ನವದೆಹಲಿ: ಕೋವಿಡ್–19ರ ಹೊಸ 51 ತಳಿಯನ್ನು ಪತ್ತೆ ಮಾಡಿರುವ ಅಂತರಾಷ್ಟ್ರೀಯ ಸಂಶೋಧನಾ ಒಕ್ಕೂಟವು, ಅವುಗಳಲ್ಲಿ 28 ಅತ್ಯಂತ ಅಪಾಯಕಾರಿ ಎಂದಿದೆ.
‘ಕೋವಿಡ್–19 ಹೆಚ್ಚಾಗಿ ಬಾಧಿಸುವುದು ಆಯಾ ವಯೋಮಾನ ಮತ್ತು ಈ ಮೊದಲೇ ಇರಬಹುದಾದ ದೈಹಿಕ ಸಮಸ್ಯೆಗಳನ್ನು ಅವಲಂಬಿಸಿದೆ. ಅನುವಂಶೀಯವಾಗಿ ಇರಬಹುದಾದ ಅಪಾಯಕಾರಿ ಅಂಶಗಳು ಪತ್ತೆಯಾದಲ್ಲಿ ಅದಕ್ಕೆ ಸೂಕ್ತವಾದ ಔಷಧೋಪಚಾರವನ್ನು ಅಭಿವೃದ್ಧಿಪಡಿಸಲು ವಿಜ್ಞಾನಿಗಳಿಗೆ ಹೆಚ್ಚು ಅನುಕೂಲವಾಗಲಿದೆ’ ಎಂದು ಜರ್ಮನಿಯ ಬಾನ್ ವಿಶ್ವವಿದ್ಯಾಲಯ ಆಸ್ಪತ್ರೆಯ ಕೆರ್ಸ್ಟಿನ್ ಲುಡ್‌ವಿಗ್ ತಿಳಿಸಿದ್ದಾರೆ.
ಕೋವಿಡ್–19 ಸಾಂಕ್ರಾಮಿಕದ ಆರಂಭದಲ್ಲೇ ಇದನ್ನು ಎದುರಿಸಲು ಅಂತರರಾಷ್ಟ್ರೀಯ ಮಟ್ಟದ ಯೋಜನೆ ಸಿದ್ಧಗೊಂಡಿತ್ತು. ಪ್ರತಿಯೊಬ್ಬರೂ ತಾವು ಸಂಗ್ರಹಿಸಿದ ಮಾಹಿತಿ ಆಧರಿಸಿ, ಅವುಗಳನ್ನು ಸಂಗ್ರಹಿಸಿ, ವಿಶ್ಲೇಷಿಸಲಾಯಿತು. ಇತ್ತೀಚೆಗೆ ನಡೆಸಿದ ಸಂಶೋಧನೆಯಲ್ಲಿ ಕೋವಿಡ್–19 ಕುರಿತು ಒಟ್ಟು 82 ಪ್ರತ್ಯೇಕ ಅಧ್ಯಯನಗಳನ್ನು ನಡೆಸಲಾಗಿದೆ. ಜಾಗತಿಕ ಮಟ್ಟದಲ್ಲಿ ಒಟ್ಟು 3,669 ಸಂಶೋಧಕರು ಈ ಅಧ್ಯಯನದಲ್ಲಿ ಕೆಲಸ ಮಾಡಿದ್ದಾರೆ.
ಈ ಬೃಹತ್ ಒಕ್ಕೂಟವನ್ನು ಅಮೆರಿಕ ಸಂಸ್ಥೆಗಳು ಹಾಗೂ ಮಾಲಿಕ್ಯುಲಾರ್ ಮೆಡಿಸಿನ್ ಫಿನ್‌ಲ್ಯಾಂಡ್ ಸಂಸ್ಥೆ ನಿರ್ವಹಿಸುತ್ತಿದೆ. ಇದರಲ್ಲಿ ಒಟ್ಟು 51 ಬೇರೆ ಮಾದರಿಯ ಕೋವಿಡ್ ವೈರಾಣುಗಳ ತಳಿಯನ್ನು ಪತ್ತೆ ಮಾಡಲಾಗಿದೆ. ಇದರಲ್ಲಿ 28 ತಳಿಗಳು ಹೊಸ ಬಗೆಯವು ಹಾಗೂ ಅತ್ಯಂತ ಅಪಾಯಕಾರಿ ಎಂದು ಪತ್ತೆ ಮಾಡಲಾಗಿದೆ’ ಎಂದು ಈ ಸಂಸ್ಥೆಯ ಆ್ಯಕ್ಷೆಲ್ ಷ್ಮಿಟ್ ಹೇಳಿದರು.
‘ಜರ್ಮನಿಯ ವಿಶ್ವವಿದ್ಯಾಲಯದ ಕೆಲ ಆಸ್ಪತ್ರೆಗಳೊಂದಿಗೆ ಮಾತುಕತೆ ನಡೆಸಿದ್ದೇವೆ. ಇಲ್ಲಿ ದಾಖಲಾಗಿರುವ ಕೆಲ ರೋಗಿಗಳು ಈ ಅಧ್ಯಯನಕ್ಕೆ ನೆರವಾಗುತ್ತಿದ್ದಾರೆ. ಆ ಮೂಲಕ 35 ರಾಷ್ಟ್ರಗಳಲ್ಲಿ ನಡೆದ 82 ಅಧ್ಯಯನಗಳಲ್ಲಿ 2 ಲಕ್ಷ ಜನರು ಪಾಲ್ಗೊಂಡಿದ್ದಾರೆ. ಅದರ ಮಾಹಿತಿಯನ್ನು ದಾಖಲಿಸಲಾಗಿದೆ’ ಎಂದು ವಿವರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.