ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆಯರಲ್ಲಿ ಲೈಂಗಿಕ ಸಮಸ್ಯೆ

Last Updated 17 ಮಾರ್ಚ್ 2020, 19:45 IST
ಅಕ್ಷರ ಗಾತ್ರ

ರಾಜೇಶ್‌ ಮತ್ತು ರಶ್ಮಿ ದಂಪತಿಯ ಮಧ್ಯೆ ಯಾವಾಗಲೂ ಮುನಿಸು, ಬಗೆಹರಿಯದ ಜಗಳ. ಮಿಲನದ ಸಂದರ್ಭದಲ್ಲಿ ನೋವಿನಿಂದಾಗಿ ಆಕೆ ಪತಿಯಿಂದ ಅಂತರವನ್ನು ಕಾಯ್ದುಕೊಂಡಿದ್ದಳು. ಪತ್ನಿ ಆಸಕ್ತಿಯಿಲ್ಲದೇ ಈ ನಡವಳಿಕೆ ತೋರಿಸುತ್ತಿದ್ದಾಳೆ ಎಂದುಕೊಂಡ ಆತ ಕಚೇರಿಯಲ್ಲಿ ಸಹೋದ್ಯೋಗಿ ಯುವತಿಯ ಬಗ್ಗೆ ಕಾಳಜಿ ವಹಿಸತೊಡಗಿದ್ದ.

ಇಲ್ಲಿ ರಶ್ಮಿಗಾಗಿರುವುದು ಲೈಂಗಿಕ ಸಮಸ್ಯೆ.ಮಹಿಳೆಯರಲ್ಲೂ ಅನೇಕ ರೀತಿಯ ಲೈಂಗಿಕ ಸಮಸ್ಯೆಗಳಿರುತ್ತವೆ. ಆದರೆ, ಪುರುಷರ ಸಮಸ್ಯೆಗಳಷ್ಟು ಪ್ರವರ್ಧಮಾನಕ್ಕೆ ಬರುವುದಿಲ್ಲ. ಅದಕ್ಕೆ ಸಾಂಪ್ರದಾಯಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಕಾರಣಗಳಿರಬಹುದು. ಈ ಸಮಸ್ಯೆಗಳು ಚರ್ಚೆಗೆ ಬರದೇ, ಪರಿಹಾರ ಅರಸದೇ, ಮಿಥ್ಯಗಳ ಪ್ರಭಾವಕ್ಕೊಳಗಾಗಿ ನಾಲ್ಕು ಗೋಡೆಗಳ ಮಧ್ಯೆಯೆ ಉಳಿದುಬಿಡುತ್ತವೆ.

ಸಾಮಾನ್ಯವಾಗಿ ಲೈಂಗಿಕ ಕ್ರಿಯೆಯಲ್ಲಿ ನಾಲ್ಕು ಹಂತಗಳಿರುತ್ತವೆ. ಕಾಮಾಸಕ್ತಿ (ಡಿಸೈರ್‌), ಉದ್ರೇಕ (ಅರೌಸಲ್‌), ಕಾಮಪರಾಕಾಷ್ಠೆ (ಆರ್ಗ್ಯಾಸ್ಮ್‌) ಹಾಗೂ ಸಹಜ ಸ್ಥಿತಿಗೆ (ರೆಸೊಲ್ಯುಷನ್‌). ಮೊದಲ ಮೂರು ಹಂತಗಳಲ್ಲಿ ಏರುಪೇರು ಉಂಟಾದಾಗ, ಲೈಂಗಿಕ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.

ಪ್ರತಿಯೊಬ್ಬ ವ್ಯಕ್ತಿಯಲ್ಲೂ ಕಾಮದ ಬಯಕೆಯ ಮಟ್ಟದಲ್ಲಿ ವ್ಯತ್ಯಾಸವಿರುತ್ತದೆ. ಹೀಗೆ ಸಂಗಾತಿಗಳ ಬಯಕೆಗಳಲ್ಲಿ ವ್ಯತ್ಯಾಸವಿದ್ದಾಗ (ಡಿಸೈರ್‌ ಡಿಸ್ಕ್ರಿಪನ್ಸಿ)) ಅದನ್ನು ಲೈಂಗಿಕ ಸಮಸ್ಯೆಯೆಂದು ಕರೆಯಲಾಗದು.

ಮಹಿಳೆಯರಲ್ಲಿ ಮೂರು ತರಹದ ಲೈಂಗಿಕ ಸಮಸ್ಯೆಗಳು ಕಂಡುಬರುತ್ತವೆ. ಉದ್ರೇಕಕ್ಕೆ ಸಂಬಂಧಪಟ್ಟ ನಿರಾಸಕ್ತಿ, ಕಾಮಪರಾಕಾಷ್ಠೆಯಲ್ಲಿನ ದೋಷ ಹಾಗೂ ಸಂಭೋಗದಲ್ಲುಂಟಾಗುವ ನೋವು/ ತೊಂದರೆ.

ಕಾಮೊದ್ರೇಕದಲ್ಲಿ ನಿರಾಸಕ್ತಿ

ಈ ಸ್ಥಿತಿಯಲ್ಲಿ ಕಾಮಾಸಕ್ತಿ ಕಡಿಮೆಯಿರುತ್ತದೆ. ಲೈಂಗಿಕತೆಯ ಬಗೆಗಿನ ಕಲ್ಪನೆ, ಆಲೋಚನೆಗಳು ಕಡಿಮೆಯಿರುತ್ತವೆ. ಲೈಂಗಿಕ ಕ್ರಿಯೆಯ ಸಮಯದಲ್ಲಿ ಸಂಗಾತಿಯ ಉತ್ತೇಜನಕ್ಕೂ ಸ್ಪಂದಿಸಲಾಗುವುದಿಲ್ಲ. ಕ್ರಿಯೆಯನ್ನು ತಾವಾಗಿಯೇ ಆರಂಭಿಸುವ ಆಸಕ್ತಿಯೂ ಇರುವುದಿಲ್ಲ. ಜನನೇಂದ್ರಿಯ ಹಾಗೂ ದೇಹದ ಇನ್ನಿತರ ಭಾಗಗಲ್ಲಿ ಲೈಂಗಿಕ ಸಂವೇದನೆ ಕಡಿಮೆಯಿರುತ್ತದೆ. ಬಾಹ್ಯವಾಗಿ ಕಾಮೋತ್ತೇಜಿಸುವಂತಹ ಸಂಕೇತಗಳು, ಸೂಚನೆಗಳು ಕಂಡುಬಂದರೂ ಉತ್ತೇಜನಕ್ಕೆ ಒಳಗಾಗುವುದಿಲ್ಲ.

ಕಾಮಪರಾಕಾಷ್ಠೆಯಲ್ಲಿನ ತೊಂದರೆ

ಲೈಂಗಿಕ ಚಟುವಟಿಕೆಯ ಸಮಯದಲ್ಲಿ ಕಾಮಾಸಕ್ತಿ, ಉತ್ತೇಜನ ಸರಿಯಾಗಿದ್ದರೂ, ಕಾಮಪರಾಕಾಷ್ಠೆಯನ್ನು ತಲುಪುವುದರಲ್ಲಿ ವಿಳಂಬ ಆಗಬಹುದು, ಇಲ್ಲವೆ ಪರಾಕಾಷ್ಠೆಯನ್ನು ತಲುಪದೇ ಇರಬಹುದು. ಗಂಡು ಹಾಗೂ ಹೆಣ್ಣು ಪರಾಕಾಷ್ಠೆಯನ್ನು ತಲುಪುವುದರಲ್ಲಿ ತುಂಬಾ ವ್ಯತ್ಯಾಸವಿದೆ. ಗಂಡು ವೀರ್ಯಸ್ಖಲನದೊಂದಿಗೆ ಪರಾಕಾಷ್ಠೆಯನ್ನು ತಲುಪುತ್ತಾನೆ. ಆದರೆ ಹೆಣ್ಣಿನ ವಿಷಯದಲ್ಲಿ ಜನನೇಂದ್ರಿಯದಲ್ಲಿ ಅನೇಕ ಜೈವಿಕ ಬದಲಾವಣೆಗಳು ಉಂಟಾಗಿ ಪರಾಕಾಷ್ಠೆಯ ಸ್ಥಿತಿಯನ್ನು ತಲುಪುತ್ತಾಳೆ.

ಲೈಂಗಿಕಕ್ರಿಯೆಗೆ ಸಂಬಂಧಪಟ್ಟ ತೊಂದರೆ

ಸಾಮಾನ್ಯವಾಗಿ ಸಂಭೋಗದ ಸಮಯದಲ್ಲಿ ಯೋನಿ ಹಾಗೂ ಸುತ್ತಲಿನ ಭಾಗಗಳು ಸಡಿಲಗೊಂಡು, ದ್ರವ ಸ್ರವಿಸಿ ಸಂಭೋಗ ಕ್ರಿಯೆಗೆ ಸಹಕಾರಿಯಾಗುತ್ತವೆ. ಆದರೆ ಈ ಸಮಸ್ಯೆಯಲ್ಲಿ, ಸಂಭೋಗದ ಸಮಯದಲ್ಲಿ ವಿಪರೀತ ನೋವುಂಟಾಗಿ ಯೋನಿ ಹಾಗೂ ಸುತ್ತಲಿನ ಸ್ನಾಯುಗಳು ಸಂಕುಚಿತಗೊಳ್ಳುತ್ತವೆ. ಇದರಿಂದ ಮಹಿಳೆಗೆ ಸಂಭೋಗದ ಬಗ್ಗೆ ವಿಪರೀತ ಆತಂಕವೂ ಉಂಟಾಗಬಹುದು.

ಕಾರಣಗಳು

ಜನನೇಂದ್ರಿಯದ ರಚನೆಯಲ್ಲಿನ ದೋಷ: ಯೋನಿ ಹಾಗೂ ಸಂಬಂಧಪಟ್ಟ ಭಾಗಗಳ ರಚನೆಯಲ್ಲಿ ಹುಟ್ಟಿನಿಂದ ಇರುವ ದೋಷವಿದ್ದರೆ ಮಹಿಳೆಯರಲ್ಲಿ ಈ ಮೇಲಿನ ಲೈಂಗಿಕ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.

ದೇಹದಲ್ಲಾಗುವ ಹಾರ್ಮೋನುಗಳಲ್ಲಿನ ಬದಲಾವಣೆ: ಋತುಬಂಧದ ಸಮಯದಲ್ಲಿ ಮಹಿಳೆಯ ದೇಹದಲ್ಲಿ ಈಸ್ಟ್ರೋಜೆನ್‌ ಹಾರ್ಮೋನ್‌ ಕೊರತೆಯುಂಟಾಗುತ್ತದೆ. ಇದರಿಂದ ಜನನೇಂದ್ರಿಯದ ರಚನೆಯಲ್ಲಿ ಬದಲಾವಣೆಯಾಗುವುದು, ದ್ರವ ಕಡಿಮೆಯಾಗಿ ಲೈಂಗಿಕ ಕ್ರಿಯೆ ಕಷ್ಟದಾಯಕವಾಗುತ್ತವೆ.

ತಮ್ಮ ಅಂಗ ಸೌಷ್ಟವದ ಬಗ್ಗೆ ಕೀಳರಿಮೆ (ಬಾಡಿ ಇಮೇಜ್‌)

ಲೈಂಗಿಕತೆ ಹಾಗೂ ಲೈಂಗಿಕ ಕ್ರಿಯೆ ಬಗ್ಗೆ ಸರಿಯಾದ ಜ್ಞಾನ ಇಲ್ಲದಿರುವುದು, ಮಿಥ್ಯಗಳು.

ಲೈಂಗಿಕ ಕಿರುಕುಳ, ಅತ್ಯಾಚಾರ ಇಂತಹ ಘೋರ ಘಟನೆಗಳು ಮನಸ್ಸಿನ ಮೇಲೆ ಗಾಢವಾದ ಪರಿಣಾಮ ಬೀರಿ ಲೈಂಗಿಕ ಜೀವನದ ಮೇಲೆ ಪ್ರತಿಕೂಲ ಪ್ರಭಾವ ಬೀರುತ್ತವೆ.

ಸಂಗಾತಿಯೊಡನೆ ಇರುವ ಸಂಬಂಧ, ನಂಬಿಕೆ- ಪರಸ್ಪರ ಪ್ರೀತಿ , ವಿಶ್ವಾಸವಿಲ್ಲದಿದ್ದರೆ ಸಹಜವಾಗಿ ಲೈಂಗಿಕ ಕ್ರಿಯೆ ಕಷ್ಟ.

ಕೆಲವು ರೀತಿಯ ಮಾತ್ರೆ, ಔಷಧಿಗಳು.

ಜನನಾಂಗದ ಶಸ್ತ್ರಚಿಕಿತ್ಸೆಗಳು, ನರರೋಗಗಳು

ಒತ್ತಡಭರಿತ ಜೀವನ ಶೈಲಿ , ಬೊಜ್ಜು, ದೈಹಿಕ ನಿಷ್ಕ್ರಿಯತೆ- ಆಧುನಿಕ ಜೀವನದ ವೇಗಕ್ಕೆ ಸರಿಯಾಗಿ ನಾವು ಸಾಗುವ ಪ್ರಯತ್ನದಲ್ಲಿ ನಿಸರ್ಗದತ್ತವಾದ ಕ್ರಿಯೆಗಳಿಗೆ ಹೆಚ್ಚಿನ ಸಮಯ ಹಾಗೂ ಆಸಕ್ತಿ ತೋರಿಸುತ್ತಿಲ್ಲ.

(ಲೇಖಕರು ಹುಬ್ಬಳ್ಳಿಯಲ್ಲಿ ಮನೋವೈದ್ಯರು)

ಪರಿಹಾರ

ಸಮಾಲೋಚನೆ, ಔಷಧೋಪಚಾರ ಹಾಗೂ ಶಸ್ತ್ರಚಿಕಿತ್ಸೆಯ ಸಹಾಯದಿಂದ ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು.

ಲೈಂಗಿಕ ಅಂಗಗಳ ರಚನೆ ಹಾಗೂ ಲೈಂಗಿಕ ಕ್ರಿಯೆಯಲ್ಲಿ ಅವುಗಳ ಪಾತ್ರದ ಬಗ್ಗೆ ತಿಳಿದುಕೊಳ್ಳಿ.

ತೊಂದರೆಯಿದ್ದರೆ ಮುಕ್ತವಾಗಿ ಸಂಗಾತಿಯೊಂದಿಗೆ ಹಂಚಿಕೊಳ್ಳಿ. ಮಿಥ್ಯಗಳಿಗೆ ಮಾರು ಹೋಗಿ ಆರೋಗ್ಯ ಕೆಡಿಸಿಕೊಳ್ಳಬೇಡಿ.

ತಜ್ಞ ವೈದ್ಯರೊಂದಿಗೆ ಸಮಾಲೋಚಿಸಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಿ

ಆರೋಗ್ಯಕರ ಜೀವನಶೈಲಿಯನ್ನು ರೂಢಿಸಿಕೊಳ್ಳಿ. ನಿಯಮಿತ ಆಹಾರ ಸೇವನೆ, ನಿದ್ದೆ, ದೈಹಿಕ ಚಟುವಟಿಕೆಯಿಂದ ಲೈಂಗಿಕ ಆರೋಗ್ಯವೂ ಚೆನ್ನಾಗಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT