ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋತು ಗೆಲ್ಲುವ ಜಗಳಗಳು

Last Updated 3 ಅಕ್ಟೋಬರ್ 2022, 19:30 IST
ಅಕ್ಷರ ಗಾತ್ರ

ಮನೆಯ ಸದಸ್ಯರೊಡನೆಯ ಸೌಹಾರ್ದ ಸಂಬಂಧ ನಮ್ಮ ದೈಹಿಕ, ಮಾನಸಿಕ, ಸಾಮಾಜಿಕ ಆರೋಗ್ಯವನ್ನು ಪ್ರಭಾವಿಸುತ್ತದೆ. ಮನೆಯ ವಾತಾವರಣ ಮನಸ್ತಾಪದಿಂದ ಕೂಡಿದ್ದರೆ ಮನದಲ್ಲಿನ ಉತ್ಸಾಹವು ಬತ್ತಿಹೋಗಿ ಹೊರಪ್ರಪಂಚದ ಸವಾಲುಗಳನ್ನು ಎದುರಿಸುವುದು ಕಷ್ಟವಾಗುತ್ತದೆ. ಚಿಂತೆ, ಆತಂಕಗಳು ಧೃತಿಗೆಡಿಸಿದಾಗ ಭಾವನಾತ್ಮಕ ಬೆಂಬಲ ನೀಡುವ ಕುಟುಂಬವೇ ನಮ್ಮೆಲ್ಲಾ ಸೌಖ್ಯದ ಅಡಿಪಾಯ. ಇಂತಹ ಬೆಂಬಲ ಬೇಕಾದಲ್ಲಿ ನಾವು ನಮ್ಮ ಧೋರಣೆಗಳಲ್ಲಿ, ಸಂಬಂಧಗಳನ್ನು ಗ್ರಹಿಸುವ ರೀತಿಯಲ್ಲಿ, ಮನೆಯ ಸದಸ್ಯರೊಡನೆಯ ಮಾತುಕತೆಯಲ್ಲಿ, ಒಟ್ಟು ನಮ್ಮ ವರ್ತನೆಯಲ್ಲಿ ಕೆಲವು ಬದಲಾವಣೆಗಳನ್ನು ತಂದುಕೊಳ್ಳಬೇಕಾಗುತ್ತದೆ.

ನಮ್ಮ ನೆಮ್ಮದಿ, ಶಾಂತಿ, ಸಮಾಧಾನ ನಮ್ಮ ಕೈಯಲ್ಲೇ ಇದೆ. ಅದು ನಮ್ಮ ಮನಸ್ಸಿನ ಸ್ಥಿತಿಗತಿ, ನಮ್ಮ ಮಾತು, ನಮ್ಮ ಕ್ರಿಯೆಗಳನ್ನೇ ನೇರವಾಗಿ ಅವಲಂಬಿಸಿರುತ್ತವೆ. ಆದರೆ ನಮ್ಮ ಮನಸ್ಸಿನ ಏರುಪೇರುಗಳಿಗೆ ನಾವು ಅನ್ಯರನ್ನು ಕಾರಣವಾಗಿಸಲು ಹೊರಡುತ್ತೇವೆ. ಬೇರೆಯವರು ನಮ್ಮ ನೆಮ್ಮದಿಯನ್ನು ಹಾಳು ಮಾಡುತ್ತಿದ್ದಾರೆ ಎನ್ನುವ ಭಾವವೇ ನಮ್ಮ ದಿನನಿತ್ಯದ ಮಾತುಕತೆಗಳಲ್ಲೂ ಪ್ರತಿಬಿಂಬಿತವಾಗುತ್ತಿರುತ್ತದೆ. ‘ನನ್ನನ್ನು ರೇಗಿಸಬೇಡ’, ‘ನಿನ್ನ ವರ್ತನೆ ನನಗೆ ಹುಚ್ಚು ಹಿಡಿಸುತ್ತಿದೆ’, ‘ನಾನು ಹೀಗೆಲ್ಲಾ ಮಾತಾಡೋಕೆ ನೀನೇ ಕಾರಣ – ಹೀಗೆ ಬೇರೆಯವರನ್ನೇ ನಮ್ಮೆಲ್ಲಾ ಭಾವನೆಗಳಿಗೂ ಕ್ರಿಯೆಗಳಿಗೂ ಕಾರಣರಾಗಿಸುವ ಹುನ್ನಾರ ನಡೆಸುತ್ತಿರುತ್ತೇವೆ. ಮನೆಯಲ್ಲಿ ನಡೆಯುವ ಜಗಳಗಳು, ವಾದವಿವಾದಗಳು, ಮನಸ್ತಾಪಗಳು ಇವುಗಳನ್ನೆಲ್ಲಾ ಸೂಕ್ಷ್ಮವಾಗಿ ನೋಡಿದಾಗ ಅದರಲ್ಲಿ ಬಹುಪಾಲು ನಮ್ಮನ್ನು ಸಮರ್ಥಿಸಿಕೊಳ್ಳುವುದು ಹಾಗೂ ಬೇರೆಯವರನ್ನು ದೂರುವುದೇ ಇರುತ್ತದೆ. ‘ನಾನೇ ಸರಿ’, ‘ನಾನೇ ಮುಖ್ಯ’ ಎಂಬ ಭಾವವೇ ಇದರಲ್ಲಿ ಎದ್ದುಕಾಣುತ್ತಿರುತ್ತದೆ.

ನಮ್ಮೆಲ್ಲಾ ವಿವೇಕಹೀನ ಮಾತು-ಕೃತಿಗಳಿಗೆ ಬೇರೆಯವರನ್ನೇ ಕಾರಣವಾಗಿಸುತ್ತಾ ‘ನಮ್ಮಲ್ಲೇನೂ ದೋಷವೇ ಇಲ್ಲ’ ಎಂಬಂತೆ ಜಗಳವಾಡಿದ ನಂತರ, ಹಾಗೆ ನಾವು ಯಾರೊಂದಿಗೆ ಜಗಳವಾಡಿರುತ್ತೇವೋ ಅವರೇ ಬಂದು ತಮ್ಮ ತಪ್ಪನ್ನು ಒಪ್ಪಿಕೊಂಡು ನಮ್ಮನ್ನು ಸಂತೈಸಬೇಕು ಎಂಬ ಆಸೆಯೂ ಮನದ ಮೂಲೆಯಲ್ಲಿ ಅವಿತುಕೊಂಡಿರುತ್ತದೆ. ಇದು ಸಾಧ್ಯವಾಗದೇ ಹೋದಾಗ ನಮ್ಮ ನಡುವಿರುವ ಪ್ರೀತಿ, ವಿಶ್ವಾಸ, ಅನುಬಂಧಗಳ ಬಗ್ಗೆಯೇ ಅನುಮಾನ ಶುರುವಾಗಿ ಸಂಬಂಧಗಳೂ ಮನಃಶಾಂತಿಯೂ ಕದಡಿ ರಾಡಿಯಾಗುತ್ತದೆ. ಜಗಳ ಆಡುವ ಭರದಲ್ಲಿ ನಾವು ಸಾಧಾರಣವಾಗಿ ಒಂದು ವಿಷಯವನ್ನು ಗಮನಿಸುವುದಿಲ್ಲ. ಎಲ್ಲಿಯವರೆಗೆ ‘ನಾನೇ ಸರಿ’ ಎಂದು ನಾವು ವಾದಿಸುತ್ತಿರುತ್ತೇವೆಯೋ ಅಲ್ಲಿಯವರೆಗೆ ಎದುರಿಗಿರುವವರು ನಮ್ಮ ಮಾತುಗಳನ್ನು ಆಲಿಸಿ ಅರ್ಥಮಾಡಿಕೊಳ್ಳುವ ಬದಲಾಗಿ ನಮ್ಮೊಡನೆ ಸರಿತಪ್ಪುಗಳ ವಾದ ಮಾಡುತ್ತಲೇ ಇರುತ್ತಾರೆ. ನಮ್ಮ ಯಾವ ಗುಣಗಳನ್ನೂ ಪರಿಗಣಿಸದೇ ಕೇವಲ ಆ ಸಮಯದಲ್ಲಿ ಎದ್ದುಕಾಣುವ ದೋಷಗಳನ್ನೇ ಕಾಣುತ್ತಿರುತ್ತಾರೆ. ‘ನಾನೇ ಸರಿ’ ಎಂದು ವಾದಿಸುವುದರ ಹಿಂದೆ ‘ನನ್ನ ತಪ್ಪಿದೆ ಎಂದು ಒಪ್ಪಿಕೊಂಡರೆ, ಕ್ಷಮೆ ಕೇಳಿದರೆ, ನನ್ನತನಕ್ಕೆ ಪೆಟ್ಟು ಬೀಳಬಹುದು, ಅವಮಾನವಾಗಬಹುದು’ ಎಂಬ ಭಯವಿರುತ್ತದೆ.

ಕ್ಷಮೆ ಕೇಳುವುದೆಂದರೆ ಅಥವಾ ಆಗಿದ್ದನ್ನು ಮರೆತು, ಕ್ಷಮಿಸಿ ಮುನ್ನಡೆಯುವುದೆಂದರೆ ಅದನ್ನು ಕೆಲವರು ಯುದ್ಧದಲ್ಲಿ ಸೋತಂತೆ ಎಂಬಂತೆ ಭಾವಿಸುತ್ತಾರೆ. ನಿಜ, ಕ್ಷಮೆ ಕೇಳಿದಾಗ ನಾವು ‘ಅಹಂ’ ಎಂಬ ಯುದ್ಧದಲ್ಲಿ ಸೋಲುತ್ತೇವೆ. ಒಂದು ಕ್ಷಣ ನಾವು ಅಸಹಾಯಕರಾದಂತೆಯೂ ಅನಿಸುತ್ತದೆ. ಎದುರಿನವರು ನಮ್ಮ ಸೋಲನ್ನು ದುರುಪಯೋಗ ಪಡಿಸಿಕೊಂಡರೆ, ಅವರು ಮುಂದೆ ಎಂದೆಂದೂ ತಾವೇ ಸರಿ ಎಂಬಂತೆ ಆಡುವುದನ್ನು ಅಭ್ಯಾಸಮಾಡಿಕೊಂಡುಬಿಟ್ಟರೆ ಎಂಬ ಭಯಗಳೂ ಕಾಡುತ್ತವೆ. ಆದರೆ ಯಾವುದು ಏನಾದರೂ, ಯಾರು ಏನೆಂದರೂ ನಮ್ಮ ಆಂತರ್ಯದಲ್ಲಿ ನಮಗೆ ನಮ್ಮ ತಪ್ಪಿನ ಅರಿವಿರುತ್ತದೆ; ಆತ್ಮಸಾಕ್ಷಿ ನಮ್ಮನ್ನು ಚುಚ್ಚುತ್ತಿರುತ್ತದೆ. ನಮ್ಮ ಮನಸ್ಸಿನ ಸಮಾಧಾನಕ್ಕಾಗಿಯಾದರೂ ನಾವು ಕ್ಷಮೆ ಕೇಳಬೇಕಾಗುತ್ತದೆ.

ಕ್ಷಮೆ ಕೇಳುವುದೆಂದರೆ ನಮ್ಮ ಮಿತಿಗಳನ್ನು, ನಿರೀಕ್ಷೆಗಳನ್ನು, ನಮ್ಮ ಮನದ ಕೋಲಾಹಲಗಳನ್ನು ಮುಕ್ತ ಮನಸ್ಸಿನಿಂದ ಹೇಳಿಕೊಳ್ಳುವುದು. ನಮ್ಮ ನಿಜವಾದ ಭಾವವನ್ನು ಯಾವುದೇ ಸುತ್ತಿ ಬಳಸಿ ಮಾತನಾಡುವ ಚಾಲಾಕಿತನ ತೋರದೆ ನಿಸ್ಸಂಕೋಚವಾಗಿ ತೋಡಿಕೊಳ್ಳುವುದು. ಅಲ್ಲಿ ನಮ್ಮಿಂದ ಬೇರೆಯವರಿಗೆ ನೋವುಂಟಾಗಿದ್ದರ ಕುರಿತು ಸಂಕಟವಿರಬೇಕು, ಮತ್ತೆ ನಮ್ಮನ್ನೇ ಸಮರ್ಥಿಸಿಕೊಳ್ಳುವುದಿರಬಾರದು. ಹೇಗೆ ಬದಲಾವಣೆ ತಂದುಕೊಳ್ಳುವುದು ಎನ್ನುವುದರ ಬಗ್ಗೆ ಪ್ರಾಮಾಣಿಕವಾಗಿ ಚರ್ಚಿಸಬೇಕು. ನಮ್ಮ ತಪ್ಪನ್ನು ಕ್ಷಮಿಸಲು ಅಥವಾ ಕ್ಷಮಿಸದೇ ಇರಲೂ ಸಮಯವನ್ನೂ, ಅವಕಾಶವನ್ನೂ ಕೊಡಬೇಕು. ಇಂತಹ ಕ್ಷಮೆ ನಮಗೇ ಆಶ್ಚರ್ಯವಾಗುವಂತಹ ಬದಲಾವಣೆಗಳನ್ನು ತರುತ್ತದೆ. ಅದು ನಮ್ಮೆಲ್ಲಾ ಭಯಗಳನ್ನು, ಅನುಮಾನಗಳನ್ನು ಸುಳ್ಳಾಗಿಸಿ ನೇರ ಎದುರಿನವರ ಹೃದಯಕ್ಕೇ ತಲುಪುತ್ತದೆ, ಅವರಿಗೂ ಆತ್ಮವಿಮರ್ಶೆ ಮಾಡಿಕೊಳ್ಳುವ ಪ್ರೇರಣೆಯನ್ನೂ ಅವಕಾಶವನ್ನೂ ನಮ್ಮ ಪ್ರಾಂಜಲವಾದ ಈ ನಡೆ ನೀಡುತ್ತದೆ.

ಕೆಲವೊಮ್ಮೆ ನಮ್ಮ ತಪ್ಪಿಲ್ಲದಿದ್ದರೂ ಬೇರೆಯವರ ಟೀಕೆಗೆ ಒಳಗಾಗಬೇಕಾಗುತ್ತದೆ. ಆಗ ಸಾವಧಾನದಿಂದ ವಿವರಿಸಲು ಪ್ರಯತ್ನಿಸಬಹುದು. ಅದು ಸಾಧ್ಯವಾಗದಿದ್ದರೆ ಎದುರಿನವರು ವಿನಾ ಕಾರಣ ದೂಷಿಸುತ್ತಿದ್ದಾರೆ ಎನಿಸಿದರೆ ಅಂತಹ ನಕಾರಾತ್ಮಕ ಮಾತು, ವರ್ತನೆಗೆ ಪ್ರತಿಕ್ರಿಯೆ ನೀಡದೆ ನಮ್ಮ ಶಾಂತಿಯನ್ನೂ ಸಂಬಂಧವನ್ನೂ ಕಾಪಾಡಿಕೊಳ್ಳಬಹುದು. ಪ್ರತಿಕ್ರಿಯೆ ಇಲ್ಲದಿದ್ದಾಗ ಎಂತಹ ವಿಷಮಯ ಭಾವಗಳೂ ತಮ್ಮ ತೀಕ್ಷ್ಣತೆಯನ್ನು ಕಳೆದುಕೊಂಡುಬಿಡುತ್ತವೆ. ಇಂತಹ ಸಮಯದಲ್ಲಿ ಮೌನವಾಗಿರುವುದು ಅಥವಾ ತಟಸ್ಥವಾಗಿರುವುದು ದುರ್ಬಲತೆಯ ಲಕ್ಷಣವಲ್ಲ; ಅದು ವಿವೇಕದ ಸಂಕೇತ.

ಎಲ್ಲರೂ ಅವರವರ ರೀತಿಯಲ್ಲಿ ಸರಿಯಾಗೇ ಇದ್ದರೂ ಕೆಲವೊಮ್ಮೆ ಪರಸ್ಪರರ ಸ್ವಭಾವಗಳ ಭಿನ್ನತೆಯೇ ಹೊಂದಾಣಿಕೆಯನ್ನು ಕಷ್ಟಕರವಾಗಿಸುತ್ತದೆ. ಆಗ ನಾವು ಒಂದು ವಿಷಯವನ್ನು ನೆನಪಿನಲ್ಲಿಟ್ಟುಕೊಳ್ಳಬೇಕು: ಜೊತೆಗಿರುವುದು ಮುಖ್ಯವಾದಾಗ ಬಿಟ್ಟುಕೊಡುವುದೂ ಮುಖ್ಯವಾಗುತ್ತದೆ; ಅದಿಲ್ಲದಿದ್ದರೆ ಜೊತೆಗಿರುವುದೇ ಅಸಾಧ್ಯ. ಯಾವುದಕ್ಕೆ ಹೋರಾಡಬೇಕು, ಯಾವುದನ್ನು ನಿರ್ಲಕ್ಷಿಸಿ ಮುನ್ನಡೆಯಬೇಕು ಎಂಬ ಎಚ್ಚರ ನಮ್ಮಲ್ಲಿರದಿದ್ದರೆ ಜೀವನಪೂರ್ತಿ ಎಲ್ಲದಕ್ಕೂ ಎಲ್ಲರೊಂದಿಗೂ ಜಗಳವಾಡುತ್ತಲೇ ಕಾಲ ಕಳೆಯಬೇಕಾಗುತ್ತದೆ!

ಸಮಾಧಾನಚಿತ್ತದಿಂದ, ಸಂವಾದದಿಂದ, ಸಹಾನುಭೂತಿಯಿಂದ ಪರಿಹಾರವಾಗದ ವಿರಸಗಳೇ ಪ್ರಪಂಚದಲ್ಲಿಲ್ಲ. ನಮ್ಮೆಲ್ಲಾ ಜಗಳಗಳು ಹುಟ್ಟುವುದೇ ಸಂಕುಚಿತಬುದ್ಧಿಯಿಂದ, ಅಜ್ಞಾನದಿಂದ. ಇದನ್ನು ಚೆನ್ನಾಗಿ ಮನದಟ್ಟು ಮಾಡಿಕೊಂಡರೆ ನಮ್ಮ ಮನಸ್ಸಿನ ನೆಮ್ಮದಿಗೆ, ಸಂಬಂಧದ ಆರೋಗ್ಯಕ್ಕೆ ಆ ಕ್ಷಣದಲ್ಲಿ ಯಾವುದು ಮುಖ್ಯ ಎನ್ನುವ ಅರಿವುಂಟಾಗುತ್ತದೆ. ಮಾತನಾಡಿ ಬಗೆಹರಿಸಿಕೊಳ್ಳುವುದೋ ಕ್ಷಮಿಸುವುದೋ ಕ್ಷಮೆ ಕೇಳುವುದೋ ಮರೆತು ಮುನ್ನಡೆಯುವುದೋ, ಭಾವಾತಿರೇಕ ಇಳಿದು ಮನಸ್ಸು ತಿಳಿಯಾಗುವ ತನಕ ಸಮಯ ಕೊಡುವುದೋ – ಒಟ್ಟಿನಲ್ಲಿ ಸರಿ-ತಪ್ಪು, ಸೋಲು-ಗೆಲುವು ಇಂತಹ ಸಾಪೇಕ್ಷ ಸತ್ಯಗಳನ್ನು ಮೀರಿ ಯಾವುದು ಪ್ರೀತಿಯನ್ನು, ಬಾಂಧವ್ಯವನ್ನು ಗಟ್ಟಿಗೊಳಿಸುವುದೋ ಅದೇ ಶ್ರೇಷ್ಠ, ಅದೇ ಕ್ಷೇಮ ಎನ್ನುವ ತಿಳಿವಳಿಕೆಯೂ ಮೂಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT