ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಲೆಹೊಟ್ಟು ನಿವಾರಣೆಗೆ ಕಹಿಬೇವು

Last Updated 28 ಜೂನ್ 2020, 8:13 IST
ಅಕ್ಷರ ಗಾತ್ರ

ಕಹಿಬೇವು ಬಾಯಿಗೆ ಕಹಿಯಾದರೂ ದೇಹಕ್ಕೆ ಹಿತ. ಇದರಿಂದ ದೇಹಕ್ಕೆ ಅನೇಕ ಉಪಯೋಗಗಳಿವೆ. ಇದು ಆ್ಯಂಟಿ ಬ್ಯಾಕ್ಟೀರಿಯಲ್ ಕೂಡ ಹೌದು. ಇದರಲ್ಲಿ ಶೀಲಿಂಧ್ರ ವಿರೋಧಿ ಗುಣ ಇರುವುದರಿಂದ ಇದು ತಲೆಹೊಟ್ಟು ನಿವಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಕೂದಲಿನ ಬುಡದಲ್ಲಿ ತುರಿಕೆ ಉಂಟಾಗಿ, ಚರ್ಮದ ಪದರ ಎದ್ದು ಬರುತ್ತಿದ್ದರೆ ತಲೆಹೊಟ್ಟಿನ ಸಮಸ್ಯೆ ಕಾಡುತ್ತಿದೆ ಎಂದು ಅರ್ಥ. ನಗರ ಜೀವನದಲ್ಲಿ ಕಲುಷಿತ ವಾತಾವರಣ ಹಾಗೂ ನೀರಿನ ಕಾರಣದಿಂದ ತಲೆಹೊಟ್ಟಿನ ಸಮಸ್ಯೆ ಕಾಣಿಸಿಕೊಳ್ಳುವುದು ಸಾಮಾನ್ಯ ಎಂಬಂತಾಗಿದೆ. ಇದು ಕೂದಲನ್ನು ಹಾನಿಗೊಳಿಸುವುದಲ್ಲದೇ ದುರ್ಬಲಗೊಳಿಸುತ್ತದೆ. ತಲೆಹೊಟ್ಟು ಸಮಸ್ಯೆ ಅನೇಕರನ್ನು ಕಾಡುತ್ತಿರುತ್ತದೆ. ಇದಕ್ಕೆ ಕಾರಣ ಒಣಗಿದ ಚರ್ಮ, ಹೇರ್‌ಕೇರ್‌ ಉತ್ಪನ್ನಗಳ ಸೂಕ್ಷ್ಮತೆ ಹಾಗೂ ಎಕ್ಸಿಮಾ, ಸೋರಿಯಾಸಿಸ್‌ನಂತಹ ಚರ್ಮವಾಧ್ಯಿ ಸಮಸ್ಯೆ. ಈ ಸಮಸ್ಯೆ ಹೊಂದಿರುವವರಲ್ಲಿ ಸಾಮಾನ್ಯವಾಗಿ ತಲೆಹೊಟ್ಟಿನ ಸಮಸ್ಯೆ ಹೆಚ್ಚಿರುತ್ತದೆ. ಮನೆಮದ್ದಿನ ಮೂಲಕ ಸುಲಭವಾಗಿ ತಲೆಹೊಟ್ಟನ್ನು ನಿವಾರಿಸಬಹುದು.

ತಲೆಹೊಟ್ಟಿನ ನಿವಾರಣೆಗೆ ಬೇವು ಉತ್ತಮ ಮನೆಮದ್ದು. ಇದರಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ ಗುಣವು ಕೂದಲ ಬೆಳವಣಿಗೆಗೆ ಸಹಕರಿಸುವುದಲ್ಲದೇ ಹೊಟ್ಟನ್ನು ನಿವಾರಿಸುತ್ತದೆ. ಹಾಗಾದರೆ ಬೇವಿನ ಸಹಾಯದಿಂದ ತಲೆಹೊಟ್ಟನ್ನು ಹೇಗೆ ನಿವಾರಿಸಬಹುದು ಎಂಬುದನ್ನು ತಿಳಿಯೋಣ.

ಬೇವಿನ ನೀರು‌

ಬೇವಿನ ನೀರು ತಲೆಹೊಟ್ಟು ನಿವಾರಣೆಗೆ ತುಂಬಾ ಉತ್ತಮ ಔಷಧಿ. ಇದನ್ನು ಮಾಡುವುದು ಸುಲಭ. ಒಂದು ಲೀಟರ್ ನೀರಿಗೆ 2ಹಿಡಿಯಷ್ಟು ಬೇವಿನ ಎಲೆಗಳನ್ನು ಹಾಕಿ ಚೆನ್ನಾಗಿ ಕುದಿಸಬೇಕು. ಒಂದಿಡೀ ರಾತ್ರಿ ಅದನ್ನು ಹಾಗೆ ಇಡಬೇಕು. ಮರುದಿನ ಆ ನೀರನ್ನು ಸಂಪೂರ್ಣ ಕೂದಲು ಹಾಗೂ ಬುಡಕ್ಕೆ ಹಚ್ಚಿ ಸಂಜೆ ತಲೆಸ್ನಾನ ಮಾಡಬೇಕು. ವಾರದಲ್ಲಿ 3 ದಿನ ಕೂದಲಿಗೆ ಬೇವಿನ ನೀರು ಬಳಸುವುದರಿಂದ ತಲೆಹೊಟ್ಟು ಸಂಪೂರ್ಣವಾಗಿ ನಿವಾರಣೆಯಾಗುತ್ತದೆ. ಅಲ್ಲದೇ ತುರಿಕೆಯು ನಿಲ್ಲುತ್ತದೆ.

ಬೇವಿನ ಎಲೆಯ ಹೇರ್‌ ಪ್ಯಾಕ್‌

ತಲೆಹೊಟ್ಟು ನಿವಾರಿಸಲು ಇದು ಒಂದು ಪರಿಣಾಮಕಾರಿ ವಿಧಾನ. ಈ ಪ್ಯಾಕ್ ತಯಾರಿಸಲು ಒಂದು ಲೀಟರ್‌ ಕುದಿಸಿದ ನೀರಿಗೆ 2 ಹಿಡಿ ಬೇವಿನ ಎಲೆ ಹಾಗೂ 1ಚಮಚ ಜೇನುತುಪ್ಪ ಸೇರಿಸಿ ಒಂದು ರಾತ್ರಿ ಇಡಿ. ಮರುದಿನ ನೀರನ್ನು ಚೆಲ್ಲಿ ಬೇವಿನ ಎಲೆಯನ್ನು ನುಣ್ಣಗೆ ರುಬ್ಬಿ ಪೇಸ್ಟ್ ತಯಾರಿಸಿಕೊಳ್ಳಿ. ಅದನ್ನು ಕೂದಲು ಹಾಗೂ ಕೂದಲಿನ ಬುಡಕ್ಕೆ ಹಚ್ಚಿ. 1 ಗಂಟೆ ಬಿಟ್ಟು ಉಗುರು ಬೆಚ್ಚಗಿನ ನೀರಿನಲ್ಲಿ ತಲೆಸ್ನಾನ ಮಾಡಿ. ವಾರಕ್ಕೊಮ್ಮೆ ಬೇವಿನ ಎಲೆಯ ಹೇರ್ ಪ್ಯಾಕ್ ಬಳಸುವುದು ಉತ್ತಮ.

ಬೇವು ಹಾಗೂ ತೆಂಗಿನೆಣ್ಣೆಯ ಥೆರಪಿ

ತೆಂಗಿನೆಣ್ಣೆ ಕೂದಲ ಆರೋಗ್ಯಕ್ಕೆ ಬಹಳ ಒಳ್ಳೆಯದು. ಬೇವು ಹಾಗೂ ತೆಂಗಿನೆಣ್ಣೆ ಥೆರಪಿಯಿಂದ ಕೂದಲ ಆರೋಗ್ಯವನ್ನು ಕಾಪಾಡಬಹುದು. ಜೊತೆಗೆ ಇದು ಕೂದಲಿನ ನರಗಳನ್ನು ಕ್ರಿಯಾಶೀಲಗೊಳಿಸುತ್ತದೆ. ಇದನ್ನು ತಯಾರಿಸಲು ಒಂದು ಕಪ್‌ ಎಣ್ಣೆಯನ್ನು ಬಿಸಿ ಮಾಡಬೇಕು. ಅದಕ್ಕೆ 1 ಹಿಡಿ ಬೇವಿನ ಎಲೆಯನ್ನು ಹಾಕಿ ಮತ್ತೆ 15 ನಿಮಿಷ ಕುದಿಸಬೇಕು. ನಂತರ ಎಣ್ಣೆಯನ್ನು ಸೋಸಿಕೊಂಡು ಅದಕ್ಕೆ 1 ಟೇಬಲ್ ಚಮಚ ನಿಂಬೆರಸ ಹಾಗೂ ಕಾಲು ಚಮಚ ಹರಳೆಣ್ಣೆ ಸೇರಿಸಿ ಮಿಶ್ರಣ ಮಾಡಬೇಕು. ಇದನ್ನು ಗಾಜಿನ ಬಾಟಲಿಯಲ್ಲಿ ಹಾಕಿಟ್ಟುಕೊಳ್ಳಬೇಕು. ವಾರದಲ್ಲಿ 2 ಬಾರಿ ಕೂದಲಿಗೆ ಹಚ್ಚಿ ಕೂದಲ ಬುಡವನ್ನು ಮಸಾಜ್ ಮಾಡಬೇಕು. ಇದರಿಂದ ತಲೆಹೊಟ್ಟನ್ನು ನಿವಾರಿಸಬಹುದು. ಅಲ್ಲದೇ ಕೂದಲ ಹೊಳಪನ್ನು ಹೆಚ್ಚಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT