20 ನಿಮಿಷಗಳ ಕಾಲ ಉಸಿರಾಟದ ವ್ಯಾಯಾಮವಿರುತ್ತದೆ. ತಾಯಿಯಿಂದಲೂ ಯೋಗ ಕಲಿತಿದ್ದೇನೆ. ವ್ಯಾಯಾಮದಿಂದ ಫಿಟ್‌ನೆಸ್‌ ಮಾತ್ರವಲ್ಲ ಬದುಕಿಗೆ ಅಗತ್ಯವಿರುವ ಆತ್ಮವಿಶ್ವಾಸವನ್ನು ರೂಢಿಸಿಕೊಳ್ಳಲು ಸಾಧ್ಯವಾಗಿದೆ ಎನ್ನುವ ಖುಷಿ ಅವರದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT