ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಲೆನೋವಿಗೆ ಕಾರಣಗಳು ಹಲವು

Last Updated 20 ಡಿಸೆಂಬರ್ 2021, 19:30 IST
ಅಕ್ಷರ ಗಾತ್ರ

ತಲೆ‌ನೋವು ಅಥವಾ ಶಿರಶೂಲ‌. ಪ್ರತಿಯೊಬ್ಬರೂ ಜೀವನದಲ್ಲಿ ಒಮ್ಮೆಯಾದರೂ ಈ ನೋವನ್ನು ಅನುಭವಿಸಿಯೇ ಇರುತ್ತಾರೆ! ಅದು ಜೀವನಶೈಲಿಯಲ್ಲಾದ ಬದಲಾವಣೆಯಿಂದಾಗಿಯೋ, ಇಲ್ಲ ಮತ್ತೊಂದು ರೋಗದ ಲಕ್ಷಣವಾಗಿಯಾದರೂ ಕಾಣಿಸುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ತಲೆನೋವಿನ‌ ಸಮಸ್ಯೆ ‍ಚಿಕ್ಕ‌ವಯಸ್ಸಿನಲ್ಲಿಯೇ ಹೆಚ್ಚು ಕಂಡುಬರುತ್ತಿರುವುದು ಆತಂಕದ ವಿಷಯ. ಇದಕ್ಕೆ ಕಾರಣ ಇಂದಿನ ಜೀವನಶೈಲಿ‌!

ಈಗಿರುವ ಕೋವಿಡ್ ಕಾಲ ಘಟ್ಟದಲ್ಲಿ ನಮ್ಮ ಜೀವನಶೈಲಿಗಳೆಲ್ಲವೂ ಮೊದಲಿನಂತಿರದೆ ಬುಡ ಮೇಲಾಗಿದೆ! ವರ್ಕ್‌ ಫ್ರಂ ಹೋಂ, ಆನ್‌ಲೈನ್‌ ಕ್ಲಾಸ್‌ – ಹೀಗೆ ಮನೆಯಿಂದ ಹೊರಗೆ ಹೋಗಲು ಕಾರಣಗಳೇ ಇಲ್ಲದೆ, ಆಹಾರ–ವಿಹಾರದಲ್ಲಿ ವಿಪರೀತ ವ್ಯತ್ಯಾಸ ಉಂಟಾಗಿದೆ. ಬೆಳಗ್ಗೆ ಏಳುವುದರಿಂದ ಹಿಡಿದು ರಾತ್ರಿ ಮಲಗುವವರೆಗೂ ಯಾವುದಕ್ಕೂ ನಿರ್ದಿಷ್ಟ ಸಮಯವಿಲ್ಲದಿರುವುದು, ಸೇವಿಸುವ ಆಹಾರದಲ್ಲಿ, ದೇಹಕ್ಕೆ ವ್ಯಾಯಾಮ, ವಿಶ್ರಾಂತಿ ಯಾವುದಕ್ಕೂ ಶಿಸ್ತು ಎಂಬುದು ಇಲ್ಲವಾಗಿರುವುದು. ಮೊಬೈಲ್–ಕಂಪ್ಯೂಟರ್‌ಗಳ ಅತಿಯಾದ ಬಳಕೆಯಿಂದ ಮಾನಸಿಕ ಒತ್ತಡ ಹೆಚ್ಚಾಗಿ ಕೋಪ, ಭಯ, ದುಃಖ – ಹೀಗೆ ದೈಹಿಕ ಮಾನಸಿಕ ಆರೋಗ್ಯವೆಂಬುದು ಗಣನೀಯವಾಗಿ ಕ್ಷೀಣಿಸಿದೆ. ಅದರಲ್ಲೂ ತಲೆನೋವೆಂದು ವೈದ್ಯರ ಬಳಿ ಬರುವವರ ಸಂಖ್ಯೆ ಹೆಚ್ಚು.

ಕಾರಣಗಳು

ಅತಿಯಾದ ಖಾರ, ಹುಳಿ, ರೂಕ್ಷ, ಮಸಾಲೆಯುಕ್ತ, ಎಣ್ಣೆಯಲ್ಲಿ ಕರಿದ ಆಹಾರ ಸೇವಿಸುವುದು; ಕೃತಕ ಆಹಾರ ಸಂರಕ್ಷಕಗಳನ್ನು ಬಳಸಿ ತಯಾರಿಸಿದ ದೂಷಿತ ಆಹಾರ ಸೇವನೆ, ಪ್ರತಿದಿನವೂ ಒಂದು ನಿರ್ದಿಷ್ಟ ಸಮಯದಲ್ಲಿ ಆಹಾರ ಸೇವಿಸದಿರುವುದು, ಹಸಿವಾಗದೆ ಆಹಾರ ಸೇವಿಸುವುದು, ಮೇಲಿಂದ ಮೇಲೆ ಏನಾದರೂ ತಿನ್ನುತ್ತಲೇ ಇರುವುದು. ಅಜೀರ್ಣವಾದ ಆಹಾರ, ಉಪವಾಸ. ಜೀರ್ಣಾಂಗದಲ್ಲಿ ಕ್ರಿಮಿಗಳ ತೊಂದರೆ ಉಂಟಾದಾಗ, ಅತಿಯಾದ ಮದ್ಯಪಾನ, ದೇಹಕ್ಕೆ ಅಗತ್ಯವಿಲ್ಲದಿದ್ದರೂ ಅತಿಯಾದ ನೀರಿನ ಸೇವನೆ. ಅತಿಯಾದ ಕಾಫೀ–ಟೀ ಸೇವನೆಯನ್ನು ಹಠಾತ್ ಆಗಿ ನಿಲ್ಲಿಸುವುದು.

ಮಲ, ಸೀನು, ಕಣ್ಣೀರನ್ನು ತಡೆಯುವುದು, ಪ್ರತಿದಿನವೂ ದೂಳು, ಹೊಗೆಯ ಸೇವನೆ, ತೀಕ್ಷ್ಣವಾದ ಬಿಸಿಲಿನಲ್ಲಿ ತಿರುಗಾಡುವುದು, ಕಣ್ಣುಗಳಿಗೆ ತೊಂದರೆ ಆಗುವಷ್ಟು ಬೆಳಕಿರುವ ವಸ್ತುಗಳನ್ನು ತುಂಬಾ ಸಮಯ ದಿಟ್ಟಿಸಿ ನೋಡುವುದು (ಮೊಬೈಲ್, ಕಂಪ್ಯೂಟರ್, ಟಿ.ವಿ.), ಗಾಢವಾದ ವಾಸನೆಯುಳ್ಳ ವಸ್ತುಗಳನ್ನು ಆಘ್ರಾಣಿಸುವುದರಿಂದ (ಪರ್ಫ್ಯುಮ್), ಕಿವಿಗಡಚಿಕ್ಕುವ ಶಬ್ದವನ್ನು ಆಲಿಸುವುದು.

ಎತ್ತರದ ದಿಂಬಿನ ಮೇಲೆ ತಲೆ ಇಟ್ಟು ಮಲಗುವುದು, ವಿಪರೀತ ಮಾತನಾಡುವುದರಿಂದ, ಅತಿಯಾದ ಶೀತಗಾಳಿಯ ಸೇವನೆ.

ಹಗಲಿನಲ್ಲಿ ನಿದ್ರೆ ಮಾಡುವುದು, ರಾತ್ರಿ ಜಾಗರಣೆ ಮಾಡುವುದು ಇಲ್ಲವೇ ಬೆಳಗಿನ ಜಾವದವರೆಗೂ ಮಲಗದಿರುವುದು.

ಅತಿಯಾದ ಯೋಚನೆ, ಭಯ, ಕೋಪ, ಉದ್ವೇಗಗೊಳ್ಳುವುದು.

ಒಂದೇ ಬಗೆಯದಲ್ಲ!

ತಲೆನೋವಿನ ತೀವ್ರತೆ ಸಾಧಾರಣದಿಂದ, ಇನ್ನು ನೋವು ತಡೆಯಲಾಗುದಿಲ್ಲ ಎನ್ನುವಷ್ಟರವರೆಗೂ ಉಂಟಾಗುತ್ತದೆ.

ಒತ್ತಡದಿಂದುಟಾಗುವ ತಲೆನೋವು: ಒತ್ತಡದ ಕಾರಣದಿಂದ ತಲೆಯ ಮತ್ತು ಕುತ್ತಿಗೆಯ ಮಾಂಸಖಂಡಗಳಲ್ಲಿ ಸೆಳೆತ ಉಂಟಾಗಿ, ತಲೆಯ ಹಿಂಭಾಗದಲ್ಲೂ, ಕುತ್ತಿಗೆಯ ಹಿಂಭಾಗದಲ್ಲೂ ನಿರಂತರವಾಗಿ ಅಷ್ಟೇನೂ ತೀವ್ರವಲ್ಲದ ಮಂದ ನೋವು ಕಾಣಿಸುತ್ತದೆ. ಇದರಿಂದ ಕೆಲಸ- ಕಾರ್ಯಗಳಿಗೇನು ಅಡ್ಡಿ ಉಂಟಾಗದಿದ್ದರೂ, ಉಪಚಾರದ ನಂತರ ನೋವು ಪರಿಹಾರವಾದರೂ,ಈ ಬಗೆಯ ನೋವನ್ನು ಕಡೆಗಣಿಸುವಂತಿಲ್ಲ.

ಆಹಾರ-ವಿಹಾರದಲ್ಲುಂಟಾದ ವೈಪರೀತ್ಯದಿಂದಾಗಿ ಉಂಟಾಗುವ ತಲೆನೋವು: ಇದರಲ್ಲಿ ಸಂಜೆಯಾಗುತ್ತಲೇ ತಲೆಯ ಒಂದು ಬದಿಯಲ್ಲಿ (ಒಮ್ಮೆ ಎಡ, ಮತ್ತೊಮ್ಮೆ ಬಲ), ಹುಬ್ಬುಗಳ ಮೇಲೆ, ಕಣ್ಣುಗಳಲ್ಲಿ ನೋವು, ತಲೆ ಸಿಡಿದು ಹೋಗುವುದೇನೋ ಎನ್ನುವಷ್ಟು ವಿಪರೀತ ಸಿಡಿಯುವ ನೋವು. ಬೆಳಕನ್ನು ನೋಡಲಾಗದಿರುವುದು. ಅದರೊಂದಿಗೆ ಹೊಟ್ಟೆ ತೊಳೆಸಿದಂತಾಗಿ ವಾಂತಿ ಬರುವಂತಾಗುವುದು. ವಾಂತಿ ಬಂದ ನಂತರ ಸಮಾಧಾನ ಆಗುವುದು. ರಾತ್ರಿ ಮಲಗಿ ಬೆಳಗ್ಗೆ ಏಳುವಾಗ ನೋವು ಕಡಿಮೆ ಆಗಿರುವುದು. ಕೆಲವೊಮ್ಮೆ ವೈದ್ಯಕೀಯ ಸಲಹೆ, ಔಷಧಗಳಿಲ್ಲದೇ 2-3 ದಿನಗಳವರೆಗೂ ಬಾಧಿಸುವುದು. 3, 5, 10, 15 ದಿನಗಳಿಗೊಮ್ಮೆ ಪದೇ ಪದೇ ಕಾಣಿಸಿ ತೊಂದರೆ ಮಾಡುವುದು.

ಪ್ರತಿದಿನವೂ ಧೂಳು, ಹೊಗೆಸೇವನೆ, ಎಸಿ ಇರುವ ಸ್ಥಳಗಳಲ್ಲಿ ಸದಾ ಇರುವುದು – ಇವೆಲ್ಲವೂ ತಲೆಬುರುಡೆಯಲ್ಲಿರುವ ಸೈನಸ್ (ಪೊಳ್ಳಾದ ಭಾಗ)ನಲ್ಲಿ ಉರಿಯೂತ ಉಂಟಾಗಿ ಅದರಿಂದಾಗಿ ಮೂಗಿನಲ್ಲಿ ಯಾವಾಗಲೂ ನೀರು ಸೋರುವುದು, ಸೀನುತ್ತಾ ಇರುವುದು ಕಣ್ಣುಗಳಲ್ಲಿ ನೀರು ಬರುವುದು, ತಲೆಯ ಮುಂಭಾಗದಲ್ಲಿ ಮತ್ತು ಹುಬ್ಬುಗಳ ಮೇಲೆ ಸಾಧಾರಣದಿಂದ ತೀವ್ರವಾಗಿ ನೋವು ಉಂಟಾಗುವುದು.

ಪದೇ ಪದೇ ಬರುವ ತಲೆನೋವು: ತಲೆನೋವು ಬಂದಾಗ ಸ್ವಯಂ ಔಷಧ ಮಾಡಿಕೊಳ್ಳುವುದರಿಂದ (ನೋವುನಿವಾರಕ ಮಾತ್ರೆಗಳನ್ನು ವೈದ್ಯಕೀಯ ಸಲಹೆ ಇಲ್ಲದೆ ಪದೇ ಪದೇ ಸೇವಿಸುವುದು) ಉಂಟಾಗುವುದು.

ಪರಿಹಾರಗಳು

ಯಾವ ಕಾರಣದಿಂದ ತಲೆನೋವು ಬರುತ್ತಿದೆಯೋ ಅಂತಹ ಕಾರಣಗಳನ್ನು /ತಪ್ಪುಗಳನ್ನು ಮಾಡದಿರುವುದೇ (ನಿದಾನಸ್ಯ ಪರಿವರ್ಜನಮ್) ಅತ್ಯಂತ ಪರಿಣಾಮಯುಳ್ಳ ಪರಿಹಾರ.

ಮಲಬದ್ಧತೆ ಉಂಟಾಗದಂತೆ ನೋಡುವುದು. ಮಲಬದ್ಧತೆ ಉಂಟಾದಲ್ಲಿ ಶೀಘ್ರವೇ ವೈದ್ಯರ ಸಲಹೆಯಂತೆ ಪರಿಹರಿಸಿಕೊಳ್ಳುವುದು.

ಪ್ರತಿದಿನವೂ ಹಾಲು, ತುಪ್ಪವನ್ನು ಆಹಾರದಲ್ಲಿ ಬಳಸುವುದು.

ಮೊಬೈಲ್, ಕಂಪ್ಯೂಟರ್ ನೋಡುವಾಗ ಸರಿಯಾದ ಭಂಗಿಯಲ್ಲಿ ಕುತ್ತಿಗೆಗೆ ಶ್ರಮವಾಗದಂತೆ ಕುಳಿತು ಕೊಳ್ಳುವುದು.

ಒಂದು ಚಮಚ ಕೊತ್ತಂಬರಿಬೀಜವನ್ನು ಚೆನ್ನಾಗಿ ತೊಳೆದು ಒಂದು ಲೋಟ ಕುಡಿಯುವ ನೀರಿನಲ್ಲಿ 1–2 ಗಂಟೆಗಳ ಕಾಲ ನೆನೆಸಿ ನಂತರ ಕುಡಿಯಬೇಕು. ಮೇಲೆ ತಿಳಿಸಿದಂತೆ ಜೀರಿಗೆಯನ್ನು ರಾತ್ರಿ ನೆನೆಸಿಟ್ಟು ಮರುದಿನ ಬೆಳಿಗ್ಗೆ ಎದ್ದು ಕುಡಿಯಬೇಕು.

ಬೂದುಗುಂಬಳದ (ಹಸಿ/ ಬೇಯಿಸಿದ) ಒಂದು ಲೋಟದಷ್ಟು ರಸವನ್ನು ಕುಡಿಯಬೇಕು. ಇದರಿಂದ ಆಹಾರಸೇವನೆಯ ವ್ಯತ್ಯಾಸದಿಂದುಂಟಾದ ಅಸಿಡಿಟಿ, ಅಜೀರ್ಣ ಹತೋಟಿಗೆ ಬರುವುದು. ತಲೆನೋವು ಬಹಳ ಬೇಗ ಶಮನವಾಗುವುದು.

ತಲೆಗೆ ಎಣ್ಣೆಯನ್ನು ಹಚ್ಚಿ ಮೃದುವಾಗಿ ಒತ್ತಿ ಮಸಾಜ್ ಮಾಡಬೇಕು; ಬಟ್ಟೆಯೊಂದನ್ನು ಬಿಸಿನೀರಿನಲ್ಲಿ ಅದ್ದಿ ಹಿಂಡಿ ಅದರಿಂದ ಹಣೆಯ ಭಾಗಕ್ಕೆ ಹಿತವಾಗಿ ಶಾಖ ಕೊಡಬೇಕು.

ನೆಲ್ಲಿಕಾಯಿಯ ಪುಡಿಯನ್ನು ನೀರು ಸೇರಿಸಿ ಅದರ ಕಲ್ಕವನ್ನು ಹಣೆಯ ಮೇಲೆ ಲೇಪಿಸುವುದು.

ಹಸಿ ಶುಂಠಿಯನ್ನು ಅಥವಾ ಅರಿಸಿನದ ಕೊಂಬನ್ನು ನೀರಿನಲ್ಲಿ ತೇಯ್ದು ಬಿಸಿ ಮಾಡಿ ಹಣೆಗೆ ಹಚ್ಚಬೇಕು. ಇದು ಶೀತದಿಂದ ಉಂಟಾದ ತಲೆನೋವನ್ನು ಶಮನ ಮಾಡುವುದು.

ದೂಳು ಹೊಗೆಯಿರುವಲ್ಲಿ ಹೋಗುವಾಗ ಮೂಗು, ಬಾಯಿ ಮುಚ್ಚುವಂತಹ ವಸ್ತ್ರವನ್ನು ಬಳಸುವುದು. (ಈಗ ಮಾಸ್ಕ್ ಅನ್ನು ಬಳಸುತ್ತಿರುವುದರಿಂದ ಈ ಸಮಸ್ಯೆ ಕಡಿಮೆ ಆಗಿದೆ.)

15 ದಿನಕ್ಕೊಮ್ಮೆಯಾದರೂ ಅಭ್ಯಂಗಸ್ನಾನವನ್ನು ಮಾಡುವುದು.

ಒತ್ತಡವನ್ನು ಕಡಿಮೆ ಮಾಡಲು ಬೆಳಗಿನ ಪ್ರಶಾಂತ ವಾತಾವರಣದಲ್ಲಿ ಸ್ವಲ್ಪ ಸಮಯ ವಾಕ್ ಮಾಡುವುದು, ದೇಹಕ್ಕೆ ಶ್ರಮವಾಗದಿರುವಷ್ಟು ವ್ಯಾಯಾಮ, ಮನಸ್ಸನ್ನು ಶಾಂತವಾಗಿಡಲು ಪ್ರಾಣಾಯಾಮ, ಮನಸ್ಸನ್ನು ಮುದಗೊಳಿಸಲು ಸುಶ್ರಾವ್ಯವಾದ ಸಂಗೀತವನ್ನು ಆಲಿಸುವುದು.

ರಾತ್ರಿ ಸರಿಯಾದ ಸಮಯಕ್ಕೆ ಮಲಗಿ 6–7 ಗಂಟೆಗಳ ಸುಖವಾದ ನಿದ್ರೆಯನ್ನು ಮಾಡಿ ಬೆಳಗ್ಗೆ ಸೂರ್ಯೋದಯದ ಮೊದಲು ಏಳುವುದು; ನಿರ್ದಿಷ್ಟ ಸಮಯದಲ್ಲಿ ಆಹಾರ ಸೇವಿಸುವುದು; ಒಳ್ಳೆಯ ಚಿಂತನೆಯನ್ನೇ ಮಾಡುವುದು ದೈಹಿಕ ಮಾನಸಿಕ ಆರೋಗ್ಯವನ್ನು ಸುಸ್ಥಿತಿಯಲ್ಲಿಡುವ ಉತ್ತಮ ಉಪಾಯ.

ಯಾವುದೇ ರೀತಿಯ ತಲೆನೋವು ಬಂದರೂ ತಡಮಾಡದೆ ವೈದ್ಯರ ಸಲಹೆ ಮೇರೆಗೆ ಔಷಧವನ್ನು ಸೇವಿಸುವುದು ಒಳ್ಳೆಯದು.

(ಲೇಖಕಿ: ಆಯುರ್ವೇದವೈದ್ಯೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT