ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶುರುವಾಯ್ತು ಶಾಲಾ ಪರ್ವ... ಊಟದ ಡಬ್ಬಿಯಲ್ಲಿ ಪೌಷ್ಟಿಕ ಆಹಾರವಿರಲಿ

Last Updated 20 ಮೇ 2022, 19:30 IST
ಅಕ್ಷರ ಗಾತ್ರ

‘ಅಮ್ಮಾ, ಇವತ್ತು ಸ್ನ್ಯಾಕ್ಸ್‌ಗೆ ಸಿಟ್ರಸ್‌ ಫ್ರೂಟ್ಸ್‌ ಹಾಕಮ್ಮ. ಅದರಲ್ಲಿ ಸಿ ವಿಟಮಿನ್ ಇರುತ್ತದೆ. ದೇಹದ ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದಂತೆ. ನಮ್ಮ ಮ್ಯಾಮ್ ಹೇಳಿದರು’ ಎಂದು ಅಂಗಳದಿಂದಲೇ ಕೂಗಿ ಹೇಳಿದಳು ಒಂಬತ್ತನೇ ತರಗತಿ ಓದುತ್ತಿರುವ ರಚನಾ. ಅಕ್ಕನ ಮಾತಿಗೆ ದನಿಗೂಡಿಸಿದ ರಾಘು ಕೂಡ ಶಾಲೆಯಲ್ಲಿ ಹೇಳಿದ ಸೂಚನೆಯನ್ನುಅಮ್ಮನಿಗೆ ರವಾನಿಸಿದ..!

‘ಕೋವಿಡ್‌’ ನಂತರದಲ್ಲಿ ಹೀಗೆ ಮಕ್ಕಳೇ ತಮ್ಮ ಡಬ್ಬಿಯ ಆಹಾರ ಬದಲಿಸಲು ಅಮ್ಮನಿಗೆ ಹೇಳುತ್ತಿದ್ದಾರೆ. ಮಳೆಗಾಲದ ಮುನ್ಸೂಚನೆ, ಸಾಂಕ್ರಾಮಿಕ ರೋಗಗಳು ಹಾಗೂ ಕೋವಿಡ್ ಮರುಕಳಿಸುವ ಭೀತಿಯಿಂದಾಗಿ ಪೋಷಕರು ಮಕ್ಕಳ ಆರೋಗ್ಯದ ಬಗ್ಗೆ ತುಸು ಹೆಚ್ಚೇ ಕಾಳಜಿ ವಹಿಸುತ್ತಿದ್ದಾರೆ. ಮತ್ತೊಂದೆಡೆ ಹಲವು ಶಾಲೆಗಳು ಮಕ್ಕಳಿಗೆ ಬೇಕರಿ ತಿನಿಸು, ಜಂಕ್ ಫುಡ್‌ನಂತಹ ಆಹಾರ ಕೊಟ್ಟು ಕಳಿಸಬೇಡಿ ಎಂದು ಪೋಷಕರಿಗೆ ಸೂಚನೆ ನೀಡಿವೆ. ಹೀಗಾಗಿ ನಿತ್ಯ ಡಬ್ಬಿಗೆ ಯಾವ ರೀತಿ ಆಹಾರ ಒದಗಿಸುವುದೆಂದು ಅಮ್ಮಂದಿರು ಚಿಂತಿಸುತ್ತಿದ್ದಾರೆ.

ಸಮತೋಲಿತ ಆಹಾರ ಸೂತ್ರ
‘ಮಕ್ಕಳ ಡಬ್ಬಿಯಲ್ಲಿ ಏನೇನು ಆಹಾರವಿರಬೇಕೆಂದು ತುಂಬಾ ಯೋಚಿಸಬೇಡಿ. ರೋಗ ನಿರೋಧಕ ಶಕ್ತಿ ಹೆಚ್ಚಳಕ್ಕೆ ಸಮತೋಲಿತ ಆಹಾರ ಸೂತ್ರವೇ ಪರಿಹಾರ’ ಎನ್ನುತ್ತಾರೆ ಮದರ್‌ಹುಡ್ ಆಸ್ಪತ್ರೆಯ ಪೌಷ್ಟಿಕಾಂಶ ತಜ್ಞೆ ಡಾ. ದೀಪ್ತಿ ಲೋಕೇಶಪ್ಪ.

ನೂಡಲ್ಸ್‌, ಪಿಜ್ಜಾ, ಬರ್ಗರ್‌, ಅತಿಯಾಗಿ ಕರಿದಿರುವ ಆಹಾರಗಳ ಸೇವನೆಯನ್ನು ಪ್ರಜ್ಞಾಪೂರ್ವಕವಾಗಿ ನಿಲ್ಲಿಸಿಬಿಡಿ. ಮನೆಯಲ್ಲಿ ತಯಾರಿಸುವ ಆಹಾರವನ್ನೇ ಸೇವಿಸಿ. ಜೊತೆಗೆ ಹೆಚ್ಚು ಪೌಷ್ಟಿಕಾಂಶವಿರುವ ಸೊಪ್ಪು–ತರಕಾರಿ, ಮಾಂಸ, ಮೊಟ್ಟೆಗಳನ್ನು ಅಗತ್ಯವಾಗಿ ತಿನ್ನಿ. ಅದರಲ್ಲೂ ಅರಿಸಿನ, ಮೊಸರು, ಹಾಲು ಆಹಾರದ ಪಟ್ಟಿಯಲ್ಲಿ ಕಡ್ಡಾಯವಾಗಿರಲಿ ಎಂಬುದು ಅವರ ಸಲಹೆ.

‘ತಮ್ಮ ಮಕ್ಕಳು ತರಕಾರಿ ತಿನ್ನುವುದಿಲ್ಲ’ ಎಂಬುದು ಪೋಷಕರ ಆರೋಪ. ಆದರೆ, ಎಷ್ಟು ಮಂದಿ ಪೋಷಕರು ಮಕ್ಕಳೊಂದಿಗೆ ಕುಳಿತು ಹಣ್ಣು–ತರಕಾರಿ ಸೇವಿಸುತ್ತಾರೆ?. ಆದ್ದರಿಂದ, ಮಕ್ಕಳಿಗೆ ಬಾಲ್ಯದಿಂದಲೇ ಪೌಷ್ಟಿಕ ಆಹಾರ ಸೇವನೆ ಅಭ್ಯಾಸ ಮಾಡಿಸಬೇಕು. ಸ್ನ್ಯಾಕ್ಸ್‌(ಉಪಾಹಾರ)ಗಾಗಿ ಆಯಾ ಋತುವಿನಲ್ಲಿ ದೊರೆಯುವ ಹಣ್ಣುಗಳ ಜತೆಗೆ ಒಣ ಹಣ್ಣುಗಳನ್ನು ಕೊಡಬೇಕು. ತರಕಾರಿ ಇಷ್ಟಪಟ್ಟು ತಿನ್ನುವ ಮಕ್ಕಳಿಗೆ ಸೌತೆಕಾಯಿ, ಕ್ಯಾರೆಟ್ ಜತೆಗೆ ಮೊಳಕೆ ಬರಿಸಿದ ಕಾಳುಗಳನ್ನೂ ಕಳುಹಿಸುವ ಅಭ್ಯಾಸ ಮಾಡಿ’ ಎನ್ನುತ್ತಾರೆ ದೀಪ್ತಿ.

ಡಾ.ದೀಪ್ತಿ ಲೋಕೇಶಪ್ಪ
ಡಾ.ದೀಪ್ತಿ ಲೋಕೇಶಪ್ಪ

ಮಧ್ಯಾಹ್ನದ ಊಟಕ್ಕಾಗಿ ಪ್ರತ್ಯೇಕ ಅಡುಗೆ ಮಾಡಲು ಸಾಧ್ಯವಾಗದವರು ಬೆಳಗಿನ ತಿಂಡಿಯನ್ನೇ ಡಬ್ಬಿಗೆ ಹಾಕಿಕೊಡಿ, ತಪ್ಪೇನಿಲ್ಲ. ತರಕಾರಿ ಉಪ್ಪಿಟ್ಟು, ಚಿತ್ರಾನ್ನ, ಅವಲಕ್ಕಿ, ಪಲಾವ್, ಇಡ್ಲಿ, ದೋಸೆಯನ್ನೂ ಕಳುಹಿಸಬಹುದು. ಮಕ್ಕಳಿಗೆ ಕೊಡುವ ಆಹಾರ ತಾಜಾ ಹಾಗೂ ವೈವಿಧ್ಯಮಯವಾಗಿರಬೇಕು. ಅದರಲ್ಲಿ ಹೆಚ್ಚು ತರಕಾರಿ, ಬೇಳೆ ಕಾಳುಗಳಿರಬೇಕು.

ರೋಗ ನಿರೋಧಕ ಶಕ್ತಿ ಹೆಚ್ಚಳಕ್ಕೆ
ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ವೃದ್ಧಿಗೆ ವಿಟಮಿನ್, ಕ್ಯಾಲ್ಸಿಯಂ, ಪ್ರೊಟೀನ್‌ ಒಳಗೊಂಡ ಆಹಾರ ಅಗತ್ಯ. ಅದಕ್ಕಾಗಿ ಪೋಷಕರು ಹೆಚ್ಚಿನ ಮುತುವರ್ಜಿ ವಹಿಸಬೇಕಿಲ್ಲ. ನಿತ್ಯ ಲಭ್ಯವಾಗುವ ಹಣ್ಣು– ತರಕಾರಿಗಳನ್ನೇ ಉಪಾಹಾರ–ಊಟದಲ್ಲಿ ಬಳಸಿದರೆ ಸಾಕು ಎನ್ನುವುದು ಪೌಷ್ಟಿಕಾಂಶ ತಜ್ಞರ ಸಲಹೆ.

ವಿಟಮಿನ್ ಸಿ, ರೋಗನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಮಹತ್ವದ ಪಾತ್ರವಹಿಸುತ್ತದೆ. ಹಾಗಾಗಿ, ನಿತ್ಯದ ಆಹಾರದಲ್ಲಿ ಸಿಟ್ರಸ್ ಜಾತಿಗೆ ಸೇರಿದ ನಿಂಬೆಯನ್ನು ಹೆಚ್ಚಾಗಿ ಬಳಸಿ. ಕಿತ್ತಳೆಯಂಥ ಹಣ್ಣುಗಳನ್ನು ತಿನ್ನಲು ಕೊಡಿ. ಇದರ ಜತೆಗೆ ದೊಣ್ಣೆ ಮೆಣಸಿನಕಾಯಿ (ಕ್ಯಾಪ್ಸಿಕಂ), ಬ್ರೊಕೋಲಿ, ಮೀನು, ಹಸಿರು ಸೊಪ್ಪುಗಳು, ಅರಿಸಿನ, ಹಾಲು, ಮೊಟ್ಟೆ, ಚಿಕನ್, ಕಾಳುಗಳು ಇರಲಿ. ಹಾಲಿಗೆ ಅರಿಸಿನ ಹಾಕಿ ಕೊಡುವುದು, ನಿತ್ಯದ ಅಡುಗೆಯಲ್ಲಿ ಅರಿಸಿನ ಬಳಕೆ ಮಾಡುವುದು, ಕ್ಯಾಪ್ಸಿಕಂ ಬಳಸಿ ಪಲಾವ್ ಮಾಡುವುದು, ಬೆಳಗಿನ ಉಪಾಹಾರಕ್ಕೆ ಬೇಯಿಸಿದ ಮೊಟ್ಟೆಯ ಜತೆಗೆ ಸದ್ಯ ಮಾರುಕಟ್ಟೆಯಲ್ಲಿ ಸಿಗುವ ಪಪ್ಪಾಯ, ಕಿತ್ತಳೆ, ಮಾವು.. ಇಂಥ ಯಾವುದಾದರೂ ಹಣ್ಣನ್ನು ಕೊಡಬಹುದು. ಇವುಗಳನ್ನು ಕೊಡಲು ಸಾಧ್ಯವಾಗದಿದ್ದರೆ ಟೊಮೆಟೊ ಹಣ್ಣನ್ನಾದರೂ ಕೊಡಬಹುದು ಎನ್ನುತ್ತಾರೆ ಪೌಷ್ಟಿಕಾಂಶ ತಜ್ಞರು.

ಹಣ್ಣು, ತರಕಾರಿ ಪರಿಚಯಿಸಿ
ಗೆಳತಿಯ ಸಂಬಂಧಿಕರ ಹುಡುಗನೊಬ್ಬನಿಗೆ ಸಪೋಟ ಹಣ್ಣನ್ನು ತಿನ್ನಲು ಕೊಟ್ಟರೆ, ‘ಇದು ತಿನ್ನುವುದಾ’ ಎಂದು ಕೇಳಿದನಂತೆ. ಅವರು ‘ಹೂಂ ತಿನ್ನು’ ಎಂದರೆ, ‘ಇದು ಜ್ಯೂಸ್ ಮಾಡುವುದಲ್ಲವಾ’ ಎಂದು ಪುನಃ ಕೇಳಿದನಂತೆ. ಇದು ಮಕ್ಕಳಲ್ಲಿ ಹಣ್ಣು–ತರಕಾರಿಗಳ ಪರಿಚಯದ ಕೊರತೆ ಇದೆ ಎನ್ನುವುದಕ್ಕೆ ಇದೊಂದು ಸಣ್ಣ ಉದಾಹರಣೆ. ಈ ಹಿನ್ನೆಲೆಯಲ್ಲಿ ಪೋಷಕರು ಮಕ್ಕಳಿಗೆ ತರಕಾರಿ– ಹಣ್ಣುಗಳನ್ನು ಪರಿಚಯಿಸಿ. ಬಣ್ಣ, ಗಾತ್ರ ಅವುಗಳ ವಿಶೇಷ ಗುಣ ಮಕ್ಕಳಿಗೆ ತಿಳಿಸಿ. ತರಕಾರಿಗಳನ್ನು ತೊಳೆದುಕೊಡುವುದು, ಹಣ್ಣು ಹೆಚ್ಚಿಕೊಡುವಂಥ ಕೆಲಸವನ್ನು ಅವರಿಗೇ ವಹಿಸಿ. ಆದರೆ, ಒಂದೇ ಸಲಕ್ಕೆ ಇಂಥ ತರಕಾರಿ, ಹಣ್ಣು ತಿನ್ನಬೇಕೆಂಬ ಫರ್ಮಾನು ಹೊರಡಿಸಬೇಡಿ. ಹಾಗೆ ಮಾಡಿದರೆ ಹಟಕ್ಕೆ ಬಿದ್ದು ‘ನಾನ್ ತಿನ್ನೋದಿಲ್ಲ, ಏನೀವಾಗ’ ಎಂದು ಹಟ ಮಾಡುತ್ತಾರೆ. ಹಾಗಾಗಿ ಹಣ್ಣು–ತರಕಾರಿಗಳ ತಿನ್ನುವ ಅಭ್ಯಾಸ ಹಂತಹಂತವಾಗಿ ಇರಲಿ. ಮಕ್ಕಳೊಂದಿಗೆ ಪೋಷಕರು ಹಣ್ಣ–ತರಕಾರಿ ತಿನ್ನುವುದನ್ನು ಅಭ್ಯಾಸ ಮಾಡಬೇಕು. ಇಂಥ ಪ್ರಾಥಮಿಕ ಪ್ರಯೋಗಗಳು ಮಕ್ಕಳ ಮನಸನ್ನು ಹಣ್ಣು–ತರಕಾರಿಗಳತ್ತ ಆಕರ್ಷಿತರಾಗುವಂತೆ ಮಾಡುತ್ತವೆ.ಆಗ ಸಹಜವಾಗಿ ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ.

ಇತ್ತೀಚಿನ ದಿನಗಳಲ್ಲಿ ದೊಡ್ಡವರೂ ಸೇರಿದಂತೆ ಮಕ್ಕಳಲ್ಲಿ ವಿಟಮಿನ್ ‘ಡಿ’ ಕೊರತೆ ಹೆಚ್ಚಾಗಿದೆ. ಈಗ ಶಾಲೆಗಳು ಆರಂಭವಾಗಿರುವುದರಿಂದ ಮಕ್ಕಳು ಬಿಸಿಲಿನ ಸಂಪರ್ಕಕ್ಕೆ ಬಂದರೆ ಆ ನ್ಯೂನತೆ ನಿವಾರಣೆ ಸಾಧ್ಯ. ಇದರ ಜತೆಗೆ ಹಸುವಿನ ಹಾಲು ಮತ್ತು ಮೊಟ್ಟೆಯ ಹಳದಿ ಭಾಗ, ಸಾಲ್ಮನ್ ಮೀನಿನಲ್ಲೂ ವಿಟಮಿನ್ ಡಿ ಹೇರಳವಾಗಿರುತ್ತದೆ.

ಆತಂಕ ಬೇಡ, ಎಚ್ಚರದಿಂದಿರಿ
ಶಾಲೆಗಳಲ್ಲಿ ದೈಹಿಕ ಅಂತರ ಪಾಲನೆಯಾಗದಿದ್ದರೂ ಮಕ್ಕಳಿಂದಲೇ ಕೋವಿಡ್ ಹರಡಿದ ಪ್ರಕರಣ ಈವರೆಗೆ ಎಲ್ಲೂ ವರದಿಯಾಗಿಲ್ಲ. ಮುಖ್ಯವಾಗಿ ಮಕ್ಕಳಲ್ಲಿ ಕೋವಿಡ್ ಎದುರಿಸುವ ರೋಗನಿರೋಧಕ ಶಕ್ತಿ ಚೆನ್ನಾಗಿಯೇ ಇರುತ್ತದೆ. ಕೆಲ ಮಕ್ಕಳಲ್ಲಿ ಈಗಾಗಲೇ ಗೊತ್ತಿಲ್ಲದಂತೆ ಕೋವಿಡ್ ಬಂದು ಹೋಗಿ ಆ್ಯಂಟಿಬಾಡಿಯೂ ಬೆಳೆದಿರಬಹುದು. ಹಾಗಾಗಿ, ಪೋಷಕರು ಕೋವಿಡ್ ಬಗ್ಗೆ ಭಯಪಡುವ ಅಗತ್ಯವಿಲ್ಲ‘ ಎನ್ನುತ್ತಾರೆ ಬೆಂಗಳೂರಿನ ರಾಧಾಕೃಷ್ಣ ಆಸ್ಪತ್ರೆಯ ಮಕ್ಕಳತಜ್ಞ ಡಾ.ಬಿ.ಕೆ. ವಿಶ್ವನಾಥ್ ಭಟ್.

ಡಾ.ಬಿ.ಕೆ. ವಿಶ್ವನಾಥ್ ಭಟ್
ಡಾ.ಬಿ.ಕೆ. ವಿಶ್ವನಾಥ್ ಭಟ್

ಆದರೆ, ವಿವಿಧೆಡೆ ದಿಢೀರ್ ಹವಾಮಾನ ಬದಲಾವಣೆ ಹಾಗೂ ಮಳೆಗಾಲದ ಆರಂಭ ಕಾಲವಾಗಿರುವುದರಿಂದ ನೀರಿನಿಂದ ಬರುವ ಕಾಯಿಲೆಗಳ ಬಗ್ಗೆ ಎಚ್ಚರ ವಹಿಸುವುದು ಅತ್ಯಗತ್ಯ. ಸಾಧ್ಯವಾದಷ್ಟೂ ಮನೆಯಲ್ಲೇ ತಯಾರಿಸಿದ ಆಹಾರ ಸೇವಿಸಿ. ಶಾಲೆಯಿಂದ ಬಂದ ತಕ್ಷಣವೇ ಮಕ್ಕಳು ಕೈಕಾಲು ಮುಖ ತೊಳೆಯುವುದು, ಇಲ್ಲವೇ ಸ್ನಾನ ಮಾಡುವುದು, ಸಮವಸ್ತ್ರ ಬದಲಾಯಿಸುವಂತಹ ಕ್ರಮಗಳನ್ನು ತಪ್ಪದೇ ಪಾಲಿಸಬೇಕು ಎನ್ನುವುದು ಅವರ ಸಲಹೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT