ಭಾನುವಾರ, ಮೇ 29, 2022
31 °C

ಅಂಗಾಂಗ ಕಸಿ: ಮಾನವನ ದೇಹದಲ್ಲಿ ಹಂದಿಯ ಹೃದಯವೇ?

ಎಂ.ವಿ. ಕೇಶವಮೂರ್ತಿ Updated:

ಅಕ್ಷರ ಗಾತ್ರ : | |

Prajavani

ಮಾನವನ ದೇಹದಲ್ಲಿ ಹಂದಿಯ ಹೃದಯವೇ? ಜಗತ್ತಿನಾದ್ಯಂತ ಈ ಪ್ರಶ್ನೆ ಹಾಕುತ್ತಾ ಮೂಗಿನ ಮೇಲೆ ಬೆರಳಿಟ್ಟವರಿಗೆ ಲೆಕ್ಕವೇ ಇಲ್ಲ. ವೈದ್ಯಕೀಯ ಜಗತ್ತಿನಲ್ಲಿ ಚಾರಿತ್ರಿಕ ಮೈಲುಗಲ್ಲು ಎನಿಸುವಂತಹ ಅಪರೂಪದ ಶಸ್ತ್ರ ಚಿಕಿತ್ಸೆಯೊಂದು ಅಮೆರಿಕದಲ್ಲಿ ಈಚೆಗೆ ನಡೆದಿದೆ. ಹೃದಯ ಕಸಿಯಲ್ಲಿ ಹೊಸ ಸಾಧ್ಯತೆಗಳ ಬಾಗಿಲನ್ನೂ ಈ ವಿದ್ಯಮಾನ ತೆರೆದಿಟ್ಟಿದೆ.

***

ಇದೇ ಜನವರಿ ಏಳನೆಯ ತಾರೀಖು ಅಮೆರಿಕದ ಮೇರಿಲ್ಯಾಂಡ್‌ ವಿಶ್ವವಿದ್ಯಾಲಯದ ಮೆಡಿಸಿನ್‌ ವಿಭಾಗದ ಅಂಗಾಂಗ ಕಸಿತಜ್ಞರು ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರಿಗೆ ಹಂದಿಯ ಹೃದಯ ಕಸಿಮಾಡಿದ ಅಭೂತಪೂರ್ವ ಸುದ್ದಿಯೊಂದನ್ನು ಪ್ರಕಟಿಸಿದರು. ಜಗತ್ತಿನ ಎಲ್ಲ ಕಡೆ ಈ ವಿದ್ಯಮಾನ ತೀವ್ರ ಕುತೂಹಲ ಕೆರಳಿಸಿತು. ಅಂಗಾಂಗ ವೈಫಲ್ಯಗೊಂಡು ದಾನಿಗಳಿಗಾಗಿ ಕಾಯುತ್ತಿರುವ ಲಕ್ಷಾಂತರ ಜನರ ಬದುಕಿನಲ್ಲಿ ಆಶಾಭಾವದ ದೀಪವೊಂದು ದಿಗ್ಗನೆ ಹೊತ್ತಿಕೊಂಡಿತು. ಆದರೆ ಒಂದು ಜೀವಿಯಿಂದ ಇನ್ನೊಂದು ಜೀವಿಗೆ ಅಂಗಾಂಗವನ್ನು ಕಸಿ ಮಾಡುವುದು ಅಂಗಡಿಯಿಂದ ದುಡ್ಡು ಕೊಟ್ಟು ಸಾಮಾನು ತಂದಷ್ಟು ಸುಲಭವೇ?

ಒಂದು ಜೀವಿಯಿಂದ ಇನ್ನೊಂದು ಜೀವಿಗೆ ಹೋಗಲಿ, ಒಬ್ಬ ಮನುಷ್ಯನಿಂದ ಇನ್ನೊಬ್ಬ ಮನುಷ್ಯನಿಗೆ ಕೂಡ ಅಷ್ಟು ಸುಲಭದಲ್ಲಿ ಅಂಗಾಂಗವನ್ನು ಕಸಿ ಮಾಡಲು ಸಾಧ್ಯವಿಲ್ಲ. ಪ್ರತಿಯೊಬ್ಬ ವ್ಯಕ್ತಿಯ ದೇಹದಲ್ಲೂ ಎಂಎಚ್‌ಸಿ (ಮೇಜರ್‌ ಹಿಸ್ಟೋಕಾಂಪ್ಯಾಬಿಲಿಟಿ ಕಾಂಪ್ಲೆಕ್ಸ್‌) ಎಂಬ ರಾಸಾಯನಿಕಗಳಿರುತ್ತವೆ. ಆ ರಾಸಾಯನಿಕಗಳು ಪ್ರತಿಯೊಬ್ಬ ವ್ಯಕ್ತಿಯಲ್ಲೂ ಬೇರೆ ಬೇರೆಯಾಗಿರುತ್ತವೆ (ಆಧಾರ್‌ ಸಂಖ್ಯೆಯಂತೆ). ಅವುಗಳನ್ನು ನಮ್ಮ ಶರೀರದೊಳಗಿನ ಸಂಕೀರ್ಣವಾದ ರೋಗನಿರೋಧಕ ಶಕ್ತಿಯು ಬಹಳ ಸುಲಭವಾಗಿ ಗುರುತಿಸಬಲ್ಲದು. ಅಂದರೆ ರೋಗನಿರೋಧಕ ಶಕ್ತಿಗೆ ನಮ್ಮ ದೇಹದ ಅಂಗಾಗಗಳು ಯಾವುವು ಹಾಗೂ ಹೊರಗಿನಿಂದ ಬಂದುವು ಯಾವುವು ಎಂಬುದನ್ನು ಗುರುತಿಸಲು ಈ ರಾಸಾಯನಿಕಗಳು ಸಹಕಾರಿಯಾಗಿವೆ.

ಹೊರಗಿನಿಂದ ಬರುವ ಯಾವುದೇ ಅಂಗ ಅಥವಾ ಅಂಗಾಂಶದಲ್ಲಿ ಬೇರೆಯದೇ ರಾಸಾಯನಿಕಗಳು ಇರುವುದರಿಂದ ಅವುಗಳನ್ನು ಯಾವುದೋ ರೋಗಾಣು ಎಂದು ಭಾವಿಸುವ ರೋಗನಿರೋಧಕ ಶಕ್ತಿಯು ಪ್ರತಿಕಾಯಗಳನ್ನು ಸೃಷ್ಟಿಮಾಡಿ ಆ ಅಂಗಾಂಶವನ್ನು ಸಾಯಿಸಿಬಿಡುತ್ತದೆ (ರಾಸಾಯನಿಕಗಳನ್ನು ಸಮವಸ್ತ್ರ ಧರಿಸಿದ ಶಾಲಾಮಕ್ಕಳಿಗೆ ಹೋಲಿಸಬಹುದು. ಅದೇ ಶಾಲೆಯ ಮಕ್ಕಳಾದರೆ ಒಂದೇ ಸಮವಸ್ತ್ರದ ಮೂಲಕ ಹೇಗೆ ಕಂಡು ಹಿಡಿಯುತ್ತೇವೆಯೋ ಹಾಗೆ ಈ ರಾಸಾಯನಿಕಗಳ ಮೂಲಕ ಅಂಗಾಂಶ ನಮ್ಮ ದೇಹದ್ದೇ ಹೌದೋ ಅಲ್ಲವೋ ಎಂಬುದನ್ನು ರೋಗ ನಿರೋಧಕ ಶಕ್ತಿಯು ಗುರುತಿಸುತ್ತದೆ). ಅತ್ಯಂತ ಹತ್ತಿರದ ರಕ್ತ ಸಂಬಂಧಿಗಳ ಎಂಎಚ್‌ಸಿ ರಾಸಾಯನಿಕಗಳಲ್ಲಿ ಸ್ವಲ್ಪಮಟ್ಟಿನ ಸಾಮ್ಯತೆಯಿರುತ್ತದೆ. ಅಂಗಾಂಗ ಕಸಿ ಮಾಡುವಾಗ ಈ ಅಂಶವನ್ನು ಬಹಳ ಗಂಭೀರವಾಗಿ ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ಅರ್ಬುದದಂತಹ ರೋಗಗಳಿಗೆ ಅಸ್ಥಿಮಜ್ಜೆ ಕಸಿಯಾಗಬೇಕಾದಾಗ ವೈದ್ಯರು ಅತ್ಯಂತ ಸಮೀಪದ ರಕ್ತ ಸಂಬಂಧಿಗಳ ಅಸ್ಥಿಮಜ್ಜೆಯೇ ಬೇಕೆನ್ನುವುದು ಈ ಕಾರಣಕ್ಕಾಗಿ.

ಹಂದಿಯ ಹೃದಯದ ಮಾರ್ಪಾಡು ಹೇಗೆ?
ಮೇಲಿನ ಅಂಶಗಳನ್ನು ಗಮನದಲ್ಲಿ ಇಟ್ಟುಕೊಂಡರೆ ನಮಗೆ ಒಂದು ವಿಚಾರ ಸ್ಪಷ್ಟವಾಗಿ ಅರ್ಥವಾಗುತ್ತದೆ. ಕೆಲವೊಂದು ಮಾರ್ಪಾಡುಗಳನ್ನು ಮಾಡದೆ ನೇರವಾಗಿ ಹಂದಿಯಿಂದ ಹೃದಯವನ್ನು ತೆಗೆದು ಮಾನವನಿಗೆ ಕಸಿ ಮಾಡಲು ಸಾಧ್ಯವಿಲ್ಲ. ಇದಕ್ಕಾಗಿ ಹಂದಿಯ ವಂಶವಾಹಿಯಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಬೇಕಾಗುತ್ತದೆ. ಅದರಂತೆ ಪ್ರಸ್ತುತ ಕಸಿ ಮಾಡಲಾಗಿರುವ ಹೃದಯದಲ್ಲಿ ಒಟ್ಟಾರೆಯಾಗಿ ಹತ್ತು ಬದಲಾವಣೆಗಳನ್ನು ಮಾಡಲಾಗಿದೆ. ಹೀಗೆ ಬದಲಾವಣೆ ಮಾಡಲಾದ ಹಂದಿಯನ್ನು ಕುಲಾಂತರಿ ಹಂದಿ ಎಂದು ಕರೆಯಲಾಗುತ್ತದೆ(ಕುಲಾಂತರಿ ಬದನೆಯಂತೆ). ಒಟ್ಟು ನಾಲ್ಕು ವಂಶವಾಹಿಗಳನ್ನು ಕೆಲಸ ಮಾಡದಂತೆ ಕಟ್ಟಿಹಾಕಿ, ಆರು ಮಾನವ ಸಂಬಂಧಿ ವಂಶವಾಹಿಗಳನ್ನು ಸೇರಿಸಿ ಬೆಳೆಸಿದ ಹಂದಿಯ ದೇಹದಿಂದ ತೆಗೆದ ಕುಲಾಂತರಿ ಹೃದಯವನ್ನು ಸತತ ಆರು ಗಂಟೆಗಳ ಶಸ್ತ್ರ ಚಿಕಿತ್ಸೆಯ ನಂತರ ಯಶಸ್ವಿಯಾಗಿ ಡೇವಿಡ್‌ ಬೆನ್ನೆಟ್‌ ಎಂಬ ರೋಗಿಗೆ ಕಸಿ ಮಾಡಲಾಗಿದೆ. ಈ ಹೃದಯ ಕಸಿ ಮಾಡಿದವರು ಡಾ. ಬಾರ್ಟಲಿ ಗ್ರಿಫಿತ್‌ ಎಂಬ ವೈದ್ಯರು. ಗಂಭೀರವಾದ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಬೆನ್ನೆಟ್‌ ಸದ್ಯ ಚೇತರಿಸಿಕೊಳ್ಳುತ್ತಿದ್ದು, ಸಂಪೂರ್ಣ ಗುಣಮುಖರಾಗುವವರೆಗೆ ತೀವ್ರ ನಿಗಾಘಟಕದಲ್ಲಿಯೇ ಇರಲಿದ್ದಾರೆ. ಕಟ್ಟಿಹಾಕಲಾದ ನಾಲ್ಕೂ ವಂಶವಾಹಿಗಳು ಕಸಿಯಾದ ಹೃದಯದ ವಿರುದ್ದ ದೇಹವು ಪ್ರತಿಕಾಯಗಳನ್ನು ಉತ್ಪತ್ತಿ ಮಾಡದಂತೆ ತಡೆಯುತ್ತವೆ. ಹೊಸದಾಗಿ ಸೇರಿಸಿರುವ ಆರು ವಂಶವಾಹಿಗಳು ಮಾನವನದ್ದೇ ವಂಶವಾಹಿಗಳು, ಇವು ಹೃದಯ ಸರಿಯಾಗಿ ಕೆಲಸ ಮಾಡಲು ಸಹಕರಿಸುತ್ತವೆ.

ಹೀಗೆ ಒಂದು ಜೀವಿಯ ಹೃದಯವನ್ನು ಇನ್ನೊಂದು ಜೀವಿಗೆ ಕಸಿ ಮಾಡುವ ವಿದ್ಯೆ ಅಚಾನಕ್ಕಾಗಿ ಹೊಳೆದದ್ದಲ್ಲ. ಈ ಶಸ್ತ್ರ ಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿದ ಡಾ.ಬಾರ್ಟಲಿ ಗ್ರಿಫಿತ್‌ ಅವರಿಗೆ ಡಾ. ಮೊಹಮ್ಮದ್‌ ಮೊಯಿದ್ದೀನ್‌ ಅವರಿಂದ ನೆರವು ಸಿಕ್ಕಿದೆ. ಮೇರಿಲ್ಯಾಂಡ್‌ ವಿಶ್ವವಿದ್ಯಾಲಯದ ಅಂಗಾಂಗ ಕಸಿ ವಿಭಾಗವನ್ನು ಆರಂಭಿಸಿದವರು ಅವರು. ಹಂದಿಯ ಹೃದಯವನ್ನು ಬಬೂನ್‌ ಎಂಬ ಒಂದು ಜಾತಿಯ ಮಂಗಕ್ಕೆ ಕಸಿ ಮಾಡುವಲ್ಲಿ ಅವರು ಈ ಹಿಂದೆ ಯಶಸ್ವಿಯಾಗಿದ್ದರೂ ಆ ಮಂಗ ಹೆಚ್ಚು ದಿನ ಬದುಕಿರಲಿಲ್ಲ. ಇಂತಹ ಕಾರಣಗಳಿಂದ ಅಂಗಾಗ ಕಸಿ ಚಿಕಿತ್ಸೆ ಹೆಚ್ಚು ಪರಿಣಾಮಕಾರಿಯಾದ ಚಿಕಿತ್ಸೆ ಆಗಿರಲಿಲ್ಲ. ಈ ಸಂದರ್ಭದಲ್ಲಿ ಕಂಡು ಹಿಡಿಯಲಾದ ವಿಶಿಷ್ಟವಾದ ತಂತ್ರಜ್ಞಾನ ವೈದ್ಯಕೀಯ ಇತಿಹಾಸದಲ್ಲಿ ದೊಡ್ಡ ಮೈಲುಗಲ್ಲನ್ನು ಸ್ಥಾಪಿಸಿದೆ. ಹಂದಿಯಿಂದ ಹೃದಯವನ್ನು ತೆಗೆದು ಅದನ್ನು ಕಸಿ ಮಾಡುವವರೆಗೆ ಕಾಪಾಡಲು ಹೊಸ ತಂತ್ರಜ್ಞಾನವನ್ನು ಕಂಡುಹಿಡಿದವರೂ ಡಾ. ಮೊಹಮ್ಮದ್‌ ಅವರೇ.

ಅಂಗಾಂಗ ಕಸಿ ತಂತ್ರಜ್ಞಾನ ಹೊಸತೇ?
ಇದ್ದಕ್ಕಿದ್ದಂತೆ ವಿಶ್ವವಿಖ್ಯಾತಿ ಹೊಂದಿದ ಈ ತಂತ್ರಜ್ಞಾನವು ಇತ್ತೀಚೆಗೆ ಸಂಶೋಧನೆಯಾದದ್ದೇನೂ ಅಲ್ಲ. ಈ ಹಿಂದೆಯೂ ಇಂತಹ ಹಲವಾರು ಪ್ರಯತ್ನಗಳು ನಡೆದಿದ್ದವು. ಬೇರೆ ಜೀವಿಗಳಿಂದ ಅಂಗಾಂಗಗಳನ್ನು ಮಾನವನಿಗೆ ಕಸಿ ಮಾಡುವ ಸಾಧ್ಯತೆಗಳ ಬಗ್ಗೆ ಬಹುಹಿಂದಿನ ಕಾಲದಿಂದಲೂ ಒಂದಲ್ಲಾ ಒಂದು ರೀತಿಯಲ್ಲಿ ಚರ್ಚೆಗಳು ನಡೆದಿವೆ, ಪ್ರಯತ್ನಗಳೂ ನಡೆದಿವೆ. 1960ರಷ್ಟು ಹಿಂದೆಯೇ ಈ ತರಹದ ಒಂದು ಪ್ರಯತ್ನ ನಡೆದು ಚಿಂಪಾಂಜಿಯ ಮೂತ್ರಪಿಂಡವನ್ನು ಹಲವಾರು ಜನರಿಗೆ ಕಸಿ ಮಾಡಲಾಗಿತ್ತು. ಆದಾಗ್ಯೂ ಯಾವ ರೋಗಿಗಳೂ ಒಂಬತ್ತು ತಿಂಗಳಿಗಿಂತ ಹೆಚ್ಚು ಕಾಲ ಬದುಕಿರಲಿಲ್ಲ. 1983ರಲ್ಲಿ ಬಬೂನ್‌ ಕೋತಿಯ ಹೃದಯವನ್ನು ಪುಟ್ಟ ಹುಡುಗಿಯೊಬ್ಬಳಿಗೆ ಕಸಿ ಮಾಡಲಾಗಿತ್ತು ಆಕೆಯೂ ಹೆಚ್ಚುದಿನ ಬದುಕಲಿಲ್ಲ. ಹಂದಿಯ ಹೃದಯಕವಾಟಗಳನ್ನು ಕಸಿ ಮಾಡಬಲ್ಲ ತಂತ್ರಜ್ಞಾನವೇನೋ ಈಗಾಗಲೇ ಚಾಲ್ತಿಯಲ್ಲಿದೆ. ಇಂತಹ ಹಲವಾರು ಪ್ರಯೋಗಗಳು ನಡೆದಿದ್ದರೂ ರೋಗನಿರೋಧಕ ಶಕ್ತಿಯ ಕಾರಣದಿಂದಾಗಿ ಅಂತಹ ಅಂಗಗಳು ತಮ್ಮ ಕೆಲಸವನ್ನು ಸರಿಯಾಗಿ ಮಾಡಲಾಗುತ್ತಿರಲಿಲ್ಲ.

ವರದಾನವಾದ ಜೀನ್‌ ಎಡಿಟಿಂಗ್‌
ಜೀನ್‌ ಎಡಿಟಿಂಗ್‌ ಹಾಗೂ ಕ್ಲೋನಿಂಗ್‌ ತಂತ್ರಜ್ಞಾನಗಳು ಇತ್ತೀಚೆಗೆ ಜೈವಿಕ ತಂತ್ರಜ್ಞಾನ ವಿಭಾಗದಲ್ಲಿ ಬಹಳ ಕ್ರಾಂತಿಕಾರಕ ಬದಲಾವಣೆಗಳನ್ನು ತರುತ್ತಿವೆ. ಈ ತಂತ್ರಜ್ಞಾನವನ್ನು ಬಳಸಿಕೊಂಡು ನಮ್ಮ ವಂಶವಾಹಿಗಳನ್ನು ನಮಗೆ ಬೇಕಾದ ಹಾಗೆ ಕಸ್ಟಮೈಸ್‌ ಮಾಡಬಹುದು. ಅಂದರೆ ಯಾವುದಾದರೊಂದು ವಂಶವಾಹಿಯನ್ನು ನಮ್ಮ ಬಯಕೆಯಂತೆ ಬದಲಾಯಿಸಿ ಅದು ನಮಗೆ ಬೇಕಾದಂತೆ ಕೆಲಸ ಮಾಡುವಂತೆ ಮಾಡಬಹುದು. ಈ ಎರಡು ತಂತ್ರಜ್ಞಾನಗಳ ಸಹಾಯದಿಂದ ಹಂದಿಯ ಹೃದಯವನ್ನು ಮಾನವನ ದೇಹಕ್ಕೆ ಸರಿಹೊಂದುವ ರೀತಿಯಲ್ಲಿ ಮಾರ್ಪಾಡು ಮಾಡಿ ಆನಂತರ ಕಸಿ ಮಾಡಲಾಗುತ್ತದೆ.

ಹಂದಿಯ ಹೃದಯವೇ ಏಕೆ?
ವಿಕಾಸವಾದದ ಪ್ರಕಾರ ಮಾನವನಿಗೆ ಅತ್ಯಂತ ಹತ್ತಿರವಿರುವ ಹಲವಾರು ಜೀವಿಗಳಿದ್ದರೂ (ಉದಾಹರಣೆಗೆ ಚಿಂಪಾಂಜಿ, ಮಂಗಗಳು) ಹಂದಿಯ ಹೃದಯವನ್ನೇ ಏಕೆ ವಿಜ್ಞಾನಿಗಳು ಆಯ್ಕೆ ಮಾಡಿದರು ಎಂದು ಸೋಜಿಗವೆನಿಸಬಹುದು. ಇದಕ್ಕೆ ಹಲವಾರು ಪೂರಕ ಕಾರಣಗಳಿವೆ. ಹಂದಿಯನ್ನು ಸಾಕುವುದು ಸುಲಭ ಹಾಗೂ ಈಗಾಗಲೇ ಆಹಾರಕ್ಕಾಗಿ ಅವುಗಳನ್ನು ಸಾಕಲಾಗುತ್ತದೆ. ಹಂದಿಯ ಹೃದಯ ಹೆಚ್ಚೂ ಕಡಿಮೆ ಮಾನವನ ಹೃದಯದಷ್ಟೇ ದೊಡ್ಡದಾಗಿರುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಸುಮಾರು ಆರು ತಿಂಗಳ ಒಳಗಾಗಿ ಹಂದಿಯ ಹೃದಯ ಸಂಪೂರ್ಣ ಬೆಳೆದುಬಿಡುತ್ತದೆ. ಸದ್ಯ ಕಸಿ ಮಾಡಲಾಗಿರುವ ಕುಲಾಂತರಿ ಹಂದಿಯನ್ನು ರೆವಿವಿಕೊರ್‌ ಎಂಬ ಕಂಪನಿಯು ಬೆಳೆಸಿದೆ.


ವಂಶವಾಹಿ ಮಾರ್ಪಾಡಿಗೊಳಗಾದ ಹಂದಿಯ ಹೃದಯ ಅಳವಡಿಸಿಕೊಂಡ ಡೇವಿಡ್‌ ಬೆನೆಟ್‌ (ಬಲ) ಶಸ್ತ್ರಚಿಕಿತ್ಸಕ ಬಾರ್ಟ್ಲಿ ಪಿ. ಗ್ರಿಫಿತ್‌ ಅವರೊಂದಿಗೆ. ಅಮೆರಿಕದ ಯೂನಿವರ್ಸಿಟಿ ಆಫ್‌ ಮೇರಿಲ್ಯಾಂಡ್‌ ಮೆಡಿಕಲ್‌ ಸೆಂಟರ್‌ನಲ್ಲಿ ಈ ಶಸ್ತ್ರಚಿಕಿತ್ಸೆ ನಡೆದಿದೆ. (ರಾಯಿಟರ್ಸ್‌ ಚಿತ್ರ).

ಭಾರತದಲ್ಲಿ ನಡೆಯಬಹುದೇ?
1997ರಲ್ಲಿ ಡಾ ಧನಿರಾಮ್‌ ಭರುಹಾ ಎಂಬ ಅಸ್ಸಾಮಿನ ಹೃದಯ ತಜ್ಞರು ಮೆದುಳು ನಿಷ್ಕ್ರಿಯವಾಗಿದ್ದ ಪುರ್ನೋ ಸೈಕಿಯಾ ಎಂಬ 32 ವರ್ಷದ ವ್ಯಕ್ತಿಯೊಬ್ಬನಿಗೆ ಹಂದಿಯ ಹೃದಯ, ಮೂತ್ರಪಿಂಡ ಹಾಗೂ ಶ್ವಾಸಕೋಶಗಳನ್ನು ಕಸಿ ಮಾಡಿದ್ದರು. ದುರಾದೃಷ್ಟವಶಾತ್‌ ಆ ವ್ಯಕ್ತಿ ಬದುಕಲಿಲ್ಲ. ಇದು ದೇಶಾದ್ಯಂತ ಸುದ್ದಿಯಾದದ್ದಲ್ಲದೇ ಇದಕ್ಕೆ ಕಾರಣರಾದ ಡಾ. ಭರುಹಾರನ್ನು ನಲವತ್ತು ದಿನಗಳ ಕಾಲ ಜೈಲಿಗಟ್ಟಲಾಗಿತ್ತು. ಅಸ್ಸಾಂ ಸರ್ಕಾರ ಇದಕ್ಕಾಗಿ ರಚಿಸಿದ ಸಮಿತಿಯು ಈ ಪ್ರಯೋಗವನ್ನು ಅನೈತಿಕ ಹಾಗೂ ಕಾನೂನುಬಾಹಿರ ಎಂದು ವರದಿ ನೀಡಿತು. ಇಷ್ಟಾಗಿಯೂ ಒಂದಲ್ಲಾ ಒಂದು ದಿನ ತಮ್ಮ ಪ್ರಯತ್ನಗಳಿಗೆ ಫಲ ಸಿಕ್ಕೇ ಸಿಕ್ಕುತ್ತದೆ ಎಂಬ ಆಶಾಭಾವನೆಯಲ್ಲಿ ಡಾ. ಭರುಹಾ ಇದ್ದರು. ಅದಕ್ಕೆ ಪೂರಕವೆಂಬಂತೆ ಇತ್ತೀಚಿನ ಪ್ರಯೋಗ ಯಶಸ್ವಿಯಾಗಿದೆ.

ನೈತಿಕತೆಯ ಪ್ರಶ್ನೆ
ಪ್ರತಿಯೊಂದು ಕುಲಾಂತರಿ ಸಂಗತಿಗಳಿಗೆ ಸದಾ ತಳುಕು ಹಾಕಿಕೊಂಡಿರುವ ವಿಷಯವೇ ನೈತಿಕತೆ. ಇದೊಂದು ಅಭೂತಪೂರ್ವ ಯಶಸ್ವೀ ಪ್ರಯೋಗ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ನೈತಿಕತೆಯ ಪ್ರಶ್ನೆ ಬಂದಾಗ ಹಲವಾರು ಕಗ್ಗಂಟುಗಳು ಧುತ್ತನೆ ಪ್ರತ್ಯಕ್ಷವಾಗುತ್ತವೆ. ಈ ಕಸಿ ಶಸ್ತ್ರಚಿಕಿತ್ಸೆಗೆ ಒಳಗಾಗುವ ವ್ಯಕ್ತಿ ಜೀವನಪರ್ಯಂತ ಹಲವಾರು ಇಮ್ಯುನೋ ಸಪ್ರೆಸೆಂಟ್ಸ್‌ ಎಂಬ ಔಷಧಗಳನ್ನು ತೆಗೆದುಕೊಳ್ಳುತ್ತಲೇ ಇರಬೇಕಾಗುತ್ತದೆ. ಅಲ್ಲದೇ ಯಾವುದೇ ಸಂದರ್ಭದಲ್ಲಿಯೂ ಅವನ ದೇಹ ಕಸಿ ಮಾಡಿದ ಅಂಗಾಂಗಗಳನ್ನು ತ್ಯಜಿಸಬಹುದು. ಇಂತಹ ಸಾಧ್ಯತೆಗಳು ಸದ್ಯದ ಮಟ್ಟಿಗಂತೂ ಜಾಸ್ತಿಯಿವೆ. ಪೇಟಾದಂತಹ ಸಂಸ್ಥೆಗಳು ಈ ತಂತ್ರಜ್ಞಾನವನ್ನು ಪ್ರಬಲವಾಗಿ ವಿರೋಧಿಸುತ್ತಿವೆ. ಇನ್ನೊಂದು ಜೀವಿಯನ್ನು ಕೊಲ್ಲುವ ಹಕ್ಕು ನಮಗಿಲ್ಲ, ಪ್ರಾಣಿಗಳಿಗೂ ಬದುಕುವ ಹಕ್ಕಿದೆ ಎಂಬುದು ಅವರ ವಾದ. ಇನ್ನು ಹಂದಿಯ ವರ್ಜ್ಯವಿರುವ ಯಹೂದಿಗಳು ಹಾಗೂ ಮುಸಲ್ಮಾನರು ಇದನ್ನು ಯಾವ ರೀತಿಯಲ್ಲಿ ಸ್ವೀಕರಿಸುವರು ಎಂಬುದು ಚರ್ಚಿಸಬೇಕಾದ ವಿಷಯವೇ ಹೌದು.

ಈ ತಂತ್ರಜ್ಞಾನವು ವೈದ್ಯಕೀಯ ಕ್ಷೇತ್ರದಲ್ಲಿ ಬಿರುಗಾಳಿ ಎಬ್ಬಿಸಿರುವುದಂತೂ ನಿಜ. ಮಾನವನ ಜೀವನದ ಮುಂದೆ ಅನ್ಯಜೀವಿಗಳ ಜೀವ ನಗಣ್ಯ ಎಂಬ ಭಾವನೆಯನ್ನು ನಾವಪ್ಪಿಕೊಂಡು ಅಷ್ಟೋ ಕಾಲವಾಗಿದೆ. ಮನುಷ್ಯನ ಜೀವ ಉಳಿಕೆಯ ಪ್ರಶ್ನೆ ಬಂದರೆ ಉಳಿದೆಲ್ಲವೂ ಶೂನ್ಯ. ಬಹಳ ಮುಖ್ಯವಾಗಿ ಬೆನ್ನೆಟ್‌ ಈ ಕಸಿ ಚಿಕಿತ್ಸೆಯಿಂದ ಹೇಗೆ ಚೇತರಿಸಿಕೊಳ್ಳುತ್ತಾರೆ ಎನ್ನುವುದರ ಮೇಲೆ ಈ ಪ್ರಯೋಗದ ಯಶಸ್ಸು ನಿಂತಿದೆ. ಆತ ದೀರ್ಘಾಯುಷಿಯಾಗಲಿ ಎಂದು ಹಾರೈಸೋಣ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.