ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

CAR T-cell: ಕ್ಯಾನ್ಸರ್ ರೋಗಿಗಳಿಗೆ ಸ್ವದೇಶಿ ನಿರ್ಮಿತ ಅಗ್ಗದ ಚಿಕಿತ್ಸೆ– ಮುರ್ಮು

Published 4 ಏಪ್ರಿಲ್ 2024, 10:40 IST
Last Updated 4 ಏಪ್ರಿಲ್ 2024, 10:40 IST
ಅಕ್ಷರ ಗಾತ್ರ

ಮುಂಬೈ: ಕ್ಯಾನ್ಸರ್‌ ಚಿಕಿತ್ಸೆಗಾಗಿ ಸ್ವದೇಶಿ ನಿರ್ಮಿತ NexCAR19 ಎಂಬ ಸಿಎಆರ್‌ ಟಿ–ಸೆಲ್ ಥೆರಪಿ ಚಿಕಿತ್ಸೆಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಗುರುವಾರ ರಾಷ್ಟ್ರಕ್ಕೆ ಸಮರ್ಪಿಸಿದ್ದು, ‘ಇದು ರೋಗಿಗಳ ಪಾಲಿಗೆ ಭರವಸೆಯ ಬೆಳಕಾಗಿದೆ’ ಎಂದಿದ್ದಾರೆ.

ಮಹಾರಾಷ್ಟ್ರದ ಪೊವೈನಲ್ಲಿರುವ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಬಾಂಬೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸ್ವದೇಶಿ ನಿರ್ಮಿತ ತಂತ್ರಜ್ಞಾನವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ‘ಮೇಕ್ ಇನ್ ಇಂಡಿಯಾ ಪರಿಕಲ್ಪನೆಗೆ ಇದುವೇ ಸ್ಪಷ್ಟ ಉದಾಹರಣೆ’ ಎಂದಿದ್ದಾರೆ.

ಐಐಟಿ ಬಾಂಬೆ ಮತ್ತು ಟಾಟಾ ಸ್ಮಾರಕ ಕೇಂದ್ರ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಈ ನೂತನ ಸಾಧನವು ಧಾತು ಆಧಾರಿತ ಚಿಕಿತ್ಸೆಯಾಗಿದೆ. ಇದು ಹಲವು ಬಗೆಯ ಕ್ಯಾನ್ಸರ್ ಕಾರಕ ರೋಗವನ್ನು ಗುಣಪಡಿಸುವಲ್ಲಿ ಪರಿಣಾಮಕಾರಿಯಾಗಿದೆ. 

‘ಈ ಚಿಕಿತ್ಸೆಯು ವೈದ್ಯಕೀಯ ವಿಜ್ಞಾನ ಕ್ಷೇತ್ರದಲ್ಲೇ ಅತ್ಯಂತ ಆಧುನಿಕ ಮತ್ತು ಪರಿಣಾಮಕಾರಿ ಎಂದು ಹೇಳಲಾಗಿದೆ. ಇದನ್ನು ಪಡೆಯಲು ರೋಗಿಗಳಿಗೆ ತಗಲುವ ವೆಚ್ಚವು ಗಣನೀಯವಾಗಿ ಕಡಿಮೆಯಾಗಲಿದೆ’ ಎಂದು ರಾಷ್ಟ್ರಪತಿ ಮುರ್ಮು ಹೇಳಿದ್ದಾರೆ.

‘ಕ್ಯಾನ್ಸರ್ ವಿರುದ್ಧದ ಹೊರಾಟದಲ್ಲಿ ಭಾರತದ ಮೊಟ್ಟ ಮೊದಲ ಜೀನ್ ಚಿಕಿತ್ಸೆಯು ಈ ಕ್ಷೇತ್ರದಲ್ಲಿ ಮಹತ್ವದ ಪ್ರಗತಿಯಾಗಿದೆ. CAR T-cell therapy ಎಂದು ಕರೆಯಲಾಗುವ ಈ ಚಿಕಿತ್ಸೆಯು ಎಲ್ಲರಿಗೂ ಲಭ್ಯ ಮತ್ತು ಕೈಗೆಟಕುವ ದರದಲ್ಲಿ ಸಿಗಲಿದೆ. ಹೀಗಾಗಿ ಕ್ಯಾನ್ಸರ್ ಎದುರಿಸುವ ನಿಟ್ಟಿನಲ್ಲಿ ಭರವಸೆಯ ಬೆಳಕಾಗಿದೆ’ ಎಂದಿದ್ದಾರೆ.

ಟಾಟಾ ಸ್ಮಾರಕ ಕೇಂದ್ರದ ನಿರ್ದೇಶಕ ಸುದೀಪ್ ಗುಪ್ತಾ ಮಾತನಾಡಿ, ‘ಸಿಎಆರ್‌ ಟಿ–ಸೆಲ್ ಥೆರಪಿ ಎಂಬುದು ಅತ್ಯಂತ ದುಬಾರಿ ಚಿಕಿತ್ಸೆಯಾಗಿದ್ದು, ಇದು ಸಾಮಾನ್ಯರಿಗೆ ಗಗನ ಕುಸುಮವಾಗಿತ್ತು. ಆದರೆ NexCAR19 ಹೆಸರಿನಲ್ಲಿ ಪರಿಚಯಿಸುತ್ತಿರುವ ಇದೇ ಚಿಕಿತ್ಸೆಯು ಸ್ವದೇಶಿಯಾಗಿದ್ದು, ಹತ್ತನೇ ಒಂದು ಭಾಗದಷ್ಟು ಖರ್ಚು ಕಡಿಮೆಯಾಗಲಿದೆ. ಭಾರತದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲೂ ಈ ಚಿಕಿತ್ಸೆ ಲಭ್ಯ’ ಎಂದಿದ್ದಾರೆ.

ಬಾಂಬೆ ಐಐಟಿ ನಿರ್ದೇಶಕ ಪ್ರೊ. ಸುಭಾಶಿಸ್ ಚೌಧರಿ ಮಾತನಾಡಿ, ‘ಕ್ಯಾನ್ಸರ್‌ ರೋಗಿಗಳು ಈ ಮೊದಲು ಇದೇ ಚಿಕಿತ್ಸೆ ಪಡೆಯಲು ₹4 ಕೋಟಿ ಖರ್ಚು ಮಾಡಬೇಕಿತ್ತು. ಆದರೆ ಕಡಿಮೆ ಖರ್ಚಿನಲ್ಲಿ ಇದೇ ಚಿಕಿತ್ಸೆ ಲಭ್ಯವಾಗುವಂತೆ ಮಾಡುವ ಮೂಲಕ ಜಾಗತಿಕ ಮಟ್ಟದಲ್ಲಿ ಭಾರತದ ಹೆಸರು ಛಾಪು ಮೂಡಿಸುವಂತೆ ವಿಜ್ಞಾನಿಗಳು ಮಾಡಿದ್ದಾರೆ. ಜೆನೆಟಿಕ್ ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಇದೊಂದು ಪರಿಣಾಮಕಾರಿ ಆವಿಷ್ಕಾರವಾಗಿದೆ. ಇದು ಕೇವಲ ವೈಜ್ಞಾನಿಕ ಆವಿಷ್ಕಾರವಷ್ಟೇ ಅಲ್ಲದೇ, ಪ್ರಾಯೋಗಿಕವಾಗಿಯೂ ಪರಿಣಾಮಕಾರಿಯಾಗಿದೆ. NexCAR19 ಚಿಕಿತ್ಸೆಯು ಹಲವರನ್ನು ಉಳಿಸಲಿದೆ. ಜತೆಗೆ ಹಲವರ ಕಣ್ಣೀರು ಒರೆಸಲಿದೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT