ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive | ಸ್ತನ ಕ್ಯಾನ್ಸರ್ ಮತ್ತು ಯೋಗ

Last Updated 11 ಅಕ್ಟೋಬರ್ 2020, 2:46 IST
ಅಕ್ಷರ ಗಾತ್ರ

ಕ್ಯಾನ್ಸರ್‌ ಮೂರಕ್ಷರ ಕೇಳಿದರೇನೇ ಹೆಚ್ಚಿನವರಿಗೆ ದಂಗು ಬಡಿಯುತ್ತದೆ. ಅದರಲ್ಲೂ ತಮ್ಮದೇ ದೇಹಕ್ಕೆ ಕ್ಯಾನ್ಸರ್‌ ಬಂದರಂತೂ ನಿಂತಲ್ಲೇ ಗುಂಡಿಗೆಬಡಿತ ಏರಿ ಕುಸಿದು ಹೋಗುವವರೇ ಹೆಚ್ಚು. ಇದಕ್ಕೆ ಕಾರಣ ಕ್ಯಾನ್ಸರ್‌ ಬಗೆಗೆ ಜನರಲ್ಲಿ ಮನೆ ಮಾಡಿರುವ ಘೋರ ಭಯ. ಇಂಥ ಭಯಕ್ಕೆ ಕಾರಣ ಮೊದಲಿನಿಂದಲೂ ಕ್ಯಾನ್ಸರ್‌ ಎಂದರೆ ಸಾವು, ಅದರ ಚಿಕಿತ್ಸೆಯಿಂದ ಉಂಟಾಗುವ ಅಡ್ಡಪರಿಣಾಮಗಳ ನೋವು, ಯಾತನೆ. ಇನ್ನು ಮೈಮೇಲಿನ ಕೂದಲೆಲ್ಲ ಉದುರಿ, ಬೋಳಾಗುವ ತಲೆ ಇವೆಲ್ಲ ಮನುಷ್ಯನನ್ನು ಸಹವಾಗಿ ಅಧೀರಗೊಳಿಸಲಿವೆ. ನಿಜ; ಇವೆಲ್ಲ ಭಯ ಪಡುವ ವಿಚಾರವೇ. ಕ್ಯಾನ್ಸರ್‌ ಬಂದರೆ ತಮ್ಮ ಪರಿಸ್ಥಿತಿ ಇದಕ್ಕಿಂತ ಭಿನ್ನವಲ್ಲ ಎಂಬ ಕಲ್ಪನೆಯೇ ಮನಸ್ಸನ್ನು ಮತ್ತಷ್ಟು ವಿಚಲಿತಗೊಳಿಸಲಿದೆ.

ಅಷ್ಟಕ್ಕೂ ಕ್ಯಾನ್ಸರ್‌ ಬಂದರೆ ನಾವೇಕೆ ಭಯ ಪಡಬೇಕು? ಸತ್ತೇ ಹೋಗುತ್ತೆನೆಂದುಕೊಂಡು ವಿಚಲಿತರಾಗಬೇಕು? ನಮ್ಮ ಮನಸ್ಸು ಗಟ್ಟಿಯಾಗಿದ್ದರೆ ಭಯವೂ ಪಡಬೇಕಿಲ್ಲ. ಸಾಯ್ತೆನೆ ಎಂದು ವಿಚಲಿತರಾಗಬೇಕೂ ಇಲ್ಲ. ಕ್ಯಾನ್ಸರ್‌ ಯಾರಿಗೆ ಬೇಕಾದರೂ ಬರಬಹುದು. ದುರ್ಬಲ ಮನಸ್ಸಿನವರಿಂದ ಹಿಡಿದು ಗಟ್ಟಿ ಮನಸ್ಸಿನವರು ಎಲ್ಲರನ್ನೂ ಕಾಡಬಹುದು. ಹೀಗೆ ಧುತ್ತೆಂದು ಬರುವ ಕ್ಯಾನ್ಸರ್‌ಗೆ ದುರ್ಬಲ ಮನದವರು ಬಲಿಯಾದರೆ, ಗಟ್ಟಿ ಮನಸ್ಸಿನವರು ಗೆಲ್ಲುತ್ತಾರೆ. ಅದರಲ್ಲೂ ಮಹಿಳೆಯರನ್ನು ಕಾಡುವ ಸ್ತನ ಕ್ಯಾನ್ಸರ್ ಪ್ರಮಾಣ‌ ಹೆಚ್ಚುತ್ತಲೇ ಸಾಗಿದೆ. ಆದರೆ ಸಾವಿನ ಪ್ರಮಾಣ ಕಡಿಮೆಯಾಗುತ್ತಿರುವುದು ಸಮಾಧಾನದ ಸಂಗತಿ.

ಅಮ್ಮನಿಗೆ ಸ್ತನ ಕ್ಯಾನ್ಸರ್‌ ಇದ್ದರೆ ಮಗಳಿಗೆ ಬರಲಿದೆ, ಮಕ್ಕಳಿಗೆ ಹಾಲುಡಿಸದಿದ್ದರೆ ಬರಲಿದೆ, ಬೇಗ ಋತುಮತಿಯಾದರೆ, ತಡವಾಗಿ ನಿಲ್ಲುವ ಮುಟ್ಟು, ಬೊಜ್ಜಿನ ಸಮಸ್ಯೆ ಇದ್ದರೆ ಇಂಥ ಪ್ರಮುಖ ಸಂಗತಿಗಳು ಸ್ತನ ಕ್ಯಾನ್ಸರ್‌ ಸಂಶೋಧನೆಯಲ್ಲಿ ಕಂಡುಕೊಂಡ ಹಲವು ಕಾರಣಗಳಾಗಿವೆ.ಸ್ತನ ಕ್ಯಾನ್ಸರ್‌ಗೆ ಇಂಥ ಹತ್ತಾರು ಕಾರಣಗಳಿದ್ದರೂ ಎಲ್ಲವನ್ನು ಒಪ್ಪಲು ಸಾಧ್ಯವಿಲ್ಲ. ನನ್ನ ಮಗ ಮೂರು ವರ್ಷ ಒಂದೂವರೆ ತಿಂಗಳು ಎದೆ ಹಾಲು ಕುಡಿದಿದ್ದ. ಆದರೂ ನನಗೆ ಸ್ತನ ಕ್ಯಾನ್ಸರ್‌ ಕಾಡಿತು. ತಜ್ಞರಲ್ಲಿ ಈ ವಿಚಾರ ಮುಂದಿಟ್ಟರೆ ಉತ್ತರ ಸಿಗಲಿಲ್ಲ, ಅದು ಒತ್ತಟ್ಟಿಗಿರಲಿ.

ಇಂದಿನ ಒತ್ತಡಭರಿತ ಜೀವನ ಕೂಡ ಸ್ತನ ಕ್ಯಾನ್ಸರ್‌ಗೆ ದೊಡ್ಡ ಕಾರಣ ಪಡೆದುಕೊಳ್ಳುತ್ತಿವೆ. ಮನೆ ಒಳ ಹೊರಗೂ ದುಡಿಯುವ ಮಹಿಳೆ ಸಹಜವಾಗಿಯೇ ಒತ್ತಡಕ್ಕೆ ಒಳಗಾಗುತ್ತಾಳೆ. ಆ ಒತ್ತಡ ಆಕೆಯ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿರುವುದು ಸುಳ್ಳಲ್ಲ. ಒಂದು ವೇಳೆ ಸ್ತನ ಕ್ಯಾನ್ಸರೇ ಬಂದಿತೆಂದು ಅಂದುಕೊಳ್ಳಿ. ಅದನ್ನು ಧೈರ್ಯವಾಗಿ ಹಿಮ್ಮೆಟ್ಟಲು ನಮ್ಮ ಬತ್ತಳಿಕೆಯಲ್ಲಿ ಒಂದಷ್ಟು ಅಸ್ತ್ರಗಳನ್ನು ಸಿದ್ಧವಾಗಿಟ್ಟುಕೊಳ್ಳುವುದು ಒಳ್ಳೆಯದು. ಇವೆಲ್ಲ ಪುರಾಣಗಳಲ್ಲಿ ಓದಿದ ಬಾಣಗಳಲ್ಲ. ಬದಲಿಗೆ ಆತ್ಮವಿಶ್ವಾಸ, ಮನೋಬಲ ಅಂದರೆ ಗಟ್ಟಿ ಮನಸ್ಸು. ಕೆಲವರಿಗೆ ಅದು ಹುಟ್ಟಿನಿಂದ ಬರಬಹುದು. ಇನ್ನೂ ಹಲವರು ಅದನ್ನು ಸ್ವಯಂ ವೃದ್ಧಿಸಿಕೊಳ್ಳಬೇಕಿದೆ.

ಎಲ್ಲಕ್ಕೂ ಮೂಲ ಮನಸ್ಸೇ ಆಗಲಿದೆ. ಮನಸ್ಸಿನಲ್ಲಿ ಸದಾ ಹೊಯ್ದಾಟ, ಆತಂಕ, ಒತ್ತಡ ಇದ್ದಲ್ಲಿ ಅದು ಕ್ಯಾನ್ಸರ್‌ನಂಥ ಕಾಯಿಲೆಗಳಿಗಗೂ ಮೂಲ ಕಾರಣವಾಗಬಲ್ಲದು. ಮನಸ್ಸಿನ ವಿಚಲಿತದಿಂದ ಹಾರ್ಮೋನ್‌ಗಳ ವ್ಯತ್ಯಾಸವಾಗಿ ಅದು ಬೊಜ್ಜಿಗೆ ದಾರಿಯಾಗಿ, ಆ ಮೂಲಕ ಸ್ತನ ಕ್ಯಾನ್ಸರ್‌ಗೂ ರಹದಾರಿ ಪಡೆಯಬಹುದು ಎಂಬುದು ವರದಿಯಾಗಿದೆ. ಆದ್ದರಿಂದ ಸ್ತನ ಕ್ಯಾನ್ಸರ್‌ ಸಂತ್ರಸ್ತರು ಕ್ಯಾನ್ಸರ್‌ ಮರುಕಳಿಸದಂತೆ ನಿಗಾಯಿಡಲು ಬೊಜ್ಜಿನಿಂದ ದೂರವಿರುವುದು ಮುಖ್ಯ.

ಮನಸ್ಸನ್ನು ನಮ್ಮ ಹತೋಟಿಯಲ್ಲಿಟ್ಟುಕೊಂಡಲ್ಲಿ ಯಾವುದೇ ಕಾಯಿಲೆಗಳನ್ನು ಧೈರ್ಯವಾಗಿ ಗೆಲ್ಲಬಹುದು. ದೂರವಿಡಬಹುದು. ಮನಸ್ಸನ್ನು ಹದಗೊಳಿಸಲು ಒಂದಷ್ಟು ದಾರಿಗಳಿವೆ. ಪ್ರಮುಖವಾಗಿ ಯಾವುದೇ ಉದ್ವೇಗಕ್ಕೆ ಒಳಗಾಗದೇ ಶಾಂತವಾಗಿರಲು ಮನಸ್ಸನ್ನು ಪಳಗಿಸಬೇಕು. ಅದು ಅಷ್ಟು ಸುಲಭವೂ ಅಲ್ಲ; ಕಷ್ಟವೂ ಅಲ್ಲ. ಮನಸ್ಸಿದ್ದರೆ ಮಾರ್ಗ ಎಂಬುದು ಎಲ್ಲರಿಗೂ ಗೊತ್ತು. ಯೋಗ, ಧ್ಯಾನ, ಮುದ್ರೆ, ಪ್ರಾಣಾಯಾಮಗಳ ಸಾಧನೆಯಿಂದ ಮನಸ್ಸನ್ನು ಹತೋಟಿಯಲ್ಲಿಡಲುಸಾಧ್ಯ. ಆದಷ್ಟು ಮನಸ್ಸನ್ನು ಉಲ್ಲಸಿತವಾಗಿರುವಂತೆ ನೋಡಿಕೊಳ್ಳಬೇಕು. ಅದಕ್ಕಾಗಿ ಬೆಳಗಿನ ನಡಿಗೆ ಕೂಡ ಉತ್ತಮ ಮಾರ್ಗ. ಯೋಗ, ವ್ಯಾಯಾಮ, ನಡಿಗೆಯಿಂದ ಬೊಜ್ಜನ್ನು ದೂರವಿಡಬಹುದು. ಅವು ಊಟ, ನಿದ್ದೆಯಂತೆ ಜೀವನದ ಭಾಗವಾಗಲಿ. ಆಗ ಕ್ಯಾನ್ಸರ್‌ ಮಾತ್ರವಲ್ಲದೆ, ಯಾವುದೇ ತೆರನಾದ ಕಾಯಿಲೆ ಬಂದರೂ ಆತ್ಮವಿಶ್ವಾಸದಿಂದ, ಧೈರ್ಯದಿಂದ ಹಿಮ್ಮೆಟ್ಟಿಸಲು ಸಾಧ್ಯವಿದೆ.

ಕ್ಯಾನ್ಸರ್‌ ಮತ್ತು ಮೊನೊಪಾಸ್‌

ಮಹಿಳೆಯರ ಜೀವನದಲ್ಲಿ ಮೊನೊಪಾಸ್‌ ಮಹತ್ವದ ಘಟ್ಟ. 40–50ನೇ ವಯಸ್ಸಿನ ನಡುವಿನಲ್ಲಿ ಪ್ರತಿ ಆರೋಗ್ಯವಂತ ಮಹಿಳೆಯರೂ ಎದುರಿಸಬೇಕಾದ ಸಹಜ ಕ್ರಿಯೆ ಮೊನೊಪಾಸ್‌. ಈ ಸಂದರ್ಭದಲ್ಲಿ ಮಹಿಳೆಯರ ಮಾನಸಿಕತೆಯಲ್ಲಿ ಏರು ಪೇರಾಗಲಿದೆ. ದೇಹದ ತೂಕ ಹೆಚ್ಚಲಿದೆ. ಹೆಚ್ಚಿನವರು ಖಿನ್ನತೆಗೂ ಒಳಗಾಗುತ್ತಾರೆ. ಆದರೆ ಕ್ಯಾನ್ಸರ್‌ ಚಿಕಿತ್ಸೆಗೆ ಕಿಮೋ ಇಂಜೆಕ್ಷನ್‌ ತೆಗೆದುಕೊಳ್ಳುವ ಮಹಿಳೆಯರಿಗೆ ಅದರ ಅಡ್ಡಪರಿಣಾಮದಿಂದ ಮುಟ್ಟು ನಿಂತೇ ಹೋಗಲಿದೆ. ರೋಗಿ 30ರಿಂದ35 ವರ್ಷದವರಾಗಿದ್ದರೆ 10 ವರ್ಷ ಮೊದಲೇ ಅವರಿಗೆ ಮೊನೊಪಾಸ್‌ ಕಾಡಲಿದೆ. ಇಂಥ ಪರಿಸ್ಥಿತಿಯನ್ನು ಎದುರಿಸುವಾಗ 10 ವರ್ಷದ ನಂತರ ಎದುರಾಗಬಹುದಾದ ಬೊಜ್ಜಿನ ಸಮಸ್ಯೆಯನ್ನು ಮೊದಲೇ ಒಪ್ಪಿಕೊಳ್ಳಬೇಕಾದ ಅನಿವಾರ್ಯತೆ. ಇಂಥ ಸಂದಿಗ್ಧತೆಯಿಂದ ದೂರವಿರಲು ನಡಿಗೆ, ವ್ಯಾಯಾಮ, ಯೋಗವನ್ನು ನಿತ್ಯವೂ ಪಾಲಿಸಲೇಬೇಕು. ಇಲ್ಲವಾದಲ್ಲಿ ಕ್ಯಾನ್ಸರ್ ಮರುಕಳಿಸುವ ಭಯ ಕಾಡದೇ ಇರದು.

ಹೆಚ್ಚಿದ ಸ್ತನಕ್ಯಾನ್ಸರ್‌; ಕುಗ್ಗಿದ ಮರಣ ಪ್ರಮಾಣ

ಹತ್ತು ವರ್ಷಗಳಿಂದೀಚೆಗೆ ಸ್ತನ ಕ್ಯಾನ್ಸರ್‌ ಪ್ರಮಾಣ ಹೆಚ್ಚಿದೆ. ಅದರಲ್ಲೂ ನಗರ ಪ್ರದೇಶದಲ್ಲಿ ಹೆಚ್ಚು ಕಂಡು ಬರುತ್ತಿದೆ. ಸರ್ವೆ ಪ್ರಕಾರ 30ರಿಂದ 60 ವಯಸ್ಸಿನ ಮಿತಿಯಲ್ಲಿರುವವರಿಗೆ ಸ್ತನ ಕ್ಯಾನ್ಸರ್‌ ಹೆಚ್ಚು ಬಾಧಿಸುತ್ತಿದೆ. ಆದರೆ ಅದರಿಂದ ಉಂಟಾಗುವ ಸಾವಿನ ಪ್ರಮಾಣ ಕಡಿಮೆಯಾಗಿದೆ. ಇದು ಸಮಾಧಾನಕರ ಸಂಗತಿ. ಇದಕ್ಕೆ ಕಾರಣ ಸ್ತನ ಕ್ಯಾನ್ಸರ್‌ ಕುರಿತು ಹೆಚ್ಚಿದ ಜಾಗೃತಿ ಹಾಗೂ ಸ್ಕ್ರೀನಿಂಗ್‌. ಸ್ಕ್ರೀನಿಂಗ್‌ನಿಂದ ಕಾಯಿಲೆ ಆರಂಭದ ಹಂತದಲ್ಲೇ ಸ್ತನ ಕ್ಯಾನ್ಸರ್‌ ಪತ್ತೆಯಾಗುವುದರಿಂದ ರೋಗಿ ಗುಣಮುಖರಾಗಿ ಸಹಜ ಜೀವನ ಸಾಗಿಸುವಂತಾಗಿದೆ. ಆರಂಭಿಕ ಹಂತದಲ್ಲೇ ಕ್ಯಾನ್ಸರ್‌ ಪತ್ತೆಯಾಗುವುದರಿಂದ ಸಾವಿನ ಸಂಖ್ಯೆ ಕಡಿಮೆಯಾಗಲು ಕಾರಣ ಎನ್ನುತ್ತಾರೆ ಹುಬ್ಬಳ್ಳಿಯ ಎಚ್‌ಸಿಜಿ ಎನ್‌ಎಂಆರ್‌ ಕ್ಯಾನ್ಸರ್‌ ಸೆಂಟರ್‌ನ ರೆಡಿಯೇಷನ್‌ ಅಂಕಾಲೊಜಿಸ್ಟ್ ಡಾ.ವಿನಯ ಮುತ್ತಗಿ.

ಕ್ಯಾನ್ಸರ್‌ ತಾಯಿಯಿಂದ ಮಗಳಿಗೆ ವಂಶವಾಹಿನಿಯಾಗಿ ಬರುವ ಸಾಧ್ಯತೆ ಹೆಚ್ಚಿದೆ. ಸ್ತನದಲ್ಲಿ, ಕಂಕುಳ ಭಾಗದಲ್ಲಿ ಗಂಟುಗಳು ಕಂಡು ಬಂದಲ್ಲಿ, ಸ್ತನದ ಚರ್ಮದ ಬಣ್ಣ, ಗಾತ್ರ ಬದಲಾದಲ್ಲಿ, ಸ್ತನದಿಂದ ದ್ರವ ರೂಪದ ಒಸರುವಿಕೆ ಕಂಡುಬಂದಲ್ಲಿ, ಸ್ತನ ತೊಟ್ಟು ಒಳಕ್ಕೆ ಎಳೆದಂತಾದರೆ ತಕ್ಷಣ ವೈದ್ಯರನ್ನು ಕಾಣಿರಿ. ಕ್ಯಾನ್ಸರ್‌ ಮಾರಕ ರೋಗವಾದರೂ, ಮೊದಲೇ ಪತ್ತೆ ಹಚ್ಚಿ, ಸೂಕ್ತ ವೈದ್ಯಕೀಯ ಚಿಕಿತ್ಸೆ ಪಡೆದರೆ ಗುಣಮುಖರಾಗುವುದು ಖಂಡಿತ ಎನ್ನುತ್ತಾರೆ ಡಾ.ವಿನಯ ಮುತ್ತಗಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT