ಕಳೆದ ವರ್ಷ ಇಂಗ್ಲೆಂಡ್ನ ಗ್ರೇಟ್ ಮ್ಯಾಂಚೆಸ್ಟರ್ನಲ್ಲಿ ‘ಪೊಯೆಟ್ರಿ ಫಾರ್ಮಸಿ’ ಎಂಬ ಜಾಹೀರಾತಿನ ಪೋಸ್ಟರ್ಗಳು ಎಲ್ಲೆಡೆ ಹರಿದಾಡಲಾರಂಭಿಸಿದವು. ಪ್ರತಿ ಪ್ರೌಢಶಾಲೆ, ಕುಟುಂಬ ವೈದ್ಯರ ಕ್ಲಿನಿಕ್ಗಳು, ಆಸ್ಪತ್ರೆಗಳಲ್ಲಿ ‘ಪೊಯೆಟ್ರಿ ಫಾರ್ಮಸಿ’ಯ ಕ್ಯೂಆರ್ ಸ್ಕ್ಯಾನ್ ಕೋಡ್ಗಳನ್ನು ಹಾಕಲಾಯಿತು. ಜನರಿಗೆ ತಮ್ಮ ಆರೋಗ್ಯದ ಸಮಸ್ಯೆಯ ಹದಗೆಟ್ಟ ಮನಃಸ್ಥಿತಿಯಲ್ಲಿ ತಾವು ಓದಿದ ಕವನ ಎಷ್ಟು ಸೂಕ್ತ, ಸಮಾಧಾನ ನೀಡುವಂತಹದ್ದು ಎನಿಸಿತು ಎಂಬ ಬಗ್ಗೆ ಪ್ರತಿಕ್ರಿಯೆ ನೀಡುವ ಅವಕಾಶ, ಕೆಲವು ‘ನೋವನ್ನು ಮಾಯಿಸುವ’ ಕವನಗಳನ್ನು ಆಸ್ಪತ್ರೆಗಳಲ್ಲಿ ಪ್ರದರ್ಶಿಸುವುದು, ವೈದ್ಯಕೀಯ ಕ್ಷೇತ್ರದ ಸಿಬ್ಬಂದಿಗಳು ಮತ್ತು ರೋಗಿಯ ಕುಟುಂಬದವರಿಗೆ ಸಾಂತ್ವನ ನೀಡುವ ಪ್ರಯತ್ನಗಳು ಮೊದಲಾದ ಚಟುವಟಿಕೆಗಳು ನಡೆದವು.

‘ಪೊಯೆಟ್ರಿ ಫಾರ್ಮಸಿ’ ಅಥವಾ ಕವಿತೆಗಳೇ ಔಷಧಗಳಾಗಿ ದೊರೆಯುವ ಔಷಧದಂಗಡಿ ಎಂಬ ಪದಗಳು ಹೊಸತಾಗಿರಬಹುದು; ಆದರೆ ಪರಿಕಲ್ಪನೆಯೇನೂ ಹೊಸತಲ್ಲ. ಹಿಂದಿನಿಂದ ಇಂದಿನವರೆಗೂ, ಆರೋಗ್ಯದ ಯಾವುದೇ ಸಮಸ್ಯೆಗೂ (ದೈಹಿಕ-ಮಾನಸಿಕ ಆರೋಗ್ಯಗಳೆರಡನ್ನೂ ಒಳಗೊಂಡು) ಕೇವಲ ರೋಗಕ್ಕೆ ಚಿಕಿತ್ಸೆ ನೀಡುವುದಲ್ಲ, ‘ರೋಗಿ’ ಎಂಬ ವ್ಯಕ್ತಿಗೆ ಚಿಕಿತ್ಸೆ ನೀಡಬೇಕು ಎನ್ನುವುದು ವೈದ್ಯಕೀಯ ಕ್ಷೇತ್ರದ ಬಲವಾದ ಪ್ರತಿಪಾದನೆ. ಜೀವನದ ಗುಣಮಟ್ಟವನ್ನು ಕಾಪಾಡಲು, ವರ್ಧಿಸಲು ಚಿಕಿತ್ಸೆಯ ಚೀಟಿಯಲ್ಲಿ, ಬರೆಹದಲ್ಲಿ ಮಾತ್ರೆ-ಟಾನಿಕ್ಕು-ಇಂಜೆಕ್ಷನ್ನುಗಳನ್ನು ಬರೆದರೂ, ಅದನ್ನಷ್ಟೇ ‘ಪ್ರಿಸ್ಕ್ರಿಪ್ಷನ್’ ಎಂಬ ಹೆಸರಿನಿಂದ ನಾವು ಕರೆದರೂ, ಅದರೊಂದಿಗೆ ವೈದ್ಯನಾದವನು ಜೀವನವನ್ನು ಸಂತಸಮಯವಾಗಿಸುವ, ನರಳುವಿಕೆ ತಗ್ಗಿಸುವ ಹಲವು ಸೂಚನೆಗಳನ್ನು ನೀಡಬಹುದು, ನೀಡಬೇಕು; ಅದೂ ಕೂಡ ಪ್ರಿಸ್ಕ್ರಿಪ್ಷನ್ನ ಭಾಗವೇ ಎಂಬುದನ್ನು ವೈದ್ಯಕೀಯ ಕ್ಷೇತ್ರ ಸ್ಪಷ್ಟವಾಗಿಯೇ ಹೇಳುತ್ತಲೇ ಬಂದಿದೆ.

ಆಧುನಿಕ ವಿಜ್ಞಾನ ಕುತೂಹಲದಿಂದ ಮತ್ತಷ್ಟು ಮುಂದುವರಿದು, ಕಲಾ-ಸಾಹಿತ್ಯ ಚಿಕಿತ್ಸೆಗಳು ಮಿದುಳಿನ ಆರೋಗ್ಯವನ್ನು ಸುಧಾರಿಸುತ್ತವೆ, ಒತ್ತಡವನ್ನು ಕಡಿಮೆ ಮಾಡಿ, ಹಲವು ದೈಹಿಕ ಕಾಯಿಲೆಗಳನ್ನು ತಡೆಯುತ್ತವೆ ಎಂಬುದನ್ನು ದೃಢಪಡಿಸಿವೆ. ಅವು ರಕ್ತದೊತ್ತಡವನ್ನು ಕಡಿಮೆ ಮಾಡಿ, ನೆನಪಿನ ಸಾಮರ್ಥ್ಯವನ್ನು ಹೆಚ್ಚಿಸುತ್ತವೆ; ಒಂಟಿತನವನ್ನು ಈ ಚಿಕಿತ್ಸೆಗಳು ಆಶ್ಚರ್ಯಕರವಾಗಿ ಕಡಿಮೆ ಮಾಡಬಲ್ಲವು ಎಂದು ನಿರೂಪಿಸಿವೆ.

ಆಲೋಚನೆ ಹಳೆಯದೇ, ಗೊತ್ತಿರುವಂತಹ ಸಂಗತಿಯೇ ಆದರೂ, ಅದನ್ನು ವ್ಯಾಪಕವಾಗಿ, ಜನರು ಅದನ್ನು ಒಪ್ಪಿಕೊಂಡು, ಬಳಕೆಯಲ್ಲಿ ರೂಢಿಯಾಗುವಂತೆ ಮಾಡುವ ಕಾರ್ಯ ಸುಲಭವೇನಲ್ಲ. ‘ನೋವಿನ ಮಾತ್ರೆ ನುಂಗೋಣ, ನೋವು ಮಾಯವಾಗುತ್ತದೆ’ ಎಂಬ ತಿಳಿವಳಿಕೆಗೂ, ತಲೆನೋವು ಬಂದಾಕ್ಷಣ ‘ಮಾತ್ರೆ ನುಂಗಿದರೂ ಪರವಾಗಿಲ್ಲ, ಅದು ಮತ್ತೆ ಬರದಿರುವಂತೆ ಮಾಡಲು, ಒಂದು ಘಂಟೆಯಲ್ಲಿ ಕಡಿಮೆಯಾಗಬಹುದಾಗಿದ್ದ ತಲೆನೋವು ಅರ್ಧಗಂಟೆಯಲ್ಲಿ ಇಳಿಯುವಂತೆ ಮಾಡಲು ನೋವಿನ ಬಗೆಗಿರುವ ಕವಿತೆಯನ್ನೋ, ಹಾಸ್ಯಮಯವಾದ ಕವಿತೆಯನ್ನೋ ಓದೋಣ’ ಎಂಬ ಅರಿವಿಗೂ ಬಹು ಅಂತರವಿದೆಯಷ್ಟೆ!

‘ಕಾವ್ಯದಂತಹ ಚಿಕಿತ್ಸೆಯೆಂದರೆ ಅದು ತುರ್ತು ಪರಿಸ್ಥಿತಿಗಳಲ್ಲಾಗಲಿ, ದೇಹದ ಆರೋಗ್ಯ ಸಮಸ್ಯೆಗಳಲ್ಲಾಗಲೀ ಬೇಡದಿರುವಂತಹದ್ದು, ಕೊಡಲಾಗದಂತಹದ್ದು. ಕಾವ್ಯವೇನಿದ್ದರೂ ಹೊಟ್ಟೆ ತುಂಬಿ, ಆರಾಮವಾಗಿ, ಯಾವ ಕಷ್ಟವೂ ಇರದಾಗ, ಕೆಲಸಗಳೆಲ್ಲವೂ ಮುಗಿದಾಗ ಓದಬೇಕಾದಂತಹದ್ದು. ಅದಕ್ಕೂ ಆರೋಗ್ಯಕ್ಕೂ ಯಾವ ಸಂಬಂಧವೂ ಇಲ್ಲ. ಅಲ್ಪಸ್ವಲ್ಪವೇನಾದರೂ ನಂಟು ಎಂಬುದಿದ್ದರೆ ಅದೇನಿದ್ದರೂ ಮಾನಸಿಕ ಆರೋಗ್ಯಕ್ಕೆ ಮಾತ್ರ’ ಎಂದು ಎನಿಸಬಹುದು. ಆದರೆ ವಸ್ತುಸ್ಥಿತಿ ಇದಲ್ಲ! ಸಿಗ್ಹಾರ್ಟ್ ರಾಷ್ಟ್ರೀಯ ಆರೋಗ್ಯ ಸೇವೆಯ ಜೊತೆಗೆ ‘ಪೊಯೆಟ್ರಿ ಫಾರ್ಮಸಿ’ಯನ್ನು ಜೋಡಿಸಿರುವ ಹಿಂದೆ ಬಲವಾದ ವೈಜ್ಞಾನಿಕ ಆಧಾರವಿದೆ. ದೇಹ-ಮನಸ್ಸು-ಮಿದುಳುಗಳನ್ನು, ಅವುಗಳ ಸಮಸ್ಯೆಗಳನ್ನು ಪ್ರತ್ಯೇಕವಾಗಿ ನೋಡಲಾಗದು; ಅವುಗಳ ಸ್ಥಿತಿ, ಕಾರ್ಯ ಒಂದನ್ನೊಂದು ಅವಲಂಬಿಸಿದೆ, ಮನಸ್ಸು-ಮಿದುಳುಗಳು ಕವಿತೆಯೊಂದನ್ನು ಓದಿ ಅರ್ಥಮಾಡಿಕೊಂಡು, ಅವರೊಡನೆ ಗುರುತಿಸಿಕೊಳ್ಳಲು ಸಾಧ್ಯವಾದರೆ, ಅದರಿಂದ ಉಂಟಾಗುವ ಬದಲಾವಣೆ ಇಡೀ ದೇಹಕ್ಕೆ, ಯಾವುದೇ ಆರೋಗ್ಯ ಸಮಸ್ಯೆಗೆ ಉಪಯುಕ್ತ ಎನಿಸಬಲ್ಲದು.

ಈ ವೈಜ್ಞಾನಿಕ ಆಧಾರದ ಹಿನ್ನೆಲೆಯಲ್ಲಿಯೇ ಕಾವ್ಯೌಷಧದಂಗಡಿಯಲ್ಲಿ ಖಿನ್ನತೆಗೆ, ಶೋಕಕ್ಕೆ, ಒತ್ತಡಕ್ಕೆ, ಈಗಷ್ಟೇ ಶಸ್ತ್ರಚಿಕಿತ್ಸೆಯಾಗಿರುವವರಿಗೆ, ಕ್ಯಾನ್ಸರ್ನಿಂದ ನರಳುವವರಿಗೆ, ಸಾವನ್ನು ಎದುರು ನೋಡಬೇಕಾದ ಗಂಭೀರ ಆರೋಗ್ಯ ಸಮಸ್ಯೆಗಳಿರುವವರಿಗೆ, ರಕ್ತದೊತ್ತಡವಿರುವವರಿಗೆ, ನಡಿಗೆಯಂತಹ ಆರೋಗ್ಯಕರ ನಡವಳಿಕೆಗಳನ್ನು ರೂಢಿಸಿಕೊಳ್ಳಲು ಆಗುತ್ತಿಲ್ಲ ಎನ್ನುವವರಿಗೆ , ಕಾಲು-ಕೈ ಮುರಿದಿರುವವರಿಗೆ ಇನ್ನೂ ಇಂತಹ ಎಷ್ಟೋ ಆರೋಗ್ಯದ ಸಮಸ್ಯೆಗಳಿಗೆ ಕ್ಯಾಪ್ಸೂಲ್, ಬಾಟಲಿ, ಮಾತ್ರೆಗಳ ಕವಚಗಳೊಳಗೆ ಹುದುಗಿರುವ ಕವಿತೆಗಳೆಂಬ ಸಾಮಗ್ರಿಯ ಔಷಧಿಗಳಿವೆ.

ನಮ್ಮ ಊರುಗಳಲ್ಲಿ ಸಿಗ್ಹಾರ್ಟ್ ತೆರೆದಂತಹ ಕಾವ್ಯೌಷಧದಂಗಡಿ ಇಲ್ಲದಿರಬಹುದು. ಆದರೆ ನಮ್ಮದೇ ಮನೆ ಮದ್ದುಗಳ ಕಪಾಟಿನಲ್ಲಿ ಅದರ ಪಕ್ಕವೇ ಕಾವ್ಯ ಮದ್ದುಗಳು ಪುಟ್ಟದೊಂದು ಬುಟ್ಟಿಯನ್ನಿರಿಸಿಕೊಳ್ಳುವುದು ಕಷ್ಟವೇನಲ್ಲ. ಅದು ಕನ್ನಡ, ಇಂಗ್ಲಿಷ್, ಅಥವಾ ಇನ್ಯಾವುದೇ ಭಾಷೆಯದ್ದೂ ಆಗಬಹುದು; ಜಗತ್ತಿನ ವಿವಿಧ ಭಾಷೆಗಳಿಂದ ಭಾಷಾಂತರವಾಗಿರುವ ನಮಗೆ ಸುಲಭವಾಗಿ ಮನಮುಟ್ಟುವ ಕವಿತೆಗಳೂ ಇರಬಹುದು. ನೋವು-ನರಳುವಿಕೆಗಳನ್ನು ಕಾವ್ಯಕ್ಕಿಂತ ಸಮರ್ಥವಾಗಿ ಹಿಡಿದಿಡುವುದು ಯಾವುದು? ಮತ್ತು ನೋವು ನರಳುವಿಕೆಗಳು ಜಗತ್ತಿನ ಎಲ್ಲೆಡೆಯೂ ಇವೆಯಷ್ಟೆ!

ಕಾವ್ಯೌಷಧದ ಇಂತಹ ಮನೆ ಮದ್ದುಗಳ ಕಪಾಟಿನಲ್ಲಿ ಸುಲಭವಾಗಿ ಸೇರಿಸಬಹುದಾದದ್ದು ಡಿ.ವಿ.ಜಿ.ಯವರ ಪುಟ್ಟ ಪುಸ್ತಕ ‘ಮಂಕು ತಿಮ್ಮನ ಕಗ್ಗ’. ನಾಲ್ಕು ಸಾಲುಗಳ ಚುಟುಕಾದ, ಬೇಗ ಅರ್ಥವಾಗುವ, ನಾವಿರುವ ಸಂದರ್ಭಕ್ಕೆ ಅನ್ವಯಿಸಿದರೆ ವಿಶೇಷ ಅರ್ಥಗಳನ್ನು ಹೊಳೆಯಿಸುವ ಕವಿತಾಗುಚ್ಛಗಳು ಮನಸ್ಸಿಗೆ ಸಾಂತ್ವನ ನೀಡುವ, ಹೀಗೆ ಮಾಡಿದರೆ ಒಳಿತು ಎಂದು ನಯವಾಗಿ ಹೇಳುವ ಈ ಕವಿತೆಗಳು ನೇರವಾಗಿಯೂ ಹೇಳುತ್ತವೆ; ಸೂಚಿಸುತ್ತವೆ; ಶಕ್ತಿಯಿದ್ದವನಿಗೆ ಪದಗಳ ಮಧ್ಯೆ ಹಲವು ವಿಶೇಷಾರ್ಥಗಳು ಕಾಣುವಂತೆ ಮಾಡುತ್ತವೆ. ವಚನಕಾರರ ವಚನಗಳು, ದಾಸಸಾಹಿತ್ಯದ ಹಲವು ಕೀರ್ತನೆಗಳು, ಆಧುನಿಕ ಯುಗದಲ್ಲಿ ಬಂದಿರುವ ಅದೆಷ್ಟೋ ಭಾವಸಾಂದ್ರತೆಯ ಕವಿತೆಗಳು ಇವುಗಳಲ್ಲಿ ಒಂದಿಷ್ಟನ್ನು ಆಯ್ದು ನಮ್ಮ ಬತ್ತಳಿಕೆಯಲ್ಲಿರಿಸಿಕೊಂಡರೆ ರೋಗಗಳು ಬಂದಾಗ ಔಷಧಗಳ ಜೊತೆಗೆ, ಕೆಲವೊಮ್ಮೆ ಔಷಧಗಳಿಲ್ಲದೆ ಕಾವ್ಯದ ಬಾಣಗಳನ್ನು ಬಿಟ್ಟು, ರೋಗವನ್ನು ಪರಿಣಾಮಕಾರಿಯಾಗಿ, ಬಹುಬೇಗ ದೂರ ಓಡಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.