ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಗ್ಯ: ಮಂಡಿನೋವಿನ ಮುಕ್ತಿಯ ಮಾರ್ಗಗಳು

Last Updated 24 ಆಗಸ್ಟ್ 2018, 19:30 IST
ಅಕ್ಷರ ಗಾತ್ರ

ನೀ ವು ಮಂಡಿನೋವಿನಿಂದ ಬಳಲುತ್ತಿದ್ದೀರಾ? ಮಂಡಿನೋವು ನಿಮ್ಮ ದೈನಂದಿನ ಚಟುವಟಿಕೆಗಳಿಗೆ ಅಡ್ಡಿಪಡಿಸುತ್ತಿದೆಯೇ? ನೋವಿನಿಂದ ರಾತ್ರಿ ನಿದ್ದೆ ಬರುತ್ತಿಲ್ಲವೇ? ನೀವು ಅಂದುಕೊಂಡ ಜಾಗಗಳಿಗೆ ಪ್ರವಾಸ ಮಾಡಲು ಆಗುತ್ತಿಲ್ಲವೇ? ಚಿಂತಿಸಿಬೇಕಿಲ್ಲ!

ಈ ಸಮಸ್ಯೆ ನಿಮ್ಮೊಬ್ಬರದ್ದಲ್ಲ... ಭಾರತದಲ್ಲಿ ಸುಮಾರು ಶೇ 15ರಷ್ಟು ಜನರುಆರ್ಥ್ರೈಟಿಸ್ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.ಎಂದರೆ 18ಕೋಟಿ ಜನರು ಈ ಸಮಸ್ಯೆಗೆ ತುತ್ತಾಗಿದ್ದಾರೆ.ಆರ್ಥ್ರೈಟಿಸ್ ಎಂದರೇನು?

‘ಆರ್ಥ್ರೈಟಿಸ್’ಅನ್ನು ‘ಸಂಧಿವಾತ’ ಎಂದೂ ಕರೆಯುತ್ತಾರೆ. ದೇಹದ ಎಲ್ಲ ಕೀಲುಗಳಲ್ಲಿ ‘ಕಾರ್ಟಿಲೇಜ್‌’ ಎಂಬ ಮೆದುವಾದ ಪದರವಿರುತ್ತದೆ. ಅದರ ಸವೆಯುವಿಕೆಯೇ ಆರ್ಥ್ರೈಟಿಸ್. ದೇಹದ ಯಾವ ಕೀಲು ಕೂಡ ಆರ್ಥ್ರೈಟಿಸ್‌ನಿಂದ ತೊಂದರೆಗೊಳಗಾಗಬಹುದು. ಅತ್ಯಂತ ಸಾಮಾನ್ಯವಾಗಿ ಮೊಣಕಾಲು ಇದರಿಂದ ನೋವಿಗೊಳಗಾಗುತ್ತದೆ.

ಆರ್ಥ್ರೈಟಿಸ್‌ಗೆ ಕಾರಣಗಳೇನು?
ಆರ್ಥ್ರೈಟಿಸ್‌ನಲ್ಲಿ ಹಲವು ಬಗೆಗಳಿವೆ. ಇದರಲ್ಲಿ ಅತ್ಯಂತ ಸಾಮಾನ್ಯವಾದದ್ದು ‘ಆಸ್ಟಿಯೋ ಆರ್ಥ್ರೈಟಿಸ್‌.’ ಇದನ್ನು ‘ವೇರ್ ಅ್ಯಂಡ್‌ ಟೇರ್ ಆರ್ಥ್ರೈಟಿಸ್’ ಎಂದೂ ಕರೆಯುತ್ತಾರೆ.

ಇದಲ್ಲದೆ ರ‍್ಯುಮಟಾಯ್ಡ್‌ ಆರ್ಥ್ರೈಟಿಸ್, ಸೋರಿಯಾಟಿಕ್‌ ಆರ್ಥ್ರೈಟಿಸ್, ಗೌಟಿ ಆರ್ಥ್ರೈಟಿಸ್ – ಹೀಗೆ ಹಲವಾರು ಕಾರಣಗಳಿಂದ ಕಾರ್ಟಿಲೇಜ್ ಪದರ ಹಾನಿಗೊಳಗಾಗಬಹುದು. ಮತ್ತೊಂದು ಕಾರಣ, ಪೋಸ್ಟ್ ಥರೋಮೆಟಿಕ್‌ ಆರ್ಥ್ರೈಟಿಸ್. ಇದು ಸಾಮಾನ್ಯವಾಗಿ ರಸ್ತೆ ಅಪಘಾತದಿಂದ ಸಂಭವಿಸಬಹುದು. ಕ್ರೀಡಾಪಟುಗಳು ಗಾಯಗೊಂಡಾಗಲೂ ಕಾರ್ಟಿಲೇಜ್ ಪದರ ಹಾನಿಗೆ ಒಳಗಾಗಬಹುದು.

ಇರುವಿಕೆ ತಿಳಿಯುವುದು ಹೇಗೆ?
ಆರ್ಥ್ರೈಟಿಸ್ ನಾಲ್ಕು ಹಂತಗಳಲ್ಲಿ ಸಾಗುತ್ತದೆ. ಮೊದಲನೆ ಹಂತದಲ್ಲಿ ನೋವು ಕಾಣಿಸಿಕೊಳ್ಳುವುದು. ಕೆಲವೊಮ್ಮೆ ಹೆಚ್ಚು ಕೆಲಸ ಮಾಡಿದಾಗ ಅಥವಾ ಓಡಾಟ ಮಾಡಿದಾಗ, ಅಲ್ಪ ಪ್ರಮಾಣದಲ್ಲಿ ಕಾಣಿಸಿಕೊಳ್ಳುತ್ತದೆ. ನಮ್ಮ ದೈನಂದಿನ ಚಟುವಟಿಕೆಗಳಿಗೆ ಇದು ಅಡ್ಡಿಪಡಿಸುವುದಿಲ್ಲ. ಕಾರ್ಟಿಲೇಜ್‌ ಪಾದರಸ ಸವೆಯುತ್ತಾ ಹೋದಂತೆ, ನೋವಿನ ಪ್ರಮಾಣ ಹೆಚ್ಚಾಗುತ್ತದೆ.ಕಿಲೋಮಿಟರ್‌ಗಟ್ಟಲೆ ನಡೆದರೂ ಬಾರದ ನೋವು, ಆಮೇಲೆ ಮನೆಯೊಳಗಿನ ಕೆಲಸಕ್ಕೂ ಅಡ್ಡಿಪಡಿಸಲಾರಂಭಿಸುತ್ತದೆ. ನಿಮ್ಮ ಮೊಣಕಾಲಿನಿಂದ ಶಬ್ದವೂ ಕೇಳಿಸಬಹುದು. ಮೆಟ್ಟಿಲುಗಳನ್ನು ಏರಲು ಕಷ್ಟವಾಗುತ್ತದೆ. ನೋವಿನ ಕಾರಣದಿಂದ ನಿದ್ದೆಗೂ ತೊಂದರೆಯಾಗಬಹುದು. ಕೊನೆಯ ಹಂತದಲ್ಲಿನ ಈ ನೋವು ಹಲವು ಬಾರಿ ಯಾವುದೇ ಮಾತ್ರೆ, ಔಷಧಗಳಿಂದಲೂ ಶಮನ ಆಗುವುದಿಲ್ಲ. ಆದರೆ ಸಮಾಧಾನದ ಸಂಗತಿಯೆಂದರೆ ಮೊದಲ ಹಂತದಿಂದ ನಾಲ್ಕನೆಯ ಹಂತ ತಲುಪಲು ಹಲವಾರು ವರ್ಷಗಳಾಗುತ್ತವೆ. ಯಾರು ಸರಿಯಾದ ಮುನ್ನೆಚ್ಚರಿಕೆ ವಹಿಸಿ ವೈದ್ಯರ ಸಲಹೆಗಳನ್ನು ಪಾಲಿಸುತ್ತಾರೋ, ಅವರು ಆರ್ಥ್ರೈಟಿಸ್ ಸಮಸ್ಯೆಯಿಂದ ಬಿಡುಗಡೆ ಪಡೆಯಬಹುದು.

ಯಾರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ?
ಆರ್ಥ್ರೈಟಿಸ್‌ಗೆ ಗಂಡು–ಹೆಣ್ಣೆಂಬ ಭೇದವಿಲ್ಲದಿದ್ದರೂ, ಹೆಂಗಸರು ಹೆಚ್ಚು ಈ ತೊಂದರೆಗೆ ತುತ್ತಾಗುತ್ತಾರೆ. ಸಾಮಾನ್ಯವಾಗಿ 40ವರ್ಷಗಳ ನಂತರ ಯಾವ ವಯಸ್ಸಿನವಲ್ಲಾದರೂ ಇದು ಕಾಣಿಸಿಕೊಳ್ಳಬಹುದು. ಇದರಿಂದನರಳುವ ಅನೇಕರು 50-70ವರ್ಷದವಾರಾಗಿರುತ್ತಾರೆ. ರ‍್ಯುಮಟಾಯ್ಡ್‌ ಆರ್ಥ್ರೈಟಿಸ್‌ನಂತಹ ಸಮಸ್ಯೆಗಳು 40ವರ್ಷಕಿಂತ ಕಿರಿಯರಲ್ಲೂ ಕಾಣಿಸಿಕೊಳ್ಳಬಹುದು.

ತಡೆಗಟ್ಟಲು ಸಾಧ್ಯವೇ?
ನಿಮಲ್ಲಿಆರ್ಥ್ರೈಟಿಸ್ ಸಮಸ್ಯೆ ಇದ್ದರೆ ಅದರ ಬೆಳವಣಿಗೆಯನ್ನು ನಿಧಾನಗೊಳಿಸಬಹುದು.ಅದರ ನಾಲ್ಕು ಸೂತ್ರಗಳು ಇಲ್ಲಿವೆ:

ದೇಹದ ಭಾರವನ್ನು ನಿಯಂತ್ರಣದಲ್ಲಿಡುವುದು: ಸ್ಥೂಲಕಾಯದಿಂದ ಮೊಣಕಾಲಿನ ಮೇಲಿನ ಭಾರ ಅಧಿಕವಾಗಿರುತ್ತದೆ. ಭಾರ ಅಧಿಕವಾದಂತೆ ಸವೆತ ಅಧಿಕವಾಗುತ್ತದೆ. ಸವೆತ ಹೆಚ್ಚಾದಂತೆ ನೋವು ಉಲ್ಬಣವಾಗುತ್ತದೆ. ಹಲವರಿಗೆ ಮಂಡಿನೋವಿನಿಂದ ನಡೆಯಲು ಸಾಧ್ಯವಾಗದೆ, ತೂಕ ತಗ್ಗಿಸಲು ಸಾಧ್ಯವಾಗುತ್ತಿರುವುದಿಲ್ಲ. ಇಂಥವರಿಗೆ ಅತ್ಯಂತ ಸರಳ ಹಾಗೂ ಪರಿಣಾಮಕಾರಿ ವ್ಯಾಯಮ ಎಂದರೆ ಸೈಕ್ಲಿಂಗ್.

ಸಕ್ಕರೆ ಕಾಯಿಲೆ ನಿಯಂತ್ರಣದಲ್ಲಿಡುವುದು: ರಕ್ತದಲ್ಲಿ ಗ್ಲೊಕೋಸ್‌ ಪ್ರಮಾಣ ಹೆಚ್ಚಾದಂತೆ, ಕಾರ್ಟಿಲೇಜ್‌ ಪದರದ ಸವೆತ ಹೆಚ್ಚಾಗುತ್ತದೆ.

ನಿಯಮಿತ ವ್ಯಾಯಾಮ: ವ್ಯಾಯಾಮದಿಂದ ತೊಡೆ ಹಾಗೂ ಕಾಲುಗಳಲ್ಲಿನ ಮಾಂಸಖಂಡಗಳು ಪುಷ್ಟಿಗೊಳ್ಳುತ್ತದೆ. ದೇಹದ ತೂಕ ಕಡಿಮೆಯಾಗುತ್ತದೆ. ದಿನಪ್ರತಿ ವಾಕಿಂಗ್/ ಸೈಕ್ಲಿಂಗ್ ಮಾಡುವುದರಿಂದ ಕೀಲುಗಳು ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತವೆ.

ಕೀಲುಗಳ ಮೇಲಿನ ಓವರ್‌ವೆಸ್ಟ್‌ ತಡೆಗಟ್ಟುವುದು: ಫುಟ್‍ಬಾಲ್, ಬ್ಯಾಸ್ಕೆಟ್‍ಬಾಲ್, ಮಂಡಿಯೂರಿ ಕುಳಿತು ಮಾಡುವ ಕೆಲಸಗಳು – ಇವೆಲ್ಲವನ್ನು ಕಡಿಮೆ ಮಾಡುವುದು ಉತ್ತಮ. ಹಾಗೆಂದಾಕ್ಷಣ ಈ ಕ್ರೀಡೆಗಳನ್ನು ಆಡಲೇ ಬಾರದಂದಲ್ಲ. ಆಡುವಾಗ ಮುನ್ನೆಚ್ಚರಿಕೆಗಳನ್ನು ವಹಿಸುವುದು ಒಳಿತು. ತೊಂದರೆಯಾದಲ್ಲಿ ಅಥವಾ ಗಾಯಗೊಂಡಲ್ಲಿ ಕೀಲುತಜ್ಞರನ್ನು ಸಂಪರ್ಕಿಸಬೇಕು.

ಚಿಕಿತ್ಸೆ ಏನು?
ಆರ್ಥ್ರೈಟಿಸ್‌ ಎಂದೊಡನೆ ಆನೇಕರು ಗಾಬರಿಗೊಳ್ಳುತ್ತಾರೆ. ತಮ್ಮ ಸಕ್ರಿಯ ಜೀವನಶೈಲಿ ಮುಗಿದೇಹೋಯಿತು ಎಂದುಕೊಳ್ಳುವವರು ಇದ್ದಾರೆ.ಮತ್ತೆ ಹಲವರು ಕೇಳುವ ಪ್ರಶ್ನೆ ‘ನನಗೆ ಶಸ್ತ್ರಚಿಕಿತ್ಸೆ ಅವಶ್ಯವೇ’ – ಎಂದು. ಆರ್ಥ್ರೈಟಿಸ್‌ ಎಂದಾಕ್ಷಣ ಶಸ್ತ್ರಚಿಕಿತ್ಸೆಯೇ ದಾರಿ ಎಂದಲ್ಲ. ಮೇಲೆ ತಿಳಿಸಿದಂತೆ ಆರ್ಥ್ರೈಟಿಸ್‌ ನಾಲ್ಕು ಹಂತದಲ್ಲಿ ಕ್ರಮೇಣ ಸಾಗುತ್ತದೆ.

ಪ್ರಾಥಮಿಕ ಹಂತದಲ್ಲೇ ಗುರುತಿಸಿದ್ದಲ್ಲಿ ಇದನ್ನು ಪರಿಣಾಮಕಾರಿಯಾಗಿ ನಿರ್ವಹಿಸಬಹುದು. ಅದರಿಂದ ಮೇಲೆ ತಿಳಿಸಿಕೊಟ್ಟ ಲಕ್ಷಣಗಳು ಕಾಣಿಸಿಕೊಂಡಲ್ಲಿ ಮೊಣಕಾಲುತಜ್ಞರನ್ನು ಕಾಣುವುದು ಒಳಿತು. ಸಮಸ್ಯೆಯ ಲಕ್ಷಣಗಳು ಮೊದಲ ಹಂತದಲ್ಲಿದ್ದರೆ ಸರಳವಾದ ನೋವಿನ ಗುಳಿಗೆಗಳು ಮತ್ತು ವ್ಯಾಯಮಗಳಿಂದಲೇ ಅನೇಕರು ನೋವಿನಿಂದ ಪರಿಹಾರ ಪಡೆಯುತ್ತಾರೆ.

ಎರಡನೇ ಹಂತದಲ್ಲಿ ಗುಳಿಗೆಗಳು ಮತ್ತು ವ್ಯಾಯಾಮದೊಂದಿಗೆ ಕೆಲವರಿಗೆ ಫಿಸಿಯೋಥೆರಪಿಯ ಅವಶ್ಯಕತೆ ಉಂಟಾಗಬಹುದು. ನಿಮ್ಮ ವೈದ್ಯರು ಮಂಡಿ ಪಟ್ಟಿ ಹಾಕಿಕೊಳ್ಳಲು ಸಲಹೆ ನೀಡಬಹುದು. ಒಮ್ಮೊಮ್ಮೆ collagen, glucosamine ಇನ್ನಿತರ ಗುಳಿಗೆಗಳನ್ನು ನಿಮ್ಮ ವೈದ್ಯರು ಸೂಚಿಸಬಹುದು.

ಮೂರನೆ ಹಂತಕ್ಕೆ ಬಂದಾಗ ಈ ಮೇಲಿನ ಯಾವುದೇ ವಿಧಾನವೂ ಪರಿಣಾಮಕಾರಿಯಾಗದಿರಹುದು. ಹೆಚ್ಚಿನ ಪರಿಣಾಮದ ಗುಳಿಗೆಗಳು ಅಗತ್ಯವಾಗಬಹುದು. ಹಲವು ಬಗೆಯ ಇಂಜೆಕ್ಷನ್‌ಗಳು ಈಗ ಲಭ್ಯವಿವೆ.Crotison, hyaluronic acid– ಇವು ಕೆಲವು ಉದಾಹರಣೆ. ಈ ಇಂಜೆಕ್ಷನ್‌ಗಳು ವಿಭಿನ್ನವಾಗಿ ಕಾರ್ಯ ನಿರ್ವಹಿಸುತ್ತವೆ. ಆದರೆ ಇವನ್ನು ಸ್ವೀಕರಿಸುವ ಮುನ್ನ ಕೀಲುತಜ್ಞರೊಂದಿಗೆ ಸಮಾಲೋಚಿಸಲೇ ಬೇಕು.

ಆರ್ಥ್ರೈಟಿಸ್‌ ನಾಲ್ಕನೇ ಹಂತ ತಲುಪುವಷ್ಟರಲ್ಲಿ ಅನೇಕರಿಗೆ ತಮ್ಮ ದೈನಂದಿನ ಚಟುವಟಿಕೆಗಳನ್ನು ನಡೆಸಲು ತೊಂದರೆಯಾಗುತ್ತಿರುತ್ತದೆ. ಎಷ್ಟೇ ಔಷಧಗಳನ್ನು ಸ್ವೀಕರಿಸಿದರೂಯಾವುದೇ ಪರಿಣಾಮಗಳಿರುವುದಿಲ್ಲ. ಬಹು ಮಂದಿ ತಮ್ಮ ಮನೆಯೊಳಗೆ ನಡೆಯಲು ಕಷ್ಟಪಡುತ್ತಾರೆ. ಕಳಿತುಕೊಳ್ಳಲು, ನಿಲ್ಲಲೂ ಸಾಧ್ಯವಾಗದಂತಹ ನೋವು ರಾತ್ರಿಯ ನಿದ್ದೆಗೂ ಅಡ್ಡಪಡಿಸುತ್ತದೆ. ಅನೇಕ ಬಾರಿ ಇಂಜೆಕ್ಷನ್‌, ಫಿಸಿಯೋಥೆರಪಿ ಕೂಡ ಉಪಯೋಗಕ್ಕೆ ಬರುವುದಿಲ್ಲ. ಆಗ ಶಸ್ತ್ರಚಿಕಿತ್ಸೆಯ ಅವಶ್ಯಕತೆ ಬರಬಹುದು.

ಆರ್ಥ್ರೈಟಿಸ್‌ ಅನ್ನು ಪರಿಣಾಮಕಾರಿಯಾಗಿ ಎದುರಿಸಲು ಅನೇಕ ಬಗೆಯ ಶಸ್ತ್ರಚಿಕಿತ್ಸೆಗಳು ಈಗ ಲಭ್ಯ. ಕೀಲುಬದಲಾವಣೆ ಮಾತ್ರವಲ್ಲದೆ ನಾನಾ ಬಗೆಯ ‘ಜಾಯಿಂಟ್‌ ಪ್ರಿಸರ್‌ವೇಷನ್‌’ ಶಸ್ತ್ರಚಿಕಿತ್ಸೆಗಳಿಂದ ನೋವು ನಿವಾರಣೆಯಾಗಿ, ಮತ್ತೆ ನಿತ್ಯದ ಚಟುವಟಿಕೆಗಳನ್ನು ನಿರ್ವಹಿಸಲು ಸಾಧ್ಯವಾಗುತ್ತದೆ.
**
ಆರ್ಥ್ರೈಟಿಸ್‌ಗೆ ಪರೀಕ್ಷೇಗಳಿವೆಯೇ?
ಅತ್ಯಂತ ಸಾಮಾನ್ಯ ಹಾಗೂ ಸರಳವಾದ ಪರೀಕ್ಷೆ ಎಂದರೆ ಎಕ್ಸ್‌ರೇ. ಮೊಣಕಾಲುತಜ್ಞರು ಸಮಸ್ಯೆಗಳನ್ನು ಆಲಿಸಿ ಸೂಕ್ಷ್ಮವಾಗಿ ಪರೀಕ್ಷಿಸುತ್ತಾರೆ. ಎಕ್ಸ್‌ರೇ ಸಹಾಯದಿಂದ ಆರ್ಥ್ರೈಟಿಸ್‌ ಮತ್ತು ಅದರ ಹಂತವನ್ನು ತಿಳಿದುಕೊಳ್ಳಬಹುದು. ಕೆಲವು ಬಾರಿ ಎಂ.ಆರ್.ಐ. ಸ್ಕ್ಯಾನ್‍ಗೂ ಸೂಚಿಸಬಹುದು. ಕೆಲವೊಮ್ಮೆ ವೈದ್ಯರು ರಕ್ತಪರೀಕ್ಷೆಗಳನ್ನು ಮಾಡಿಸಲು ಸಲಹೆ ನೀಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT