ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರು ಗುಟುಕರಿಸುವ ಮುನ್ನ...

Published 9 ಜನವರಿ 2024, 23:30 IST
Last Updated 9 ಜನವರಿ 2024, 23:30 IST
ಅಕ್ಷರ ಗಾತ್ರ

ಬಾಟಲಿ ನೀರು ಸುರಕ್ಷಿತವೆಂದು ಅದನ್ನೇ ಕುಡಿಯುತ್ತಿರುವಿರಾ... ಇರಿ, ಒಂದೆರಡು ನಿಮಿಷ... ನೀವು ಕುಡಿದ ಒಂದೆರಡು ಗುಟುಕುಗಳಲ್ಲಿ ಸಾವಿರಾರು ಪ್ಲಾಸ್ಟಿಕ್‌ ಕಣಗಳನ್ನೂ ನುಂಗಿರುತ್ತೀರಿ. ಹೀಗೆಂದು ವಾಷಿಂಗ್ಟನ್‌ನ ರಾಷ್ಟ್ರೀಯ ವಿಜ್ಞಾನ ಅಕಾಡೆಮಿ (National Scince Academy) ತಿಳಿಸಿದೆ.

ಬಾಟಲಿ ನೀರಿನಲ್ಲಿ ಪ್ಲಾಸ್ಟಿಕ್‌ ಕಣಗಳಿರುತ್ತವೆ ಎಂಬುದು ಹೊಸ ವಿಷಯವಲ್ಲ. ಆದರೆ ಈ ಮೊದಲು ಅಂದಾಜಿಸಿದ ಪ್ರಮಾಣಕ್ಕಿಂತಲೂ ನೂರು ಪಟ್ಟು ಹೆಚ್ಚಿರುತ್ತವೆ ಎಂದು ಹೊಸ ಅಧ್ಯಯನ ತಿಳಿಸಿದೆ. ವಿಜ್ಞಾನಿಗಳು ಒಂದು ಲೀಟರ್‌ ನೀರಿನಲ್ಲಿ ಸರಾಸರಿ 2,40,000 ಕಣಗಳನ್ನು ಪತ್ತೆ ಹಚ್ಚಿದ್ದಾರೆ. ಇವೆಲ್ಲವೂ ಜನಪ್ರಿಯ ಬ್ರಾಂಡ್‌ನ ಬಾಟಲಿ ನೀರಿನ ಮಾದರಿಗಳೇ ಆಗಿದ್ದವು ಎನ್ನುವುದೂ ಗಮನಾರ್ಹವಾಗಿದೆ.

ನೀರಿನಲ್ಲಿ ಕಂಡು ಬರುವ ಪ್ಲಾಸ್ಟಿಕ್‌ ಕಣಗಳು ಆರೋಗ್ಯಕ್ಕೆ ಮಾರಕವಾಗಬಹುದು ಎಂದು ಈ ಹಿಂದೆಯೇ ಅಂದಾಜಿಸಲಾಗಿತ್ತು. ಆದರೆ ಈ ಹಿಂದಿನ ಅಂದಾಜಿಗಿಮತ 10–100 ಪಟ್ಟು ಹೆಚ್ಚು ಹಾನಿಕರವಾಗಿದೆ ಎಂದು ಈ ಹೊಸ ಅಧ್ಯಯನ ತಿಳಿಸುತ್ತಿದೆ.

ಆರೋಗ್ಯದ ಮೇಲೆ ಯಾವ ರೀತಿಯ ಪರಿಣಾಮ ಬೀರಬಹುದು ಎಂಬುದರ ಕುರಿತು ವಿಸ್ತ್ರತ ಅಧ್ಯಯನ ಕೈಗೊಳ್ಳಲಾಗುತ್ತಿದೆ.

ಒಂದು ವೇಳೆ, ಬಾಟಲಿ ನೀರಿನಲ್ಲಿರುವ ಈ ನ್ಯಾನೊ (ತೃಣಕಣ) ಕಣಗಳ ಕುರಿತು ಆತಂಕವಿದ್ದರೆ ಪರ್ಯಾಯವಾಗಿ ನಲ್ಲಿ ನೀರನ್ನೇ ಕುಡಿಯುವುದು ಉತ್ತಮ ಎಂದು ಈ ಸಂಶೋಧನೆಯನ್ನು ಕೈಗೊಂಡಿರುವ ವಿಜ್ಞಾನಿಗಳ ತಂಡದ ಬಿಯಾನ್‌ ಯಾನ್‌ ಅಭಿಪ್ರಾಯಪಟ್ಟಿದ್ದಾರೆ.

ಕುಡಿಯುವುದಕ್ಕೆ ಬಾಟಲಿ ನೀರು ಅಲ್ಲದೆ ಬೇರೆ ಆಯ್ಕೆ ಇಲ್ಲ ಎಂಬಂತಹ ಸಂದರ್ಭದಲ್ಲಿ ನೀರು ಕುಡಿಯದೆ ನಿರ್ಜಲೀಕರಣಕ್ಕೆ ಒಳಗಾಗುವುದಕ್ಕಿಂತ ಬಾಟಲಿ ನೀರನ್ನೇ ಕುಡಿಯಿರಿ. ನೀರು ಕುಡಿಯದೇ ಇರುವುದು, ಇಂಥ ನೀರು ಕುಡಿಯುವುದಕ್ಕಿಂತಲೂ ಹೆಚ್ಚು ಅಪಾಯಕಾರಿ ಎಂದೂ ಅವರು ಎಚ್ಚರಿಸಿದ್ದಾರೆ.

ಪ್ಲಾಸ್ಟಿಕ್‌ನ ಈ ಅತಿಸಣ್ಣ ಕಣಗಳು ಎಲ್ಲೆಡೆಯೂ ಹರಡುತ್ತಿವೆ. ದೊಡ್ಡ ಪ್ಲಾಸ್ಟಿಕ್‌ನಿಂದ ಹೊರಹೊಮ್ಮುವ ಈ ಕಣಗಳು ಪರಿಸರದಲ್ಲಿ ಎಲ್ಲೆಡೆಯೂ ಕಂಡು ಬರುತ್ತಿವೆ. ಉತ್ತರ ಮತ್ತು ದಕ್ಷಿಣ ಧ್ರುವಗಳಿಂದ ಆರಂಭಿಸಿ, ಎತ್ತರದ ಗಿರಿಶಿಖರಗಳಲ್ಲಿಯೂ ಈ ಸೂಕ್ಷ್ಮಾತಿ ಸೂಕ್ಷ್ಮ ಪ್ಲಾಸ್ಟಿಕ್‌ ಕಣಗಳು ಕಂಡು ಬರುತ್ತಿವೆ. ಈ ಕಾರಣದಿಂದಲೇ ನಾವು ಸೇವಿಸುವ ನೀರು ಮತ್ತು ಆಹಾರದಲ್ಲಿಯೂ ಈ ಕಣಗಳು ಸೇರ್ಪಡೆಯಾಗಿವೆ.

ಸೂಕ್ಷ್ಮಾತಿ ಸೂಕ್ಷ್ಮ ಕಣಗಳು ಒಂದು ಮೈಕ್ರೊಮೀಟರ್‌ಗಿಂತಲೂ ಚಿಕ್ಕದಾಗಿರುತ್ತವೆ. ಹಾಗಾಗಿಯೇ ನಮ್ಮ ಜೀರ್ಣಾಂಗ, ಶ್ವಾಸಕೋಶಗಳ ಮೂಲಕವೂ ಹಾದುಹೋಗುತ್ತವೆ. ನಂತರ ನೇರವಾಗಿ ನಮ್ಮ ರಕ್ತನಾಳಗಳನ್ನು ಪ್ರವೇಶಿಸುತ್ತವೆ. ಮುಂದಿನ ಹಂತವೇ ನಮ್ಮ ಮಿದುಳು ಮತ್ತು ಹೃದಯ. ಇನ್ನೂ ಜನಿಸದ ಮಕ್ಕಳ ಪ್ಲಾಸೆಂಟಾವನ್ನು ಸಹ ಈ ಕಣಗಳು ಪ್ರವೇಶಿಸಬಹುದಾಗಿದೆ.

ಹೀಗೆ ಈ ಕಣಗಳು ದೇಹವನ್ನು ಸೇರುವುದರಿಂದ ಆಗುವ ಪರಿಣಾಮಗಳ ಕುರಿತು ತುಂಬ ಕಡಿಮೆ ಅಧ್ಯಯನಗಳಾಗಿವೆ. ಈಗ ಲಭ್ಯ ಇರುವ ಮಾಹಿತಿಯ ಪ್ರಕಾರ ಮಾನವ ದೇಹದ ಮೇಲೆ ಅಡ್ಡಪರಿಣಾಮಗಳು ಕಂಡು ಬಂದಿವೆ. ಸಂತಾನೋತ್ಪತ್ತಿ ಮತ್ತು ಜೀರ್ಣ ಹಾಗೂ ವಾತ ಸಮಸ್ಯೆಗಳು ಉಂಟಾಗುವ ಸಾಧ್ಯತೆಗಳು ಹೆಚ್ಚಾಗಿವೆ. ಪರಿಸರದ ಮೇಲಿನ ಪರಿಣಾಮದ ಕುರಿತು ಇನ್ನಷ್ಟೇ ಅಧ್ಯಯನಗಳನ್ನು ಕೈಗೊಳ್ಳಬೇಕಿದೆ.

ಬಾಟಲಿ ನೀರಿನಲ್ಲಿ ಈ ಕಣಗಳ ಇರುವಿಕೆಯನ್ನು ಪತ್ತೆ ಮಾಡಲು ಸ್ಟಿಮ್ಯುಲೇಟೆಡ್‌ ರಾಮನ್‌ ಸ್ಕ್ಯಾಟರಿಂಗ್‌ ಮೈಕ್ರೊಸ್ಕೋಪಿ ಎಂಬ ವಿಧಾನವನ್ನು ಈ ತಂಡ ಅನುಸರಿಸಿದೆ. ಈ ಅಧ್ಯಯನ ತಂಡದ ವಿಜ್ಞಾನಿಯೊಬ್ಬರು ಈ ವಿಧಾನವನ್ನು ಕಂಡು ಹಿಡಿದಿದ್ದಾರೆ. ಈ ವಿಧಾನದಲ್ಲಿ ಎರಡು ಲೇಸರ್‌ಗಳ ಮೂಲಕ, ನಿರ್ದಿಷ್ಟವಾದ ಕಣಗಳನ್ನು ಪತ್ತೆ ಮಾಡಲಾಗುತ್ತದೆ. ಕಂಪ್ಯೂಟರ್‌ ಅಲ್ಗೊರಿದಮ್‌ ಮೂಲಕ ಪ್ಲಾಸ್ಟಿಕ್‌ ಕಣಗಳ ಪ್ರಮಾಣವನ್ನು ಪತ್ತೆ ಮಾಡಲಾಗಿದೆ.

ಮೂರು ಜನಪ್ರಿಯ ಬ್ರಾಂಡ್‌ಗಳ ನೀರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಯಾವ ಬ್ರಾಂಡ್‌ ಎಂಬುದನ್ನು ಅವರು ಬಹಿರಂಗಪಡಿಸಲು ಒಪ್ಪಿಲ್ಲ. ಎಲ್ಲ ಬಾಟಲಿಯ ನೀರಿನಲ್ಲಿಯೂ ಪ್ಲಾಸ್ಟಿಕ್‌ ಕಣಗಳು ಇರುತ್ತವೆ. ಕೇವಲ ಮೂರು ಬ್ರಾಂಡ್‌ಗಳ ಹೆಸರು ಹೇಳುವುದು ಸಮಂಜಸವಲ್ಲ ಎನ್ನುವುದು ಯಾನ್‌ ಅವರ ಅಭಿಪ್ರಾಯವಾಗಿದೆ.

ಪ್ರತಿ ಲೀಟರ್‌ ನೀರಿನಲ್ಲಿ 1,10,000ದಿಂದ 3,70,000 ಸೂಕ್ಷ್ಮಾತಿ ಸೂಕ್ಷ್ಮ ಕಣಗಳು ಪತ್ತೆಯಾಗಿವೆ. ಶೇ 90ರಷ್ಟು ಈ ಕಣಗಳಿದ್ದರೆ ಉಳಿದವು ಸೂಕ್ಷ್ಮ ಪ್ಲಾಸ್ಟಿಕ್‌ ಕಣಗಳಾಗಿವೆ. ನೀರು ಶುದ್ಧೀಕರಿಸಲು ಬಳಸುವ ಫಿಲ್ಟರ್‌ನಿಂದ ಬಂದಿರಬಹುದಾದ ನೈಲಾನ್‌ ಕಣಗಳೇ ಹೆಚ್ಚಾಗಿವೆ ಎಂದೂ ವಿವರಿಸಿದ್ದಾರೆ. ಇದಲ್ಲದೆ ಬಾಟಲಿಗಳನ್ನು ತಯಾರಿಸುವ PET, ಕಣಗಳೂ ಕಂಡು ಬಂದಿವೆ. ಬಾಟಲಿಯನ್ನು ತೆರೆದಾಗ, ಮುಚ್ಚಿದಾಗ ಹಾಗೂ ಕೆಲವೊಮ್ಮೆ ಅಮುಕಿದಾಗಲೂ ಪ್ಲಾಸ್ಟಿಕ್‌ ಕಣಗಳು ನೀರಿನೊಂದಿಗೆ ಬೆರೆತಿವೆ ಎಂದೂ ಅವರು ತಿಳಿಸಿದ್ದಾರೆ.

ನಲ್ಲಿ ನೀರನ್ನು ಕೂಡ ಪರೀಕ್ಷೆಗೆ ಒಳಪಡಿಸುವುದಾಗಿ ಅಧ್ಯಯನ ತಂಡ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT