ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರುಳ ಕುಡಿಗೆ ಮತ್ತೆ ಮಿಡಿದಾಗ…

Last Updated 19 ಜುಲೈ 2019, 19:30 IST
ಅಕ್ಷರ ಗಾತ್ರ

ಮೊದಲೆಲ್ಲಾ ‘ಮನೆತುಂಬಾ ಮಕ್ಕಳಿರಲಿ’ ಎನ್ನುವ ಮಾತಿತ್ತು. ನಂತರ ‘ಎರಡೆಂದರೆ ಕಡಿಮೆ, ಮೂರೆಂದರೆ ಹೆಚ್ಚು’ ಎನ್ನುವ ಭಾವ ಬಂತು. ಅದಾದ ಮೇಲೆ ‘ಕೀರ್ತಿಗೊಬ್ಬ–ಆರತಿಗೊಬ್ಬಳು’ ಎಂದಾಯಿತು. ಈಗಂತೂ ‘ಕೀರ್ತಿಗೂ–ಆರತಿಗೂ’ ಒಬ್ಬರೆ ಸಾಕು ಎಂದು ನಿಡುಸುಯ್ಯುತ್ತಾರೆ ದಂಪತಿಗಳು. ಒಂದೇ ಮಗುವಿನ ನಂತರಸಂತಾನಹರಣ ಚಿಕಿತ್ಸೆಗೆ ಸಜ್ಜಾಗುತ್ತಾರೆ. ಅದರಲ್ಲಿ ಸ್ತ್ರೀಯರಿಗೆ ಟ್ಯೂಬೆಕ್ಟಮಿ (ಡಿಂಭನಾಳ ಅಥವಾ ನಳಿಕಾಛೇದನ ಶಸ್ತ್ರಚಿಕಿತ್ಸೆ) ಪುರುಷರಿಗೆ ವ್ಯಾಸೆಕ್ಟಮಿ (ವೀರ್ಯನಾಳ ಛೇದನ) ಭಾರತದಲ್ಲಿ ಸುಲಭ ಹಾಗೂ ಸರಳವಾದ ಸಂತಾನ ನಿಯಂತ್ರಣ ವಿಧಾನಗಳಾಗಿವೆ.

ಯಾವುದೊ ಸಂದರ್ಭದಲ್ಲಿ ಒಂದೇ ಮಗು ಸಾಕು ಎಂದು ತೆಗೆದುಕೊಂಡ ನಿರ್ಧಾರ ಕಾಲಾ ನಂತರ ಬದಲಾಗಬಹುದು. ಮನಸ್ಸು ಮತ್ತೊಂದು ಮಗುವಿಗಾಗಿ ಹಂಬಲಿಸಬಹುದು. ದುರಾದೃಷ್ಟದಿಂದ ಇರುವ ಒಂದು ಮಗುವಿಗೆ ಏನಾದರೂ ಆದಲ್ಲಿ, ಮತ್ತೊಂದು ಮಗುವನ್ನು ಪಡೆಯುವ ಅನಿವಾರ್ಯತೆ ಉಂಟಾಗಬಹುದು. ಈಗ ಶಸ್ತ್ರಚಿಕಿತ್ಸೆಯ ನಂತರವೂ ಮತ್ತೆ ಮಕ್ಕಳನ್ನು ಪಡೆಯುವ ಅವಕಾಶವಿದೆ. ವ್ಯಾಸೆಕ್ಟಮಿ ನಂತರ ಮತ್ತೆ ಮಕ್ಕಳನ್ನು ಪಡೆಯ ಬಯಸುವ ದಂಪತಿಗಳ ಮುಂದೆ ಪ್ರಸ್ತುತ ಎರಡು ಆಯ್ಕೆಗಳಿವೆ:ವಿಟ್ರೊ ಫಲೀಕರಣಕ್ಕೆ (ಐವಿಎಫ್) ಮೊದಲು ಹಿಮ್ಮುಖ ವ್ಯಾಸೆಕ್ಟಮಿ ಮಾಡುವುದು ಅಥವಾ ವೀರ್ಯವನ್ನು ಹಿಂಪಡೆಯುವುದು. ಅಂದರೆ ಮತ್ತೊಂದು ಶಸ್ತ್ರಚಿಕಿತ್ಸೆ ಮೂಲಕ ಮುಚ್ಚಿದ ದಾರಿಯನ್ನು ಮತ್ತೆ ತೆರೆಯುವುದು. ನಿಮಗೆ ಯಾವ ವಿಧಾನದ ಚಿಕಿತ್ಸೆ ಸೂಕ್ತ ಎನ್ನುವುದು ನಿಮ್ಮ ವೈಯಕ್ತಿಕ ಸಂಗತಿಗಳ ಮೇಲೆ ಆಧರಿಸುತ್ತದೆ.

ಅವುಗಳೆಂದರೆ

ನೀವುಸಂತಾನಹರಣ ಶಸ್ತ್ರಚಿಕಿತ್ಸೆಗೆ ಒಳಗಾಗಿ ಎಷ್ಟು ಸಮಯ ಕಳೆದಿದೆ?

ನಿಮ್ಮ ವಯಸ್ಸು ಎಷ್ಟು?

ನೀವು ಪಡೆಯಲು ಬಯಸುವ ಮಕ್ಕಳ ಸಂಖ್ಯೆ ಎಷ್ಟು?

ಎಷ್ಟು ಹಣ ಖರ್ಚು ಮಾಡಲು ಸಿದ್ಧರಿರುವಿರಿ?

ಯಾವಾಗ ಮಕ್ಕಳನ್ನು ಪಡೆಯಲು ಬಯಸುವಿರಿ?

ನೈಸರ್ಗಿಕವಾಗಿಯೇ ಅಥವಾ ಕೃತಕ ಗರ್ಭಧಾರಣೆ ಮೂಲಕವೇ?

ಮುಖ್ಯ ಕ್ರಮಗಳು

ಸಂತಾನಹರಣ ಚಿಕಿತ್ಸೆಯ ನಂತರ ಮತ್ತೆ ಮಕ್ಕಳನ್ನು ಪಡೆಯುವ ನಿರ್ಧಾರದ ಮೊದಲು ತಜ್ಞವೈದ್ಯರನ್ನು ಕಾಣಬೇಕು(ಪತಿಗೆ ಮೂತ್ರಶಾಸ್ತ್ರಜ್ಞರು ಮತ್ತು ಪತ್ನಿಗೆ ಸ್ತ್ರೀರೋಗ ತಜ್ಞ) ವೈದ್ಯರು ನಿಮ್ಮ ವೈದ್ಯಕೀಯ ಇತಿಹಾಸವನ್ನು ತೆಗೆದುಕೊಂಡು, ಫಲವತ್ತತೆಯ ಮೇಲೆ ಪರಿಣಾಮ ಬೀರುವ ಆರೋಗ್ಯ ಸಮಸ್ಯೆಗಳೇನಾದರೂ ಇವೆಯೇ ಎಂದು ಖಚಿತಪಡಿಸಿಕೊಳ್ಳಲು ಕೆಲವು ದೈಹಿಕ ಪರೀಕ್ಷೆಗಳನ್ನು ಕೈಗೊಳ್ಳುತ್ತಾರೆ. ನಂತರಮರುಜೋಡಣೆ ಶಸ್ತ್ರಚಿಕಿತ್ಸೆಗೆ ಸಿದ್ಧತೆ ನಡೆಸುತ್ತಾರೆ.

ಏನಿದು ಮರುಜೋಡಣೆ ಶಸ್ತ್ರಚಿಕಿತ್ಸೆ?

ವ್ಯಾಸೆಕ್ಟಮಿ ಶಸ್ತ್ರಚಿಕಿತ್ಸೆ ಸುಲಭ. ಆದರೆ ಹಿಮ್ಮುಖ ವ್ಯಾಸೆಕ್ಟಮಿ ತುಸು ಜಟಿಲ. ನೀವು ಮನಸ್ಸು ಮಾಡಿದಾಗ ವ್ಯಾಸೆಕ್ಟಮಿ ಮರುಜೋಡಣೆ ಸಾಧ್ಯವಾಗದೇ ಹೋಗಬಹುದು. ವ್ಯಾಸೆಕ್ಟಮಿ ಶಸ್ತ್ರಚಿಕಿತ್ಸೆಯಲ್ಲಿ ವೃಷಣಕೋಶದ ಮೇಲ್ಭಾಗವನ್ನು ಸ್ವಲ್ಪ ಕತ್ತರಿಸಿ ವಾಸ್ ಡಿಫರೆನ್ಸ್ ನಾಳವನ್ನು ಬಂದ್ ಮಾಡುತ್ತಾರೆ ಅಥವಾ ನಿರ್ಬಂಧಿಸುತ್ತಾರೆ. ಇದರಿಂದ ಮಿಲನ ಕ್ರಿಯೆಯಲ್ಲಿ ವೀರ್ಯ ಸ್ಖಲನವಾಗುವುದನ್ನು ತಡೆಯಲಾಗುತ್ತದೆ. ಆದರೆ ತೃಪ್ತಿಗೆ ಯಾವುದೇ ಅಡೆತಡೆ ಇರುವುದಿಲ್ಲ. ಮರುಜೋಡಣೆಯಲ್ಲಿ ಈ ನಾಳವನ್ನು ಮತ್ತೆ ಜೋಡಿಸಬೇಕಾಗುತ್ತದೆ. ಆ ಮೂಲಕ ವೀರ್ಯಸ್ಖಲನಕ್ಕೆ ದಾರಿ ಮಾಡಿಕೊಡಲಾಗುತ್ತದೆ.

ವ್ಯಾಸೆಕ್ಟಮಿ ಮರುಜೋಡಣೆ ಶಸ್ತ್ರಚಿಕಿತ್ಸೆಯಲ್ಲಿ ಎರಡು ವಿಧ:

ವ್ಯಾಸೊವ್ಯಾಸೊಸ್ಟೊಮಿ (vasovasostomy): ಇಲ್ಲಿ ವಾಸ್ ಡಿಫರೆನ್ಸ್ ನಾಳವನ್ನು ಮತ್ತೆ ಹೊಲಿದು, ಎರಡು ತುದಿಗಳನ್ನು ಮತ್ತೆ ಜೋಡಿಸಲಾಗುತ್ತದೆ. ವಾಸ್ ಡಿಫರೆನ್ಸ್ ಎನ್ನುವುದು ವೃಷಣದಿಂದ ವೀರ್ಯವನ್ನು ಸಾಗಿಸುವ ಒಂದು ನಾಳ. ಎಡ ಮತ್ತು ಬಲ ವೃಷಣ ಕೋಶಗಳಲ್ಲಿ ಒಂದೊಂದು ವಾಸ್ ಡಿಫರೆನ್ಸ್‌ಗಳು ಇರುತ್ತವೆ.

ವ್ಯಾಸೊಪಿಡಿಡಿಮೋಸ್ಟೊಮಿ (vasoepididymostomy): ಇಲ್ಲಿ ವೃಷಣ ನಾಳಸುರಳಿಯನ್ನು (ಎಪಿಡಿಡಿಮಿಸ್) ವಾಸ್ ಡಿಫರೆನ್ಸ್‌ಗೆ ಮರುಸಂಪರ್ಕಿಸಲಾಗುತ್ತದೆ. ವೃಷಣ ನಾಳಸುರಳಿ ಎಂಬುದು ವೀರ್ಯ ನಾಳಗಳ ಸುರುಳಿಯಾಗಿದ್ದು, ವೀರ್ಯ ಪಕ್ವವಾಗುವುದು ಅಲ್ಲಿಯೇ. ಅಡೆತಡೆಗಳಿಂದಾಗಿ ವ್ಯಾಸೊವ್ಯಾಸೊಸ್ಟೊಮಿ ಸಾಧ್ಯವಾಗದಿದ್ದಾಗ ಈ ಶಸ್ತ್ರಚಿಕಿತ್ಸೆಯನ್ನು ಬಳಸಲಾಗುತ್ತದೆ. ನಿಮ್ಮ ವೈಯಕ್ತಿಕ ವಿವರಗಳನ್ನು ಆಧರಿಸಿ ನಿಮಗೆ ಯಾವ ವಿಧಾನ ಉತ್ತಮ ಎನ್ನುವುದನ್ನು ವೈದ್ಯರು ನಿರ್ಧರಿಸುತ್ತಾರೆ.

ಹೀಗಿದೆ ಪ್ರಕ್ರಿಯೆ…

ಸಾಮಾನ್ಯ ಅರವಳಿಕೆ ನೀಡಿ ಸಣ್ಣ ಸೂಜಿಯನ್ನು ಬಳಸಿ ವೃಷಣಕ್ಕೆ ಹತ್ತಿರವಿರುವ ಪ್ರತಿ ವಾಸ್ ಡಿಫರೆನ್ಸ್‌ಗಳಿಂದ ಅಥವಾ ನೇರವಾಗಿ ವೃಷಣದಿಂದ ವೀರ್ಯವನ್ನು ತೆಗೆಯುತ್ತಾರೆ. ನಂತರ ಐವಿಎಫ್ ವಿಧಾನದಲ್ಲಿ ಈ ವೀರ್ಯಗಳನ್ನು ಸಂಗಾತಿಯ ಅಂಡಾಣುಗಳೊಂದಿಗೆ ಪ್ರಯೋಗಾಲಯದಲ್ಲಿ ಫಲಿತಗೊಳಿಸಲಾಗುತ್ತದೆ.

ವ್ಯಾಸೆಕ್ಟಮಿ ನಂತರ ಮತ್ತೆ ಮಕ್ಕಳನ್ನು ಪಡೆಯುವ ದಂಪತಿಗೆ ವೈದ್ಯರು ಐವಿಎಫ್‌ ಪ್ರಕ್ರಿಯೆಯನ್ನೇ ಸೂಚಿಸುತ್ತಾರೆ. ಈ ಪ್ರಕ್ರಿಯೆಯಲ್ಲಿ ಗರ್ಭಧರಿಸುವ ಸಾಧ್ಯತೆ ಹೆಚ್ಚಿರುತ್ತದೆ, ಸಮಯ ಕಡಿಮೆ ತೆಗೆದುಕೊಳ್ಳುತ್ತದೆ ಮತ್ತು ಯಶಸ್ವಿ ಗರ್ಭಧಾರಣೆಯ ನಂತರ ಜನನ ನಿಯಂತ್ರಣವನ್ನು ಬಳಸಬೇಕಾಗಿಲ್ಲ. ಹಾಗೆಯೇ ಕೆಲವು ಅನಾನುಕೂಲಗಳೂ ಇವೆ. ಇದು ಹೆಚ್ಚು ದುಬಾರಿಯಾಗಿರುತ್ತದೆ. ಒಂದೇ ಸಮಯದಲ್ಲಿ ಒಂದಕ್ಕಿಂತ ಹೆಚ್ಚು ಭ್ರೂಣಗಳು ಬೆಳೆಯುವ ಸಾಧ್ಯತೆ ಇರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT