ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳನ್ನು ರಮಿಸುವ ಕಲೆ ಕಲಿತುಕೊಳ್ಳಿ: ಮನೋವೈದ್ಯ ಡಾ.ಸಿ.ಆರ್‌. ಚಂದ್ರಶೇಖರ್‌

‘ಪ್ರಜಾವಾಣಿ’ ಫೋನ್‌ಇನ್‌ ಕಾರ್ಯಕ್ರಮದಲ್ಲಿ ಪಾಲಕರಿಗೆ ಮನೋವೈದ್ಯ ಡಾ.ಸಿ.ಆರ್‌. ಚಂದ್ರಶೇಖರ್‌ ಕಿವಿಮಾತು
Last Updated 18 ನವೆಂಬರ್ 2021, 11:29 IST
ಅಕ್ಷರ ಗಾತ್ರ

ಕಲಬುರಗಿ: ‘ಹಠ ಮಾಡುವುದು ಮಕ್ಕಳಿಗೆ ಬಂದ ಪ್ರಕೃತಿದತ್ತ ಸ್ವಭಾವ. ಅವರನ್ನು ರಮಿಸುವುದು ಒಂದು ಕಲೆ. ಆ ಕಲೆಯನ್ನು ಕಲಿತುಕೊಂಡರೆ ಮಕ್ಕಳನ್ನು ಮಾನಸಿಕ ಒತ್ತಡದಿಂದ ಪಾರು ಮಾಡಬಹುದು’ ಎಂದು ಬೆಂಗಳೂರಿನ ಮನೋವೈದ್ಯ ಡಾ.ಸಿ.ಆರ್‌. ಚಂದ್ರಶೇಖರ್‌ ಕಿವಿಮಾತು ಹೇಳಿದರು.

‘ಪ್ರಜಾವಾಣಿ’ ಕಲಬುರಗಿ ಕಚೇರಿಯಲ್ಲಿ ಗುರುವಾರ ಆಯೋಜಿಸಿದ್ದ ‘ಫೋನ್‌ ಇನ್‌’ ಕಾರ್ಯಕ್ರಮದಲ್ಲಿ ಕೇಳುಗರ ಪ್ರಶ್ನೆಗೆ ಉತ್ತರಿಸಿದ ಅವರು, ‘ಚಿಣ್ಣರನ್ನು ಮೊಬೈಲ್‌ ಆಕರ್ಷಿಸುವ ಕಾರಣ ಅವರು ಹಠ ಮಾಡುತ್ತಾರೆ. ಹಾಗೆಂದು ಪಾಲಕರು ಸೋಲಬಾರದು. ಅವರನ್ನು ರಮಿಸುವ ಕಲೆಯನ್ನು ನಮ್ಮ ಹಿರಿಯರು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದರು. ಪುಟಾಣಿಗಳೊಂದಿಗೆ ಮಾತನಾಡಿ, ಆಟವಾಡಿ, ಹಾಡಿ, ಕತೆ ಹೇಳಿ, ರಂಗವಲ್ಲಿ ಬಿಡುಸುವಂಥ, ಹಬ್ಬಗಳಲ್ಲಿ ತಳಿರು– ತೋರಣ ಕಟ್ಟುವಂಥ ಕೌಶಲಗಳಲ್ಲಿ ಅವರನ್ನು ತೊಡಗಿಸಿ. ಆಗ ತಾನಾಗೇ ಮೊಬೈಲ್‌ ಗೀಳು ನಿಲ್ಲುತ್ತದೆ’ ಎಂದರು.‌‌

‘ಮಗು ಗರ್ಭದಲ್ಲಿ ಮೊಳಕೆಯೊಡೆದ ತಕ್ಷಣದಿಂದಲೇ ಅದರ ಮನಸ್ಸು ಕ್ರಿಯಾಶೀಲವಾಗುತ್ತದೆ. ಹಾಗಾಗಿ, ಹಸುಳೆಯಿಂದ ಹಿಡಿದು ಯಾವುದೇ ವಯಸ್ಸಿನವರಿಗೂ ಮಾನಸಿಕ ಕಾಯಿಲೆ ಬರಬಹುದು. ಅರ್ಧ ತಾಸಿಗಿಂತ ಹೆಚ್ಚಾಗಿ ಸ್ಕ್ರೀನ್‌ ಅನ್ನು ನಿರಂತರವಾಗಿ ನೋಡುವುದರಿಂದ ಮಿದುಳಿನ ಕ್ರಿಯಾಶೀಲತೆ ಕಡಿಮೆ ಆಗುತ್ತದೆ. ಹೀಗಾಗಿ, ಮಕ್ಕಳು ಚಿಕ್ಕಪುಟ್ಟ ವಿಷಯಗಳಿಗೂ ಒತ್ತಡಕ್ಕೆ ಒಳಗಾಗುತ್ತಾರೆ. ವಿವಿಧ ರೀತಿಯ ಮಾನಸಿಕ ರೋಗಗಳಿಗೆ ಒಳಗಾಗಬಹುದು’ ಎಂದೂ ಎಚ್ಚರಿಸಿದರು.

‘ಆನ್‌ಲೈನ್‌– ಆಫ್‌ಲೈನ್‌ ತರಗತಿಗಳ ಗೊಂದಲದಲ್ಲಿರುವ ಚಿಕ್ಕಮಕ್ಕಳ ಮನಸ್ಸಿನ ಮೇಲೆ ಮೊಬೈಲ್‌ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಮೊಬೈಲನ್ನು ಹೇಗೆ ಬಳಸಬೇಕು, ಎಷ್ಟು ಬಳಸಬೇಕು, ಅವರು ಏನನ್ನೂ ತಡಕಾಡುತ್ತಾರೆ ಎಂಬುದರ ಬಗ್ಗೆ ಪಾಲಕರು– ಶಿಕ್ಷಕರು ನಿಗಾ ವಹಿಸಬೇಕು. ಅವರ ಕೈಗೆ ಮೊಬೈಲ್‌ ಕೊಟ್ಟು ಸುಮ್ಮನೇ ಕುಳಿತುಕೊಳ್ಳಬಾರದು’ ಎಂದರು.

‘ಕೋವಿಡ್‌ ನಂತರದ ದಿನಗಳಲ್ಲಿ ಪ್ರತಿಯೊಬ್ಬರಿಗೂ ಮಾನಸಿಕ ಸ್ವಾಸ್ಥ್ಯ ಬಹಳ ಮುಖ್ಯವಾಗಿದೆ. ದೊಡ್ಡವರೂ ಈಗ ಅತಿಯಾದ ಒತ್ತಡದಲ್ಲಿ ಬದುಕುತ್ತಿದ್ದಾರೆ. ನಮ್ಮ ಆಸೆ, ಆಕಾಂಕ್ಷೆಗಳು ಮಿತಿಮೀರಿದ್ದರಿಂದಲೇ ಒತ್ತಡ, ಖಿನ್ನತೆ, ತೊಳಲಾಟಗಳು ಶುರುವಾಗುತ್ತವೆ. ಇನ್ನೊಬ್ಬರಂತೆ ನಮ್ಮ ಬದುಕು ಇಲ್ಲವಲ್ಲ ಎಂಬ ನಕಾರಾತ್ಮಕ ಆಲೋಚನೆಗಳಿಂದ ಮಾನಸಿಕ ರೋಗಿಯಾಗುವ ಸಂಭವ ಹೆಚ್ಚು. ಇದರಿಂದ ಹೊರಬರುವುದು ಬಹಳ ಸುಲಭ. ಆಕಾಂಕ್ಷೆಗಳನ್ನು ಕಡಿಮೆ ಮಾಡಿಕೊಳ್ಳಿ. ಸಕಾರಾತ್ಮಕ ಆಲೋಚನೆ ಮಾಡಿ. ಬೇಡವಾದ ವಿಷಯ ಚರ್ಚಿಸುವುದೇ ಬಡ. ಧ್ಯಾನ, ಸಂಗೀತ ಆಲಿಕೆ, ಹರಟೆ ಹೀಗೆ ಸಾಕಷ್ಟು ಸುಲಭವಾದ ಕ್ರಿಯೆಗಳಿಂದ ಮಾನಸಿಕ ಸ್ವಾಸ್ಥ್ಯ ಸಿಗುತ್ತದೆ’‌ ಎಂದರು.

‘ನಮ್ಮ ದೇಶಕ್ಕೆ ಈಗ ಮೂರು ಬಗೆಯ ಆರೋಗ್ಯ ಬೇಕಾಗಿದೆ. ಮಾನಸಿಕ ಆರೋಗ್ಯ, ದೈಹಿಕ ಆರೋಗ್ಯ ಹಾಗೂ ಸಾಮಾಜಿಕ ಆರೋಗ್ಯ. ಮನಸ್ಸನ್ನು ಶಾಂತವಾಗಿ ಇಟ್ಟುಕೊಳ್ಳಿ. ಕೆಟ್ಟ ಆಲೋಚನೆ ಬಿಟ್ಟುಬಿಡಿ. ಮಾತು– ವರ್ತನೆಯಲ್ಲಿ ಸಹಜತೆ ಕಂಡುಕೊಳ್ಳಿ. ಇದು ಮಾನಸಿಕವಾಗಿ ನಿಮ್ಮನ್ನು ಗಟ್ಟಿ ಮಾಡುತ್ತದೆ. ವಾಕಿಂಗ್‌, ವ್ಯಾಯಾಮ, ಯೋಗ ಮಾಡಿ. ನಿಮ್ಮ ಸಾಮರ್ಥ್ಯಕ್ಕೆ ತಕ್ಕ ಕೆಲಸ ಮಾಡಿ– ಮಿತಿಮೀರಿದ್ದನ್ನು ನೇರವಾಗಿ ನಿರಾಕರಿಸಿ. ಎಲ್ಲಕ್ಕಿಂತ ಮುಖ್ಯವಾಗುವುದು ಸಾಮಾಜಿಕ ಆರೋಗ್ಯ. ಪರಸ್ಪರ ಕ್ಷೇಮ– ಕುಶಲ ವಿಚಾರಿಸುವುದೇ ಈಗ ಕಡಿಮೆಯಾಗಿದೆ. ಸ್ವಾರ್ಥ ಹೆಚ್ಚಾಗಿದೆ. ಇದೇ ಸಾಮಾಜಿಕ ಅನಾರೋಗ್ಯ. ವ್ಯಕ್ತಿ ಒಳ್ಳೆಯವನಾದರೆ ಸಮಾಜವೂ ಒಳ್ಳೆಯದಾಗುತ್ತದೆ. ಇದೇ ಸಾಮಾಜಿಕ ಆರೋಗ್ಯದ ಗುಟ್ಟು’ ಎಂದೂ ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT